ಮಯಾಂಕ್ ಅಗರ್ವಾಲ್ ಶತಕಕ್ಕೆ ಒಲಿಯದ ಜಯ; ವಿಜಯ್ ಹಜಾರ್ ಟ್ರೋಫಿಯಲ್ಲಿ ಮೊದಲ ಸೋಲು ಕಂಡ ಕರ್ನಾಟಕ
ಪ್ರಸಕ್ತ ಆವೃತ್ತಿಯ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಕರ್ನಾಟಕ ಕ್ರಿಕೆಟ್ ತಂಡದ ನಾಯಕ ಮಯಾಂಕ್ ಅಗರ್ವಾಲ್, ಮೂರನೇ ಶತಕ ಬಾರಿಸಿದ್ದಾರೆ. 112 ಎಸೆತ ಎದುರಿಸಿದ ಅವರು 15 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 124 ರನ್ ಗಳಿಸಿದರು.
ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಸತತ ನಾಲ್ಕು ಪಂದ್ಯಗಳಲ್ಲಿ ಗೆದ್ದು ಬೀಗುತ್ತಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ತಂಡವು, ಮೊದಲ ಸೋಲು ಕಂಡಿದೆ. ಅಹಮದಾಬಾದ್‌ನಲ್ಲಿ ನಡೆದ ಗ್ರೂಪ್ ಸಿ ಪಂದ್ಯದಲ್ಲಿ, ಹೈದರಾಬಾದ್ ವಿರುದ್ಧ ಮಯಾಂಕ್ ಅಗರ್ವಾಲ್ ಪಡೆ ಮುಗ್ಗರಿಸಿದೆ. ಟೂರ್ನಿಯಲ್ಲಿ ಈವರೆಗೆ ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು ಇಂದಿನ ಒಂದು ಪಂದ್ಯದಲ್ಲಿ ಸೋತ ಕರ್ನಾಟಕ, ಸಿ ಗುಂಪಿನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಅತ್ತ ಹೈದರಾಬಾದ್ 6ನೇ ಸ್ಥಾನ ಪಡೆದಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ, ನಾಯಕ ಮಯಾಂಕ್ ಅಗರ್ವಾಲ್ ಶತಕದ ನೆರವಿಂದ 8 ವಿಕೆಟ್ ನಷ್ಟಕ್ಕೆ 320 ರನ್ ಕಲೆ ಹಾಕಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್ ನಡೆಸಿದ ಹೈದರಾಬಾದ್, ವರುಣ್ ಗೌಡ್ ಸ್ಫೊಟಕ ಶತಕ (82 ಎಸೆತಗಳಲ್ಲಿ 109 ರನ್) ಮತ್ತು ನಾಯಕ ತಿಲಕ್ ವರ್ಮಾ (99 ರನ್) ಜವಾಬ್ದಾರಿಯುತ ಆಟದ ನೆರವಿಂದ ಕೊನೆಯ ಓವರ್‌ನಲ್ಲಿ ಗೆಲುವಿನ ದಡ ಸೇರಿತು. 49.4 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 322 ರನ್ ಗಳಿಸುವ ಮೂಲಕ ಟೂರ್ನಿಯಲ್ಲಿ ಮೂರನೇ ಗೆಲುವು ಒಲಿಸಿಕೊಂಡಿತು.
ಹೈದರಾಬಾದ್ ತಂಡದ ಆರಂಭ ಚೆನ್ನಾಗಿ ಆಗಲಿಲ್ಲ. ಆರಂಭಿಕ ಬ್ಯಾಟರ್ ರೋಹಿತ್ ರಾಯುಡು ಶೂನ್ಯಕ್ಕೆ ವಿಕಟ್ ಒಪ್ಪಿಸಿದರು. ಈ ವೇಳೆ ನಾಯಕ ತಿಲಕ್ ವರ್ಮಾ ಮತ್ತು ತನ್ಮಯ್ ಅಗರ್ವಾಲ್ 70 ರನ್‌ಗಳ ಜೊತೆಯಾಟವಾಡಿದರು. ತನ್ಮಯ್ 35 ರನ್ ಗಳಿಸಿದ್ದಾಗ ನಿಕಿನ್ ಜೋಸ್‌ಗೆ ಕ್ಯಾಚ್ ನೀಡಿ ಔಟಾದರು. ತಿಲಕ್ ಜವಾಬ್ದಾರಿಯುತ ಆಟವಾಡಿ ಶತಕದ ಅಂಚಿನಲ್ಲಿ ಎಡವಿ 99 ರನ್‌ಗಳಿಗೆ ಔಟಾದರು.
ಕರ್ನಾಟಕದ ಕೈಯಿಂದ ಗೆಲುವನ್ನು ಕಸಿದವರು ವರುಣ್ ಗೌಡ್. 7 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್ ಸಹಿತ ಶತಕ ಸಿಡಿಸಿದ ಅವರು, ತಂಡವನ್ನು ಗೆಲ್ಲಿಸಿದರು.
ಮಯಾಂಕ್ ಮೂರನೇ ಶತಕ
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ, ಪವರ್‌ಪ್ಲೇನಲ್ಲಿ ಚುರುಕಿನ ಆರಂಭ ಪಡೆಯಿತು. ನಿಕಿನ್ ಜೋಸ್ ಹಾಗೂ ಮಯಾಂಕ್ ಮೊದಲ ವಿಕೆಟ್‌ಗೆ 91 ರನ್ ಪೇರಿಸಿದರು. ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಮಯಾಂಕ್, ಮೂರನೇ ಸೆಂಚುರಿ ಬಾರಿಸಿದರು. 112 ಎಸೆತ ಎದುರಿಸಿ 15 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 124 ರನ್ ಗಳಿಸಿದರು. ಇದರೊಂದಿಗೆ ಸರಣಿಯಲ್ಲಿ ಈವರೆಗೆ 428 ರನ್ ಪೇರಿಸಿದರು. ಮಯಾಂಕ್ ಹೊರತುಪಡಿಸಿ ಸ್ಮರಣ್ ರವಿಚಂದ್ರನ್ 83 ರನ್ ಗಳಿಸಿದರು.
ಕರ್ನಾಟಕ ತಂಡವು ಮುಂದೆ ಜನವರಿ 03ರಂದು ಸೌರಾಷ್ಟ್ರ ತಂಡವನ್ನು ಎದುರಿಸಲಿದೆ. ಟೂರ್ನಿಯಲ್ಲಿ ತಂಡ ಉತ್ತಮ ಫಾರ್ಮ್‌ನಲ್ಲಿದ್ದು, ಗೆಲುವಿನ ವಿಶ್ವಾಸದಲ್ಲಿದೆ.
ವಿಜಯ್ ಹಜಾರೆ ಟ್ರೋಫಿಯ ಇನ್ನಷ್ಟು ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. https://kannada.hindustantimes.com/astrology/yearly-horoscope