ಔಟ್ ಅಥವಾ ನಾಟೌಟ್; ಯಶಸ್ವಿ ಜೈಸ್ವಾಲ್ ವಿಕೆಟ್ ವಿವಾದಕ್ಕೆ ಹಲವು ತಿರುವುಗಳು; ಯಾರು ಏನಂದ್ರು?
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಔಟ್ ಎಂಬ ಅಂಪೈರ್ ತೀರ್ಪಿನ ಕುರಿತು ಪರ-ವಿರೋಧಗಳ ಚರ್ಚೆ ಶುರುವಾಗಿದೆ. ಬಹುತೇಕ ದಿಗ್ಗಜರು ಹಾಗೂ ತಂತ್ರಜ್ಞರು ಇದು ನಾಟೌಟ್ ಎಂಬಂತೆ ಪ್ರತಿಕ್ರಿಯೆ ನೀಡಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಪಂದ್ಯದ ವಿವಾದವು ಹಲವು ಅಭಿಪ್ರಾಯಗಳನ್ನು ಪಡೆದಿದೆ.
ಕ್ರಿಕೆಟ್ ಅಥವಾ ಯಾವುದೇ ಕ್ರೀಡೆಯಲ್ಲಿ ವಿವಾದಗಳು ಹುಟ್ಟುವುದು ಹೊಸದೇನಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಅಂಪೈರ್‌ಗಳು ಕೊಡುವ ಗೊಂದಲಮಯ ತೀರ್ಪಿನಿಂದ ಒಂದು ತಂಡಕ್ಕೆ ಲಾಭವಾದರೆ, ಇನ್ನೊಂದು ತಂಡಕ್ಕೆ ನಷ್ಟವಾಗುತ್ತದೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿಯೂ ಇದೇ ರೀತಿಯ ವಿದ್ಯಮಾನ ನಡೆಯಿತು. ಪಂದ್ಯದಲ್ಲಿ ಭಾರತ ತಂಡವನ್ನು ಆತಿಥೇಯ ಆಸ್ಟ್ರೇಲಿಯಾ ತಂಡ ಸೋಲಿಸಿತು. ಆದರೆ, ಟೀಮ್ ಇಂಡಿಯಾ ಪರ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಯಶಸ್ವಿ ಜೈಸ್ವಾಲ್, ವಿವಾದಾತ್ಮಕ ರೀತಿಯಲ್ಲಿ ಔಟಾದರು. ಅದರ ಬೆನ್ನಲ್ಲೇ ರೋಹಿತ್ ಶರ್ಮಾ ಬಳಗ ಆಲೌಟ್ ಆಗಿ ಪಂದ್ಯ ಸೋತಿತು.
ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಎಸೆದ ಚೆಂಡನ್ನು ಜೈಸ್ವಾಲ್ ಪುಲ್ ಮಾಡಲು ಯತ್ನಿಸಿದರು. ಆ ಬಾಲ್ ವಿಕೆಟ್ ಕೀಪರ್‌ನತ್ತ ಸಾಗಿತು. ಈ ವೇಳೆ ಆನ್‌ಫೀಲ್ಡ್ ಅಂಪೈರ್ ಅದನ್ನು ನಾಟೌಟ್ ನೀಡಿದರು. ಆದರೆ ಆಸ್ಟ್ರೇಲಿಯಾ ತಂಡ ಡಿಆರ್‌ಎಸ್‌ಗೆ ಮನವಿ ಮಾಡಿತು. ಸ್ನಿಕೋ ಮೀಟರ್‌ನಲ್ಲಿ ಚೆಂಡು ಬ್ಯಾಟ್‌ಗೆ ಬಡಿದ ಗುರುತಾಗಿ ಎಡ್ಜ್ ತೋರಿಸಲಿಲ್ಲ. ಆದರೆ ಗ್ಲೌಸ್‌ಗೆ ಚೆಂಡು ಹೊಡೆದ ನಂತರ ಅದು ತನ್ನ ಪಥವನ್ನು ಬದಲಿಸಿ ಕೀಪರ್ ಕಡೆ ಹೋದಂತೆ ತೋರಿತು. ಇದರ ಆಧಾರದ ಮೇಲೆ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದರು.
