ಧನಿಷ್ಠಾ ನಕ್ಷತ್ರ ವರ್ಷ ಭವಿಷ್ಯ 2025: ಜೀವನದಲ್ಲಿ ಅನಿರೀಕ್ಷಿತ ತಿರುವುಗಳು ಇರುತ್ತವೆ, ಆಸ್ತಿಯ ವಿವಾದ ಬಗೆಹರಿಯಲಿದೆ
Dhanishta Nakshatra Bhavishya: ಧನಿಷ್ಠಾ ನಕ್ಷತ್ರದವರ ವರ್ಷ ಭವಿಷ್ಯ 2025. ಜೀವನದಲ್ಲಿ ಅನಿರೀಕ್ಷಿತ ತಿರುವುಗಳು ಇರುತ್ತವೆ, ಆಸ್ತಿಯ ವಿವಾದ ಬಗೆಹರಿಯಲಿದೆ. (ಬರಹ: ಎಚ್.ಸತೀಶ್, ಜ್ಯೋತಿಷಿ)

ಧನಿಷ್ಠಾ ನಕ್ಷತ್ರದ ಯುಗಾದಿ ವರ್ಷ ಭವಿಷ್ಯ: ಪಂಚಾಂಗದ ಪ್ರಕಾರ ಕೆಲವೇ ದಿನಗಳಲ್ಲಿ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಯುಗಾದಿ ಹಬ್ಬವು ಹೊಸ ವರ್ಷದ ಮೊದಲ ದಿನ. ಈ ಹೊಸ ವರ್ಷದಲ್ಲಿ ಸಂಕಷ್ಟಗಳು ಕಳೆದು ಸುಖ, ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ, ಹೊಸ ಅವಕಾಶ, ಸಂಪತ್ತು ಸಮೃದ್ಧಿಯನ್ನು ನಿರೀಕ್ಷಿಸುತ್ತ ಆಶಾವಾದಿಗಳಾಗಿ ಬದುಕುವುದು ಸಾಮಾನ್ಯ. ಬಹುತೇಕ ಸಂದರ್ಭದಲ್ಲಿ ಜನರು ತಮ್ಮ ರಾಶಿಗೆ ಅನುಗುಣವಾಗಿ ವರ್ಷ ಭವಿಷ್ಯವನ್ನು ಕಾತರದಿಂದ ವೀಕ್ಷಿಸುತ್ತಾರೆ. ಇನ್ನೂ ನಿಖರವಾಗಿ ಬೇಕು ಎಂದುಕೊಳ್ಳುವವರು ನಕ್ಷತ್ರವಾರು ವರ್ಷ ಭವಿಷ್ಯ ನೋಡಿ ಕೊಂಚ ಸಮಾಧಾನ ಮಾಡಿಕೊಳ್ಳುತ್ತಾರೆ. ಅಂತಹ ಓದುಗರಿಗಾಗಿ 27 ನಕ್ಷತ್ರಗಳ ವರ್ಷ ಭವಿಷ್ಯವನ್ನು ಸರಣಿ ಪ್ರಕಾರ ‘ಎಚ್‌ಟಿ ಕನ್ನಡ’ ಒದುಗಿಸುತ್ತಿದೆ. ನಕ್ಷತ್ರಗಳ ಪೈಕಿ 23ನೇಯದಾದ ಧನಿಷ್ಠಾ ನಕ್ಷತ್ರದಲ್ಲಿ ಜನಿಸಿದವರ ಶ್ರೀ ವಿಶ್ವಾವಸು ಸಂವತ್ಸರದ ವರ್ಷ ಭವಿಷ್ಯ ಇಲ್ಲಿದೆ.
ಧನಿಷ್ಠಾ ನಕ್ಷತ್ರದವರ ಜೀವನ ಮತ್ತು ಹೆಸರು ಯಾವ ಅಕ್ಷರಗಳಿಂದ ಆರಂಭವಾಗುತ್ತೆ
ಪ್ರತಿಯೊಂದು ನಕ್ಷತ್ರವೂ ನಾಲ್ಕು ಪಾದಗಳನ್ನು ಹೊಂದಿರುತ್ತವೆ. ಧನಿಷ್ಠ ನಕ್ಷತ್ರದ ಎಲ್ಲಾ 1ಮತ್ತು 2ನೆಯ ಪಾದಗಳು ಮಕರ ರಾಶಿಯಲ್ಲಿ ಬರುತ್ತವೆ. ಉಳಿದ 3 ಮತ್ತು 4 ನೆಯ ಪಾದಗಳು ಕುಂಭರಾಶಿಯಲ್ಲಿ ಇರಲಿವೆ. ಇದಲ್ಲದೆ ನಿಮ್ಮ ಹೆಸರು ಗ, ಗಿ, ಗು ಮತ್ತು ಗೆ ಅಕ್ಷರದಿಂದ ಆರಂಭವಾಗಿದ್ದಲ್ಲಿ ನಿಮ್ಮದು ಧನಿಷ್ಠ ನಕ್ಷತ್ರವಾಗುತ್ತದೆ.
