ಆರ್‌ಸಿಬಿ-ಮುಂಬೈ ಪಂದ್ಯದಲ್ಲಿ ಟಾಸ್ ಫಿಕ್ಸಿಂಗ್; ಫೌಲ್ ಆಗಿತ್ತೆಂಬ ವೈರಲ್ ವಿಡಿಯೋ ವಿವಾದದ ಸತ್ಯಾಸತ್ಯತೆ ಇಲ್ಲಿದೆ ನೋಡಿ
MI vs RCB Toss Controversy: ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಟಾಸ್ ಫಿಕ್ಸಿಂಗ್ ಆಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಅದರ ಸತ್ಯಾಸತ್ಯತೆ ಕುರಿತ ವಿಡಿಯೋ ಇಲ್ಲಿದೆ ನೋಡಿ.
ಇಂಡಿಯನ್ ಪ್ರೀಮಿಯರ್ ಲೀಗ್ 2024ರ 25ನೇ ಪಂದ್ಯವು ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಿತು. ಪಂದ್ಯದಲ್ಲಿ ಮುಂಬೈ 197 ರನ್‌ಗಳ ಗುರಿಯನ್ನು 16.3 ಓವರ್ಗಳಲ್ಲೇ ಬೆನ್ನಟ್ಟಿ ಗೆದ್ದು ಬೀಗಿತ್ತು. ಹಾರ್ದಿಕ್ ಪಡೆ, ಏಳು ವಿಕೆಟ್ಗಳ ಅಂತರದಿಂದ ಜಯ ಸಾಧಿಸಿತ್ತು. ಇದು ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 17ನೇ ಆವೃತ್ತಿಯಲ್ಲಿ ಮುಂಬೈನ ಅತಿದೊಡ್ಡ ಗೆಲುವಾಗಿತ್ತು. ಇದರ ಜತೆಗೆ ವಿವಾದವೂ ಹುಟ್ಟಿಕೊಂಡಿತ್ತು. ಟಾಸ್ ಫಿಕ್ಸಿಂಗ್ ಆಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಟಾಸ್ ವೇಳೆ ಮ್ಯಾಚ್ ರೆಫರಿ ಫೌಲ್ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆದಿದ್ದವು. ಆರ್‌ಸಿಬಿ ಅಭಿಮಾನಿಗಳು ಪಂದ್ಯದಲ್ಲಿ ಟಾಸ್ ವೇಳೆ ಮೋಸ ಮಾಡಲಾಗಿದೆ ಎಂದು ಆರೋಪ ಮಾಡಿದ್ದವು. ಇದಕ್ಕೆ ಸಂಬಂಧಿಸಿದ ಕೆಲವು ವಿಡಿಯೋಗಳು ವೇಗವಾಗಿ ವೈರಲ್ ಆಗಿದ್ದವು. ಆದರೆ, ಈ ಹೇಳಿಕೆಗಳಲ್ಲಿ ಎಷ್ಟರಮಟ್ಟಿಗೆ ಸತ್ಯಾಂಶ ಇದೆ ಎಂದು ತನಿಖೆ ನಡೆಸಿದಾಗ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿವೆ. ಅದಕ್ಕೆ ಸಂಬಂಧಿಸಿದ ವಿವರ ಇಲ್ಲಿದೆ ನೋಡಿ.
ಮುಂಬೈ ಮತ್ತು ಆರ್‌ಸಿಬಿ ನಡುವಿನ ಈ ಪಂದ್ಯವು ಏಪ್ರಿಲ್ 11 ರಂದು ನಡೆದಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಟಾಸ್ ವೇಳೆ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ನಾಣ್ಯ ಎತ್ತಿಕೊಳ್ಳುವ ಸಂದರ್ಭದಲ್ಲಿ ಫಲಿತಾಂಶ ಬದಲಿಸಿದ್ದಾರೆ. ಶ್ರೀನಾಥ್ ನಾಣ್ಯ ತೆಗೆದುಕೊಳ್ಳುವ ವೇಳೆ ಅದರ ಎರಡೂ ಬದಿಗಳನ್ನು ತಿರುಗಿಸಿದ್ದಾರೆ. ಇದೆಲ್ಲವೂ ಮೊದಲೇ ನಿರ್ಧಾರ ಆಗಿರುತ್ತದೆ. ಟಾಸ್ ಬದಲಿಸಿದ್ದಕ್ಕೆ ಆರ್‌ಸಿಬಿ ಸೋತಿದ್ದು ಎಂದು ಸಾಮಾಜಿಕ ಮಾಧ್ಯಮದಲ್ಲಿ ಆರೋಪಗಳು ಕೇಳಿಬಂದಿದ್ದವು.