ಈ ನಿರ್ಧಾರವು ಇಡೀ ಕ್ರಿಕೆಟ್ ಜಗತ್ತಿನಲ್ಲಿ ಭಾರಿ ಚರ್ಚೆಗೆ ಕಾರಣವಾಯ್ತು. ಜೈಸ್ವಾಲ್ ಔಟಾಗಿದ್ದಾರೋ ಅಥವಾ ನಾಟೌಟ್ ಆಗಿದ್ದಾರೋ ಎಂಬ ವಿಚಾರದಲ್ಲಿ ಈಗಲೂ ಭಿನ್ನಾಭಿಪ್ರಾಯಗಳಿದ್ದು, ಕೆಲವು ದಿಗ್ಗಜ ಕ್ರಿಕೆಟಿಗರು ಇದರ ಪರವಾಗಿ ಮಾತನಾಡಿದ್ದಾರೆ. ಇನ್ನೂ ಕೆಲವರು ಅಂಪೈರ್ ನಿರ್ಧಾರ ವಿರೋಧಿಸಿದ್ದಾರೆ.
ಹಾಟ್‌ಸ್ಪಾಟ್ ತಂತ್ರಜ್ಞಾನದ ಸಂಸ್ಥಾಪಕರು ಹೇಳಿದ್ದೇನು?
ವಿವಾದ ಸಂಬಂಧ ಹಾಟ್‌ಸ್ಪಾಟ್ ತಂತ್ರಜ್ಞಾನದ ಸಂಸ್ಥಾಪಕರು ಮಾತನಾಡಿದ್ದಾರೆ. ಕೋಡ್ ಸ್ಪೋರ್ಟ್ಸ್ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಅವರು, “ಜೈಸ್ವಾಲ್ ಅವರು ಎದುರಿಸಿದ ಶಾಟ್ ಯಾವುದೇ ಶಬ್ದವಿಲ್ಲದ ಗ್ಲಾನ್ಸ್-ಶಾಟ್‌ಗಳಲ್ಲಿ ಒಂದಾಗಿತ್ತು. ಹೀಗಾಗಿ, ಸ್ನಿಕೋ ಯಾವುದೇ ಶಬ್ದವನ್ನು ತೋರಿಸಲು ಸಾಧ್ಯವಾಗಿಲ್ಲ. ನಾನು ಆಡಿಯೋ ಡೈರೆಕ್ಟರ್ ಜೊತೆಗೆ ಮಾತನಾಡಿದೆ. ಅವರು ಯಾವುದೇ ಶಬ್ದ ಇರಲಿಲ್ಲ ಎಂದು ಹೇಳಿದರು. ಬಹುಶಃ ದೃಶ್ಯವು ಸಾಕ್ಷ್ಯ ಸತ್ಯವಾಗಿದ್ದರಿಂದ ಔಟ್ ನೀಡಲಾಗಿದೆ” ಎಂದು ಹೇಳಿಕೆ ನೀಡಿದ್ದಾರೆ.
ಸುನಿಲ್ ಗವಾಸ್ಕರ್ ವಾಗ್ದಾಳಿ
ಪಂದ್ಯದ ಸಮಯದಲ್ಲಿ ಕಾಮೆಂಟರಿ ಮಾಡುತ್ತಿದ್ದ ಸುನಿಲ್ ಗವಾಸ್ಕರ್, ಯಶಸ್ವಿ ಜೈಸ್ವಾಲ್ ಅವರನ್ನು ಔಟ್ ಮಾಡಲು ತಂತ್ರಜ್ಞಾನವನ್ನು ನಂಬದ್ದಕ್ಕೆ ಅಂಪೈರ್ ವಿರುದ್ಧ ವಾಗ್ದಾಳಿ ನಡೆಸಿದರು. ಚೆಂಡು ತನ್ನ ಪಥವನ್ನು ಬದಲಾಯಿಸುವುದು ಭ್ರಮೆಯಲ್ಲದೆ ಬೇರೇನೂ ಅಲ್ಲ ಎಂದು ಅವರು ಹೇಳಿದರು.
