ಬಹುಮಾನ ಮೊತ್ತ 20 ಕೋಟಿ, ಖರ್ಚು ಮಾಡುವುದು 200 ಕೋಟಿಗೂ ಹೆಚ್ಚು; ಪ್ರತಿ ವರ್ಷ IPL ಮಾಲೀಕರ ಆದಾಯ ಊಹೆಗೂ ನಿಲುಕದ್ದು!
ಕನ್ನಡ ಸುದ್ದಿ  /  ಕ್ರಿಕೆಟ್  /  ಬಹುಮಾನ ಮೊತ್ತ 20 ಕೋಟಿ, ಖರ್ಚು ಮಾಡುವುದು 200 ಕೋಟಿಗೂ ಹೆಚ್ಚು; ಪ್ರತಿ ವರ್ಷ Ipl ಮಾಲೀಕರ ಆದಾಯ ಊಹೆಗೂ ನಿಲುಕದ್ದು!

ಬಹುಮಾನ ಮೊತ್ತ 20 ಕೋಟಿ, ಖರ್ಚು ಮಾಡುವುದು 200 ಕೋಟಿಗೂ ಹೆಚ್ಚು; ಪ್ರತಿ ವರ್ಷ IPL ಮಾಲೀಕರ ಆದಾಯ ಊಹೆಗೂ ನಿಲುಕದ್ದು!

IPL 2025: ಐಪಿಎಲ್ ಟೂರ್ನಿಯಲ್ಲಿ 20 ಕೋಟಿ ಬಹುಮಾನಕ್ಕಾಗಿ ಪ್ರತಿ ಫ್ರಾಂಚೈಸಿಯು ಆಟಗಾರರ ಖರೀದಿಗೆ ಮತ್ತು ತಂಡದ ನಿರ್ವಹಣೆಗೆ ಬರೋಬ್ಬರಿ 200 ಕೋಟಿಗೂ ಹೆಚ್ಚು ಖರ್ಚು ಮಾಡುವುದೇಕೆ? ಇಲ್ಲಿದೆ ಉತ್ತರ.

ಬಹುಮಾನ ಮೊತ್ತ 20 ಕೋಟಿ, ಖರ್ಚು ಮಾಡುವುದು 200 ಕೋಟಿಗೂ ಹೆಚ್ಚು; ಪ್ರತಿ ವರ್ಷ IPL ಮಾಲೀಕರ ಆದಾಯ ಊಹೆಗೂ ನಿಲುಕದ್ದು!
ಬಹುಮಾನ ಮೊತ್ತ 20 ಕೋಟಿ, ಖರ್ಚು ಮಾಡುವುದು 200 ಕೋಟಿಗೂ ಹೆಚ್ಚು; ಪ್ರತಿ ವರ್ಷ IPL ಮಾಲೀಕರ ಆದಾಯ ಊಹೆಗೂ ನಿಲುಕದ್ದು!

ನಗದು ಸಮೃದ್ಧ ಲೀಗ್ ಐಪಿಎಲ್ (IPL) ಕಳೆದ 17 ವರ್ಷಗಳಿಂದ ಕ್ರಿಕೆಟ್​ ಜಗತ್ತಿನಲ್ಲಿ ಟಿ20 ಫ್ರಾಂಚೈಸ್​ ಲೀಗ್​ಗಳ ಡ್ಯಾಡಿ (ಅಪ್ಪ)ಯಾಗಿ​ ಆಗಿ ಹೊರಹೊಮ್ಮಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ ಸೃಷ್ಟಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದೆ. 2 ತಿಂಗಳ ಕಾಲ ಜರುಗುವ ಮಿಲಿಯನ್ ಡಾಲರ್ ಟೂರ್ನಿಯ ಜನಪ್ರಿಯತೆ, ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆಯೇ ಹೊರತು ಕುಸಿತ ಕಂಡಿಯೇ ಇಲ್ಲ. 18ನೇ ಆವೃತ್ತಿಯ ಐಪಿಎಲ್​​ಗೆ ಕೆಲವೇ ಗಂಟೆಗಳಷ್ಟೇ ಬಾಕಿ ಉಳಿದಿದೆ.​ ಇದು ಅಂತಾರಾಷ್ಟ್ರೀಯ ಕ್ರಿಕೆಟ್​​ ಪಂದ್ಯಗಳಿಗೂ ಇರದ ಕ್ರೇಜ್​ ಹೊಂದಿದೆ. ಆದರೆ ಶ್ರೀಮಂತ ಲೀಗ್​ನಲ್ಲಿ 20 ಕೋಟಿ ರೂ ಬಹುಮಾನಕ್ಕಾಗಿ ಪ್ರತಿ ಫ್ರಾಂಚೈಸಿಯು ಆಟಗಾರರ ಖರೀದಿಗೆ ಮತ್ತು ತಂಡದ ನಿರ್ವಹಣೆಗೆ ಬರೋಬ್ಬರಿ 200 ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡುವುದೇಕೆ? ಪ್ರತಿ ತಂಡಕ್ಕೆ ಬರುವ ಆದಾಯದ ಮೂಲಗಳು ಯಾವುವು? ಇಲ್ಲಿದೆ ವಿವರ.

