ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ನಾಯಕ ರೋಹಿತ್ ಶರ್ಮಾ ಟೆಸ್ಟ್ ಭವಿಷ್ಯದ ಬಗ್ಗೆ ದೊಡ್ಡ ಅಪ್ಡೇಟ್, ಏನದು?
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ನಾಯಕ ರೋಹಿತ್ ಶರ್ಮಾ ಟೆಸ್ಟ್ ಭವಿಷ್ಯದ ಬಗ್ಗೆ ದೊಡ್ಡ ಅಪ್ಡೇಟ್, ಏನದು?

ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ನಾಯಕ ರೋಹಿತ್ ಶರ್ಮಾ ಟೆಸ್ಟ್ ಭವಿಷ್ಯದ ಬಗ್ಗೆ ದೊಡ್ಡ ಅಪ್ಡೇಟ್, ಏನದು?

ಇಂಗ್ಲೆಂಡ್ ಸರಣಿಗೆ ಭಾರತ ತಂಡದ ಆಯ್ಕೆಗೆ ಕೆಲವು ವಾರಗಳ ಮೊದಲು ರೋಹಿತ್ ಶರ್ಮಾ ಬಗ್ಗೆ ಪಿಟಿಐ ದೊಡ್ಡ ಅಪ್​ಡೇಟ್ ನೀಡಿದೆ. ವರದಿಯ ಪ್ರಕಾರ, ರೋಹಿತ್ ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವುದು ಖಚಿತ.

ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ನಾಯಕ ರೋಹಿತ್ ಶರ್ಮಾ ಟೆಸ್ಟ್ ಭವಿಷ್ಯದ ಬಗ್ಗೆ ದೊಡ್ಡ ಅಪ್ಡೇಟ್, ಏನದು?
ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ನಾಯಕ ರೋಹಿತ್ ಶರ್ಮಾ ಟೆಸ್ಟ್ ಭವಿಷ್ಯದ ಬಗ್ಗೆ ದೊಡ್ಡ ಅಪ್ಡೇಟ್, ಏನದು?

18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ ಮಧ್ಯೆಯೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಭವಿಷ್ಯದ ಕುರಿತು ಚರ್ಚೆಗಳು ನಡೆಯುತ್ತಿವೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪ್ರಕಟಿಸಿದ ಆಟಗಾರರ ವಾರ್ಷಿಕ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ರೋಹಿತ್​​ಗೆ ಅವಕಾಶ ನೀಡುವ ಮೂಲಕ ಅವರ ಭವಿಷ್ಯದ ಕುರಿತು ಯಾವುದೇ ಆತಂಕ ಇಲ್ಲ ಎನ್ನುವ ಸುಳಿವು ನೀಡಿದೆ. ಹೀಗಿದ್ದರೂ ಚರ್ಚೆಗಳು ಮಾತ್ರ ನಿಂತಿಲ್ಲ. ಆದರೆ ಇಂಗ್ಲೆಂಡ್​​ ಸರಣಿಗೆ ರೋಹಿತ್​ ಆಯ್ಕೆಯಾಗುವುದರ ಜೊತೆಗೆ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ ಎನ್ನುತ್ತಿವೆ ಉನ್ನತ ಮೂಲಗಳು.

ಜೂನ್ 20 ರಿಂದ ಶುರುವಾಗುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್​ ಸರಣಿಗೆ ಮೇ 2ನೇ ವಾರದಲ್ಲಿ ಭಾರತ ತಂಡ ಪ್ರಕಟವಾಗಬಹುದು. ತಂಡದ ಆಯ್ಕೆಗೆ ಕೆಲವು ವಾರಗಳ ಮೊದಲು ರೋಹಿತ್ ಶರ್ಮಾ ಬಗ್ಗೆ ಪಿಟಿಐ ದೊಡ್ಡ ಅಪ್​ಡೇಟ್ ನೀಡಿದೆ. ವರದಿಯ ಪ್ರಕಾರ, ರೋಹಿತ್ ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವುದು ಖಚಿತ. ಅವರು ತಂಡವನ್ನು ಮುನ್ನಡೆಸುವುದೂ ಖಚಿತ ಎಂದು ಈ ವರದಿ ತಿಳಿಸಿದೆ. ಆ ಮೂಲಕ ವದಂತಿಗಳನ್ನು ತಳ್ಳುಹಾಕುತ್ತಿವೆ ಇತ್ತೀಚಿನ ವರದಿಗಳು. ಆದರೆ ಅವರ ಮುಂದಿನ ಭವಿಷ್ಯವು ಇಂಗ್ಲೆಂಡ್ ಪ್ರವಾಸದಲ್ಲಿ ನೀಡುವ ಪ್ರದರ್ಶನ ಆಧಾರದ ಮೇಲೆ ನಿಂತಿರುತ್ತದೆ.