ಶ್ರೀ ವಿಶ್ವಾವಸು ಸಂವತ್ಸರದಲ್ಲಿ ಧನಿಷ್ಠಾ ನಕ್ಷತ್ರದವರ ಭವಿಷ್ಯ
ದೀರ್ಘ ಕಾಲದ ಪ್ರಯಾಣಗಳನ್ನು ಇಷ್ಟಪಡುವಿರಿ. ಕಠಿಣವಾದ ಸವಾಲುಗಳನ್ನು ಸರಳ ರೀತಿಯಲ್ಲಿ ಪರಿಹರಿಸಬಲ್ಲಿರಿ. ಜೀವನದಲ್ಲಿ ಅನಿರೀಕ್ಷಿತ ತಿರುವುಗಳು ಕಂಡುಬರುತ್ತವೆ. ಅನಾವಶ್ಯಕವಾಗಿ ಜಗಳ ಕದನವನ್ನು ಇಷ್ಟಪಡದೆ ಸಮಸ್ಯೆಯನ್ನು ಬಗೆಹರಿಸುವಿರಿ. ಬೇರೆಯವರ ಪ್ರಭಾವಕ್ಕೆ ಮಣಿಯದೆ ಸ್ವತಂತ್ರವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಬೇರೊಬ್ಬರ ಸ್ವತಂತ್ರವನ್ನು ಗೌರವಿಸುವಿರಿ. ಬರಿ ಮಾತಿನಲ್ಲಿ ಸಮಯ ಕಳೆಯುದೆ ಕೆಲಸ ಕಾರ್ಯದಲ್ಲಿ ನಿರತರಾಗುವಿರಿ. ಅನೇಕ ವಿಚಾರಗಳನ್ನು ಕಲಿತು ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವಿರಿ. ಸದಾಕಾಲ ಯಾವುದಾದರೂ ಒಂದು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ಆರಂಭದಲ್ಲಿ ತೊಂದರೆಗಳಿದ್ದರೂ ಸುಖಜೀವನ ನಡೆಸುವಿರಿ. ಮನೆತನದಲ್ಲಿ ನಿಮಗೆ ವಿಶೇಷವಾದ ಸ್ಥಾನಮಾನವಿರುತ್ತದೆ. ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳುವ ಜನರಿರುತ್ತಾರೆ. ದಾಂಪತ್ಯ ಜೀವನದಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ದುಡುಕಿನ ಮಾತಿನಿಂದ ಕೆಲವರ ವಿರೋಧವನ್ನು ಎದುರಿಸಬೇಕಾಗುತ್ತದೆ.