ಐಪಿಎಲ್ ಟೂರ್ನಿಯಿಂದ ದೇಶೀಯ ಕ್ರಿಕೆಟಿಗರು ಬೆಳಕಿಗೆ ಬರುತ್ತಿದ್ದಾರೆ. ಭಾರತ ತಂಡವನ್ನೂ ಪ್ರವೇಶಿಸಿ ಪ್ರತಿಭೆಯನ್ನು ಜಗತ್ತಿನ ಮುಂದೆ ತೆರೆದಿಡುತ್ತಿದ್ದಾರೆ. ಜಗತ್ತಿನ ಅತಿದೊಡ್ಡ ಕ್ರಿಕೆಟ್ ಲೀಗ್​ನಲ್ಲಿ ಅವಕಾಶ ಸಿಗುವುದು ಸುಲಭವಲ್ಲ. ಬಿಸಿಸಿಐ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿರುವ ಐಪಿಎಲ್​ನಲ್ಲಿ ತಂಡವನ್ನು ನಿರ್ವಹಣೆ ಮಾಡುವುದು ಅಂದುಕೊಂಡಷ್ಟು ಸುಲಭವಲ್ಲ. ತಂಡದ ಪರ್ಸ್​ ಮೊತ್ತ 120 ಕೋಟಿ ಜೊತೆಗೆ ಒಂದು ಸೀಸನ್​ಗೆ 200 ಕೋಟಿಗೂ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಇದು ಅಂದಾಜು ಮೊತ್ತವಷ್ಟೆ. ಇದಕ್ಕಿಂತ ಹೆಚ್ಚು ಖರ್ಚು ಆಗುತ್ತದೆ ಎಂದು ಮೂಲಗಳು ತಿಳಿಸಿವೆ. ಆಟಗಾರರ ಖರೀದಿ ಸೇರಿದಂತೆ ಅವರ ವಸತಿ, ಊಟ, ಫ್ಲೈಟ್, ಪ್ರಯಾಣ.. ಹೀಗೆ ಎಲ್ಲವನ್ನೂ ಫ್ರಾಂಚೈಸಿಗಳೇ ನೋಡಿಕೊಳ್ಳಲಿವೆ. ಇಷ್ಟು ಕೋಟಿಗಳು ಖರ್ಚು ಮಾಡುವ ಫ್ರಾಂಚೈಸಿಗಳು ಕೇವಲ 20ಕೋಟಿ ಬಹುಮಾನ ಮೊತ್ತಕ್ಕೆ ಆಸೆ ಪಡುತ್ತವೆಯೇ? ಇಲ್ಲ, ಲಾಭ ವಿಲ್ಲದೆ ಯಾರೂ ಕೋಟಿಗಳಷ್ಟು ಹೂಡಿಕೆ ಮಾಡಲು ಸಾಧ್ಯವಿಲ್ಲ. ಹಾಗಾದರೆ ಫ್ರಾಂಚೈಸಿಗಳಿಗೆ ಯಾವೆಲ್ಲಾ ಮೂಲೆಯಿಂದ ಲಾಭ ಹರಿದುಬರಲಿದೆ? ಇಲ್ಲಿದೆ ವಿವರ.

