ಮನೀಷ್ ಪಾಂಡೆಯನ್ನು ಪ್ರಮೋಟ್ ಮಾಡಿದ್ದಕ್ಕೆ ನಾಚಿಕೆ ಪಡುತ್ತೇನೆ; ಗೌತಮ್ ಗಂಭೀರ್
Gautam Gambhir: ಪಂದ್ಯದ ಸಮಯದಲ್ಲಿ ಎಂದೂ ಒತ್ತಡಕ್ಕೆ ಒಳಗಾಗಿರಲಿಲ್ಲ. ಆದರೆ 2014ರ ಐಪಿಎಲ್ನಲ್ಲಿ ನಾನು ತೀವ್ರ ಒತ್ತಡಕ್ಕೆ ಒಳಗಾಗಿದ್ದೆ ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.

ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ (Gautam Gambhir), ತಮ್ಮ ವೃತ್ತಿಜೀವನದಲ್ಲಿ ಎದುರಿಸಿದ್ದ ಒತ್ತಡದ ಸಂದರ್ಭವನ್ನು ಬಹಿರಂಗಪಡಿಸಿದ್ದಾರೆ. ಆದರೆ ಭಾರತದಲ್ಲಿ ಅಲ್ಲ, ಬದಲಾಗಿ ಐಪಿಎಲ್ನಲ್ಲಿ (IPL). ಕನ್ನಡಿಗ ಮನೀಷ್ ಪಾಂಡೆ (Manish Pandey) ವಿಚಾರವಾಗಿ ಅವರು ಮಾತನಾಡಿದ್ದು, ಅವರನ್ನು ಆರಂಭಿಕ ಸ್ಥಾನಕ್ಕೆ ಪ್ರಮೋಟ್ ಮಾಡಿದ್ದಕ್ಕೆ ನಾಚಿಪಡುತ್ತೇನೆ. ಇದಕ್ಕಾಗಿ ಮನೀಷ್ ಪಾಂಡೆ ಬಳಿ ಕ್ಷಮೆಯಾಚಿಸಿದ್ದೆ ಎಂದ ಗಂಭೀರ್, ಅದಕ್ಕೆ ಕಾರಣ ಏನೆಂಬುದನ್ನು ಎಳೆಎಳೆಯಾಗಿ ವಿವರಿಸಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ತಂಡಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಒಂದು. ನಟ ಶಾರೂಖ್ ಖಾನ್ ಒಡೆತನದ ಈ ತಂಡಕ್ಕೆ ಪಶ್ಚಿಮ ಬಂಗಾಳದ ಜೊತೆಗೆ ಅವರ ಅಭಿಮಾನಿಗಳು ಕೆಕೆಆರ್ಗೆ ಬೆಂಬಲ ನೀಡುತ್ತಾರೆ. ತಂಡಕ್ಕೆ 2 ಪ್ರಶಸ್ತಿ ಗೆದ್ದುಕೊಟ್ಟ ಕೀರ್ತಿ ಗೌತಮ್ ಗಂಭೀರ್ಗೆ ಸಲ್ಲುತ್ತದೆ. ಸೌರವ್ ಗಂಗೂಲಿ ಮತ್ತು ಬ್ರೆಂಡನ್ ಮೆಕಲಮ್ ನಾಯಕತ್ವದಲ್ಲಿ ಟ್ರೋಫಿ ಗೆಲ್ಲದ ಕೆಕೆಆರ್, ಗಂಭೀರ್ ಕ್ಯಾಪ್ಟನ್ಸಿಯಲ್ಲಿ 2012, 2014ರಲ್ಲಿ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.
‘ಅತ್ಯಂತ ಒತ್ತಡ ಸಂದರ್ಭ ಎದುರಿಸಿದ್ದೆ’
ಸದ್ಯ ಒತ್ತಡದ ಸಂದರ್ಭವನ್ನು ಎದುರಿಸಿರುವ ಕುರಿತು ಮಾತನಾಡಿದ ಗಂಭೀರ್, ಪಂದ್ಯದ ಸಮಯದಲ್ಲಿ ಎಂದೂ ಒತ್ತಡಕ್ಕೆ ಒಳಗಾಗಿರಲಿಲ್ಲ. ಆದರೆ 2014ರ ಐಪಿಎಲ್ನಲ್ಲಿ ನಾನು ತೀವ್ರ ಒತ್ತಡಕ್ಕೆ ಒಳಗಾಗಿದ್ದೆ. ಏಕೆಂದರೆ, 2014ರ ಸೀಸನ್‌ನ ಆರಂಭಿಕ 3 ಪಂದ್ಯಗಳಲ್ಲಿ ಡಕೌಟ್ ಆಗಿದ್ದೆ. ಏನು ಮಾಡಬೇಕೆಂದು ತೋಚದೆ ಗೊಂದಲಕ್ಕೊಳಗಾಗಿದ್ದೆ ಎಂದು ಹೇಳುರುವ ಗಂಭೀರ್, ಮುಂದಿನ ಪಂದ್ಯದಲ್ಲೂ ಡಕೌಟ್ ಆಗುತ್ತೇನೆ ಎಂಬ ಭಯದಲ್ಲಿ ಮನೀಷ್ಗೆ ಓಪನಿಂಗ್ ಮಾಡುವಂತೆ ಹೇಳಿದ್ದೆ. ನಾನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದೆ ಎಂದು 2014ರ ಘಟನೆಯನ್ನು ವಿವರಿಸಿದ್ದಾರೆ.
