Explainer: 2-1 ಅಂತರದ ಹಿನ್ನಡೆಯಿದ್ದರೂ ಭಾರತ ಬಾರ್ಡರ್-ಗವಾಸ್ಕರ್ ಟ್ರೋಫಿ ಉಳಿಸಿಕೊಳ್ಳಬಹುದು; ಹೇಗೆಂದರೆ
ಕನ್ನಡ ಸುದ್ದಿ  /  ಕ್ರಿಕೆಟ್  /  Explainer: 2-1 ಅಂತರದ ಹಿನ್ನಡೆಯಿದ್ದರೂ ಭಾರತ ಬಾರ್ಡರ್-ಗವಾಸ್ಕರ್ ಟ್ರೋಫಿ ಉಳಿಸಿಕೊಳ್ಳಬಹುದು; ಹೇಗೆಂದರೆ

Explainer: 2-1 ಅಂತರದ ಹಿನ್ನಡೆಯಿದ್ದರೂ ಭಾರತ ಬಾರ್ಡರ್-ಗವಾಸ್ಕರ್ ಟ್ರೋಫಿ ಉಳಿಸಿಕೊಳ್ಳಬಹುದು; ಹೇಗೆಂದರೆ

ಬಾಕ್ಸಿಂಗೆ ಡೇ ಟೆಸ್ಟ್‌ ಬಳಿಕ ಬಾರ್ಡರ್-ಗವಾಸ್ಕರ ಟ್ರೋಫಿ ಸರಣಿ 2-1ಅಂತರದಲ್ಲಿ ಆಸ್ಟ್ರೇಲಿಯ ಪರ ಇದೆ. ಆದರೆ, ಸಿಡ್ನಿ ಟೆಸ್ಟ್‌ನಲ್ಲಿ ಭಾರತವೇನಾದರೂ ಗೆದ್ದರೆ ಸರಣಿ 2-2 ಅಂತರದಿಂದ ಸಮಬಲವಾಗಲಿದೆ. ಆದರೂ, ಭಾರತ ತಂಡಕ್ಕೆ ಬಾರ್ಡರ್-ಗವಾಸ್ಕರ ಟ್ರೋಫಿ ಸಿಗಲಿದೆ. ಅದು ಹೇಗೆ ಎಂಬ ವಿವರ ಇಲ್ಲಿದೆ.

2-1 ಅಂತರದ ಹಿನ್ನಡೆಯಿದ್ದರೂ ಭಾರತ ಬಾರ್ಡರ್-ಗವಾಸ್ಕರ್ ಟ್ರೋಫಿ ಉಳಿಸಿಕೊಳ್ಳಬಹುದು
2-1 ಅಂತರದ ಹಿನ್ನಡೆಯಿದ್ದರೂ ಭಾರತ ಬಾರ್ಡರ್-ಗವಾಸ್ಕರ್ ಟ್ರೋಫಿ ಉಳಿಸಿಕೊಳ್ಳಬಹುದು (AP)

ಒಂದು ದಶಕದಿಂದ ಭಾರತ ಕ್ರಿಕೆಟ್‌ ತಂಡವು ಬಾರ್ಡರ್‌-ಗವಾಸ್ಕರ್ ಟ್ರೋಫಿಯನ್ನು ಆಸ್ಟ್ರೇಲಿಯಾಗೆ ಬಿಟ್ಟುಕೊಟ್ಟಿಲ್ಲ. 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ, ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಪ್ರಸಕ್ತ ಆವೃತ್ತಿಯ ಸರಣಿಯನ್ನು ಸೋಲುವ ಹಂತದಲ್ಲಿದೆ. ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ 184 ರನ್‌ಗಳ ಅಂತರದಿಂದ ಸೋತ ರೋಹಿತ್‌ ಶರ್ಮಾ ಪಡೆ, ಈಗ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಅಂತರದಿಂದ ಹಿನ್ನಡೆ ಅನುಭವಿಸಿದೆ. ಸರಣಿಯ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯವು ಜನವರಿ 3ರ ಶುಕ್ರವಾರದಿಂದ ಆರಂಭವಾಗಲಿದೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಪಂದ್ಯವು, ಭಾರತದ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ. ಏಕೆಂದರೆ 2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ಗೆ ತಲುಪಲು ಈ ಪಂದ್ಯ ಗೆಲ್ಲಲೇಬೇಕಿದೆ. ಇದರೊಂದಿಗೆ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಸರಣಿಯನ್ನು ಉಳಿಸಲು ಭಾರತ ಪಂದ್ಯದಲ್ಲಿ ಗೆಲ್ಲಲೇಬೇಕಿದೆ.

ನಾಲ್ಕು ಪಂದ್ಯಗಳ ಬಳಿಕ ಸರಣಿ 2-1ಅಂತರದಲ್ಲಿ ಆಸ್ಟ್ರೇಲಿಯಾ ಪರ ಇದೆ. ಸಿಡ್ನಿ ಟೆಸ್ಟ್‌ನಲ್ಲಿ ಭಾರತವೇನಾದರೂ ಗೆದ್ದರೆ, ಆಗ ಸರಣಿ 2-2 ಅಂತರದಿಂದ ಸಮಬಲವಾಗಲಿದೆ. ಆದರೂ, ಭಾರತ ತಂಡಕ್ಕೆ ಬಾರ್ಡರ್-ಗವಾಸ್ಕರ್ ಟ್ರೋಫಿ ಸಿಗಲಿದೆ. ಸರಣಿ ಸಮಬಲವಾದರೂ ಟೀಮ್‌ ಇಂಡಿಯಾ ಸರಣಿ ಗೆಲ್ಲಲು ಸಾಧ್ಯವಿದೆ.

