ಕ್ಯಾಪ್ಟನ್ಸಿಯಿಂದ ಕೊಹ್ಲಿಯನ್ನು ನಾನು ವಜಾಗೊಳಿಸಿಲ್ಲ; ಕಾರಣ ಬಹಿರಂಗಪಡಿಸಿ ಸ್ಪಷ್ಟನೆ ನೀಡಿದ ಗಂಗೂಲಿ
Sourav Ganguly on Virat Kohli: ವಿರಾಟ್ ಕೊಹ್ಲಿ ಅವರನ್ನು ಟೀಮ್ ಇಂಡಿಯಾ ನಾಯಕತ್ವದಿಂದ ನಾನು ಕೆಳಗಿಳಿಸಲಿಲ್ಲ ಎಂದು ಸೌರವ್ ಗಂಗೂಲಿ ಸ್ಪಷ್ಟನೆ ನೀಡಿದ್ದಾರೆ.
ವಿರಾಟ್ ಕೊಹ್ಲಿ (Virat Kohli) ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಅವರ ಕ್ಯಾಪ್ಟನ್ಸಿಯಲ್ಲಿ ಮೆನ್ ಇನ್ ಬ್ಲೂ ಅತ್ಯಂತ ಬಲಿಷ್ಠವಾಗಿತ್ತು. ದೇಶ-ವಿದೇಶಗಳಲ್ಲಿ ಗೆದ್ದು ಪ್ರಾಬಲ್ಯ ಮರೆದಿತ್ತು. ಆದರೆ 2021ರ ಟಿ20 ವಿಶ್ವಕಪ್ ನಂತರ ಚುಟುಕು ಕ್ರಿಕೆಟ್ ನಾಯಕತ್ವದಿಂದ ಕೊಹ್ಲಿ, ಕೆಳಗಿಳಿದರು. ಇದರ ಬೆನ್ನಲ್ಲೇ ಏಕಾಏಕಿ ಏಕದಿನ ಕ್ಯಾಪ್ಟನ್ಸಿಯಿಂದ ವಜಾಗೊಳಿಸಿದರು. ಇದಾಗಿ ಕೆಲವು ವಾರಗಳ ನಂತರ ಕೊಹ್ಲಿಯನ್ನು ನಾಯಕತ್ವದಿಂದ ವಜಾಗೊಳಿಸಿ, ರೋಹಿತ್ ಶರ್ಮಾಗೆ ಪಟ್ಟ ಕಟ್ಟಿದರು.
ಇದಕ್ಕೆ ಕಾರಣ ಬಿಸಿಸಿಐ ಅಧ್ಯಕ್ಷರಾಗಿದ್ದ ಸೌರವ್ ಗಂಗೂಲಿ ಎಂಬ ಸುದ್ದಿ ಅಂದಿನಿಂದ ಈವರೆಗೂ ಚಾಲ್ತಿಯಲ್ಲಿದೆ. ಒಳ ರಾಜಕೀಯ ನಡೆಸಿ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಲಾಯಿತು ಎಂದು ಗಂಗೂಲಿ ವಿರುದ್ಧ ವ್ಯಾಪಕ ಟೀಕೆ ಕೇಳಿ ಬಂದಿತ್ತು. ಆದರೀಗ ಅದಕ್ಕೆ ಅಂದಿನ ಬಿಸಿಸಿಐ ಅಧ್ಯಕ್ಷರಾಗಿದ್ದ ದಾದಾ ಸ್ಪಷ್ಟನೆ ನೀಡಿದ್ದಾರೆ. ಕೊಹ್ಲಿಯನ್ನು ಟೀಮ್ ಇಂಡಿಯಾ ನಾಯಕತ್ವದಿಂದ ನಾನು ಕೆಳಗಿಳಿಸಲಿಲ್ಲ ಎಂದು ಗಂಗೂಲಿ ಹೇಳಿದ್ದಾರೆ.
ಕಾರಣ ಬಹಿರಂಗಪಡಿಸಿದ ಗಂಗೂಲಿ
ಈ ಬಗ್ಗೆ ಅನ್ಲಿಮಿಟೆಡ್ ಸೀಸನ್-10 ಶೋನಲ್ಲಿ ಭಾರತದ ಮಾಜಿ ನಾಯಕ ಗಂಗೂಲಿ ಮಾತನಾಡಿದ್ದು, ಆ ಸಮಯದಲ್ಲಿ, ಕೊಹ್ಲಿ ನಾಯಕತ್ವದಿಂದ ನಿರ್ಗಮಿಸಲು ಗಂಗೂಲಿ ಪಾತ್ರವಿದೆ ಎಂದು ಹಲವರು ನಂಬಿದ್ದಾರೆ. ಆದರೆ ನನ್ನ ಪಾತ್ರ ಯಾವುದೂ ಇಲ್ಲ ಎಂದು ಹೇಳುವ ಮೂಲಕ ಮತ್ತೊಮ್ಮೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಕೊಹ್ಲಿ ಕೆಳಗಿಳಿದಿದ್ದೇಗೆ ಮತ್ತು ಅವರ ನಿರ್ಧಾರದ ಹಿಂದಿರುವ ಕಾರಣ ಏನು ಎಂಬುದನ್ನು ಬಹಿರಂಗಪಡಿಸಿದ್ದಾರೆ 51 ವರ್ಷದ ದಾದಾ.
