ವಿಘ್ನೇಶ್ ಪುತ್ತೂರ್ ಹುಡುಕಿ ಕರೆತಂದ ಮುಂಬೈ ಇಂಡಿಯನ್ಸ್ ಸ್ಕೌಟಿಂಗ್ ತಂಡದ ಕೆಲಸವೇನು? ಇಲ್ಲಿದೆ ಕನ್ನಡಿಗನ ಬಹುಮುಖ್ಯ ಪಾತ್ರ
ಕನ್ನಡ ಸುದ್ದಿ  /  ಕ್ರಿಕೆಟ್  /  ವಿಘ್ನೇಶ್ ಪುತ್ತೂರ್ ಹುಡುಕಿ ಕರೆತಂದ ಮುಂಬೈ ಇಂಡಿಯನ್ಸ್ ಸ್ಕೌಟಿಂಗ್ ತಂಡದ ಕೆಲಸವೇನು? ಇಲ್ಲಿದೆ ಕನ್ನಡಿಗನ ಬಹುಮುಖ್ಯ ಪಾತ್ರ

ವಿಘ್ನೇಶ್ ಪುತ್ತೂರ್ ಹುಡುಕಿ ಕರೆತಂದ ಮುಂಬೈ ಇಂಡಿಯನ್ಸ್ ಸ್ಕೌಟಿಂಗ್ ತಂಡದ ಕೆಲಸವೇನು? ಇಲ್ಲಿದೆ ಕನ್ನಡಿಗನ ಬಹುಮುಖ್ಯ ಪಾತ್ರ

ವಿಘ್ನೇಶ್‌ ಪುತ್ತೂರ್ ಅವರನ್ನು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಸ್ಟಾರ್ ಆಟಗಾರನಾಗಿ ಮಾಡುವಲ್ಲಿ, ಈ ಫ್ರಾಂಚೈಸಿಯ ಸ್ಕೌಟಿಂಗ್‌ ವಿಂಗ್‌ನ ಕೆಲಸ ಮಹತ್ವದ್ದು. ಇದರ ಕೆಲಸ ತುಂಬಾ ಸೂಕ್ಷ್ಮ ಮತ್ತು ಅರ್ಥಪೂರ್ಣ.‌ ಮಲಪ್ಪುರಂನಿಂದ ಪ್ರತಿಭೆಯನ್ನು ಹೆಕ್ಕಿ ತರುವಲ್ಲಿ ಕರ್ನಾಟಕದ ದಿಗ್ಗಜ ಕ್ರಿಕೆಟಿಗನ ಪಾತ್ರ ತಿಳಿಯಲೇಬೇಕು.

ವಿಘ್ನೇಶ್ ಪುತ್ತೂರ್ ಹುಡುಕಿ ಕರೆತಂದ ಮುಂಬೈ ಇಂಡಿಯನ್ಸ್ ಸ್ಕೌಟಿಂಗ್ ತಂಡದ ಕೆಲಸವೇನು? ಕನ್ನಡಿಗನ ಪಾತ್ರ ನಿಮಗೊತ್ತಾ?
ವಿಘ್ನೇಶ್ ಪುತ್ತೂರ್ ಹುಡುಕಿ ಕರೆತಂದ ಮುಂಬೈ ಇಂಡಿಯನ್ಸ್ ಸ್ಕೌಟಿಂಗ್ ತಂಡದ ಕೆಲಸವೇನು? ಕನ್ನಡಿಗನ ಪಾತ್ರ ನಿಮಗೊತ್ತಾ?

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ (CSK vs MI) ನಡುವಿನ ಐಪಿಎಲ್‌ ಪಂದ್ಯದಲ್ಲಿ ಮುಂಬೈ ತಂಡ ಸೋತರೂ, ತಂಡದ ಸ್ಪಿನ್ನರ್ ವಿಘ್ನೇಶ್ ಪುತ್ತೂರು‌ (Vignesh Puthur) ಭಾರಿ ಗಮನ ಸೆಳೆದರು. ದಿನಬೆಳಗಾಗುವುದರೊಳಗೆ ಕ್ರೀಡಾ ಲೋಕದಲ್ಲಿ ಹೊಸ ಸೆನ್ಸೇಷನ್‌ ಸೃಷ್ಟಿಸಿದರು. ಕೇರಳದ ಮಲಪ್ಪುರಂನ ಸಾಮಾನ್ಯ ಆಟೋ ಚಾಲಕನ ಮಗನೊಬ್ಬ, ಮುಂಬೈ ಇಂಡಿಯನ್ಸ್‌ ಎಂಬ ಪ್ರತಿಷ್ಠಿತ ತಂಡದಲ್ಲಿ ಆಡುವುದು ಮಾತ್ರವಲ್ಲದೆ, ಘಟಾನುಘಟಿ ಬ್ಯಾಟರ್‌ಗಳ ವಿಕೆಟ್‌ ಪಡೆಯುವುದೆಂದರೆ ಸಾಧಾರಣ ವಿಷಯವೇನಲ್ಲ. 24 ವರ್ಷದ ಆಟಗಾರನಲ್ಲಿ ಏನೋ ಒಂದು ಪ್ರತಿಭೆ ಇದೆ ಎಂಬುದನ್ನು ಗುರುತಿಸುವುದರಲ್ಲಿ ಮುಂಬೈ ಇಂಡಿಯನ್ಸ್‌ ಪಾಲು ಎಷ್ಟಿದೆಯೋ, ಅದಕ್ಕೆ ಕನ್ನಡಿಗ ಹಾಗೂ ಕರ್ನಾಟಕ ಕಂಡ ದಿಗ್ಗಜ ಕ್ರಿಕೆಟಿಗ ವಿನಯ್‌ ಕುಮಾರ್‌ ಕೊಡುಗೆ ಕೂಡಾ ಅಷ್ಟೇ ಇದೆ.

