ಭಾರತ-ಪಾಕಿಸ್ತಾನ ಕ್ರಿಕೆಟ್ ಸಂಬಂಧ ವೃದ್ಧಿಗೆ ಮನಮೋಹನ್‌ ಸಿಂಗ್ ಪ್ರಯತ್ನ ಹೇಗಿತ್ತು; ಅಕ್ಕಪಕ್ಕ ಕುಳಿತು ಪಂದ್ಯ ವೀಕ್ಷಿಸಿದ್ದರು ಪ್ರಧಾನಿಗಳು
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ-ಪಾಕಿಸ್ತಾನ ಕ್ರಿಕೆಟ್ ಸಂಬಂಧ ವೃದ್ಧಿಗೆ ಮನಮೋಹನ್‌ ಸಿಂಗ್ ಪ್ರಯತ್ನ ಹೇಗಿತ್ತು; ಅಕ್ಕಪಕ್ಕ ಕುಳಿತು ಪಂದ್ಯ ವೀಕ್ಷಿಸಿದ್ದರು ಪ್ರಧಾನಿಗಳು

ಭಾರತ-ಪಾಕಿಸ್ತಾನ ಕ್ರಿಕೆಟ್ ಸಂಬಂಧ ವೃದ್ಧಿಗೆ ಮನಮೋಹನ್‌ ಸಿಂಗ್ ಪ್ರಯತ್ನ ಹೇಗಿತ್ತು; ಅಕ್ಕಪಕ್ಕ ಕುಳಿತು ಪಂದ್ಯ ವೀಕ್ಷಿಸಿದ್ದರು ಪ್ರಧಾನಿಗಳು

ಮುಂಬೈ ಭಯೋತ್ಪಾದಕ ದಾಳಿ ನಡೆದ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಉತ್ತಮವಾಗಿಲ್ಲ. ಇದು ಕ್ರೀಡಾಕ್ಷೇತ್ರಕ್ಕೂ ಅನ್ವಯಿಸುತ್ತದೆ. 2008ರ ನಂತರ ಉಭಯ ರಾಷ್ಟ್ರಗಳ ನಡುವಿನ ಕ್ರಿಕೆಟ್ ಸಂಬಂಧ ಮುರಿದುಬಿತ್ತು. ಆದರೆ, 2011ರ ಏಕದಿನ ವಿಶ್ವಕಪ್ ಸಮಯದಲ್ಲಿ, ಭಾರತದ ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಹೊಸತನವೊಂದಕ್ಕೆ ಸಾಕ್ಷಿಯಾದರು.

ಭಾರತ-ಪಾಕಿಸ್ತಾನ ಕ್ರಿಕೆಟ್ ಸಂಬಂಧ ವೃದ್ಧಿಗೆ ಮನಮೋಹನ್‌ ಸಿಂಗ್ ಪ್ರಯತ್ನ ಹೇಗಿತ್ತು
ಭಾರತ-ಪಾಕಿಸ್ತಾನ ಕ್ರಿಕೆಟ್ ಸಂಬಂಧ ವೃದ್ಧಿಗೆ ಮನಮೋಹನ್‌ ಸಿಂಗ್ ಪ್ರಯತ್ನ ಹೇಗಿತ್ತು (PMO)

ಸತತ 10 ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಮನಮೋಹನ್ ಸಿಂಗ್ ಅವರು, ಡಿಸೆಂಬರ್ 26ರ ಗುರುವಾರ ರಾತ್ರಿ ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರು 2004ರಿಂದ 2014ರವರೆಗೆ ಸತತ ಎರಡು ಅವಧಿಗಳಲ್ಲಿ ಯುಪಿಎ ಸರ್ಕಾರ ಆಡಳಿತದಲ್ಲಿ ಪ್ರಧಾನಿಯಾಗಿದ್ದರು. ಹಲವು ಪ್ರಮುಖ ನಿರ್ಧಾರಗಳು ಹಾಗೂ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸೌಮ್ಯ ಸ್ವಭಾವದ ಸಿಂಗ್‌ ನಿಧನಕ್ಕೆ ಎಲ್ಲಾವ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅಗಲಿಕೆಯ ಸಮಯದಲ್ಲಿ ಅವರ ಸುಧಾರಣೆಗಳು, ಅಂತಾರಾಷ್ಟ್ರೀಯ ಸೌಹಾರ್ಧ ಸೇರಿದಂತೆ ಅವರ ಕೊಡುಗೆಗಳನ್ನು ಮೆಲುಕು ಹಾಕೋಣ.