ಧನಿಷ್ಠಾ ನಕ್ಷತ್ರದ 1ನೇ ಪಾದ ಅಥವಾ ಹೆಸರು ಗ ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ಬೇರೆಯವರನ್ನು ಆಶ್ರಯಿಸದೆ ಧೈರ್ಯದಿಂದ ಕೆಲಸ ಕಾರ್ಯಗಳಲ್ಲಿ ತೊಡಗುವಿರಿ. ಕೇವಲ ಕುಟುಂಬವಲ್ಲದೆ ಸಮಾಜದಲ್ಲಿಯೂ ಉನ್ನತ ಗೌರವವನ್ನು ಗಳಿಸುವಿರಿ. ನಿಮ್ಮ ರೀತಿ ನೀತಿಗಳು ಅನೇಕರಿಗೆ ಆದರ್ಶಪ್ರಾಯವಾಗುತ್ತದೆ. ಉತ್ತಮ ಆತ್ಮಶಕ್ತಿ ಇರುತ್ತದೆ. ಸುಲಭವಾಗಿ ಹಣಕಾಸಿನ ವಿಚಾರವಾಗಿ ಬೇರೆಯವರನ್ನು ನಂಬುವುದಿಲ್ಲ. ರಾಜಕೀಯದಲ್ಲಿ ಇರುವ ವ್ಯಕ್ತಿಗಳಿಗೆ ವಿಶೇಷ ಪದವಿ ಪುರಸ್ಕಾರ ದೊರೆಯುತ್ತದೆ. ವಿದ್ಯಾರ್ಥಿಗಳ ಜೀವನದಲ್ಲಿ ಅವರದೇ ಮೇಲುಗೈ ಆಗುತ್ತದೆ. ಮಕ್ಕಳ ಆರೋಗ್ಯದಲ್ಲಿ ತೊಂದರೆ ಕಂಡು ಬರುತ್ತದೆ. ಸಾಂಸಾರಿಕ ಜೀವನದಲ್ಲಿ ಸಂತಸ ಕಂಡು ಬರುತ್ತದೆ. ಮನೆತನದ ಆಸ್ತಿಯ ವಿಚಾರದ ವಿವಾದವು ದೂರವಾಗುತ್ತದೆ. ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಉದ್ಯೋಗ ಬದಲಿಸುವ ಸಾಧ್ಯ ನಿಚ್ಚಳವಾಗಿದೆ. ಧಾರ್ಮಿಕ ಸಂಸ್ಥೆಗಳ ನೇತೃತ್ವವು ನಿಮ್ಮದಾಗುತ್ತದೆ.
ಧನಿಷ್ಠಾ ನಕ್ಷತ್ರದ 2ನೆ ಪಾದ ಅಥವಾ ಹೆಸರು ಗಿ ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ಬಹುಮುಖದ ಪ್ರತಿಭೆಯು ನಿಮಗೆ ಒಲಿದಿರುತ್ತದೆ. ಕಲಾವಿದರಿಗೆ ವಿಶೇಷವಾದ ಅವಕಾಶಗಳು ದೊರೆಯುತ್ತವೆ. ತಾಂತ್ರಿಕ ಪರಿಣತಿ ಪಡೆದವರಿಗೆ ಉನ್ನತ ಅಧಿಕಾರ ದೊರೆಯಲಿದೆ. ಉದ್ಯೋಗದಲ್ಲಿನ ಬದಲಾವಣೆಗಳು ಬೇಸರ ತರಲಿವೆ. ಮಾತಿನ ಮೇಲೆ ಗಮನವಿರುವುದಿಲ್ಲ. ನೀವು ಆಡುವ ಮಾತುಗಳಿಂದ ಕೇಳುಗರಲ್ಲಿ ತಪ್ಪಾದ ಅಭಿಪ್ರಾಯ ಮೂಡುತ್ತದೆ. ಕವಿಗಳು ಮತ್ತು ಲೇಖಕರಿಗೆ ಪ್ರಶಸ್ತಿ ಸನ್ಮಾನಗಳು ದೊರೆಯುತ್ತವೆ. ಮಕ್ಕಳ ಜೀವನದಲ್ಲಿನ ಮಹತ್ತರ ಬದಲಾವಣೆಗಳು ಸಂತೋಷ ನೀಡುತ್ತದೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ಸಂತಾನ ಲಾಭವಿದೆ. ವಿದ್ಯಾರ್ಥಿಗಳು ಸ್ವತಂತ್ರವಾಗಿ ಕಲಿತು ಉನ್ನತ ಮಟ್ಟ ತಲುಪುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭವಿದೆ. ಪಾಲುಗಾರಿಕೆಯ ವ್ಯಾಪಾರ ವ್ಯವಹಾರಗಳು ಮಂದಗತಿಯಲ್ಲಿ ನಡೆಯಲಿವೆ.