ಕೊಹ್ಲಿಗೆ ಗಂಗೂಲಿ ಹೇಳಿದ್ದೇನು?
ನಾನು ವಿರಾಟ್ ಅವರನ್ನು ನಾಯಕತ್ವದಿಂದ ತೆಗೆದುಹಾಕಲಿಲ್ಲ. ಇದನ್ನು ನಾನು ಸಾಕಷ್ಟು ಬಾರಿ ಸ್ಪಷ್ಟಪಡಿಸಿದ್ದೇನೆ. ಟಿ20 ಕ್ರಿಕೆಟ್ನಲ್ಲಿ ನಾಯಕತ್ವ ವಹಿಸಲು ಕೊಹ್ಲಿಗೆ ಆಸಕ್ತಿ ಇರಲಿಲ್ಲ. ಆದ್ದರಿಂದ, ವಿರಾಟ್ ಟಿ20 ತ್ಯಜಿಸುವ ನಿರ್ಧಾರ ತೆಗೆದುಕೊಂಡರು. ನಿಮಗೆ ಟಿ20ಗೆ ಕ್ಯಾಪ್ಟನ್ ಆಗುವ ಆಸಕ್ತಿ ಇಲ್ಲದಿದ್ದರೆ, ನೀವು ಸಂಪೂರ್ಣ ವೈಟ್-ಬಾಲ್ ನಾಯಕತ್ವದಿಂದ ಹಿಂದೆ ಸರಿಯುವುದು ಉತ್ತಮ. ಟೆಸ್ಟ್ನಲ್ಲಿ ನೀವೇ ನಾಯಕನಾಗಿರಿ ಎಂದು ಹೇಳಿದ್ದೆ. ಆದರೆ ಅವರು ಟೆಸ್ಟ್ನಿಂದಲೂ ಕ್ಯಾಪ್ಟನ್ಸಿ ತೊರೆದರು ಎಂದು ಗಂಗೂಲಿ ಹೇಳಿದ್ದಾರೆ.
ಟೆಸ್ಟ್ನಿಂದಲೂ ದೂರ
ಆದರೆ, ಟಿ20 ನಾಯಕತ್ವದಿಂದ ಕೆಳಗಿಳಿದ ನಂತರ ಏಕದಿನ ಕ್ಯಾಪ್ಟನ್ಸಿಯಿಂದ ಕೊಹ್ಲಿಯನ್ನು ಕೆಳಗಿಳಿಸಲಾಯಿತು. ಆದರೆ ಈ ಬಗ್ಗೆ ತನಗೆ ಮಾಹಿತಿ ನೀಡಿರಲಿಲ್ಲ ಎಂದು ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಒಡಿಐನಿಂದ ಕೆಳಗಿಳಿಸುತ್ತಿದ್ದಂತೆ ಬೇಸರದಲ್ಲಿದ್ದ ಕೊಹ್ಲಿ, ಟೆಸ್ಟ್ ನಾಯಕತ್ವವನ್ನು ತೊರೆದರು. 2017ರ ಜನವರಿಯಲ್ಲಿ ಎಂಎಸ್ ಧೋನಿ ವೈಟ್-ಬಾಲ್ ನಾಯಕತ್ವದಿಂದ ಕೆಳಗಿಳಿದ ನಂತರ ಕೊಹ್ಲಿ ಆ ಜವಾಬ್ದಾರಿ ವಹಿಸಿಕೊಂಡಿದ್ದರು.
ಕೊಹ್ಲಿ ನಾಯಕತ್ವದಲ್ಲಿ ಭಾರತ 2017ರ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ಗೆ ಪ್ರವೇಶಿಸಿತ್ತು. ಆದರೆ ಫೈನಲ್ ಸೋಲನುಭವಿಸಿತು. ಅವರ ನಾಯಕತ್ವದಲ್ಲೇ 2019ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತಿತ್ತು. ಏಕದಿನ ನಾಯಕತ್ವದಿಂದ ತೆಗೆದುಹಾಕಲ್ಪಟ್ಟ ನಂತರ ಕೊಹ್ಲಿ 2022ರ ಜನವರಿಯಲ್ಲಿ ಟೆಸ್ಟ್ ನಾಯಕತ್ವ ತ್ಯಜಿಸಿ ಆಶ್ಚರ್ಯಗೊಳಿಸಿದ್ದರು. ಕೊಹ್ಲಿ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ. ಅವರ ಸಾರಥ್ಯದಲ್ಲಿ ಟೀಮ್ ಇಂಡಿಯಾ 48 ಟೆಸ್ಟ್ ಪಂದ್ಯಗಳಲ್ಲಿ 40 ಪಂದ್ಯಗಳನ್ನು ಗೆದ್ದಿದೆ.