ಅರ್ಥಶಾಸ್ತ್ರಜ್ಞರಾಗಿದ್ದ ಸಿಂಗ್‌, ಹಲವು ಆರ್ಥಿಕ ಸುಧಾರಣೆಗಳಿಗೆ ಹೆಸರುವಾಸಿಯಾದವರು. ಈ ನಡುವೆ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಸಂಬಂಧ ವೃದ್ಧಿಸುವಲ್ಲಿ ಮನಮೋಹನ್ ಸಿಂಗ್ ಕೊಡುಗೆ ಮಹತ್ವದ್ದು. ದೇಶ-ದೇಶಗಳ ನಡುವಿನ ಸಂಬಂಧ ವೃದ್ಧಿಗೆ ಕ್ರೀಡೆ ಪ್ರಮುಖ ಕ್ಷೇತ್ರ ಎಂಬುದನ್ನು ಮನಗಂಡಿದ್ದ ಅವರು, ಕ್ರಿಕೆಟ್ ಮೂಲಕ ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಪುನರುಜ್ಜೀವನಗೊಳಿಸಿದರು. ಇದನ್ನು ಸಾಮಾನ್ಯವಾಗಿ 'ಕ್ರಿಕೆಟ್ ರಾಜತಾಂತ್ರಿಕತೆ' ಎಂದು ಹೇಳಲಾಗುತ್ತದೆ.

2008ರಲ್ಲಿ ನಡೆದ ಮುಂಬೈ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಅಂತಾರಾಷ್ಟ್ರೀಯ ಸಂಬಂಧ ಅಷ್ಟಕಷ್ಟೇ. ಆವರೆಗೂ ಉಭಯ ರಾಷ್ಟ್ರಗಳ ನಡುವೆ ಕ್ರಿಕೆಟ್‌ ದ್ವಿಪಕ್ಷೀಯ ಸರಣಿಗಳು ನಡೆಯುತ್ತಿದ್ದವು. ಜೊತೆಗೆ ಉಭಯ ದೇಶಗಳು ಪರಸ್ಪರ ಪ್ರವಾಸ ಮಾಡುತ್ತಿದ್ದವು. ಭಯೋತ್ಪಾದಕ ದಾಳಿ ನಂತರ ಎರಡು ಬಲಿಷ್ಠ ರಾಷ್ಟ್ರಗಳ ನಡುವಿನ ಕ್ರಿಕೆಟ್ ಸಂಬಂಧ ಮುರಿದುಬಿತ್ತು. 2011ರ ಏಕದಿನ ವಿಶ್ವಕಪ್ ಪಂದ್ಯಾವಳಿಯ ಸಮಯದಲ್ಲಿ ಪಾಕ್‌ ತಂಡ ಭಾರತಕ್ಕೆ ಬರಬೇಕಾಯ್ತು.

ವಿಶ್ವಕಪ್‌ ಸೆಮಿಫೈನಲ್‌ ಪಂದ್ಯ ವೀಕ್ಷಿಸಿದ ಪಾಕಿಸ್ತಾನ ಪ್ರಧಾನಿ

ಪಾಕಿಸ್ತಾನ ತಂಡವು ಗುಂಪು ಹಂತ ಮತ್ತು ಕ್ವಾರ್ಟರ್-ಫೈನಲ್ ಪಂದ್ಯಗಳನ್ನು ಶ್ರೀಲಂಕಾ ಅಥವಾ ಬಾಂಗ್ಲಾದೇಶದಲ್ಲಿ ಆಡುವುದು ನಿಗದಿಯಾಯ್ತು. ಉತ್ತಮ ಪ್ರದರ್ಶನ ನೀಡಿದ ತಂಡವು ಸೆಮಿಫೈನಲ್‌ ಅರ್ಹತೆ ಪಡೆಯಿತು. ಭಾರತ ವಿರುದ್ಧದ ಪಂದ್ಯದಲ್ಲಿ ಆಡಲು ಪಾಕಿಸ್ತಾನ ತಂಡ ಭಾರತಕ್ಕೆ ಬರಬೇಕಾಯ್ತು. ಭಯೋತ್ಪಾದಕ ದಾಳಿಯ ನಂತರ ಅದೇ ಮೊದಲ ಬಾರಿಗೆ ತಂಡ ಭಾರತಕ್ಕೆ ಪ್ರಯಾಣಿಸಬೇಕಾಗಿ ಬಂತು. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ​​(ಪಿಸಿಎ) ಸ್ಟೇಡಿಯಂನಲ್ಲಿ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ಹೈವೋಲ್ಟೇಜ್‌ ಕದನಕ್ಕೆ ಮುಹೂರ್ತ ನಿಗದಿಯಾಯ್ತು.

