Explainer: ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಹೊರಬಿದ್ದ ನಂತರವೂ ಅಯ್ಯರ್ ಮತ್ತು ಕಿಶನ್ ಟೀಮ್ ಇಂಡಿಯಾ ಪರ ಆಡಬಹುದೇ?
Shreyas Iyer Ishan Kishan: ಆಟಗಾರರ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಆಟಗಾರರ ಕೇಂದ್ರೀಯ ಒಪ್ಪಂದ ಪಟ್ಟಿಯಿಂದ ಕೈಬಿಡಲಾಗಿದೆ. ಆದರೆ, ಅವರಿಬ್ಬರೂ ಮುಂದೆ ಭಾರತ ಕ್ರಿಕೆಟ್ ತಂಡದ ಪರ ಆಡಬಹುದೇ ಎಂಬ ಪ್ರಶ್ನೆ ಎದ್ದಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕೇಂದ್ರ ಗುತ್ತಿಗೆ ಪಟ್ಟಿಯಿಂದ ಟೀಮ್ ಇಂಡಿಯಾದ ಪ್ರಮುಖ ಆಟಗಾರರಾದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಕೈಬಿಟ್ಟಿದೆ. ಉಭಯ ಆಟಗಾರರು ರಣಜಿ ಟ್ರೋಫಿ ಪಂದ್ಯಗಳನ್ನು ಆಡಬೇಕೆಂದು ಬಿಸಿಸಿಐ ಬಯಸಿತ್ತು. ಈ ನಡುವೆ ಶ್ರೇಯಸ್ ಅಯ್ಯರ್ ಮುಂಬೈ ಪರ ರಣಜಿ ಸೆಮಿಫೈನಲ್ ಆಡುವ ನಿರ್ಧಾರವನ್ನೂ ಮಾಡಿದ್ದರು. ಆದರೆ, ಬಿಸಿಸಿಐ ಶಿಸ್ತಿನ ನಿರ್ಧಾರಕ್ಕೆ ಬಂದಿದೆ.
ಬೆನ್ನು ಸೆಳೆತ ಇರುವುದಾಗಿ ಶ್ರೇಯಸ್ ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ಗೆ ತಿಳಿಸಿದ್ದರು. ಆದರೆ ಇದನ್ನು ಎನ್‌ಸಿಎ ಕ್ರೀಡಾ ವಿಜ್ಞಾನದ ಮುಖ್ಯಸ್ಥ ನಿತಿನ್ ಪಟೇಲ್ ನಿರಾಕರಿಸಿದ್ದಾರೆ. ತಮಿಳುನಾಡು ವಿರುದ್ಧದ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯಕ್ಕೆ ಆಯ್ಕೆಗೆ ಲಭ್ಯವಿರುವುದಾಗಿ ಅಯ್ಯರ್ ಹೇಳಿದ್ದರು. ಆದರೆ ಅದಕ್ಕೂ ಮುನ್ನವೇ ಬಿಸಿಸಿಐ ಅವರನ್ನು ಗುತ್ತಿಗೆಯಿಂದ ಹೊರಗಿಟ್ಟಿದೆ. ಅತ್ತ ಪ್ರಥಮ ದರ್ಜೆ ಕ್ರಿಕೆಟ್ ಆಡುವಂತೆ ಇಶಾನ್ ಕಿಶನ್‌ಗೆ ಕೋಚ್ ರಾಹುಲ್ ದ್ರಾವಿಡ್ ಸಲಹೆ ನೀಡಿದ್ದರು. ಆದರೆ ಕಿಶನ್ ಐಪಿಎಲ್ ಪಂದ್ಯಾವಳಿಗೆ ಸಿದ್ಧತೆ ನಡೆಸಿದರು. ಇಬ್ಬರೂ ಕೂಡಾ ತಮ್ಮ ಗುತ್ತಿಗೆ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ | ಕೆಲವರಿಗೆ ಟೆಸ್ಟ್ ಕ್ರಿಕೆಟ್ ಆಡುವ ಸಾಮರ್ಥ್ಯವಿಲ್ಲ: ಐಪಿಎಲ್ಗೆ ಗಮನ ಹರಿಸಿದ ಇಶಾನ್ ವಿರುದ್ಧ ಸುನಿಲ್ ಗವಾಸ್ಕರ್ ಟೀಕೆ
ಟೀಮ್ ಇಂಡಿಯಾ ಪರ ಆಡಬಹುದೇ?
