ಕೊಹ್ಲಿ-ಅನುಷ್ಕಾ ಮಗನಿಗೆ ಅಕಾಯ್ ಎಂದು ಹೆಸರು ಹುಟ್ಟಿದ್ದೇಗೆ; ಎಷ್ಟು ಮಜವಾಗಿ ವಿವರಿಸಿದೆ ನೋಡಿ ವಿಕಿಪೀಡಿಯಾ ಟೀಮ್!
Virat Kohli and Vickeypedia : ಹಲವು ರೀಲ್ಸ್ಗಳ ಮೂಲಕ ರಂಜಿಸಿರುವ ವಿಕ್ಕಿ ಆ್ಯಂಡ್ ಟೀಮ್ ಈಗ ವಿರಾಟ್ ಕೊಹ್ಲಿ ಮಗ ಅಕಾಯ್ ಹೆಸರಿನ ಕುರಿತು ರೀಲ್ಸ್ ಮಾಡಿ ಮತ್ತೊಮ್ಮೆ ನಗಿಸಿದ್ದಾರೆ.
ಟೀಮ್ ಇಂಡಿಯಾ ಸೂಪರ್ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ (Virat Kohli and Anushka Sharma) ಅವರು ಫೆಬ್ರವರಿ 15ರಂದು 2ನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಕುರಿತು ಫೆಬ್ರವರಿ 20ರಂದು ಸ್ಟಾರ್ ದಂಪತಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡು ಫ್ಯಾನ್ಸ್ ಖುಷಿ ದುಪ್ಪಟ್ಟುಗೊಳಿಸಿದ್ದಾರೆ. ಇದೇ ವೇಳೆ ಮಗನ ಹೆಸರನ್ನು ಬಹಿರಂಗಪಡಿಸಿದರು. ಕೊಹ್ಲಿ ಮತ್ತು ಅನುಷ್ಕಾ ತಮ್ಮ ಮಗನಿಗೆ ಅಕಾಯ್ ಎಂದು ಹೆಸರಿಟ್ಟಿದ್ದಾರೆ.
ಈ ಪದವು 'ಕಾಯ' ಎಂಬ ಹಿಂದಿ ಪದದಿಂದ ಬಂದಿದೆ. ಇದರರ್ಥ 'ದೇಹ' ಎಂದಾಗಿದೆ. ಅಕಾಯ್ ಎಂದರೆ ಭೌತಿಕ ದೇಹಕ್ಕಿಂತಲೂ ಶ್ರೇಷ್ಠ ವ್ಯಕ್ತಿ. ಟರ್ಕಿಶ್ ಭಾಷೆಯಲ್ಲಿ, 'ಅಕಾಯ್' ಎಂದರೆ 'ಹೊಳೆಯುತ್ತಿರುವ ಚಂದ್ರ' ಎಂದರ್ಥ. ಶಿವಪುರಾಣದಲ್ಲಿ 'ಅಕಾಯ್' ಎಂಬುದು ಶಿವನ ಹೆಸರಾಗಿದೆ. ಈ ಹೆಸರಿನಲ್ಲಿ ಅನುಷ್ಕಾ ಮತ್ತು ಕೊಹ್ಲಿ ಹೆಸರು ಕೂಡ ಸೇರಿದೆ. ಅನುಷ್ಕಾ ಹೆಸರಿನ 'ಅ' ಮತ್ತು ಕೊಹ್ಲಿಯಲ್ಲಿ 'ಕಾ' ಅಕ್ಷರ ಇದರಲ್ಲಿದೆ.