ರಿಷಭ್ ಪಂತ್ (27 ಕೋಟಿ), ಶ್ರೇಯಸ್ ಅಯ್ಯರ್ (26.75 ಕೋಟಿ), ವೆಂಕಟೇಶ್ ಅಯ್ಯರ್ (23.75 ಕೋಟಿ) ಅವರ ವೇತನವೇ ಬಹುಮಾನ ಮೊತ್ತ 20 ಕೋಟಿಗಿಂತಲೂ ಹೆಚ್ಚಿದೆ. ಹೀಗಿದ್ದಾಗ 200 ಕೋಟಿಗೂ ಅಧಿಕ ಮೊತ್ತವನ್ನು ಖರ್ಚು ಮಾಡುವ 10 ಫ್ರಾಂಚೈಸಿಗಳು ಸಣ್ಣ ಮೊತ್ತ 20 ಕೋಟಿಗೇಕೆ ಆಸೆ ಪಡುತ್ತಿವೆ ಎಂಬುದು ಎಲ್ಲರ ಪ್ರಶ್ನೆ. ಅಚ್ಚರಿ ಏನೆಂದರೆ ಐಪಿಎಲ್ ಪ್ರೈಜ್ ಮನಿ ಸಣ್ಣ ಮೀನಿಗೆ ಸಮ. ಆದರೆ ಫ್ರಾಂಚೈಸಿ ಮಾಲೀಕರಿಗೆ ಐಪಿಎಲ್​ನಿಂದ ಸಿಗುವ ಲಾಭ ತಿಮಿಂಗಲದಷ್ಟು! ಒಂದು ಸೀಸನ್​ನಲ್ಲಿ ಎಷ್ಟೆಲ್ಲಾ ಆದಾಯ ಸಂಪಾದಿಸುತ್ತಾರೆ ಎನ್ನುವುದರ ವಿವರ ಈ ಮುಂದಿನಂತಿದೆ.

ಶೀರ್ಷಿಕೆ ಪ್ರಾಯೋಜಕತ್ವ​

ಐಪಿಎಲ್​ ತಂಡಗಳಿಗೆ ಬರುವ ಆದಾಯದ ಮೂಲಗಳು ಹಲವು. ಈ ಪೈಕಿ ಟೈಟಲ್ ಸ್ಪಾನ್ಶರ್​ಶಿಪ್ ಒಂದು. ಐಪಿಎಲ್ ಲೋಗೋ ಮೇಲೆ ಟಾಟಾ ಎಂಬುದನ್ನು ನೀವು ನೋಡಿರುತ್ತೀರಿ. ಇದನ್ನೇ ಟೈಟಲ್ ಅಥವಾ ಶೀರ್ಷಿಕೆ ಪ್ರಾಯೋಜಕತ್ವ ಎನ್ನಲಾಗುತ್ತದೆ. ಟಾಟಾ ಕಂಪನಿಯು ಐದು ವರ್ಷಕ್ಕೆ (2024 ರಿಂದ 2028ರ ತನಕ) 2500 ಕೋಟಿ ರೂ ಟೈಟಲ್ ಸ್ಪಾನ್ಶರ್​​ಶಿಪ್​ ಅನ್ನು ಬಿಸಿಸಿಐಗೆ ಪಾವತಿಸುತ್ತದೆ. ಈ ಪೈಕಿ ಶೇ 50ರಷ್ಟು ಬಿಸಿಸಿಐಗೆ, ಉಳಿದ 50ರಷ್ಟು ಎಲ್ಲಾ ತಂಡಗಳಿಗೂ ಹಂಚಿಕೆಯಾಗುತ್ತದೆ. ಇದು ಆದಾಯದ ಮೊದಲ ಭಾಗ.

