ಅದು ನನ್ನ ಕೆಲಸವಲ್ಲ; ಬಿಸಿಸಿಐ ಗುತ್ತಿಗೆಯಿಂದ ಇಶಾನ್-ಅಯ್ಯರ್ ಕೈಬಿಟ್ಟ ಕುರಿತು ರಾಹುಲ್ ದ್ರಾವಿಡ್ ಪ್ರತಿಕ್ರಿಯೆ
Rahul Dravid: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆದ್ದ ನಂತರ ಮುಖ್ಯಕೋಚ್ ರಾಹುಲ್ ದ್ರಾವಿಡ್ ಅವರು ಇದೇ ಮೊದಲ ಬಾರಿಗೆ ಇಶಾನ್-ಅಯ್ಯರ್ ಅವರನ್ನು ಕೇಂದ್ರ ಗುತ್ತಿಗೆ ಪಟ್ಟಿಗೆಯಿಂದ ಕೈಬಿಟ್ಟಿದ್ದರ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ನಿರೀಕ್ಷೆಯಂತೆ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯವನ್ನೂ ಟೀಮ್ ಇಂಡಿಯಾ ಗೆದ್ದುಕೊಂಡಿದೆ. ಧರ್ಮಶಾಲಾದಲ್ಲಿ ನಡೆದ ಕೊನೆಯ ಟೆಸ್ಟ್ನಲ್ಲಿ ಭಾರತ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 64 ರನ್ಗಳಿಂದ ಜಯಿಸಿ ಸರಣಿಯನ್ನು 4-1ರ ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದೆ. ಆದರೆ ಈ ಸಿರೀಸ್ ಹೊರತಾಗಿಯೂ ಹೆಚ್ಚು ಸದ್ದು ಮಾಡಿದ್ದು ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ರಣಜಿ ಆಡದೇ ಇದ್ದದ್ದು ಮತ್ತು ಅವರನ್ನು ಗುತ್ತಿಗೆ ಪಟ್ಟಿಯಿಂದ ಹೊರಗಿಟ್ಟಿದ್ದು.
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಲು ದೇಶೀಯ ಕ್ರಿಕೆಟ್ ಆಡಬೇಕು ಎಂದು ಬಿಸಿಸಿಐ, ಸೆಲೆಕ್ಟರ್ಸ್ ಮತ್ತು ಹೆಡ್ಕೋಚ್ ರಾಹುಲ್ ದ್ರಾವಿಡ್, ಭಾರತ ತಂಡಕ್ಕೆ ಆಯ್ಕೆಯಾಗದ ಆಟಗಾರರಿಗೆ ಸೂಚಿಸಿದ್ದರು. ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ಗೆ ನೇರವಾಗಿ ಈ ಮಾತುಗಳನ್ನು ಹೇಳಿದ್ದರು. ಆದರೆ ಉಭಯ ಆಟಗಾರರು ಸಹ ರಣಜಿ ಕ್ರಿಕೆಟ್ ಆಡಲು ನಿರ್ಲಕ್ಷ್ಯ ವಹಿಸಿದ್ದರು. ಅಯ್ಯರ್ ಆದರೂ ಒಂದೆರಡು ಪಂದ್ಯಗಳಲ್ಲಿ ಕಣಕ್ಕಿಳಿದರೂ ಇಶಾನ್ ಒಂದು ಪಂದ್ಯವನ್ನೂ ಆಡಲಿಲ್ಲ.
ರಣಜಿ ಆಡದೆ ಇಶಾನ್ ಐಪಿಎಲ್ಗೆ ಸಿದ್ಧತೆ ಆರಂಭಿಸಿದರು. ಇದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿತ್ತು. ಹಾಗಾಗಿ ಇಬ್ಬರು ಆಟಗಾರರಿಗೆ ಪಾಠ ಕಲಿಸುವ ದೃಷ್ಟಿಯಿಂದ ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಕಿತ್ತು ಹಾಕಿದರು. ಅವರ ಕ್ರಮ ಕೈಗೊಂಡಿದ್ದರ ಬಗ್ಗೆ ಪರ-ವಿರೋಧಗಳು ವ್ಯಕ್ತವಾದವು. ಕೆಲವರು ಬಿಸಿಸಿಐ ನಿಲುವಿಗೆ ಬೆಂಬಲ ಸೂಚಿಸಿದರೆ ಇನ್ನೂ ಕೆಲವರು ಟೀಕಿಸಿದ್ದರು. ಆದರೆ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರಿಂದ ಉತ್ತರ ಬಂದಿರಲಿಲ್ಲ.