ಐಪಿಎಲ್‌ನಂತೆಯೇ ದಕ್ಷಿಣ ಆಫ್ರಿಕಾದಲ್ಲಿ ನಡೆಯುವ SA20ಗಾಗಿ ಎಂಐ ಕೇಪ್ ಟೌನ್ ತಂಡವು ದಕ್ಷಿಣ ಆಫ್ರಿಕಾದಲ್ಲಿ ಒಟ್ಟುಗೂಡಲು ಸಜ್ಜಾಗಿತ್ತು. ಆಗ ವಿಘ್ನೇಶ್ ಅವರನ್ನು ನೆಟ್ ಬೌಲರ್ ಆಗಿ ಕರೆಸಿಕೊಳ್ಳಲಾಯ್ತು. ಈ ತಂಡದಲ್ಲಿದ್ದ ಅನುಭವಿ ಬೌಲರ್‌ಗಳು, ರಶೀದ್ ಖಾನ್ ಅವರಂತಹ ಆಟಗಾರರೊಂದಿಗೆ ಸೇರಿಕೊಂಡ ವಿಘ್ನೇಶ್‌ ತಮ್ಮ ಬೌಲಿಂಗ್‌ ಕೌಶಲ್ಯಗಳನ್ನು ಸುಧಾರಿಸಿಕೊಂಡರು. ಅನುಭವ ಹೆಚ್ಚಿಸಿಕೊಂಡತೆ ಅವರ ಆತ್ಮವಿಶ್ವಾಸವೂ ಹೆಚ್ಚಿತು.

ಐಪಿಎಲ್‌ ಟೂರ್ನಿಗೂ ಮುನ್ನ ಎಂಐ ತಂಡದ ಸಿದ್ಧತೆಗಳು ಆರಂಭವಾಗುವ ಮುನ್ನ, ಡಿವೈ ಪಾಟೀಲ್ ಟಿ20 ಪಂದ್ಯಾವಳಿಯಲ್ಲಿ ರಿಲಯನ್ಸ್ ತಂಡದ ಪರ ವಿಘ್ನೇಶ್‌ ಕೆಲವು ಪಂದ್ಯಗಳಲ್ಲಿ ಆಡಿದ್ದರು. ನೆಟ್ಸ್‌ನಲ್ಲಿ ಅಭ್ಯಾಸ ಮಾಡುವಾಗ, ಅಭ್ಯಾಸ ಪಂದ್ಯಗಳ ಸಮಯದಲ್ಲಿ, ಮುಂಬೈ ತಂಡ ಮುಖ್ಯ ತರಬೇತುದಾರ ಮಹೇಲ ಜಯವರ್ಧನೆ ನೇತೃತ್ವದ ಮ್ಯಾನೇಜ್‌ಮೆಂಟ್‌ ವಿಘ್ನೇಶ್‌ಗೆ ಐಪಿಎಲ್‌ನಲ್ಲಿ ಆಡುವ ಅವಕಾಶ ನೀಡಲು ಮುಂದಾಯ್ತು. ಇದಕ್ಕೆ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಕೂಡಾ ಬೆಂಬಲ ವ್ಯಕ್ತಪಡಿಸಿದರು. ಇದು ಇತ್ತೀಚಿನ ಬೆಳವಣಿಗೆ. ಇದಕ್ಕೂ ಹಿಂದೆ ನಡೆದ ತೆರೆಮರೆಯ ವಿಷಯಗಳು ಹಲವಾರು ಇವೆ.