ಅಸಲಿ ವಿಡಿಯೋ ವೈರಲ್
ಸಾಮಾಜಿಕ ಜಾಲತಾಣಗಳಲ್ಲಿ 2 ರೀತಿಯ ವಿಡಿಯೋಗಳು ವೈರಲ್ ಆಗುತ್ತಿವೆ. ನಾಣ್ಯದ ಬದಿಗಳನ್ನು ತಿರುಗಿಸುವಂತೆ ಕಾಣುವ ವಿಡಿಯೋ ಮತ್ತು ಶ್ರೀನಾಥ್ ನೇರವಾಗಿ ನಾಣ್ಯ ಎತ್ತಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿವೆ. ಈ ವಿಡಿಯೊ ಜೊತೆಗೆ ಎಕ್ಸ್ ಖಾತೆಯ ಬಳಕೆದಾರರರೊಬ್ಬರು 'ಟಾಸ್ನ ಸ್ಪಷ್ಟವಾದ ವಿಡಿಯೋ ಇಲ್ಲಿದೆ. ನಿಮಗೆ ಇನ್ನೂ ಸಂದೇಹವಿದ್ದರೆ ನಿಮ್ಮ ಕಣ್ಣನ್ನು ಕಣ್ಣಿನ ವೈದ್ಯರಿಗೆ ತೋರಿಸಿ ಅಥವಾ ಮಾನಸಿಕ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ಆರೋಪ ಮಾಡಿದವರ ವಿರುದ್ಧ ಕಿಡಿಕಾರಿದ್ದಾರೆ. ವಿಡಿಯೋದಲ್ಲಿ ನಾಣ್ಯವನ್ನು ತಿರುಗಿಸಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತದೆ.
ಪಂದ್ಯದ ಸ್ಕೋರ್
ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ, ಸವಾಲಿನ ಮೊತ್ತ ಕಲೆ ಹಾಕಿತ್ತು. ಫಾಫ್ ಡು ಪ್ಲೆಸಿಸ್ (61), ರಜತ್ ಪಾಟೀದಾರ್ (50), ದಿನೇಶ್ ಕಾರ್ತಿಕ್ (53) ಅವರು ತಲಾ ಅರ್ಧಶತಕ ಸಿಡಿಸಿದ ನೆರವಿನಿಂದ ರಾಯಲ್ ಚಾಲೆಂಜರ್ಸ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತ್ತು. ಜಸ್ಪ್ರೀತ್ ಬುಮ್ರಾ 4 ಓವರ್ಗಳಲ್ಲಿ ಕೇವಲ 21 ರನ್ ನೀಡಿ 5 ವಿಕೆಟ್ ಪಡೆದಿದ್ದರು. ಈ ಗುರಿ ಬೆನ್ನಟ್ಟಿದ ಮುಂಬೈ ಇನ್ನೂ 27 ಎಸೆತಗಳು ಬಾಕಿ ಇರುವಂತೆಯೇ ಜಯದ ನಗೆ ಬೀರಿತು. ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಬಿರುಸಿನ ಅರ್ಧಶತಕಗಳು ಸಿಡಿಸಿ ಆರ್‌ಸಿಬಿ ಗೆಲುವಿಗೆ ಅಡ್ಡಿಯಾದರು.
ಕ್ರ.ಸಂ | ತಂಡ | ಪಂದ್ಯ | ಗೆಲುವು | ಸೋಲು | ಅಂಕ | NRR |
---|---|---|---|---|---|---|
1 | ರಾಜಸ್ಥಾನ್ ರಾಯಲ್ಸ್ | 5 | 4 | 1 | 8 | +0.871 |
2 | ಕೋಲ್ಕತ್ತಾ ನೈಟ್ ರೈಡರ್ಸ್ | 4 | 3 | 1 | 6 | +1.528 |
3 | ಚೆನ್ನೈ ಸೂಪರ್ ಕಿಂಗ್ಸ್ | 5 | 3 | 2 | 6 | +0.666 |
4 | ಲಕ್ನೋ ಸೂಪರ್ ಜೈಂಟ್ಸ್ | 5 | 3 | 2 | 6 | +0.436 |
5 | ಸನ್ ರೈಸರ್ಸ್ ಹೈದರಾಬಾದ್ | 5 | 3 | 2 | 6 | +0.344 |
6 | ಗುಜರಾತ್ ಟೈಟಾನ್ಸ್ | 6 | 3 | 3 | 6 | -0.637 |
7 | ಮುಂಬೈ ಇಂಡಿಯನ್ಸ್ | 5 | 2 | 3 | 4 | -0.073 |
8 | ಪಂಜಾಬ್ ಕಿಂಗ್ಸ್ | 5 | 2 | 3 | 4 | -0.196 |
9 | ದೆಹಲಿ ರಾಜಧಾನಿಗಳು | 6 | 2 | 4 | 4 | -0.975 |
10 | ರಾಯಲ್ ಚಾಲೆಂಜರ್ಸ್ ಬೆಂಗಳೂರು | 6 | 1 | 5 | 2 | -1.124 |