ಐತಿಹಾಸಿಕ ಕ್ಷಣ

ಆ ಸಮಯದಲ್ಲಿ ಎರಡನೇ ಅವಧಿಗೆ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌, ಮೊಹಾಲಿಯಲ್ಲಿ ಇಂಡೋ-ಪಾಕ್‌ ಪಂದ್ಯವನ್ನು ವೀಕ್ಷಿಸಲು ಪಾಕಿಸ್ತಾನದ ಅಂದಿನ ಪ್ರಧಾನಿ ಯೂಸುಫ್ ರಾಜಾ ಘಿಲಾನಿ ಅವರಿಗೆ ಖುದ್ದು ತಾವೇ ಪತ್ರವನ್ನು ಕಳುಹಿಸಿದರು. ಭಾರತದ ಆಹ್ವಾನವನ್ನು ಸ್ವೀಕರಿಸಿದ ಪಾಕ್‌ ಪ್ರಧಾನಿ, 2011ರ ಮಾರ್ಚ್ 30ರಂದು ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯವನ್ನು ಎರಡೂ ರಾಷ್ಟ್ರಗಳ ಪ್ರಧಾನಿಗಳು ಅಕ್ಕಪಕ್ಕದಲ್ಲಿ ಕುಳಿತು ವೀಕ್ಷಿಸಿದರು. ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಸೆಮಿಫೈನಲ್ ಪಂದ್ಯವನ್ನು ಎರಡೂ ರಾಷ್ಟ್ರಗಳ ಪ್ರಧಾನ ಮಂತ್ರಿಗಳು ಕುಳಿತು ವೀಕ್ಷಿಸಿದ ಐತಿಹಾಸಿಕ ದೃಶ್ಯಕ್ಕೆ ಭಾರತ ಸಾಕ್ಷಿಯಾಯಿತು. ಪಂದ್ಯದಲ್ಲಿ 29 ರನ್‌ಗಳಿಂದ ಗೆದ್ದ ಭಾರತ ಶ್ರೀಲಂಕಾ ವಿರುದ್ಧದ ಫೈನಲ್‌ ಪಂದ್ಯಕ್ಕೆ ಲಗ್ಗೆ ಹಾಕಿತು.

ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಭಾರತ ಮತ್ತು ಪಾಕಿಸ್ತಾನವು ಭಾರತದಲ್ಲೇ 2012-13ರಲ್ಲಿ ದ್ವಿಪಕ್ಷೀಯ ಸರಣಿಯಲ್ಲಿ ಮುಖಾಮುಖಿಯಾದವು. ತಲಾ ಮೂರು ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಆಡಿದವು. ಆ ನಂತರ ಉಭಯ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಸರಣಿಯೇ ನಡೆದಿಲ್ಲ. ಉಭಯ ದೇಶಗಳ ತಂಡಗಳು ಐಸಿಸಿ ಮತ್ತು ಎಸಿಸಿ ಈವೆಂಟ್‌ಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.

ಹೈಬ್ರಿಡ್‌ ಮಾದರಿ ಪಂದ್ಯಗಳು

2023ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಆಡಲು, ಸುಮಾರು ಒಂದು ದಶಕದ ಬಳಿಕ ಪಾಕಿಸ್ತಾನ ಭಾರತಕ್ಕೆ ಬಂದಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಅದೇ ಮೊದಲ ಬಾರಿಗೆ ಪಾಕ್‌ ತಂಡ ಭಾರತಕ್ಕೆ ಬಂತು. ಅತ್ತ ಭಾರತ ತಂಡವು ಕೊನೆಯ ಬಾರಿಗೆ 2008ರಲ್ಲಿ ಏಷ್ಯಾಕಪ್‌ನಲ್ಲಿ ಆಡಲು ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿತ್ತು. ಇತ್ತೀಚೆಗೆ 2023ರ ಏಷ್ಯಾ ಕಪ್ ಮತ್ತು 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಸಲುವಾಗಿ ಪಾಕ್‌ ನೆಲಕ್ಕೆ ಪ್ರಯಾಣಿಸಲು ಭಾರತ ನಿರಾಕರಿಸಿದೆ. ಮುಂದೆ 2027ರವರೆಗೆ ಎಲ್ಲಾ ಈವೆಂಟ್‌ಗಳಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಹೈಬ್ರಿಡ್‌ ಮಾದರಿಯಡಿ ತಟಸ್ಥ ಸ್ಥಳಗಳಲ್ಲಿ ಪರಸ್ಪರ ಮುಖಾಮುಖಿಯಾಗಲಿದೆ.

Whats_app_banner