“ನೀವು ತಂತ್ರಜ್ಞಾನವನ್ನು ಬಳಸುತ್ತಿದ್ದರೆ, ತಂತ್ರಜ್ಞಾನವನ್ನು ಮಾತ್ರ ಬಳಸಿ. ಸ್ನಿಕೊ ಏನು ಹೇಳುತ್ತದೆ? ಸ್ನಿಕೊ ಪ್ರಕಾರ ಅಲ್ಲಿ ಒಂದು ಸರಳ ರೇಖೆ ಇರಬೇಕಿತ್ತು. ಹೀಗಾಗಿ ಇದು ಸಂಪೂರ್ಣವಾಗಿ ನಾಟೌಟ್. ನನ್ನ ಪ್ರಕಾರ, ಇದು ಔಟ್ ಅಲ್ಲ. ಸ್ನಿಕೋದಿಂದ ಏನಾದರೂ ಕಂಡಿದ್ದರೆ, ಅದು ವಿಭಿನ್ನವಾಗಿತ್ತು. ಇದು ತಪ್ಪು, ಸಂಪೂರ್ಣವಾಗಿ ತಪ್ಪು ನಿರ್ಧಾರ. ಇಲ್ಲವಾದಲ್ಲಿ ತಂತ್ರಜ್ಞಾನವನ್ನು ಬಳಸಬೇಡಿ. ನೀವು ಭ್ರಮೆಯನ್ನು ನಂಬುವುದಾದರೆ ತಂತ್ರಜ್ಞಾನವನ್ನು ಬಳಸಬೇಡಿ,” ಎಂದು ಖಡಕ್ ಆಗಿ ಹೇಳಿದ್ದಾರೆ.
ಅಂಪೈರ್ ಏನಂದ್ರು?
ಜೈಸ್ವಾಲ್ ಔಟ್ ವಿಚಾರವಾಗಿ ಸುದ್ದಿಸಂಸ್ಥೆ ಟೈಮ್ಸ್‌ನೌ ಜೊತೆಗೆ ಮಾತನಾಡಿರುವ ಅಂತಾರಾಷ್ಟ್ರೀಯ ಅಂಪೈರ್ ಒಬ್ಬರು, ಥರ್ಡ್ ಅಂಪೈರ್ ಅಳವಡಿಸಿಕೊಂಡ ಪ್ರಕ್ರಿಯೆಯನ್ನು ತಪ್ಪು ಎಂದು ಹೇಳಿದ್ದಾರೆ. ಇದೇ ವೇಳೆ ಅಂಪೈರ್ ತಂತ್ರಜ್ಞಾನವನ್ನು ಬಳಸುವಲ್ಲಿ ಅಳವಡಿಸಬೇಕಾದ ಸ್ಥಿರವಾದ ಪ್ರೋಟೋಕಾಲ್‌ನ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. "ಸಮಸ್ಯೆ ಇರುವುದು ಪ್ರೋಟೋಕಾಲ್‌ನಲ್ಲಿ. ಪಂದ್ಯದ ಅಂಪೈರ್ ಅದನ್ನೇ ಮಾಡಿದ್ದಾರೆ. ಅವರು ಒಂದು ನಿರ್ದಿಷ್ಟ ರೀತಿಯ ಪ್ರಕ್ರಿಯೆಯನ್ನು ಅನುಸರಿಸುತ್ತಿದ್ದಾರೆ. ಕೆಲವೊಮ್ಮೆ ಪುರಾವೆಯನ್ನು ಪರಿಗಣಿಸಿದರೆ, ಕೆಲವೊಮ್ಮೆ ಪರಿಗಣಿಸುವುದಿಲ್ಲ. ಹೀಗಾಗಿ ತೀರ್ಪಿಗೆ ಅಳವಡಿಸುವ ಪ್ರಕ್ರಿಯೆ ಸ್ಥಿರವಾಗಿಲ್ಲ. ಇದು ಸರಿ - ತಪ್ಪಿನ ಪ್ರಶ್ನೆ ಅಲ್ಲ,” ಎಂದು ಅಂತಾರಾಷ್ಟ್ರೀಯ ಅಂಪೈರ್ ಒಬ್ಬರು ಹೇಳಿದ್ದಾರೆ.
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. https://kannada.hindustantimes.com/astrology/yearly-horoscope