ಒಂದೂ ಪಂದ್ಯ ಆಡದ ಮೀಸಲು ಆಟಗಾರರಿಗೆ 1 ಕೋಟಿ; ಬಿಸಿಸಿಐ 125 ಕೋಟಿ ಬಹುಮಾನದಲ್ಲಿ ಕೊಹ್ಲಿ, ರೋಹಿತ್‌ ಪಾಲು ಎಷ್ಟು?
ಕನ್ನಡ ಸುದ್ದಿ  /  ಕ್ರಿಕೆಟ್  /  ಒಂದೂ ಪಂದ್ಯ ಆಡದ ಮೀಸಲು ಆಟಗಾರರಿಗೆ 1 ಕೋಟಿ; ಬಿಸಿಸಿಐ 125 ಕೋಟಿ ಬಹುಮಾನದಲ್ಲಿ ಕೊಹ್ಲಿ, ರೋಹಿತ್‌ ಪಾಲು ಎಷ್ಟು?

ಒಂದೂ ಪಂದ್ಯ ಆಡದ ಮೀಸಲು ಆಟಗಾರರಿಗೆ 1 ಕೋಟಿ; ಬಿಸಿಸಿಐ 125 ಕೋಟಿ ಬಹುಮಾನದಲ್ಲಿ ಕೊಹ್ಲಿ, ರೋಹಿತ್‌ ಪಾಲು ಎಷ್ಟು?

ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್‌ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದ ಭಾರತ ತಂಡವು ಟಿ20 ವಿಶ್ವಕಪ್‌ ತನ್ನದಾಗಿಸಿತು. 11 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆದ್ದ ಬೆನ್ನಲ್ಲೇ ಬಿಸಿಸಿಐ ಬಹುಮಾನದ ಮೊತ್ತವನ್ನು ಘೋಷಿಸಿತು. ಇದದ ಹಂಚಿಕೆ ಹೇಗೆ ಎಂಬುದನ್ನು ನೋಡೋಣ.

 ಬಿಸಿಸಿಐ 125 ಕೋಟಿ ಬಹುಮಾನದಲ್ಲಿ ಕೊಹ್ಲಿ, ರೋಹಿತ್‌ ಪಾಲು ಎಷ್ಟು?
ಬಿಸಿಸಿಐ 125 ಕೋಟಿ ಬಹುಮಾನದಲ್ಲಿ ಕೊಹ್ಲಿ, ರೋಹಿತ್‌ ಪಾಲು ಎಷ್ಟು? (ANI)

ಭಾರತ ಕ್ರಿಕೆಟ್ ತಂಡದ ಟಿ20 ವಿಶ್ವಕಪ್ ಗೆಲುವಿನ ಖುಷಿಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಬರೋಬ್ಬರಿ 125 ಕೋಟಿ ರೂಪಾಯಿ ಬಹುಮಾನ ಮೊತ್ತವನ್ನು ಘೋಷಿಸಿತು. ಪ್ರಶಸ್ತಿ ಗೆದ್ದ ತಂಡ ಮತ್ತು ಕೋಚಿಂಗ್ ಸಿಬ್ಬಂದಿಗೆ ಒಟ್ಟು 125 ಕೋಟಿ ರೂಪಾಯಿ ಬಹುಮಾನದ ಮೊತ್ತವನ್ನು ವಿತರಿಸುವುದಾಗಿ ಬಿಸಿಸಿಐ ಕಾರ್ಯದರ್ಶಿ ಘೋಷಿಸಿದರು. ಬಾರ್ಬಡೋಸ್‌ನಲ್ಲಿ ನಡೆದ ರೋಚಕ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆರು ರನ್‌ಗಳಿಂದ ರೋಚಕ ಜಯ ಗಳಿಸುವ ಮೂಲಕ ರೋಹಿತ್ ಶರ್ಮಾ ಬಳಗವು 11 ವರ್ಷಗಳ ಟ್ರೋಫಿ ಬರ ನೀಗಿಸಿತು. ಟೂರ್ನಿಯುದ್ದಕ್ಕೂ ಒಂದೇ ಒಂದು ಪಂದ್ಯಗಳನ್ನು ಸೋಲದೆ ಟ್ರೋಫಿ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