ಆದರೆ, ಗುರುಗಳು ಹೇಳಿದ ಮಾತನ್ನು ತಪ್ಪಾಗಿ ತಿಳಿದುಕೊಂಡು ಸ್ಟಾರ್ ಕಪಲ್ಸ್, ಅಕಾಯ್ ಎಂದು ಹೆಸರಿಟ್ಟಿದ್ದಾರೆಯೇ ಎಂಬ ಅನುಮಾನ ಉಂಟಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ. ಆದರೆ ಇಂತಹದ್ದೊಂದು ಅನುಮಾನ ಹುಟ್ಟಲು ಕಾರಣವಾಗಿದ್ದು ‘ನಾನು ನಂದಿನಿ‘ ಖ್ಯಾತಿಯ ವಿಕಿಪೀಡಿಯಾ ಟೀಮ್! ಹಲವು ರೀಲ್ಸ್ಗಳ ಮೂಲಕ ರಂಜಿಸಿರುವ ವಿಕ್ಕಿ ಆ್ಯಂಡ್ ಟೀಮ್ ಈಗ ಅಕಾಯ್ ಹೆಸರಿನ ಕುರಿತು ರೀಲ್ಸ್ ಮಾಡಿ ಮತ್ತೊಮ್ಮೆ ನಗಿಸಿದ್ದಾರೆ.
ವಿಕ್ಕಿ ಆ್ಯಂಡ್ ಟೀಮ್ ಮಾಡಿದ ವಿಡಿಯೋದಲ್ಲಿ ಏನಿದೆ?
ವಿಕ್ಕಿ ಅನುಷ್ಕಾ ಪಾತ್ರದಾರಿಯಾಗಿದ್ದಾರೆ. ಗಂಡ ವಿರಾಟ್ ಕೊಹ್ಲಿ (ಪಾತ್ರದಾರಿ) ಜೊತೆಗೆ ಗುರುಗಳ ಬಳಿಗೆ ಹೋಗಿದ್ದಾರೆ. ಒಂದಿಷ್ಟು ಮಾತು ಕತೆಗಳು ನಡೆಯಲಿದ್ದು, ತುಂಬಾ ಹಾಸ್ಯಭರಿತವಾಗಿತ್ತು. ಅಭಿಮಾನಿಗಳಂತೂ ನಕ್ಕು ನಕ್ಕೂ ಸುಸ್ತಾಗಿದ್ದಾರೆ. ಒಂದೇ ಒಂದು ರೀಲ್ಸ್ನಲ್ಲಿ ಗುರುಗಳ ಮಾತನ್ನು ತಪ್ಪಾಗಿ ತಿಳಿದುಕೊಂಡು ಅಕಾಯ್ ಹೆಸರು ಹುಟ್ಟಿದ್ದೇಗೆಂದು ಫನ್ನಿಯಾಗಿ ತಿಳಿಸಿಕೊಟ್ಟಿದ್ದಾರೆ. ಅವರ ಸಂಭಾಷಣೆ ಈ ಮುಂದಿದೆ ನೋಡಿ.
ಗುರುಗಳು: ಏನಮ್ಮಾ ವಿರಾಟ್ ಕೊಹ್ಲಿ ಈಗ ಒಳ್ಳೊಳ್ಳೆ ಮಾತು ಆಡ್ತಿದ್ದಾನೆ ತಾನೆ?
ಅನುಷ್ಕಾ (ವಿಕ್ಕಿ): ಒಂದು ಹೆಣ್ಣು ಮಗು ಆದಾಗಿಂದ ತುಂಬಾ ಸುಧಾರಿಸಿದ್ದಾರೆ ಗುರೂಜಿ.
ಗುರುಗಳು: ಗಂಡಸು ಹಂಗೆ, ಒಂದು ಹೆಣ್ಣು ಮಗು ಅಂತ ಆದ್ಮೇಲೆ ಸರಿ ಹೋಗ್ತಾರೆ. ಇವಾಗ ಏನು ಬಂದಿದ್ದು ಇಬ್ಬರು?
ಅನುಷ್ಕಾ (ವಿಕ್ಕಿ): ಅದು, ಇತ್ತೀಚೆಗೆ ಸಹ ಒಂದು ಗಂಡು ಮಗು ಆಗಿದೆ. ಆ ಮಗುಗೆ ಏನ್ ಹೆಸರಿಡಬೇಕು?