ಭಾರತ ತಂಡಕ್ಕೆ ಇನ್ನು ಮುಂದೆ ಸರಣಿ ಗೆಲ್ಲಲು ಸಾಧ್ಯವಿಲ್ಲದಿದ್ದರೂ, ಬಾರ್ಡರ್-ಗವಾಸ್ಕರ್ ಟ್ರೋಫಿ ಉಳಿಸಿಕೊಳ್ಳಲು ಅವಕಾಶವಿದೆ. ರೋಹಿತ್ ಶರ್ಮಾ ಬಳಗವು ಸಿಡ್ನಿ ಟೆಸ್ಟ್ ಗೆದ್ದರೆ ಸಾಕು. ಒಂದು ದಶಕದಿಂದ ತನ್ನಲ್ಲಿರುವ ಟ್ರೋಫಿಯನ್ನು ಉಳಿಸಿಕೊಳ್ಳುತ್ತದೆ. ಈಗಾಗಲೇ ಸತತ ನಾಲ್ಕು ಸರಣಿಗಳ ಬಳಿಕ ತಂಡದ ಬಳಿ ಟ್ರೋಫಿ ಇದ್ದು, ಸತತ ಐದನೇ ಬಾರಿಗೆ ಪ್ರತಿಷ್ಠಿತ ಟ್ರೋಫಿಯನ್ನು ಉಳಿಸಿಕೊಳ್ಳಲು ಎದುರು ನೋಡುತ್ತಿದೆ.

ಸತತ ಐದನೇ ಬಾರಿ ಟ್ರೋಫಿ ಉಳಿಸಿಕೊಳ್ಳುವ ಯೋಚನೆ

ಆಸ್ಟ್ರೇಲಿಯಾ ತಂಡ ಕೊನೆಯ ಬಾರಿಗೆ 2014-15 ರಲ್ಲಿ ಬಿಜಿಟಿ ಟ್ರೋಫಿ ಗೆದ್ದಿತ್ತು. ತವರಿನ ಸರಣಿಯನ್ನು ತಂಡವು 2-0 ಅಂತರದಲ್ಲಿ ಗೆದ್ದಿತ್ತು. ಆ ನಂತರ ಭಾರತವು 2017 ಮತ್ತು 2023ರಲ್ಲಿ ತವರಿನಲ್ಲಿ ಸರಣಿಯನ್ನು ಗೆದ್ದುಕೊಂಡಿತು. ಇದರ ನಡುವೆ 2018/19 ಮತ್ತು 2020-21ಲ್ಲಿ ಸತತ ಎರಡು ಬಾರಿ ವಿದೇಶ ಸರಣಿಯನ್ನು ಒಲಿಸಿಕೊಂಡಿತ್ತು.

ಭಾರತಕ್ಕೆ ಸಿಗಲಿದೆ ಟ್ರೋಫಿ

ಆಸ್ಟ್ರೇಲಿಯಾ ತಂಡ ತವರಿನಲ್ಲಿ ಹ್ಯಾಟ್ರಿಕ್ ಸರಣಿ ಸೋಲನ್ನು ತಪ್ಪಿಸಲು ಎದುರು ನೋಡುತ್ತಿದೆ. ಆದರೆ, ಬಾಕ್ಸಿಂಗ್‌ ಡೇ ಟೆಸ್ಟ್‌ ಗೆಲುವಿನೊಂದಿಗೆ ಆಸೀಸ್‌ಗೆ ಸರಣಿ ಗೆಲುವು ಖಚಿತವಾಗಿಲ್ಲ. ಸಂಪ್ರದಾಯದ ಪ್ರಕಾರ, ಬಾರ್ಡರ್-ಗವಾಸ್ಕರ್‌ ಟ್ರೋಫಿ ಸರಣಿಯು ಡ್ರಾದಲ್ಲಿ ಕೊನೆಗೊಂಡರೆ, ಹಿಂದಿನ ಸರಣಿಯನ್ನು ಗೆದ್ದ ತಂಡವೇ ಟ್ರೋಫಿಯನ್ನು ಉಳಿಸಿಕೊಳ್ಳುತ್ತದೆ. ಹೀಗಾಗಿ ಭಾರತವು ಸರಣಿ ಉಳಿಸಿಕೊಳ್ಳಲು ಸಿಡ್ನಿ ಟೆಸ್ಟ್‌ನಲ್ಲಿ ಗೆದ್ದರೆ ಸಾಕು. ಆಗ ಭಾರತ ತಂಡಕ್ಕೆ ಟ್ರೋಫಿ ಬರುತ್ತದೆ. ಒಂದು ವೇಳೆ ಸಿಡ್ನಿ ಟೆಸ್ಟ್‌ ಕೂಡಾ ಡ್ರಾದಲ್ಲಿ ಅಂತ್ಯಗೊಂಡರೆ ಆಸ್ಟ್ರೇಲಿಯಾಗೆ ಟ್ರೋಫಿ ಹೋಗಲಿದೆ.

---

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. https://kannada.hindustantimes.com/astrology/yearly-horoscope

Whats_app_banner