ಪಂದ್ಯದ ಪ್ರಾಯೋಜಕತ್ವ

ನೀವು ಪಂದ್ಯದ ವೇಳೆ ವಿವಿಧ ಉತ್ಪನ್ನಗಳ ಜಾಹೀರಾತುಗಳನ್ನು ಗಮನಿಸುತ್ತಿರುತ್ತೀರಿ. ಅದರಲ್ಲೂ ಮುಖ್ಯವಾಗಿ ಪಂದ್ಯಶ್ರೇಷ್ಠ ನೀಡುವ ವೇಳೆ ಹಿಂಭಾಗ ಜಾಹೀರಾತುಗಳ ಬೋರ್ಡ್​ ಅನ್ನು ಹಾಕಲಾಗಿರುತ್ತದೆ. ರೂಪೆ, ಪೆಟಿಎಂ, ಅಪ್​ಸ್ಟಾಕ್ಸ್​, ಅರಾಮ್ಕೋ, ಡ್ರೀಮ್ 11, ಟಾಟಾ ನ್ಯೂ, ಸಿಯಟ್ ಟೈಯರ್, ಕ್ರೆಡ್ ಪವರ್ ಸೇರಿ ಹಲವು ಪ್ರಾಯೋಜಕತ್ವ ಆ ಬೋರ್ಡ್​ನಲ್ಲಿ ಇರಲಿದೆ. ಪ್ರತಿಯೊಂದು ಜಾಹೀರಾತುದಾರರು, ಕನಿಷ್ಠ 25 ಕೋಟಿ ರೂಪಾಯಿ ನೀಡಲಿದ್ದಾರೆ ಎಂದು ವರದಿಯಾಗಿದೆ. ಇದರಲ್ಲೂ ಶೇ 50 ರಷ್ಟು ಬಿಸಿಸಿಐಗೆ, ಉಳಿದದ್ದು ತಂಡಗಳ ಮಾಲೀಕರಿಗೆ ಹಂಚಿಕೆ.

ಪ್ರಸಾರದ ಹಕ್ಕು

ಐಪಿಎಲ್​ ಪ್ರಸಾರದ ಹಕ್ಕುಗಳನ್ನು ಪಡೆಯಲು ಟಿವಿ ಚಾನೆಲ್​​ಗಳು ಕೋಟಿ ಕೋಟಿ ಸುರಿಯುತ್ತವೆ. ಎಷ್ಟು ಕೋಟಿಯಾದರೂ ನೀಡಲು ಹಲವು ಚಾನೆಲ್​​ಗಳು ಸಿದ್ಧವಾಗಿವೆ. 2008 ರಿಂದ 2017ರ ತನಕ ಸೋನಿ ನೆಟ್‌ವರ್ಕ್ ಪ್ರಸಾರದ ಹಕ್ಕು ಪಡೆದಿತ್ತು. ವರ್ಷಕ್ಕೆ 820 ಕೋಟಿಯನ್ನು ಬಿಸಿಸಿಐಗೆ ಪಾವತಿಸುತ್ತಿತ್ತು. 2018ರಿಂದ 2022ರ ತನಕ 16,400 ಕೋಟಿಗೆ ಪ್ರಸಾರದ ಹಕ್ಕುಗಳನ್ನು ಸ್ಟಾರ್​ಸ್ಪೋರ್ಟ್ಸ್ ಖರೀದಿಸಿತ್ತು. ಆ ಬಳಿಕ 5 ವರ್ಷಗಳ ಅವಧಿಗೆ (2023 ರಿಂದ 2027) ಐಪಿಎಲ್ ಮಾಧ್ಯಮ ಹಕ್ಕು 48,390 ಕೋಟಿ ರೂ.ಗೆ ಮಾರಾಟವಾಗಿದೆ. ಜಿಯೋ ಸಿನಿಮಾ, ಡಿಸ್ನಿ + ಹಾಟ್​ಸ್ಟಾರ್​ ಕಂಪನಿ, ವಯೋಕಾಮ್-18 ಪ್ರಸಾರದ ಹಕ್ಕು ಪಡೆದಿವೆ. ಈ ಮೊತ್ತದಲ್ಲೂ 50-50 ಅನುಪಾತದಲ್ಲಿ ಹಂಚಿಕೆಯಾಗಲಿದೆ. ಆದರೆ ಚಾನೆಲ್​​ಗಳು 10 ಸೆಕೆಂಡ್​​ಗಳ ಜಾಹೀರಾತು ಸ್ಲಾಟ್​ಗೆ ಕನಿಷ್ಠ 50 ಲಕ್ಷದ ತನಕ ಚಾರ್ಚ್​ ಮಾಡುತ್ತವೆ ಎಂದು ವರದಿಯಾಗಿದೆ. ಆ ಮೂಲಕ ಚಾನಲ್ಸ್​ ಆದಾಯ ಗಳಿಸುತ್ತವೆ.