ಭಾರತದ ಆತಿಥ್ಯದಲ್ಲಿ ನಡೆದ 2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಸತತ 9 ಪಂದ್ಯಗಳಲ್ಲಿ ಗೆದ್ದು ಫೈನಲ್‌ ಪ್ರವೇಶಿಸಿದ್ದ ಭಾರತ ತಂಡ, ಆಸೀಸ್ ವಿರುದ್ದದ‌ ಫೈನಲ್‌ನಲ್ಲಿ ಹೃದಯ ವಿದ್ರಾವಕ ಸೋಲನುಭವಿಸಿತ್ತು. ಹೀಗಾಗಿ ಈ ಗೆಲುವು ತಂಡಕ್ಕೆ ಭಾರಿ ಖುಷಿ ತರಿಸಿದೆ.

ಐತಿಹಾಸಿಕ ಗೆಲುವಿನ ಬೆನ್ನಲ್ಲೇ ಬಿಸಿಸಿಐ ಬಹುಮಾನ ಘೋಷಣೆ ಮಾಡಿತು. ಅದು ಕೂಡಾ ಒಂದೆರಡು ಕೋಟಿ ಅಲ್ಲ. ಬರೋಬ್ಬರಿ 125 ಕೋಟಿ ರೂಪಾಯಿಯನ್ನು ಸಂಪೂರ್ಣ ತಂಡಕ್ಕೆ ಘೋಷಿಸಲಾಗಿದೆ. ಇದು ಕೋಚಿಂಗ್‌ ಸಿಬ್ಬಂದಿ, ರಿಸರ್ವ್‌ ಪ್ಲೇಯರ್ಸ್‌ಗೂ ಸೇರುತ್ತದೆ.

ಬಹುಮಾನದ ಮೊತ್ತ ವಿತರಣೆ ಹೇಗೆ?

ಬಹುಮಾನದ ಮೊತ್ತ ಕೇವಲ 15 ಸದಸ್ಯರ ತಂಡ ಮತ್ತು ಕೋಚಿಂಗ್ ಸಿಬ್ಬಂದಿಗೆ ಮಾತ್ರವಲ್ಲ. ಟಿಒಐ ವರದಿಯ ಪ್ರಕಾರ, ನಾಲ್ಕು ಮೀಸಲು ಆಟಗಾರರಿಗೂ ಇದರಲ್ಲಿ ಒಂದು ಭಾಗ ಸಿಗಲಿದೆ. ತಂಡದ ಪ್ರತಿಯೊಬ್ಬ ಆಟಗಾರನಿಗೆ ಕನಿಷ್ಠ 5 ಕೋಟಿ ರೂಪಾಯಿ ಪಾಲು ಸಿಗಲಿದೆ. ಉಳಿದಂತೆ ಮೀಸಲು ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಕನಿಷ್ಠ 1 ಕೋಟಿ ರೂಪಾಯಿ ಸಂದಾಯವಾಗಲಿದೆ. ಆ ಮೂಲಕ ಪಂದ್ಯಾವಳಿಯಲ್ಲಿ ಭಾರತದ ಯಶಸ್ಸಿಗೆ ಕಾರಣರಾದ ಆನ್-ಫೀಲ್ಡ್ ಆಟಗಾರರ ಜೊತೆಗೆ ಆಫ್ ಫೀಲ್ಡ್‌ನಲ್ಲಿ ಬೆಂಬಲ ನೀಡಿದವರು ಕೂಡಾ ಪಾಲು ಪಡೆಯಲಿದ್ದಾರೆ. ಟೀಮ್‌ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ 5 ಕೋಟಿ ರೂಪಾಯಿ ಪಡೆದಿದ್ದಾರೆ.

