South Africa: ವಿಶ್ವಕಪ್ ಆರಂಭಕ್ಕೂ ಮುನ್ನವೇ ದಕ್ಷಿಣ ಆಫ್ರಿಕಾ ತಂಡಕ್ಕೆ ಭಾರಿ ಹಿನ್ನಡೆ; ಪ್ರಮುಖ ವೇಗಿ ಟೂರ್ನಿಯಿಂದ ಔಟ್
ವಿಶ್ವಕಪ್ ಆರಂಭಕ್ಕೂ ಮುನ್ನ ದಕ್ಷಿಣ ಆಫ್ರಿಕಾ ತಂಡಕ್ಕೆ ಭಾರಿ ಹಿನ್ನಡೆಯಾಗಿದ್ದು, ಆ ತಂಡದ ಸ್ಟಾರ್ ಪೇಸ್ ಬೌಲರ್ ಆನ್ರಿಚ್ ನೋಕಿಯಾ ವಿಶ್ವಕಪ್‌ನಿಂದ ಹಿಂದೆ ಸರಿದಿದ್ದಾರೆ. ಇದಕ್ಕೆ ಕಾರಣ ಅವರು ಗಾಯದಿಂದ ಚೇತರಿಸಿಕೊಳ್ಳದಿರುವುದು.
ಇದುವರೆಗೆ ವಿಶ್ವಕಪ್ (ICC ODI World Cup) ಗೆಲ್ಲದೆ ಚೋಕರ್ಸ್ ಪಟ್ಟವನ್ನು ಕಟ್ಟಿಸಿಕೊಂಡಿರುವ ದಕ್ಷಿಣ ಆಫ್ರಿಕಾ (South Africa) ತಂಡಕ್ಕೆ ಈ ಬಾರಿ ಟೂರ್ನಿ ಆರಂಭಕ್ಕೂ ಮುನ್ನವೇ ಹಿನ್ನಡೆಯಾಗಿದೆ. ಈ ಮೆಗಾ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ತಂಡದ ಸ್ಟಾರ್ ಪೇಸ್ ಬೌಲರ್ ಆನ್ರಿಚ್ ನೋಕಿಯಾ (Anrich Nortje) ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ.
ಇವರೊಂದಿಗೆ ಆಲ್‌ರೌಂಡರ್ ಸಿಸಂದಾ ಮಗಲಾ (Sisanda Magala) ಕೂಡ ಗಾಯದ ಸಮಸ್ಯೆಯಿಂದ ವಿಶ್ವಕಪ್ ಟೂರ್ನಿಯನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಈ ವಿಚಾರವನ್ನು ದಕ್ಷಿಣ ಅಫ್ರಿಕಾ ತಂಡದ ಮ್ಯಾನೇಜ್‌ಮೆಂಟ್ ಗುರುವಾರ (ಸೆಪ್ಟೆಂಬರ್ 21) ಖಚಿತಪಡಿಸಿದೆ.
ಇವರಿಬ್ಬರು ಐಸಿಸಿ ಏಕದಿನ ವಿಶ್ವಕಪ್‌ಗೆ ಅಲಭ್ಯರಾಗುತ್ತಿರುವುದರಿಂದ ಇವರ ಸ್ಥಾನದಲ್ಲಿ ಮತ್ತೊಬ್ಬ ವೇಗಿ ಲಿಝಾರ್ಡ್ ವಿಲಿಯಮ್ಸ್ ಮತ್ತು ಆಂಡಿಲ್ ಫೆಲುಕ್ವಿಯೊ ಅವರನ್ನು ದಕ್ಷಿಣ ಆಫ್ರಿಕಾ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಆನ್ರಿಚ್ ನೋಕಿಯಾ ದಕ್ಷಿಣ ಆಫ್ರಿಕಾ ತಂಡದಲ್ಲಿ ಹಲವು ವರ್ಷಗಳಿಂದ ಆಡುತ್ತಿದ್ದು, ತಂಡದ ಪ್ರಮುಖ ವೇಗದ ಬೌಲರ್ ಎನಿಸಿದ್ದಾರೆ. ಅಕ್ಟೋಬರ್ 5 ರಿಂದ ವಿಶ್ವಕಪ್ ಆರಂಭವಾಗಲಿದ್ದು, ದಕ್ಷಿಣ ಆಫ್ರಿಕಾ ತನ್ನ ಮೊದಲ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಅಕ್ಟೋಬರ್ 7 ರಂದು ಆಡಲಿದೆ.