ಈಗ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆದ್ದ ನಂತರ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಇದೇ ಮೊದಲ ಬಾರಿಗೆ ಅಯ್ಯರ್-ಇಶಾನ್ರನ್ನು ಕೇಂದ್ರ ಗುತ್ತಿಗೆ ಪಟ್ಟಿಗೆಯಿಂದ ಕೈಬಿಟ್ಟಿದ್ದರ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಕಾಂಟ್ರಾಕ್ಟ್ನಿಂದ ಕಿತ್ತಾಕಿದ ಮತ್ತು ಉಭಯ ಆಟಗಾರರ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. ಇಬ್ಬರನ್ನೂ ವಾರ್ಷಿಕ ಒಪ್ಪಂದದಿಂದ ತೆಗೆದು ಹಾಕಿರಬಹುದು. ಆದರೆ ಅವರು ತಂಡದ ಯೋಜನೆಯ ಭಾಗವಾಗಿದ್ದಾರೆ ಎಂದು ಹೇಳಿದ್ದಾರೆ.
ರಾಹುಲ್ ದ್ರಾವಿಡ್ ಹೇಳಿದ್ದೇನು?
ಈ ಬಗ್ಗೆ ಉತ್ತರಿಸಿದ ದ್ರಾವಿಡ್, ಉಭಯ ಆಟಗಾರರು ಇನ್ನೂ ಭಾರತ ತಂಡದ ಯೋಜನೆಗಳ ಭಾಗವಾಗಿದ್ದಾರೆ. ದೇಶೀಯ ಕ್ರಿಕೆಟ್ ಆಡುವ ಪ್ರತಿಯೊಬ್ಬರೂ ತಂಡದ ಯೋಜನೆಗಳ ಭಾಗವಾಗಿರುತ್ತಾರೆ ಎಂದು ಹೇಳಿದ ದ್ರಾವಿಡ್, ಇಶಾನ್ ಮತ್ತು ಅಯ್ಯರ್ ಅವರನ್ನು ಕೇಂದ್ರ ಒಪ್ಪಂದದಿಂದ ಕೈಬಿಡಲು ನನ್ನ ಪಾತ್ರವೇನು ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಯಾವ ಆಟಗಾರನಿಗೆ ಗುತ್ತಿಗೆ ನೀಡಬೇಕು ಎನ್ನುವುದನ್ನು ನಿರ್ಧರಿಸುವುದು ನಾನಲ್ಲ ಎಂದು ಹೇಳಿದ್ದಾರೆ.
ಒಬ್ಬ ಆಟಗಾರನಿಗೆ ಗುತ್ತಿಗೆ ನೀಡಲು ನಿರ್ಧರಿಸುವ ಅಧಿಕಾರ ಮಂಡಳಿ ಮತ್ತು ಸೆಲೆಕ್ಟರ್ಗಳಿಗೆ ಇರುತ್ತದೆ. ಅದರ ಮಾನದಂಡಗಳು ಸಹ ನನಗೆ ತಿಳಿದಿಲ್ಲ. ಆದರೆ 15 ಆಟಗಾರರ ತಂಡವನ್ನು ಆಯ್ಕೆಯ ಸಂದರ್ಭದಲ್ಲಿ ನನ್ನ ಅಭಿಪ್ರಾಯ ಪಡೆಯುತ್ತಾರೆ. ಆ ಬಳಿಕ ನಾಯಕ ರೋಹಿತ್ ಶರ್ಮಾ ಮತ್ತು ನಾನು ಚರ್ಚಿಸಿ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡುತ್ತೇವೆ. ಇದನ್ನು ಬಿಟ್ಟರೆ ಒಪ್ಪಂದ ಪಡೆಯುವ ವಿಚಾರ ನನ್ನ ಪರಿಮಿತಿಗೆ ಬರುವುದಿಲ್ಲ ಎಂದು ಹೇಳಿದ್ದಾರೆ.
ಇಶಾನ್-ಅಯ್ಯರ್ ಕೊನೆಯದಾಗಿ ಆಡಿದ್ದು ಯಾವಾಗ?
ಯುವ ವಿಕೆಟ್ ಕೀಪರ್ ಇಶಾನ್ ಕಿಶನ್, 2023ರ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿ ಪ್ರಾರಂಭಕ್ಕೂ ಮುನ್ನ ತಂಡದಿಂದ ತಮ್ಮ ಹೆಸರನ್ನು ವಾಪಸ್ ಪಡೆದರು. ಮಾನಸಿಕ ಆಯಾಸಕ್ಕೆ ವಿಶ್ರಾಂತಿ ಎಂದು ಹೇಳಿ ಸರಣಿಯಿಂದ ಹಿಂದೆ ಸರಿದರು. ಆ ಬಳಿಕ ಭಾರತ ತಂಡದಲ್ಲಿ ಅವರು ಕಾಣಿಸಿಕೊಂಡಿಲ್ಲ. ತದನಂತರ ದೇಶೀಯ ಕ್ರಿಕೆಟ್ ಆಡುವಂತೆ ಸೂಚಿಸಿದರೂ ಕಿಶನ್ ಹಿಂದೇಟು ಹಾಕಿದರು. ಇನ್ನು ಅಯ್ಯರ್ ಇಂಗ್ಲೆಂಡ್ ಸರಣಿಯ 2ನೇ ಟೆಸ್ಟ್ ಪಂದ್ಯದ ನಂತರ ಹೊರ ಬಿದ್ದರು.
