ರಿತಿಕಾ ನಿಮ್ಮನ್ನು ನನ್ನ ಕೆಲಸದ ಹೆಂಡತಿ ಎನ್ನುತ್ತಾಳೆ; ರಾಹುಲ್ ದ್ರಾವಿಡ್ಗೆ ರೋಹಿತ್ ಶರ್ಮಾ ಭಾವುಕ ಬೀಳ್ಗೊಡುಗೆ
Rohit Sharma on Rahul Dravid: 2024ರ ಟಿ20 ವಿಶ್ವಕಪ್ ಗೆದ್ದ ನಂತರ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ನಿರ್ಗಮನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
2024ರ ಐಸಿಸಿ ಟಿ20 ವಿಶ್ವಕಪ್ ಗೆದ್ದ ನಂತರ ನಾಯಕ ರೋಹಿತ್ ಶರ್ಮಾ (Rohit Sharma) ಅವರು ಮಾಜಿ ಹೆಡ್ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರಿಗೆ ಭಾವನಾತ್ಮಕ ಬೀಳ್ಕೊಡುಗೆಯ ಸಂದೇಶ ರವಾನಿಸಿದ್ದಾರೆ. 2021ರ ಟಿ20 ವಿಶ್ವಕಪ್ ನಂತರ ರವಿ ಶಾಸ್ತ್ರಿ (Ravi Shastri) ಹೆಡ್ಕೋಚ್ ಸ್ಥಾನಕ್ಕೆ ನೇಮಕಗೊಂಡ ದ್ರಾವಿಡ್ ಅಧಿಕಾರವಧಿ 2024ರ ಟಿ20 ವಿಶ್ವಕಪ್ ಫೈನಲ್ (T20 World Cup 2024) ಪಂದ್ಯಕ್ಕೆ ಮುಕ್ತಾಯಗೊಂಡಿದೆ. ರೋಹಿತ್ ಮತ್ತು ದ್ರಾವಿಡ್ ಜೋಡಿ ಭಾರತ ತಂಡಕ್ಕೆ ಎರಡನೇ ವಿಶ್ವಕಪ್ ಟ್ರೋಫಿ ಗೆದ್ದುಕೊಡುವಲ್ಲಿ ಯಶಸ್ವಿಯಾಯಿತು. ನೂತನ ಹೆಡ್ಕೋಚ್ ಗೌತಮ್ ಗಂಭೀರ್ ನೇಮಕದ ಬೆನ್ನಲ್ಲೇ ರೋಹಿತ್ ಈ ಪೋಸ್ಟ್ ಹಾಕಿದ್ದಾರೆ.
ನಾಯಕ ರೋಹಿತ್ ಮತ್ತು ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತ ಟಿ20 ವಿಶ್ವಕಪ್ ಜೊತೆಗೆ ಏಷ್ಯಾ ಕಪ್ ಗೆದ್ದ ಸಾಧನೆ ಮಾಡಿದೆ. ಅಲ್ಲದೆ, 2023ರ ವಿಶ್ವಕಪ್, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೂ ಭಾರತ ಪ್ರವೇಶಿಸಿದೆ. ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ತಂಡವನ್ನು ನಂಬರ್ 1 ಪಟ್ಟಕ್ಕೂ ಏರಿಸಿದೆ. ಹೀಗಾಗಿ ನಿರ್ಗಮಿತ ಕೋಚ್ನ 3 ವರ್ಷಗಳ ಸುದೀರ್ಘ ಅಧಿಕಾರಾವಧಿಯನ್ನು ನೆನಪಿಸಿಕೊಳ್ಳುವ ಮೂಲಕ ರೋಹಿತ್ ದ್ರಾವಿಡ್ಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕೆಲಸದ ಹೆಂಡತಿ ಎಂದೂ ಕರೆದಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಹಾಕಿರುವ ಪೋಸ್ಟ್ನಲ್ಲಿ ಭಾವುಕತೆಯನ್ನು ವ್ಯಕ್ತಪಡಿಸಿದ್ದಾರೆ.
ರಾಹುಲ್ ದ್ರಾವಿಡ್ ಕುರಿತು ರೋಹಿತ್ ಶರ್ಮಾ ಭಾವುಕ ಬೀಳ್ಗೊಡುಗೆ
ಪ್ರೀತಿಯ ರಾಹುಲ್ ಭಾಯ್, ನಿಮ್ಮ ಕುರಿತು ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಪದಗಳ ಹುಡುಕಾಟದಲ್ಲಿದ್ದೇನೆ. ಸೂಕ್ತ ಪದಗಳು ಸಿಗಬಹುದೇ ಎಂಬುದರ ಕುರಿತು ನನಗೆ ಖಚಿತ ಮಾಹಿತಿ ಇಲ್ಲ. ಆದರೆ, ಪ್ರಯತ್ನವನ್ನಂತೂ ಮಾಡುತ್ತೇನೆ. ನೀವು ತಮ್ಮೆಲ್ಲಾ ಸಾಧನೆಗಳನ್ನು ಬದಿಗಿಟ್ಟು ಮಾರ್ಗದರ್ಶಕರಾಗಿ ನಮ್ಮ ಹಂತಕ್ಕಿಳಿದು ನಮಗೆ ಮಾರ್ಗದರ್ಶನ ನೀಡಿದ್ದೀರಿ ಎಂದು ಮಾತ್ರ ಹೇಳಬಲ್ಲೆ. ಅದು ಈ ಆಟಕ್ಕೆ ನೀವು ಕೊಟ್ಟ ಕೊಡುಗೆ, ಗೌರವ ಎಂದು ಇನ್ಸ್ಟಾಗ್ರಾಂನ ಪೋಸ್ಟ್ನಲ್ಲಿ ಸುದೀರ್ಘವಾಗಿ ಬರೆದಿದ್ದಾರೆ.