‘ಕ್ಷಮೆ ಕೇಳಿದ್ದೆ’
ಆ ಸೀಸನ್ನಲ್ಲಿ ಮನೀಷ್ ಪಾಂಡೆ ಅದ್ಭುತ ಫಾರ್ಮ್ನಲ್ಲಿದ್ದರು. ಆದರೆ ನಾನು ಹಾಗೆ ಮಾಡಿದ್ದಕ್ಕೆ ನಾಚಿಕೆಪಡುತ್ತೇನೆ. ಅದ್ಭುತ ಫಾರ್ಮ್ನಲ್ಲಿದ್ದ ಮನೀಷ್ ಪಾಂಡೆ ಕೂಡ ಡಕೌಟ್ ಆದರು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾನು ಸಹ 1 ರನ್ಗೆ ಔಟಾದೆ. ಈ ವೇಳೆ ಮನೀಷ್ ಬಳಿ ತೆರಳಿ ಕ್ಷಮಿಸಿ ಎಂದು ಕೇಳಿದ್ದೆ. ಇನ್ನು ಎಂದೂ ಈ ರೀತಿ ನಡೆದುಕೊಳ್ಳುವುದಿಲ್ಲ ಎಂದು ಮಾತು ಕೊಟ್ಟಿದ್ದೆ. ಕೆಟ್ಟ ಪರಿಸ್ಥಿತಿಯನ್ನು ಎದುರಿಸಲು ನಿರ್ಧರಿಸಿದೆ ಎಂದು ಗಂಭೀರ್ ತನ್ನ ಕೆಟ್ಟ ದಿನಗಳ ಕುರಿತು ವಿವರಿಸಿದ್ದಾರೆ.
‘ನಂತರ ಮುಕ್ತವಾಗಿ ಬ್ಯಾಟ್ ಬೀಸಿದ್ದೆ’
ಅಲ್ಲದೆ, ಆ ಒತ್ತಡದಿಂದ ಹೇಗೆ ಹೊರ ಬಂದರೂ ಎಂಬುದನ್ನೂ ತಿಳಿಸಿದ್ದಾರೆ. ಕಠಿಣ ಪರಿಸ್ಥಿತಿಯಿಂದ ಹೊರಬರಲು ಯತ್ನಿಸಿದೆ. ಕಠಿಣ ಸಂದರ್ಭಗಳನ್ನು ಎದುರಿಸಿದಾಗ ನಿಜವಾದ ಆಟಗಾರ, ನಾಯಕ ಹೊರ ಬರುತ್ತಾನೆ. ಮುಂದಿನ ಪಂದ್ಯದಲ್ಲಿ ನಾನೇ ಆರಂಭಿಕನಾಗಿ ಕಣಕ್ಕಿಳಿದು ಕೇನ್ ರಿಚರ್ಡ್ಸನ್ ಬೌಲಿಂಗ್ನಲ್ಲಿ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದ್ದೆ. ನನ್ನ ಐಪಿಎಲ್ ಕರಿಯರ್ನಲ್ಲಿ ಆ ಬೌಂಡರಿ ಅತ್ಯಂತ ಮುಖ್ಯವಾದ ಬೌಂಡರಿಯಾಗಿತ್ತು. ಆ ಬೌಂಡರಿ ನಂತರ ನನ್ನ ಮೇಲಿದ್ದ ನನ್ನ ಮೇಲಿದ್ದ ಟನ್ಗಳಷ್ಟು ಒತ್ತಡದ ಭಾರತ ಇಳಿದುಹೋಯಿತು. ನಂತರ ಮುಕ್ತವಾಗಿ ಬ್ಯಾಟ್ ಬೀಸಿದ್ದೆ ಎಂದು ಕೆಕೆಆರ್ ಮಾಜಿ ಕ್ಯಾಪ್ಟನ್ ತಿಳಿಸಿದ್ದಾರೆ.
ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 4217 ರನ್ ಗಳಿಸಿದ್ದ ಗೌತಮ್ ಗಂಭೀರ್, 2014ರಲ್ಲಿ ನಾಲ್ಕು ಪಂದ್ಯಗಳಲ್ಲಿ ಡಕೌಟ್ ಆದರೂ 335 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದರು. 2014ರ ಫೈನಲ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಅಂತಿಮ ಪಂದ್ಯದಲ್ಲಿ ವೃದ್ಧಿಮಾನ್ ಸಾಹ 115 ರನ್‌ಗಳ ಅಜೇಯ ಶತಕ ಗಳಿಸಿದ್ದರು. ಇದರಿಂದ 199 ರನ್‌ಗಳ ಬೃಹತ್ ಟಾರ್ಗೆಟ್ ನೀಡಿತ್ತು. ಮನೀಶ್ ಪಾಂಡೆ (94 ರನ್), ಯೂಸುಫ್ ಪಠಾಣ್ (36 ರನ್) ಅವರ ಅದ್ಭುತ ಆಟದ ನೆರವಿನಿಂದ 3 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿ 2ನೇ ಬಾರಿಗೆ ಟ್ರೋಫಿಗೆ ಮುತ್ತಿಕ್ಕಿತ್ತು.
ಸಂಬಂಧಿತ ಲೇಖನ