Explainer: ಆರ್‌ಸಿಬಿ, ಮುಂಬೈ, ಪಂಜಾಬ್ ಗುಜರಾತ್: ಕ್ವಾಲಿಫೈಯರ್ 1ರಲ್ಲಿ ಆಡಲು 4 ತಂಡಗಳಿಗೆ ಎಷ್ಟು ಅವಕಾಶವಿದೆ?
ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕೊನೆಯ ಒಂದು ಪಂದ್ಯವನ್ನು ಆಡಲಿವೆ. ಹೀಗಾಗಿ ಲೀಗ್ ಹಂತ ಮುಗಿಯುವ ವೇಳೆಗೆ ಅಂಕಪಟ್ಟಿಯಲ್ಲಿ ಟಾಪ್ 2ರೊಳಗೆ ಉಳಿಯುವ ತಂಡ ಯಾವುದೆಂಬ ಕುತೂಹಲ ಇನ್ನೂ ಇದೆ.

ಐಪಿಎಲ್ 2025ರ ಲೀಗ್ ಹಂತದ ಪಂದ್ಯಗಳು ಬಹುತೇಕ ಮುಕ್ತಾಯಗೊಂಡಿದೆ. ಕೊನೆಯ ಎರಡು ಪಂದ್ಯಗಳು ಮಾತ್ರವೇ ಬಾಕಿ ಉಳಿದಿದ್ದು, ಇನ್ನೂ ಅಂಕಪಟ್ಟಿಯಲ್ಲಿ ಟಾಪ್ 2 ಸ್ಥಾನ ಪಡೆದು ಕ್ವಾಲಿಫೈಯರ್ 1ರಲ್ಲಿ ಆಡುವ ತಂಡಗಳು ಯಾವುವು ಎಂಬುದು ಅಂತಿಮವಾಗಿಲ್ಲ. ಅಸಲಿಗೆ ಈ ಅವಕಾಶ ಈಗ ಅಗ್ರಸ್ಥಾನದಲ್ಲಿರುವ ನಾಲ್ಕು ತಂಡಗಳಿಗೂ ಇವೆ. ಸಿಎಸ್‌ಕೆ ವಿರುದ್ಧ ಸೋತ ನಂತರ ಪ್ಲೇಆಫ್‌ಗೆ ಹೋಗುವ ಮೊದಲ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆಯುವ ಪ್ರಯತ್ನದಲ್ಲಿದ್ದ ಗುಜರಾತ್ ಟೈಟನ್ಸ್ ತಂಡಕ್ಕೆ ಭಾರಿ ಹೊಡೆತ ಬಿದ್ದಿದೆ. ಇದೀಗ ಮೊದಲ ಎರಡು ಸ್ಥಾನದಲ್ಲಿ ಉಳಿಯಲು ತಂಡ ಬೇರೆ ತಂಡವನ್ನು ಅವಲಂಬಿಸಬೇಕಾಗಿದೆ.
ಸಿಎಸ್‌ಕೆ ವಿರುದ್ಧ ಸೋಲಿನ ನಂತರ, ಜಿಟಿ ತಂಡ ಪ್ರಸ್ತುತ 14 ಪಂದ್ಯಗಳಿಂದ 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ, ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಂದು ಪಂದ್ಯವನ್ನು ಆಡಲು ಬಾಕಿ ಇರುವುದರಿಂದ, ಟಾಪ್ 2 ರೇಸ್‌ನಲ್ಲಿ ಉಳಿಯುವ ಅದೃಷ್ಟ ಬೇರೆ ತಂಡದ ಕೈಯಲ್ಲಿದೆ.
ಒಂದು ವೇಳೆ ಆರ್‌ಸಿಬಿ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯವನ್ನು ಗೆದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನೇರವಾಗಿ ಟಾಪ್ 2ರಲ್ಲಿ ಸ್ಥಾನ ಪಡೆಯುತ್ತದೆ. ಅತ್ತ ಇನ್ನೊಂದು ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದರೆ, ಅದು ಕೂಡಾ ಅಗ್ರ 2 ರಲ್ಲಿ ಸ್ಥಾನ ಪಡೆಯುತ್ತದೆ. ಆಗ ಆರ್‌ಸಿಬಿ ಹಾಗೂ ಪಂಜಾಬ್ ತಂಡಗಳು ಕ್ವಾಲಿಫೈಯರ್ ಒಂದರಲ್ಲಿ ಆಡಲಿವೆ.
ಒಂದು ವೇಳೆ ಮುಂಬೈ ತಂಡ ಪಂಜಾಬ್ ಅನ್ನು ಸೋಲಿಸಿದರೆ, ತಂಡದ ಖಾತೆಗೆ 18 ಅಂಕಗಳು ಬರುತ್ತವೆ. ಗುಜರಾತ್‌ನಂತೆಯೇ ಅಂಕಗಳು ಸಮನಾಗುತ್ತದೆ. ಆದರೆ ಜಿಟಿಗಿಂತ ಎಂಐ ತಂಡದ ನಿವ್ವಳ ರನ್ ರೇಟ್ (NRR) ಹೆಚ್ಚಿರುವುದರಿಂದ ಅದು ಟಾಪ್ 2ರಲ್ಲಿ ಸ್ಥಾನ ಪಡೆಯುತ್ತದೆ.
ಗುಜರಾತ್ ಟೈಟನ್ಸ್ ಲೆಕ್ಕಾಚಾರ
ಇಲ್ಲಿ ಆರ್‌ಸಿಬಿ, ಮುಂಬೈ ಹಾಗೂ ಪಂಜಾಬ್ ತಂಡಗಳಿಗೆ ತಾನು ಆಡುವ ಪಂದ್ಯದಲ್ಲಿ ಗೆದ್ದರೆ ಸಾಕು. ಆಗ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನ ಪಡೆಯುತ್ತದೆ. ಮುಂಬೈ ಮತ್ತು ಪಂಜಾಬ್, ಈ ಎರಡರಲ್ಲಿ ಒಂದು ತಂಡ ಖಚಿತವಾಗಿ ಮೊದಲ ಎರಡರಲ್ಲಿ ಒಂದು ಸ್ಥಾನ ಪಡೆಯುತ್ತದೆ. ಆರ್‌ಸಿಬಿ ತಂಡ ಲಕ್ನೋ ತಂಡವನ್ನು ಮಣಿಸಿದರೆ ಅದು ಕೂಡಾ ಮೊದಲ ಎರಡರಲ್ಲಿ ಒಂದು ಸ್ಥಾನ ಪಡೆಯುತ್ತದೆ. ಆದರೆ, ಜಿಟಿ ತಂಡಕ್ಕೆ ಮುಂದೆ ಪಂದ್ಯವಿಲ್ಲ. ಅದು ಆರ್‌ಸಿಬಿ ತಂಡದ ಸೋಲನ್ನು ಎದುರು ನೋಡಬೇಕಾಗಿದೆ.
ಒಂದು ವೇಳೆ ಲಕ್ನೋ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಸೋತರೆ, ಆಗ ಜಿಟಿಗೆ ಲಾಭವಾಗಲಿದೆ. 18 ಅಂಕಗಳನ್ನು ಹೊಂದಿರುವ ಜಿಟಿ, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯುತ್ತದೆ. ಅದು ಕ್ವಾಲಿಫೈರ್ 1ನೇ ಪಂದ್ಯದಲ್ಲಿ ಆಡಲು ಅರ್ಹತೆ ಪಡೆಯುತ್ತದೆ.