ಧನಿಷ್ಠಾ ನಕ್ಷತ್ರದ 3ನೇ ಪಾದ ಅಥವಾ ಹೆಸರು ಗು ಅಕ್ಷರದಿಂದ ಆರಂಭವಾಗಬೇಕು
ವಯಸ್ಸು ಚಿಕ್ಕದಾದರೂ ದೊಡ್ಡಮಟ್ಟದ ಜವಾಬ್ದಾರಿಗಳನ್ನು ಒಪ್ಪಲೇಬೇಕಾಗುತ್ತದೆ. ಅನುಭವಿಗಳ ನೆರವಿನಿಂದ ಕೆಲಸ ಕಾರ್ಯದಲ್ಲಿ ಯಶಸ್ಸನ್ನು ಗಳಿಸುವಿರಿ. ಅಳುಕಿನ ಮನಸ್ಸಿನಲ್ಲಿಯೇ ಹೊಸ ಉದ್ದಿಮೆಯನ್ನು ಆರಂಭಿಸುವಿರಿ. ಪ್ರಶ್ನಿಸದೆ ಗುರು ಹಿರಿಯರ ಮಾತನ್ನು ಒಪ್ಪುವಿರಿ. ನಿಮ್ಮ ಕಷ್ಟ ನಷ್ಟದ ಸಂದರ್ಭದಲ್ಲಿ ಬಾಳ ಸಂಗಾತಿಯು ನೆರವಿಗೆ ಬರಲಿದ್ದಾರೆ. ನಿಮ್ಮಲ್ಲಿರುವ ಹಣವನ್ನು ಉಳಿತಾಯ ಮಾಡಿ ಬೇರೆಯವರ ಹಣವನ್ನು ಖರ್ಚು ಮಾಡುವಿರಿ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸೂಚನೆಗಳು ಇವೆ. ಕುಟುಂಬದ ಸದಸ್ಯರ ಜೊತೆಯಲ್ಲಿ ಧಾರ್ಮಿಕ ಕೇಂದ್ರಗಳಿಗೆ ಪ್ರವಾಸ ಬೆಳೆಸುವಿರಿ. ಆದಾಯವಿದ್ದರೂ ಖರ್ಚು ವೆಚ್ಚಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುವುದು ಒಳ್ಳೆಯದು.
ಧನಿಷ್ಠಾ ನಕ್ಷತ್ರದ 4ನೇ ಪಾದ ಅಥವಾ ಹೆಸರು ಗೆ ಅಕ್ಷರದಿಂದ ಆರಂಭವಾಗುವವರ ಭವಿಷ್ಯ
ಮನಸ್ಸನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ನಿಮ್ಮಲ್ಲಿರುವ ಸದ್ಗುಣಗಳಿಗೆ ಎಲ್ಲರ ಗೌರವ ಲಭಿಸುತ್ತದೆ. ಉದ್ಯೋಗದಲ್ಲಿ ಉನ್ನತ ಅಧಿಕಾರ ಲಭಿಸುತ್ತದೆ. ಹಿರಿಯರ ಮಾತನ್ನ ಗೌರವಿಸಿ. ನಿಮ್ಮ ಅಭಿಪ್ರಾಯವನ್ನು ಬದಲಿಸುವಿರಿ. ಉದ್ಯೋಗದಲ್ಲಿ ನಿಮ್ಮ ಜವಾಬ್ದಾರಿಯು ಹೆಚ್ಚುತ್ತದೆ. ಆದರೆ ಮನದ ಬೇಸರದಿಂದ ಉದ್ಯೋಗವನ್ನು ಬದಲಿಸುವಿರಿ. ಹಿರಿಯ ಅಧಿಕಾರಿಗಳು ಆತಂಕದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಬೇರೆಯವರ ಸಲಹೆ ಸೂಚನೆಯನ್ನು ಕೇಳುವಿರಿ. ಮನಸ್ಸಿಗೆ ಸರಿಹೊಂದುವ ವಿಚಾರವನ್ನಷ್ಟೇ ಒಪ್ಪಿಕೊಳ್ಳುವಿರಿ. ಹಣದ ವ್ಯವಹಾರದಲ್ಲಿ ನಿಮಗೆ ಕುಟುಂಬದ ಸದಸ್ಯರ ಸಹಕಾರ ದೊರೆಯುತ್ತದೆ. ಕ್ರೀಡಾಪಟುಗಳಿಗೆ ಅವಕಾಶಗಳು ದೊರೆಯುತ್ತದೆ. ದೀರ್ಘ ಕಾಲದಿಂದ ಬಳಲುತ್ತಿರುವ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ ಲಭಿಸುತ್ತದೆ. ಅನಿವಾರ್ಯವಾಗಿ ಆತ್ಮೀಯರಿಂದ ಹಣವನ್ನು ಪಡೆಯುವಿರಿ.
ಬರಹ: ಎಚ್. ಸತೀಶ್, ಜ್ಯೋತಿಷಿ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