ದಕ್ಷಿಣಾ ಆಫ್ರಿಕಾ ತಂಡದಿಂದ ಹೊರಗುಳಿದಿರುವ ಅನ್ರಿಚ್ ನೋಕಿಯಾ ತಮ್ಮ ವೇಗ ಮತ್ತು ಬಿಗಿಯಾದ ಲೈನ್ ಅಂಡ್ ಲೆಂಗ್ತ್ ಮೂಲಕ ಎದುರಾಳಿ ಬ್ಯಾಟರ್‌ಗಳು ರನ್ ಗಳಿಸಲು ಪರದಾಡುವಂತೆ ಮಾಡುತ್ತಾರೆ. ಆನ್ರಿಚ್ ಮತ್ತು ಸಿಸಾಂಡಾ ಇಬ್ಬರೂ 50 ಓವರ್‌ಗಳ ವಿಶ್ವಕಪ್‌ನಿಂದ ಹೊರಗುಳಿದಿರುವುದು ತುಂಬಾ ನಿರಾಶಾದಾಯಕವಾಗಿದೆ ಎಂದು ದಕ್ಷಿಣ ಆಫ್ರಿಕಾ ಕೋಚ್ ರಾಬ್ ವಾಲ್ಟರ್ ಹೇಳಿದ್ದಾರೆ. ಕಗಿಸೊ ರಬಾಡ ಜೊತೆಗೆ ನೋಕಿಯಾ ಅವರ ವೇಗದ ಬೌಲಿಂಗ್ ದಾಳಿಯು ದಕ್ಷಿಣ ಆಫ್ರಿಕಾದ ದೀರ್ಘಕಾಲದ ಬೌಲಿಂಗ್ ಬಲ ಎನಿಸಿದೆ.
ಈಗ ನೋಕಿಯಾ ದೂರವಾಗಿರುವುದರಿಂದ ಬೌಲಿಂಗ್ ವಿಭಾಗದ ಶಕ್ತಿ ಅರ್ಧದಷ್ಟು ಕಡಿಮೆಯಾಗಿದೆ. ಐಪಿಎಲ್ ಆಡುವಾಗ ಅವರು ಭಾರತದ ಪಿಚ್‌ಗಳಿಗೆ ಚೆನ್ನಾಗಿ ಒಗ್ಗಿಕೊಂಡಿದ್ದರು. ಇದು ಈ ಬಾರಿ ದಕ್ಷಿಣ ಆಫ್ರಿಕಾಗೆ ಭಾರಿ ಅನುಕೂಲವಾಗುವ ಸಾಧ್ಯತೆ ಇತ್ತು. ಇಂಥ ಬೌಲರ್ ಇಲ್ಲದ ಹರಿಣಗಳು ಮಹಾ ಟೂರ್ನಿಯಲ್ಲಿ ಹೇಗೆ ಸೆಟೆದು ನಿಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಐಸಿಸಿ ಏಕದಿನ ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ತಂಡ
ತೆಂಬಾ ಬವೂಮ (ನಾಯಕ), ಜೆರಾಲ್ಡ್ ಕೊಯೆಟ್ಜಿ, ಕ್ವಿಂಟನ್ ಡಿಕಾಕ್, ರೀಝಾ ಹೆಂಡ್ರಿಕ್ಸ್, ಮಾರ್ಕೊ ಯೆನ್ಸೆನ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಏಡೆನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ಲುಂಡಿ ಎನ್‌ಗಿಡಿ, ಕಗಿಸೊ ರಬಾಡ, ಲಿಝಾರ್ಡ್ ವಿಲಿಯಮ್ಸ್, ಆಂಡಿಲ್ ಫೆಲುಕ್ವಿಯೊ, ಬಬ್ರೇಝ್ ಶಾಮ್ಸಿ ಹಾಗೂ ರಾಸಿ ವ್ಯಾನ್ ಡೆರ್ ಡುಸೆನ್