ಜೆರ್ಸಿ ಜಾಹೀರಾತು

ತಂಡದ ಮಾಲೀಕರಿಗೆ ಆದಾಯದ ಮತ್ತೊಂದು ಮಾರ್ಗ ಏನೆಂದರೆ, ಜೆರ್ಸಿ ಪ್ರಾಯೋಜಕತ್ವ. ಆಯಾ ತಂಡಗಳ ಮಾಲೀಕರು ತಂಡದ ಜೆರ್ಸಿಯಲ್ಲಿ ವಿವಿಧ ಜಾಹೀರಾತು ಕಂಪನಿಗಳ ಲೋಗೋಗಳು ಇರುತ್ತವೆ. ಮುಂಭಾಗ ಜಾಹೀರಾತು ಪ್ರಕಟಿಸಲು ಒಂದು ಲೆಕ್ಕ, ಹಿಂಭಾಗ ಪ್ರಕಟಿಸಲು ಮತ್ತೊಂದು ಲೆಕ್ಕ ಹಾಕಲಾಗುತ್ತವೆ. ಇದರ ಮೊತ್ತ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇರುತ್ತದೆ. ಇದರಲ್ಲಿ ಬಿಸಿಸಿಐಗೆ ಯಾವುದೇ ಪಾಲು ಇರುವುದಿಲ್ಲ.

ಟಿಕೆಟ್​ ಮಾರಾಟ: ಶೇ 80ರಷ್ಟು ಮಾಲೀಕರಿಗೆ!

ಐಪಿಎಲ್ ಪಂದ್ಯದ ಟಿಕೆಟ್​ಗಳ ಮಾರಾಟದಲ್ಲೂ ಮಾಲೀಕರಿಗೆ ಷೇರು ಬರಲಿದೆ. ಆಯಾ ತಂಡಗಳ ತವರು ಮೈದಾನಗಳಲ್ಲಿ ನಡೆಯುವ ಪಂದ್ಯಗಳ ಟಿಕೆಟ್ ಬೆಲೆಯಲ್ಲಿ ಶೇ 80ರಷ್ಟು ಮೊದಲ ಆಯಾ ತಂಡದ ಮಾಲೀಕರಿಗೆ ಸಿಗಲಿದೆ. ಶೇ 20ರಷ್ಟು ರಾಜ್ಯ ಕ್ರಿಕೆಟ್ ಮಂಡಳಿಗೆ ಸಿಗಲಿದೆ.

ಸರುಕು ಮಾರಾಟ

ಫ್ರಾಂಚೈಸಿಗಳ ಮಾಲೀಕರು ತಮ್ಮ ತಂಡಗಳ ಸರುಕುಗಳನ್ನು ಮಾರಾಟ ಮಾಡುವ ಮೂಲಕ ದೊಡ್ಡ ಮೊತ್ತದಲ್ಲಿ ಆದಾಯ ಗಳಿಸುತ್ತಾರೆ. ತಮ್ಮ ತಂಡದ ಜೆರ್ಸಿ, ಲೋಗೋಗಳು, ಕ್ಯಾಪ್ ಸೇರಿದಂತೆ ಹಲವು ಸರುಕುಗಳನ್ನು ಮಾರಾಟ ಮಾಡುವ ಮೂಲಕ ಮಾಲೀಕರು ಉತ್ತಮ ಆದಾಯ ಗಳಿಸುತ್ತಾರೆ. ಇದಕ್ಕೆಂದೇ ಆ್ಯಪ್​ ಸಿದ್ಧಪಡಿಸಿರುತ್ತಾರೆ. ಆಯಾ ತಂಡಗಳ ಜೆರ್ಸಿ, ಕ್ಯಾಪ್​ಗಳಿಗೆ ಮಾರುಕಟ್ಟೆಗಳಲ್ಲಿ ಹೆಚ್ಚು ಬೇಡಿಕೆ ಇರಲಿದೆ.