ನನ್ನ ಬಾಲ್ಯದ ದಿನಗಳಿಂದಲೂ ನಾನು ನಿಮ್ಮನ್ನು ಶತಕೋಟಿ ಜನರ ರೀತಿಯೇ ನೋಡಿದ್ದೇನೆ. ಆದರೆ ನಿಮ್ಮೊಂದಿಗೆ ಇಷ್ಟು ನಿಕಟವಾಗಿ ಕೆಲಸ ಮಾಡುವುದಕ್ಕೆ ಸಾಕಷ್ಟು ಅದೃಷ್ಟ ಮಾಡಿದ್ದೇನೆ. ಇದು ನಿಮ್ಮ ಉಡುಗೊರೆ, ನಿಮ್ಮ ನಮ್ರತೆ ಮತ್ತು ಈ ಆಟದ ಮೇಲಿನ ನಿಮ್ಮ ಪ್ರೀತಿ. ನಾನು ನಿಮ್ಮಿಂದ ಬಹಳಷ್ಟು ಕಲಿತಿದ್ದೇನೆ. ನಿಮ್ಮೊಂದಿಗಿನ ಪ್ರತಿಯೊಂದು ಕ್ಷಣವೂ ನೆನಪಿನಲ್ಲಿ ಉಳಿಯುತ್ತದೆ. ನನ್ನ ಹೆಂಡತಿ ನಿಮ್ಮನ್ನು ನನ್ನ ಕೆಲಸದ ಹೆಂಡತಿ ಎಂದು ಕರೆಯುತ್ತಾಳೆ. ನಿಮ್ಮನ್ನು ಹಾಗೆ ಕರೆಯಲು ನಾನು ಅದೃಷ್ಟಶಾಲಿ ಎಂದು ಭಾವುಕರಾಗಿದ್ದಾರೆ.
ನೀವು ನನ್ನ ಸ್ನೇಹಿತ ಎಂದ ರೋಹಿತ್
ಇದೇ ವೇಳೆ ದ್ರಾವಿಡ್ ಮಾರ್ಗದರ್ಶನದ ಅಡಿಯಲ್ಲಿ ವಿಶ್ವಕಪ್ ಗೆದ್ದಿರುವುದಕ್ಕೆ ಸಂತಸವಾಗಿದೆ ಎಂದು ಹೇಳಿದ್ದಾರೆ. ನಿಮ್ಮ ವೃತ್ತಿಜೀವನ ಮತ್ತು ಸಾಧನೆಯಲ್ಲಿ ಇದೊಂದು ಕೊರತೆ ಕಾಡುತ್ತಿತ್ತು. ಆದರೆ ಅದನ್ನು ನಾವಿಬ್ಬರೂ ಒಟ್ಟಿಗೆ ಸಾಧಿಸಿದ್ದಕ್ಕೆ ಸಂತಸ ಇದೆ. ರಾಹುಲ್ ಭಾಯ್, ನಿಮ್ಮನ್ನು ನನ್ನ ವಿಶ್ವಾಸಾರ್ಹ, ನನ್ನ ತರಬೇತುದಾರ ಮತ್ತು ನನ್ನ ಸ್ನೇಹಿತ ಎಂದು ಕರೆಯುವುದು ಸಂಪೂರ್ಣ ಗೌರವವಾಗಿದೆ ಎಂದು ರೋಹಿತ್ ಹೇಳಿದ್ದಾರೆ.
ಕ್ರಿಕೆಟಿಗನಾಗಿ ಅಥವಾ ತರಬೇತುದಾರನಾಗಿ ದ್ರಾವಿಡ್ ಎಲ್ಲಾ ಕೊಡುಗೆ ನೀಡಿದ್ದಾರೆ. ಕಳೆದ ವರ್ಷದ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಟೀಮ್ ಇಂಡಿಯಾ ಸೋತ ನಂತರ ದ್ರಾವಿಡ್ ಕೋಚ್ ಸ್ಥಾನ ತೊರೆಯದಂತೆ ರೋಹಿತ್ ಶರ್ಮಾ ಮನವಿ ಮಾಡಿದರು. ದ್ರಾವಿಡ್ ಕೂಡ ರೋಹಿತ್ ಶರ್ಮಾ ಅವರ ಸಾಧನೆಗಳನ್ನು ಶ್ಲಾಘಿಸಿದ್ದರು. ಒಬ್ಬ ಕೋಚ್ ಆಗಿ ಅವರ ಜೊತೆಯಿದ್ದ ಬಾಂಧವ್ಯವನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದಿದ್ದರು.