ವಿರಾಟ್ (ಪಾತ್ರದಾರಿ): ನೀವ್ ಏನ್ ಹೇಳ್ತೀರೋ ಅದನ್ನೇ ಇಡ್ತೀವಿ ಸ್ವಾಮಿಜಿ.
ಗುರುಗಳು: ಅದಕ್ಕೆಲ್ಲಾ ಖರ್ಚ್ ಆಗುತ್ತಮ್ಮಾ?
ಅನುಷ್ಕಾ (ವಿಕ್ಕಿ): ರಿ, ದಕ್ಷಿಣೆ ಕೊಡ್ರಿ (ವಿರಾಟ್ಗೆ ಹೇಳಿದ್ದು)
ವಿರಾಟ್ (ಪಾತ್ರದಾರಿ): ಕೊಟ್ಟೆ ಇರೇ (ಅನುಷ್ಕಾಗೆ ಹೇಳಿದ್ದು)
ಮುಂದುವರೆದ ಸಂಭಾಷಣೆ: ಸ್ವಾಮಿಜಿ ಎನ್ನುತ್ತಾ ದಕ್ಷಿಣೆಯನ್ನು ವಿರಾಟ್ ಪಾತ್ರದಾರಿ ಗುರು ಮುಂದೆ ಇಡುತ್ತಾರೆ. ಆದರೆ ದಕ್ಷಿಣೆಯನ್ನು ಎಡಗೈಲಿ ಕೊಟ್ಟಿದ್ದನ್ನು ನೋಡಿದ ಗುರುಗಳು, ಆ ಕೈ, ಆ ಕೈ ಎನ್ನುತ್ತಾರೆ. ಅಂದರೆ ದಕ್ಷಿಣೆಯನ್ನು ಎಡಗೈಲಿ ಕೊಡುವ ಬದಲಿಗೆ ಬಲಗೈಲಿ ಕೊಡುವ ಅರ್ಥದಲ್ಲಿ ಗುರುಗಳು ಹೇಳುತ್ತಾರೆ. ಆ ಕೈ ಆ ಕೈ ಎನ್ನುತ್ತಿದ್ದಂತೆ ದಂಪತಿ ಅಲ್ಲಿಂದ ಎದ್ದು ಹೋಗುತ್ತಾರೆ. ಆಗ ಗುರುಗಳಿಗೆ ಏನು ಅರ್ಥ ಆಯಿತೆಂದು ಕನ್ಫ್ಯೂಸ್ ಆಗ್ತಾರೆ.
ಆ ಕೈಲಿ ಅಂದರೆ ಎಡಗೈ ಬದಲಿಗೆ ಬಲಗೈಲಿ ಕೊಡುವಂತೆ ಹೇಳೋಣ ಅನ್ನುವಷ್ಟರಲ್ಲಿ ಹೊರಟು ಹೋದರು. ಇದಾದ ಕೆಲವೇ ಕ್ಷಣಗಳಲ್ಲಿ ಬ್ರೇಕಿಂಗ್ ನ್ಯೂಸ್ ಹೊರ ಬೀಳುತ್ತದೆ. ಕೊಹ್ಲಿ-ಅನುಷ್ಕಾ ತಮ್ಮ ಮಗನಿಗೆ ಅಕಾಯ್ ಎಂದು ಹೆಸರಿಟ್ಟಿದ್ದಾರೆ ಎಂದು. ಇದನ್ನು ಅಭಿಮಾನಿಗಳಂತೂ ಬಿದ್ದು ಬಿದ್ದೂ ನಗುತ್ತಿದ್ದಾರೆ. ನಾನು ನಂದಿನಿ ಹಾಡು ಪ್ರಖ್ಯಾತಿ ಪಡೆದಂತೆ, ಇದು ಸಹ ಸಾಕಷ್ಟು ವೈರಲ್ ಆಗುತ್ತಿದೆ.