ಬಹುಮಾನ ಮೊತ್ತ, ಒಟ್ಟಾರೆ ಆದಾಯ ಎಷ್ಟು?

ಬಹುಮಾನ ರೂಪದಲ್ಲೂ ಆದಾಯ ಗಳಿಸುತ್ತಾರೆ ಫ್ರಾಂಚೈಸಿಗಳ ಮಾಲೀಕರು. ಆದರೆ ಬಹುಮಾನ ಪಡೆಯುವ ಹಣದಲ್ಲಿ ಅರ್ಧದಷ್ಟು ಮೊತ್ತ ಮಾಲೀಕರ ಖಾತೆಗೆ ಹೋಗುತ್ತದೆ. ಉಳಿದ ಮೊತ್ತದಲ್ಲಿ ಆಟಗಾರರು ಮತ್ತು ಕೋಚ್​ಗಳಿಗೆ ಸಮಾನವಾಗಿ ಹಂಚಿಕೆ ಮಾಡಲಾಗುತ್ತದೆ. ಏನಿಲ್ಲವೆಂದರೂ ಒಂದು ಫ್ರಾಂಚೈಸಿಯು 500 ಕೋಟಿಗಿಂತ ಹೆಚ್ಚು ಆದಾಯ ಗಳಿಸುತ್ತವೆ ಎಂದು ಹೇಳಲಾಗುತ್ತದೆ. ಆರ್​ಸಿಬಿ, ಸಿಎಸ್​ಕೆ, ಮುಂಬೈ ತಂಡಗಳು ಕಳೆದ ವರ್ಷ ಹತ್ತತ್ರ ಸಾವಿರ ಕೋಟಿ ಹೆಚ್ಚು ಸಂಪಾದಿಸಿದ್ದವು ಎಂದು ವರದಿಯಾಗಿದೆ. ಈಗ ನೀವೇ ಹೇಳಿ, ಕೆಲವೊಂದು ಫ್ರಾಂಚೈಸಿಗಳು ಕಪ್ ಗೆಲ್ಲದಿದ್ದರೂ ಇನ್ನೂ ಲೀಗ್​​ನಲ್ಲಿ ಉಳಿದಿವೆ ಎಂದರೆ ಇದೇ ಕಾರಣಕ್ಕೆ. ಆದರೆ ಟ್ರೋಫಿ ಗೆದ್ದರೆ ಅದರ ಬ್ರ್ಯಾಂಡ್ ವ್ಯಾಲ್ಯೂ ಏರಿಕೆಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಜೊತೆಗೆ ಸರ್ಕಾರಕ್ಕೂ ಕೋಟಿ ಕೋಟಿ ಲೆಕ್ಕಗಳಲ್ಲಿ ತೆರಿಗೆಯನ್ನೂ ಪಾವತಿಸುತ್ತಿವೆ ಫ್ರಾಂಚೈಸಿಗಳು.

  • ಗಮನಕ್ಕೆ: ಇಲ್ಲಿ ಉಲ್ಲೇಖಿಸಿರುವ ಅಂಕಿ-ಅಂಶಗಳು ಕೆಲವು ಮಾಧ್ಯಮಗಳ ವರದಿಯಾಗಿದೆ. ಈ ಅಂಕಿ-ಅಂಶ ಇನ್ನೂ ಹೆಚ್ಚಾಗಿರಬಹುದು. ಅಧಿಕೃತ ಮಾಹಿತಿಯನ್ನು ಯಾವೊಂದು ತಂಡವೂ ಬಿಟ್ಟುಕೊಡುವುದಿಲ್ಲ.

ಇದನ್ನೂ ಓದಿ: ಕ್ರಿಕೆಟ್ ತ್ಯಜಿಸಿ ಕೆನಡಾಗೆ ತೆರಳಲು ನಿರ್ಧರಿಸಿದ್ದ ಈ ಆಟಗಾರನಿಗೆ 5.25 ಕೋಟಿ! ಮೆಡಿಕಲ್ ಶಾಪ್​ನಲ್ಲಿ ಕೆಲಸ ಮಾಡುವ ತಂದೆಯ ಕನಸು ನನಸು!

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner