Explainer: ಪಾಕಿಸ್ತಾನದ ಗೆಲುವಿಗೆ ಭಾರತದ ಪ್ರಾರ್ಥನೆ; ಡಬ್ಲ್ಯುಟಿಸಿ ಫೈನಲ್‌ ಅರ್ಹತೆ ಸಾಧ್ಯತೆಗಳ ಸಂಪೂರ್ಣ ಲೆಕ್ಕಾಚಾರ ಹೀಗಿದೆ
ಕನ್ನಡ ಸುದ್ದಿ  /  ಕ್ರಿಕೆಟ್  /  Explainer: ಪಾಕಿಸ್ತಾನದ ಗೆಲುವಿಗೆ ಭಾರತದ ಪ್ರಾರ್ಥನೆ; ಡಬ್ಲ್ಯುಟಿಸಿ ಫೈನಲ್‌ ಅರ್ಹತೆ ಸಾಧ್ಯತೆಗಳ ಸಂಪೂರ್ಣ ಲೆಕ್ಕಾಚಾರ ಹೀಗಿದೆ

Explainer: ಪಾಕಿಸ್ತಾನದ ಗೆಲುವಿಗೆ ಭಾರತದ ಪ್ರಾರ್ಥನೆ; ಡಬ್ಲ್ಯುಟಿಸಿ ಫೈನಲ್‌ ಅರ್ಹತೆ ಸಾಧ್ಯತೆಗಳ ಸಂಪೂರ್ಣ ಲೆಕ್ಕಾಚಾರ ಹೀಗಿದೆ

ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಸದ್ಯ ಏಳನೇ ಸ್ಥಾನದಲ್ಲಿರುವ ಪಾಕಿಸ್ತಾನ ಕ್ರಿಕೆಟ್‌ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ನಲ್ಲಿ ಗೆದ್ದರೆ ಭಾರತಕ್ಕೆ ಲಾಭ. ಪ್ರಸ್ತುತ ಪಾಯಿಂಟ್‌ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧದ ಗೆಲುವು ಕೂಡಾ ಅನಿವಾರ್ಯವಾಗಿದೆ.

ಪಾಕಿಸ್ತಾನದ ಗೆಲುವಿಗೆ ಭಾರತ ತಂಡದ ಪ್ರಾರ್ಥನೆ; WTC ಫೈನಲ್‌ ಅರ್ಹತೆ ಸಾಧ್ಯತೆಗಳ ಲೆಕ್ಕಾಚಾರ
ಪಾಕಿಸ್ತಾನದ ಗೆಲುವಿಗೆ ಭಾರತ ತಂಡದ ಪ್ರಾರ್ಥನೆ; WTC ಫೈನಲ್‌ ಅರ್ಹತೆ ಸಾಧ್ಯತೆಗಳ ಲೆಕ್ಕಾಚಾರ

ಮೆಲ್ಬೋರ್ನ್‌ ನಗರದ ಎಂಸಿಜಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಸರಣಿಯ ನಾಲ್ಕನೇ ಟೆಸ್ಟ್‌ ಪಂದ್ಯ ನಡೆಯುತ್ತಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯಲು, ಉಭಯ ತಂಡಗಳಿಗೂ ಗೆಲುವು ಅನಿವಾರ್ಯವಾಗಿದೆ. ಇದೇ ವೇಳೆ, ಅತ್ತ ಸೆಂಚೂರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ತಂಡಗಳ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಇಂದು (ಡಿಸೆಂಬರ್‌ 26) ಆರಂಭವಾಗಲಿದೆ. ಭಾರತ ತಂಡವು ತಾನು ಆಸೀಸ್‌ ವಿರುದ್ಧ ಗೆಲ್ಲುವ ಜೊತೆಗೆ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನ ತಂಡ ಗೆಲ್ಲಲಿ ಎಂಬ ಪ್ರಾರ್ಥನೆಯನ್ನೂ ಮಾಡುತ್ತಿದೆ.

ದಕ್ಷಿಣ ಆಫ್ರಿಕಾ ತಂಡವು, ಪ್ರಸಕ್ತ ಡಬ್ಲ್ಯುಟಿಸಿ ಆವೃತ್ತಿಯಲ್ಲಿ ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆಡಿದ ಮೊದಲ ಐದು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಗೆದ್ದ ತಂಡವು, ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿತ್ತು. ಆದರೆ, ಶ್ರೀಲಂಕಾ ವಿರುದ್ಧದ ಸರಣಿ ವೈಟ್‌ವಾಶ್ ಸೇರಿದಂತೆ ನಂತರದ ಐದು ಟೆಸ್ಟ್ ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿತು. ಹೀಗಾಗಿ ಈ ಬಾರಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯ ಆಡುವ ನಿರೀಕ್ಷೆಯಲ್ಲಿದೆ. ಸದ್ಯ ದಕ್ಷಿಣ ಆಫ್ರಿಕಾ ತಂಡವು ಫೈನಲ್‌ ಪ್ರವೇಶಿಸಲು ಪಾಕಿಸ್ತಾನ ವಿರುದ್ಧದ ಎರಡು ಟೆಸ್ಟ್‌ ಪಂದ್ಯಗಳಲ್ಲಿ ಯಾವುದಾದರೂ ಒಂದು ಪಂದ್ಯದಲ್ಲಿ ಗೆದ್ದರೆ ಸಾಕಾಗುತ್ತದೆ.

ಸದ್ಯ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಪಾಕಿಸ್ತಾನ ತಂಡವು, ಡಬ್ಲ್ಯುಟಿಸಿ ಫೈನಲ್‌ ರೇಸ್‌ನಿಂದ ಈಗಾಗಲೇ ಹೊರಬಿದ್ದಿದೆ. ಆದರೆ, ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ, ಫೈನಲ್‌ ರೇಸ್‌ನಿಂದ ಹೊರಗಿಡುವ ಅವಕಾಶ ಪಾಕ್‌ ತಂಡಕ್ಕಿದೆ. ಈ ನಡುವೆ ಪಾಕಿಸ್ತಾನವು ಸರಣಿ ಗೆದ್ದರೆ ಪ್ರಸ್ತುತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತಕ್ಕೆ ತುಂಬಾ ಅನುಕೂಲವಾಗಲಿದೆ.

ಡಬ್ಲ್ಯುಟಿಸಿ ಫೈನಲ್‌ ಲೆಕ್ಕಾಚಾರ ಹೇಗಿದೆ?

ಸಾಧ್ಯತೆ 1: ಇತರ ತಂಡಗಳ ಫಲಿತಾಂಶಗಳ ಲೆಕ್ಕವಿಲ್ಲದೆ ಭಾರತ ತಂಡವು ಸತತ ಮೂರನೇ ಬಾರಿಗೆ ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಲು, ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಒಂದು ವೇಳೆ ಒಂದು ಪಂದ್ಯ ಡ್ರಾಗೊಂಡು ಇನ್ನೊಂದು ಪಂದ್ಯದಲ್ಲಿ ಗೆದ್ದರೆ, ಜನವರಿಯಲ್ಲಿ ನಡೆಯಲಿರುವ ಎರಡು ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ ಕನಿಷ್ಠ ಒಂದರಲ್ಲಿ ಡ್ರಾ ಸಾಧಿಸಬೇಕಾಗುತ್ತದೆ. ಅಥವಾ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನವು ಒಂದು ಪಂದ್ಯದಲ್ಲಿ ಡ್ರಾ ಸಾಧಿಸಿ, ಇನ್ನೊಂದನ್ನು ಗೆಲ್ಲಬೇಕಾದ ಅನಿವಾರ್ಯತೆ ಇದೆ.

ಸಾಧ್ಯತೆ 2: ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತವು ಒಂದು ಪಂದ್ಯದಲ್ಲಿ ಸೋತು ಇನ್ನೊಂದರಲ್ಲಿ ಗೆದ್ದರೆ, ರೋಹಿತ್ ಶರ್ಮಾ ಬಳಗವು ಶ್ರೀಲಂಕಾ ಕಡೆ ತಿರುಗಿ ನೋಡಬೇಕು. ಶ್ರೀಲಂಕಾ ತಂಡವು ಆಸ್ಟ್ರೇಲಿಯಾ ವಿರುದ್ಧ ಕನಿಷ್ಠ 1-0 ಅಂತರದಿಂದ ಗೆಲ್ಲಬೇಕು. ಅಥವಾ ಪಾಕಿಸ್ತಾನವು ದಕ್ಷಿಣ ಆಫ್ರಿಕಾವನ್ನು ವೈಟ್‌ವಾಶ್ ಮಾಡಬೇಕೆಂದು ಬಯಸಬೇಕು.

ಸಾಧ್ಯತೆ 3: ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ನಡೆಯಲಿರುವ ಎರಡೂ ಟೆಸ್ಟ್ ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡರೆ, ಅತ್ತ ಪಾಕಿಸ್ತಾನ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಎರಡೂ ಪಂದ್ಯಗಳನ್ನು ಗೆಲ್ಲಬೇಕು ಅಥವಾ ಆಸ್ಟ್ರೇಲಿಯಾ ತಂಡವು ಶ್ರೀಲಂಕಾ ವಿರುದ್ಧ ಒಂದಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಗೆಲ್ಲದಂತೆ ಪ್ರಾರ್ಥಿಸಬೇಕಾಗುತ್ತದೆ.

ದಕ್ಷಿಣ ಆಫ್ರಿಕಾದಲ್ಲಿ ಪಾಕಿಸ್ತಾನ ಗೆಲ್ಲಬಹುದಾ?

ಇತ್ತೀಚೆಗೆ ಅಂತ್ಯಗೊಂಡ ಏಕದಿನ ಸರಣಿಯಲ್ಲಿ ಪಾಕಿಸ್ತಾನ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಕ್ಲೀನ್‌ ಸ್ವೀಪ್‌ ಸಾಧಿಸಿತ್ತು. ಹರಿಣಗಳನ್ನು ಅವರದ್ದೇ ನೆಲದಲ್ಲಿ 3-0 ಅಂತರದಿಂದ ವೈಟ್‌ವಾಶ್‌ ಮಾಡಿದ ಮೊದಲ ತಂಡವೆಂಬ ದಾಖಲೆ ಬರೆಯಿತು. ಟೆಸ್ಟ್‌ನಲ್ಲಿ, 1995ರಲ್ಲಿ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಾಗಿನಿಂದ ಪಾಕಿಸ್ತಾನ ತಂಡವು ಆಡಿದ 15 ಪಂದ್ಯಗಳಲ್ಲಿ 12ರಲ್ಲಿ ಸೋತಿದೆ. ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಹೀಗಾಗಿ ಹರಿಣಗಳ ನಾಡಲ್ಲಿ‌ ಪಾಕ್ ತಂಡದ ಟೆಸ್ಟ್‌ ಗೆಲುವು ನಿರೀಕ್ಷೆಯಷ್ಟು ಸುಲಭವಲ್ಲ.

Whats_app_banner