ಹಾರ್ದಿಕ್ ಪಾಂಡ್ಯ ಏನ್ ಚಂದ್ರ ಗ್ರಹದಿಂದ ಬಂದಿದ್ದಾನಾ, ದೇಶೀ ಕ್ರಿಕೆಟ್ ಆಡೋಕೆ ಹೇಳಿ; ಮಾಜಿ ವೇಗಿ ಕೆಂಡಾಮಂಡಲ
Praveen Kumar on Hardik Pandya: ದೇಶೀಯ ಕ್ರಿಕೆಟ್ ಆಡದೆ ತಪ್ಪಿಸಿಕೊಳ್ಳುತ್ತಿರುವ ಹಾರ್ದಿಕ್ ಪಾಂಡ್ಯ ವಿರುದ್ಧ ಭಾರತದ ಮಾಜಿ ವೇಗಿ ಪ್ರವೀಣ್ ಕುಮಾರ್ ಕೆಂಡಾಕೆಂಡಲರಾಗಿದ್ದಾರೆ.

ಟೀಮ್ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ವಿರುದ್ಧ ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ (Praveen Kumar) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪದೆಪದೇ ದೇಶೀಯ ರೆಡ್ ಬಾಲ್ ಕ್ರಿಕೆಟ್ ತಪ್ಪಿಸಿಕೊಳ್ಳುತ್ತಿರುವ ಹಾರ್ದಿಕ್ ಅವರೇನು ಚಂದ್ರನಿಂದ ಉದುರಿದ್ದಾನಾ ಎಂದು ಕೆಂಡಾಮಂಡಲರಾಗಿದ್ದಾರೆ. ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ಗೆ ಕೊಟ್ಟ ಶಿಕ್ಷೆಯೇ ಆತನಿಗೂ ನೀಡಬೇಕು ಎಂದು ಹೇಳಿದ್ದಾರೆ.
ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ದೇಶೀಯ ರಣಜಿ ಕ್ರಿಕೆಟ್ ಆಡಲಿಲ್ಲ ಎಂಬ ಕಾರಣಕ್ಕೆ ಇಬ್ಬರನ್ನೂ ಬಿಸಿಸಿಐ ಆಟಗಾರರ ವಾರ್ಷಿಕ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಹೊರಗಿಟ್ಟು ಶಿಕ್ಷೆ ನೀಡಲಾಯಿತು. ತಪ್ಪಿನಿಂದ ಪಾಠ ಕಲಿತ ಶ್ರೇಯಸ್, ರಣಜಿ ಸೆಮಿಫೈನಲ್, ಫೈನಲ್ನಲ್ಲಿ ಕಣಕ್ಕಿಳಿದರು. ಹಾಗಾಗಿ ರಣಜಿ ಆಡಿದ ಕಾರಣಕ್ಕೆ ಅಯ್ಯರ್ಗೆ ಗುತ್ತಿಗೆ ಪಟ್ಟಿಯಲ್ಲಿ ಅವಕಾಶ ನೀಡಲು ಬಿಸಿಸಿಐ ಮರು ಚಿಂತನೆ ನಡೆಸುತ್ತಿದೆ.
ಆದರೆ ಬಿಸಿಸಿಐ, ಸೆಲೆಕ್ಟರ್ಗಳು ಮತ್ತು ಟೀಮ್ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಹೇಳಿದರೂ ಅವರ ಮಾತನ್ನು ಕಿಂಚಿತ್ತೂ ಬೆಲೆ ಕೊಡದ ಇಶಾನ್, ಐಪಿಎಲ್‌ಗೆ ಸಿದ್ಧತೆ ನಡೆಸಿದರು. ಜಾರ್ಖಾಂಡ್ ಪರ ಒಂದೂ ರಣಜಿ ಪಂದ್ಯವನ್ನೂ ಆಡಲಿಲ್ಲ. ಮತ್ತೊಂದೆಡೆ ದೇಶೀಯ ಕ್ರಿಕೆಟ್ ಆಡದ ಪಾಂಡ್ಯಗೆ ಕಾಂಟ್ರ್ಯಾಕ್ಟ್ನಲ್ಲಿ ಅವಕಾಶ ನೀಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಆತನ ವಿರುದ್ಧ ಪ್ರವೀಣ್ ಹರಿಹಾಯ್ದಿದ್ದಾರೆ.
ಚಂದ್ರನ ಲೋಕದಿಂದ ಬಂದಿದ್ದಾನಾ ಎಂದ ಪ್ರವೀಣ್
ಡೊಮೆಸ್ಟಿಕ್ ಕ್ರಿಕೆಟ್ ಆಡದೇ ಇರೋದಕ್ಕೆ ಹಾರ್ದಿಕ್ ಪಾಂಡ್ಯ ಚಂದ್ರನ ಗ್ರಹದಿಂದ ಇಳಿದು ಬಂದಿದ್ದಾನಾ? ಆತನೂ ದೇಶೀಯ ಕ್ರಿಕೆಟ್ ಆಡಬೇಕು. ಹಾರ್ದಿಕ್‌ಗೆ ಮಾತ್ರ ಪ್ರತ್ಯೇಕ ನಿಯಮಗಳು ಏಕೆ? ಬಿಸಿಸಿಐ ಅವರಿಗೆ ಬೆದರಿಕೆ ಹಾಕಿ ದೇಶೀಯ ಕ್ರಿಕೆಟ್ ಆಡಿ ಎಂದು ಸೂಚಿಸಬೇಕು. ದೇಶೀಯ ಕ್ರಿಕೆಟ್ನಲ್ಲಿ ಎಲ್ಲಾ ಮೂರು ಸ್ವರೂಪಗಳನ್ನು ಆಡಬೇಕು. ನೀವು ಕೇವಲ ಟಿ20 ಆಡುವುದೇಕೆ ಎಂದು ಪ್ರವೀಣ್ ಕುಮಾರ್ ಅವರು ಶುಭಂಕರ್ ಮಿಶ್ರಾ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
ಪಾಂಡ್ಯ ವಿರುದ್ಧ ಕುಮಾರ್ ವಾಗ್ದಾಳಿ ನಡೆಸಿದ್ದು ಇದೇ ಮೊದಲಲ್ಲ. ವಾರದ ಆರಂಭದಲ್ಲಿ ಅವರು ಮುಂಬೈ ಇಂಡಿಯನ್ಸ್ ನಾಯಕನನ್ನು ಅವರ ಫಿಟ್ನೆಸ್ ಸಮಸ್ಯೆಗಳಿಗಾಗಿ ಟೀಕಿಸಿದ್ದರು. ಐಪಿಎಲ್‌ಗೆ ಎರಡು ತಿಂಗಳ ಮೊದಲು ನೀವು ಗಾಯಗೊಂಡಿದ್ದೀರಿ. ಆದರೆ ದೇಶಕ್ಕಾಗಿ ಫಿಟ್ ಆಗದ ನೀವು ಐಪಿಎಲ್‌ಗೆ ಮಾತ್ರ ಹೇಗೆ ಫಿಟ್ ಆಗುತ್ತೀರಾ? ರಾಷ್ಟ್ರೀಯ ತಂಡದ ಪರ ಆಡಲ್ಲ, ರಾಜ್ಯದ ಪರ ಆಡಲ್ಲ. ಆದರೆ ನೇರವಾಗಿ ಐಪಿಎಲ್‌ನಲ್ಲಿ ಆಡುತ್ತೀರಿ. ಹೀಗೆ ಮಾಡುವುದೇಕೆ ಎಂದು ಕಿಡಿಕಾರಿದ್ದರು.
ಹಣ ಸಂಪಾದಿಸುವುದು ಸರಿ. ಅದರಲ್ಲಿ ತಪ್ಪೇನಿಲ್ಲ. ಆದರೆ ನೀವು ರಾಜ್ಯ ಮತ್ತು ದೇಶದ ಪರ ಆಡಲು ಒತ್ತು ನೀಡದೆ ಐಪಿಎಲ್‌ಗೆ ಮಾತ್ರ ಪ್ರಾಮುಖ್ಯತೆ ನೀಡುವುದೆಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಕೇಂದ್ರೀಯ ಗುತ್ತಿಗೆ ಪಟ್ಟಿಯಿಂದ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರನ್ನು ಕೈಬಿಡುವ ನಿರ್ಧಾರದ ಸುತ್ತಲಿನ ವಿವಾದ ಇನ್ನೂ ಮುಂದುವರೆದಂತೆ ಹಾರ್ದಿಕ್ ಸೇರ್ಪಡೆಯ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆದಿವೆ.
ರಾಷ್ಟ್ರೀಯ ತಂಡದೊಂದಿಗೆ ವೈಟ್ ಬಾಲ್ ಬದ್ಧತೆ ಇಲ್ಲದಿದ್ದರೆ, ಸೈಯದ್ ಮುಷ್ತಾಕ್ ಅಲಿ ಟಿ20, ವಿಜಯ್ ಹಜಾರೆ ಟ್ರೋಫಿಯಲ್ಲಿ ಬರೋಡಾ ಪರ ಆಡಲಿದ್ದಾರೆ ಎಂದು ಆಲ್‌ರೌಂಡರ್ ಭರವಸೆ ನೀಡಿದ ನಂತರ ಆಯ್ಕೆಗಾರರು ಮತ್ತು ಬಿಸಿಸಿಐ ಹಾರ್ದಿಕ್‌ಗೆ ಗುತ್ತಿಗೆಯನ್ನು ನೀಡಿತು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಪಾಂಡ್ಯ ಎ ಗ್ರೇಡ್‌ನಲ್ಲಿ ಸ್ಥಾನ ಪಡೆದಿದ್ದಾರೆ.
ಅಕ್ಟೋಬರ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಪಾದದ ಗಾಯಕ್ಕೆ ತುತ್ತಾದ ಪಾಂಡ್ಯ ಇತ್ತೀಚೆಗೆ ಡಿವೈ ಪಾಟೀಲ್ ಪಂದ್ಯಾವಳಿಯಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದರು. ಬಿಸಿಸಿಐನ ಉನ್ನತ ಅಧಿಕಾರಿಯ ಪ್ರಕಾರ, ಅಂತಾರಾಷ್ಟ್ರೀಯ ಬದ್ಧತೆ ಇಲ್ಲದಿದ್ದರೆ, ದೇಶೀಯ ಪಂದ್ಯಾವಳಿಗಳಲ್ಲಿ ಆಡುವುದಾಗಿ ಪಾಂಡ್ಯ ಭರವಸೆ ನೀಡಿದ್ದಾರೆ. ಆದರೆ ಈ ಮಾತನ್ನು ಹಾರ್ದಿಕ್ ಉಳಿಸಿಕೊಳ್ಳುತ್ತಾರಾ ಎಂಬುದನ್ನು ಕಾದುನೋಡಬೇಕು.