ಮುಂಬೈ ಇಂಡಿಯನ್ಸ್‌ ತಂಡ ಸ್ಕೌಟಿಂಗ್‌ ವಿಂಗ್

ವಿಘ್ನೇಶ್‌ ಅವರನ್ನು ಎಂಐ ತಂಡದ ಆಟಗಾರನಾಗಿ ಮಾಡುವಲ್ಲಿ, ಈ ಫ್ರಾಂಚೈಸಿಯ ಸ್ಕೌಟಿಂಗ್‌ ವಿಂಗ್‌ನ ಕೆಲಸ ಮಹತ್ವದ್ದು. ಇದರ ಕೆಲಸ ತುಂಬಾ ಸೂಕ್ಷ್ಮ ಮತ್ತು ಅರ್ಥಪೂರ್ಣ. ಗಲ್ಲಿ ಗಲ್ಲಿಗಳಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳು, ಕ್ರಿಕೆಟ್‌ ಟೂರ್ನಿಗಳು ನಡೆಯುತ್ತಿರುವ ಜಾಗಕ್ಕೆ ಹೋಗಿ ಅಲ್ಲಿ ಕಾಣುವ ಹೊಸ ಹೊಸ ಪ್ರತಿಭೆಗಳನ್ನು ಹುಡುಕಿ ತರುವುದು.‌ ಮುಂಬೈ ಇಂಡಿಯನ್ಸ್‌ನ ಸ್ಕೌಟಿಂಗ್‌ ವಿಂಗ್, ಹೊಸ ಹೊಸ ಪ್ರತಿಭೆಗಳನ್ನು ದುರ್ಬಿನ್‌ ಹಾಕಿ ಹುಡುಕುತ್ತದೆ. ಇದು ಬರೀ ಐಪಿಎಲ್‌ ಸಮಯದಲ್ಲಿ ಮಾತ್ರವಲ್ಲ. ವರ್ಷವಿಡೀ ಕ್ರಿಕೆಟ್‌ ಮೇಲೆಯೇ ಇವರ ಚಿತ್ತ. ದೇಶೀಯ ಕ್ರಿಕೆಟ್‌ ಟೂರ್ನಿಯನ್ನೂ ನಿರಂತರ ಅನುಸರಿಸುವ ಮೂಲಕ, ಅಲ್ಲಿ ಸಿಗುವ ಪ್ರತಿಭೆಗಳನ್ನು ಕೂಡಾ ತಂಡದ ಶಿಬಿರಕ್ಕೆ ಕರೆತಂದು ಬೆಳೆಸುತ್ತಾರೆ.

ವಿನಯ್‌ ಕುಮಾರ್‌ ಹುಡುಕಿ ತಂದ ಮಲಪ್ಪುರಂ ಚಿನ್ನ

ಎಲ್ಲಾ ಪ್ರತಿಭೆಗಳ ನಡುವೆ, ವಿಘ್ನೇಶ್‌ ಎಂಬ ಪ್ರತಿಭೆಯನ್ನು ಹುಡುಕಿದ ಶ್ರೇಯಸ್ಸು ಕನ್ನಡಿಗ ವಿನಯ್‌ ಕುಮಾರ್‌ ಅವರಿಗೆ ಸಲ್ಲುತ್ತದೆ. ದಾವಣಗೆರೆ ಎಕ್ಸ್‌ಪ್ರೆಸ್‌ ಖ್ಯಾತಿಯ ದಿಗ್ಗಜ ಬೌಲರ್ ವಿನಯ್‌, ಮುಂಬೈ ತಂಡದ ಸ್ಕೌಟಿಂಗ್‌ ಟೀಮ್‌ನಲ್ಲಿದ್ದಾರೆ. ಕೇರಳ ಕ್ರಿಕೆಟ್ ಲೀಗ್‌ನ ಅಲೆಪ್ಪಿ ರಿಪ್ಪಲ್ಸ್ ತಂಡದ ಪರ ಆಡುತ್ತಿದ್ದ ವಿಘ್ನೇಶ್‌ ಅವರ ಬೌಲಿಂಗ್‌ ಪ್ರತಿಭೆಯನ್ನು ವಿನಯ್‌ ಗುರುತಿಸಿದ್ದರು. ಆ ಪಂದ್ಯಾವಳಿಯಲ್ಲಿ ವಿಘ್ನೇಶ್‌ ಪಡೆದಿದ್ದು ಮೂರು ವಿಕೆಟ್‌ ಮಾತ್ರ. ಇದು ಮುಂಬೈ ಇಂಡಿಯನ್ಸ್ ತಂಡದ ಸಿಬ್ಬಂದಿಯ ಕಣ್ಣಿಗೆ ಬಿದ್ದಿದೆ. ಅಲ್ಲಿಂದ ವಿಘ್ನೇಶ್‌ನನ್ನು ತಂಡದ ಟ್ರಯಲ್ಸ್‌ಗೆ ಕರೆತರಲಾಯ್ತು.

ಅನುಭವಿಗಳ ಗರಡಿಯಲ್ಲಿ ಪಳಗಿದ ವಿಘ್ನೇಶ್‌, ನೆಟ್‌ ಬೌಲರ್‌ ಆಗಿ ಅಭ್ಯಾಸ ನಡೆಸಿ ಇಂದು ಮುಂಬೈ ಇಂಡಿಯನ್ಸ್‌ ತಂಡದ ಸ್ಟಾರ್‌ ಆಟಗಾರನಾಗಿ ಮಿಂಚುತ್ತಿದ್ದಾರೆ.‌ ಐಪಿಎಲ್‌ನ 18ನೇ ಆವೃತ್ತಿಯಲ್ಲಿ ಎಂಐ ತಂಡ ಇನ್ನೂ ಹಲವಾರು ಪಂದ್ಯಗಳಲ್ಲಿ ಆಡಲಿದೆ. ಮುಂದೆ ಈ ಯುವ ಆಟಗಾರನ ಆಟ ಕುತೂಹಲ ಮೂಡಿಸಿದೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
Whats_app_banner