ಸದ್ಯ, ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡಿದ್ದ ಇಬ್ಬರು ಆಟಗಾರರನ್ನು ಆಟಗಾರರನ್ನು ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಹೊರಹಾಕಲಾಗಿದೆ. ಇದೀಗ ಈ ಇಬ್ಬರು ಆಟಗಾರರು ಮತ್ತೆ ಟೀಮ್ ಇಂಡಿಯಾ ಪರ ಆಡಲು ಸಾಧ್ಯವೇ ಎಂಬ ಪ್ರಶ್ನೆ ಎದ್ದಿದೆ. ಟೀಮ್ ಇಂಡಿಯಾ ಆಟಗಾರರ ವಾರ್ಷಿಕ ಒಪ್ಪಂದ ಪಟ್ಟಿಯಲ್ಲಿ ಸ್ಥಾನ ಇಲ್ಲದಿದ್ದರೂ, ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಭಾರತ ತಂಡದ ಪರ ಆಡಬಹುದೇ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಇದನ್ನೂ ಓದಿ | ಆಟಗಾರರ ವಾರ್ಷಿಕ ಒಪ್ಪಂದ ಪ್ರಕಟಿಸಿದ ಬಿಸಿಸಿಐ; ಇಶಾನ್-ಅಯ್ಯರ್ಗೆ ಗೇಟ್ಪಾಸ್, ಜಡೇಜಾ, ರಿಂಕು ಸೇರಿ ಹಲವರಿಗೆ ಬಡ್ತಿ
ಬಿಸಿಸಿಐ ಕೇಂದ್ರೀಯ ಒಪ್ಪಂದದಿಂದ ಕೈಬಿಡಟ್ಟರೂ, ಆ ಆಟಗಾರರು ಭಾರತದ ಪರ ಆಡಲು ಲಭ್ಯವಿರುತ್ತಾರೆ. ಭಾರತ ಕ್ರಿಕೆಟ್ ತಂಡಕ್ಕೆ ಆಟಗಾರರ ಆಯ್ಕೆಯು, ಆಯಾ ಆಟಗಾರರ ಪ್ರದರ್ಶನ ಮತ್ತು ಫಿಟ್ನೆಸ್ ಮೇಲೆ ನಿರ್ಧಾರವಾಗುತ್ತದೆ. ಬಿಸಿಸಿಐನ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿರುವವರು ಮಾತ್ರ ತಂಡಕ್ಕೆ ಆಯ್ಕೆಯಾಗಬೇಕು ಎಂದೇನಿಲ್ಲ. ಅದರ ಹೊರತಾಗಿಯೂ ಪ್ರದರ್ಶನದ ಆಧಾರದಲ್ಲಿ ಭಾರತ ತಂಡಕ್ಕೆ ಆಯ್ಕೆ ಮಾಡಬಹುದು.
ಆಟಗಾರರ ವಾರ್ಷಿಕ ಒಪ್ಪಂದದ ನೂತನ ಪಟ್ಟಿ
ಗ್ರೇಡ್ A+ (4 ಕ್ರಿಕೆಟಿಗರು): ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ (ಬಡ್ತಿ).
ಗ್ರೇಡ್ ಎ (6 ಕ್ರಿಕೆಟಿಗರು): ಆರ್ ಅಶ್ವಿನ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಶುಭ್ಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ.
ಗ್ರೇಡ್ ಬಿ (5 ಕ್ರಿಕೆಟಿಗರು): ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ಯಶಸ್ವಿ ಜೈಸ್ವಾಲ್.
ಗ್ರೇಡ್ ಸಿ (15 ಕ್ರಿಕೆಟಿಗರು): ರಿಂಕು ಸಿಂಗ್ (ಹೊಸ ಸೇರ್ಪಡೆ), ತಿಲಕ್ ವರ್ಮಾ (ಹೊಸ ಸೇರ್ಪಡೆ), ಋತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಕೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆಎಸ್ ಭರತ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್ ಮತ್ತು ರಜತ್ ಪಾಟೀದಾರ್ (ಹೊಸ ಸೇರ್ಪಡೆ).
ಇದನ್ನೂ ಓದಿ | MIW vs UPW: ಮುಂಬೈ ಇಂಡಿಯನ್ಸ್ ತಂಡಕ್ಕೆ ಕೌರ್ ಬದಲು ಸಿವರ್ ಬ್ರಂಟ್ ನಾಯಕಿ; ಯುಪಿ ತಂಡದಲ್ಲೂ ಒಂದು ಬದಲಾವಣೆ
(This copy first appeared in Hindustan Times Kannada website. To read more like this please logon to kannada.hindustantimes.com)