ಮುಖ್ಯ ಕೋಚ್ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ, ಫೀಲ್ಡಿಂಗ್ ಕೋಚ್ ಟಿ ದಿಲೀಪ್, ಮೂವರು ಥ್ರೋಡೌನ್ ಸ್ಪೆಷಲಿಸ್ಟ್‌ಗಳು, ಮೂವರು ಫಿಸಿಯೋಗಳು, ಒಬ್ಬ ತರಬೇತುದಾರ, ಮ್ಯಾನೇಜರ್, ಲಾಜಿಸ್ಟಿಕ್ಸ್ ಮ್ಯಾನೇಜರ್, ವಿಡಿಯೋ ವಿಶ್ಲೇಷಕ ಮತ್ತು ಭದ್ರತೆ ಮತ್ತು ಸಮಗ್ರತೆ ಅಧಿಕಾರಿ ಇವರೆಲ್ಲರಿಗೂ ಪಾಲು ಸಿಗಲಿದೆ.

ಗೆಲುವಿನಲ್ಲಿ ಪಾಲು ಪಡೆದ ಪ್ರತಿಯೊಬ್ಬರಿಗೂ ಪಾಲು

ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಮತ್ತು ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಸೇರಿದಂತೆ ಕೋಚಿಂಗ್ ಸ್ಟಾಫ್‌ಗೆ ತಲಾ 2.5 ಕೋಟಿ ರೂಪಾಯಿ ಹಂಚಿಕೆ ಮಾಡಲಾಗುತ್ತದೆ. ಮೂವರು ಫಿಸಿಯೋಥೆರಪಿಸ್ಟ್‌ಗಳು, ಮೂವರು ಥ್ರೋಡೌನ್ ತಜ್ಞರು, ಇಬ್ಬರು ಮಸಾಜ್‌ಗಳು ಮತ್ತು ಸಾಮರ್ಥ್ಯ ಮತ್ತು ಕಂಡೀಷನಿಂಗ್ ಕೋಚ್ ತಲಾ 2 ಕೋಟಿ ರೂಪಾಯಿ ಪಡೆಯುತ್ತಾರೆ ಎಂದು ವರದಿ ಹೇಳಿದೆ.

ಟೂರ್ನಿಗೆ ಭಾರತ ತಂಡವನ್ನು ಆಯ್ಕೆ ಮಾಡಿದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಸೇರಿದಂತೆ ಉಳಿದ ಸದಸ್ಯರಿಗೆ ತಲಾ 1 ಕೋಟಿ ವಿತರಿಸಲಾಗುತ್ತದೆ.

ಟಿ20 ವಿಶ್ವಕಪ್‌ಗಾಗಿ 15 ಸದಸ್ಯರ ತಂಡದೊಂದಿಗೆ ನಾಲ್ವರು ಮೀಸಲು ಆಟಗಾರರನ್ನು ಬಿಸಿಸಿಐ ಹೆಸರಿಸಿತ್ತು. ಅವರೆಂದರೆ ರಿಂಕು ಸಿಂಗ್ ಮತ್ತು ಶುಭ್ಮನ್ ಗಿಲ್, ಅವೇಶ್ ಖಾನ್ ಮತ್ತು ಖಲೀಲ್ ಅಹ್ಮದ್. ಈ ನಾಲ್ವರು ಒಂದೇ ಒಂದು ಪಂದ್ಯ ಆಡುವ ಅವಕಾಶ ಪಡೆದಿಲ್ಲ. ಆದರೂ ಎಲ್ಲರಿಗೂ ತಲಾ 1 ಕೋಟಿ ರೂಪಾಯಿ ಬಹುಮಾನ ನೀಡಲಾಗುತ್ತದೆ.

Whats_app_banner