2024-25ರ ಆವೃತ್ತಿ ಭಾರತಕ್ಕೆ ಕರಾಳ

2024-25ರ ಆವೃತ್ತಿಯು ಭಾರತ ಟೆಸ್ಟ್​ ತಂಡ ಮತ್ತು ರೋಹಿತ್​ ಶರ್ಮಾ ಪಾಲಿಗೆ ಕರಾಳವಾಗಿತ್ತು. ತವರಿನಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ 3-0 ಅಂತರದಿಂದ ವೈಟ್‌ವಾಶ್ ಮುಖಭಂಗಕ್ಕೆ ಗುರಿಯಾಗಿತ್ತು. ಭಾರತ ತಂಡ 12 ವರ್ಷಗಳ ನಂತರ ತನ್ನ ಮೊದಲ ತವರು ಸರಣಿಯನ್ನು ಕಳೆದುಕೊಂಡಿತ್ತು. ಇದಾದ ಬಳಿಕ ಬಾರ್ಡರ್​-ಗವಾಸ್ಕರ್ ಟ್ರೋಫಿಯಲ್ಲಿ 3-1 ಅಂತರದಿಂದ ಸರಣಿಯನ್ನು ಕಳೆದುಕೊಂಡಿತು. ಈ ಸೋಲು ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್​ಗೆ ಅರ್ಹತೆ ಪಡೆಯಲು ವಿಫಲವಾಯಿತು. ಈ ಎರಡು ಸಹ ಭಾರತದ ಪಾಲಿಗೆ ಮಹತ್ವದ ಸರಣಿಗಳಾಗಿದ್ದವು.

ಕಳಪೆ ಫಾರ್ಮ್​​​ನಿಂದ ಆಸ್ಟ್ರೇಲಿಯಾ ವಿರುದ್ಧದ 5ನೇ ಟೆಸ್ಟ್ ಪಂದ್ಯದಿಂದ ರೋಹಿತ್ ಹಿಂದೆ ಸರಿದಿದ್ದರು. ಇದು ದೊಡ್ಡ ಸದ್ದು ಮಾಡಿತ್ತು. ರೋಹಿತ್ ನಿವೃತ್ತಿ ಘೋಷಿಸುತ್ತಾರೆ ಎನ್ನುವ ವದಂತಿ ಹಬ್ಬಿತ್ತು. ಆದರೆ, ಅದೇ ಪಂದ್ಯದ ಮಧ್ಯೆ ತಾನಿನ್ನೂ ನಿವೃತ್ತಿ ಘೋಷಿಸಿಲ್ಲ. ಸುಖಾಸುಮ್ಮನೆ ವದಂತಿ ಹಬ್ಬಿಸಬೇಡಿ ಎಂದು ದೃಢಪಡಿಸಿದ್ದರು. ಈ ಸರಣಿಯಲ್ಲಿ ಭಾರತ ಮೊದಲ ಪಂದ್ಯ ಗೆದ್ದರೂ 2 ಮತ್ತು 4, 5ನೇ ಟೆಸ್ಟ್​​ನಲ್ಲಿ ಮುಗ್ಗರಿಸಿತ್ತು. 3ನೇ ಟೆಸ್ಟ್​​ ಡ್ರಾನಲ್ಲಿ ಅಂತ್ಯವಾಗಿತ್ತು. ಅಲ್ಲದೆ ರೋಹಿತ್ 3 ಪಂದ್ಯಗಳ 5 ಇನ್ನಿಂಗ್ಸ್​​ಗಳಲ್ಲಿ ಕೇವಲ 31 ರನ್ ಗಳಿಸಿ ನಿರಾಸೆ ಮೂಡಿಸಿದ್ದರು.

2027ಕ್ಕೂ ರೋಹಿತ್​ ಶರ್ಮಾನೇ ಕ್ಯಾಪ್ಟನ್

2024ರ ಟಿ20 ವಿಶ್ವಕಪ್ ಮತ್ತು 2025ರ ಚಾಂಪಿಯನ್ಸ್ ಟ್ರೋಫಿಯನ್ನು ತನ್ನ ನಾಯಕತ್ವದಲ್ಲಿ ಭಾರತಕ್ಕೆ ಗೆದ್ದುಕೊಟ್ಟಿದ್ದ ರೋಹಿತ್​, ಇದೀಗ 2027ರ ಏಕದಿನ ವಿಶ್ವಕಪ್​​ನಲ್ಲಿ ಮೆನ್ ಇನ್ ಬ್ಲ್ಯೂ ಮುನ್ನಡೆಸಬಹುದು ಎಂದು ತೋರುತ್ತಿದೆ. ವಿರಾಟ್ ಕೊಹ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲು ಸಜ್ಜಾಗಿದ್ದಾರೆ, ಜಸ್ಪ್ರೀತ್ ಬುಮ್ರಾ ಫಿಟ್ ಆಗಿದ್ದರೆ ವೇಗದ ದಾಳಿಯನ್ನು ಮುನ್ನಡೆಸಲಿದ್ದಾರೆ. ಮೊಹಮ್ಮದ್ ಶಮಿ ಬುಮ್ರಾ ಜೊತೆ ಹೊಸ ಚೆಂಡನ್ನು ಹಂಚಿಕೊಳ್ಳಲು ಟೆಸ್ಟ್ ತಂಡಕ್ಕೆ ಮರಳಬಹುದು. ಮೊಹಮ್ಮದ್ ಸಿರಾಜ್ ಟೆಸ್ಟ್ ತಂಡಕ್ಕೆ ಆಯ್ಕೆಯಾಗಬಹುದು. ಐದು ಟೆಸ್ಟ್ ಪಂದ್ಯಗಳು ಜೂನ್ 20 ರಿಂದ ಆಗಸ್ಟ್ 4 ರವರೆಗೆ ನಡೆಯಲಿವೆ.

ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.