ಇಬ್ಬರೂ ತಬ್ಬಿಕೊಂಡಾಗ ನಾನು ಅಳುತ್ತಿದ್ದೆ, ಆತನೂ ಅಳುತ್ತಿದ್ದ; ರೋಹಿತ್ ಶರ್ಮಾ ಜತೆಗಿನ ಆ ಕ್ಷಣ ತೆರೆದಿಟ್ಟ ವಿರಾಟ್ ಕೊಹ್ಲಿ
Virat Kohli on Rohit Sharma: ಜೂನ್ 29ರ ಶನಿವಾರ ಬಾರ್ಬಡೋಸ್ನಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದ ನಂತರ ವಿರಾಟ್ ಕೊಹ್ಲಿ ಅವರು ರೋಹಿತ್ ಶರ್ಮಾ ಅವರೊಂದಿಗಿನ ಆ ವಿಶೇಷ ಕ್ಷಣವನ್ನು ತೆರೆದಿಟ್ಟಿದ್ದಾರೆ.
ಮುಂಬೈನ ಐಕಾನಿಕ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಜರುಗಿದ ಟಿ20 ವಿಶ್ವಕಪ್ 2024 ವಿಜಯೋತ್ಸವ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ತಾನು ಮತ್ತು ರೋಹಿತ್ ಶರ್ಮಾ ಕಣ್ಣೀರು ಹಾಕಿದ ದೃಶ್ಯವನ್ನು ನೆನೆದಿದ್ದಾರೆ. ಅಲ್ಲದೆ, ರೋಹಿತ್ ಜೊತೆಗಿನ ಸಹೋದರತ್ವದ ಕುರಿತು ಮಾತನಾಡಿದ್ದಾರೆ. ಟಿ20 ವಿಶ್ವಕಪ್ ಗೆದ್ದ ನಂತರ ಹಿಟ್ಮ್ಯಾನ್ ಜೊತೆಗಿನ ಆ ವಿಶೇಷ ಕ್ಷಣವನ್ನು ತೆರೆದಿಟ್ಟಿದ್ದಾರೆ.
ವಾಂಖೆಡೆಯಲ್ಲಿ ಗುರುವಾರ (ಜುಲೈ 4) ಭಾರತ ತಂಡವನ್ನು ಸನ್ಮಾನಿಸಿದ ವೇಳೆ ವಿರಾಟ್ ಕೊಹ್ಲಿ ಅವರು ರೋಹಿತ್ಗೆ ಟಿ20 ವಿಶ್ವಕಪ್ ಟ್ರೋಫಿಯನ್ನು ಒಟ್ಟಿಗೆ ಎತ್ತುವಂತೆ ಕರೆ ನೀಡಿದರು. ಜೂನ್ 29ರಂದು ಇಬ್ಬರೂ ರಾಷ್ಟ್ರಧ್ವಜದೊಂದಿಗೆ ಫೋಟೋಸ್ಗೆ ಪೋಸ್ ನೀಡಿದರು. ನಂತರ ಮೆಟ್ಟಿಲುಗಳ ಮೇಲೆ ವಿಶೇಷ ಕ್ಷಣ ಹಂಚಿಕೊಂಡರು. ಕೊಹ್ಲಿಯ ಬಾಯಿಂದ ಅದನ್ನು ಕೇಳಿದಾಗ ರೋ-ಕೋ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿತು.
ರೋಹಿತ್ ಕುರಿತು ಕೊಹ್ಲಿ ಹೇಳಿದ್ದೇನು?
ಟಿ20 ವಿಶ್ವಕಪ್ ಗೆಲುವಿನ ಕುರಿತು ಮಾತನಾಡಿದ ವಿರಾಟ್, ರೋಹಿತ್ ಮೈದಾನದಲ್ಲಿ ಕಣ್ಣೀರು ಹಾಕಿದ ದೃಶ್ಯವನ್ನು ನೆನೆದಿದ್ದಾರೆ. ನಾನು ರೋಹಿತ್ 15 ವರ್ಷಗಳ ಕಾಲ ಒಟ್ಟಿಗೆ ಆಡಿದ್ದೇವೆ. ಆದರೆ, ಮೈದಾನದಲ್ಲಿ ರೋಹಿತ್ ಅಷ್ಟು ಭಾವುಕರಾಗಿದ್ದನ್ನು ನಾನು ನೋಡಿದ್ದು ಇದೇ ಮೊದಲ ಬಾರಿಗೆ. ನಾನು ಮೆಟ್ಟಿಲು ಏರಿ ಡ್ರೆಸ್ಸಿಂಗ್ ರೂಮ್ಗೆ ಮರಳುತ್ತಿದ್ದಾಗ, ನಾನು ಅಳುತ್ತಿದ್ದೆ. ಆಗ ರೋಹಿತ್ ಕೂಡ ಅಳುತ್ತಿದ್ದರು. ಆಗ ನಾವು ತಬ್ಬಿಕೊಂಡೆವು. ಈ ಕ್ಷಣ ನನ್ನ ಪಾಲಿಗೆ ವಿಶೇಷ ಕ್ಷಣ ಎಂದು ಕೊಹ್ಲಿ ಭಾವುಕರಾದರು.
ಅಂದು ಹಿರಿಯರ ಭಾವನೆಗಳು ಅರ್ಥವಾಗಿರಲಿಲ್ಲ ಎಂದ ವಿರಾಟ್
ಅನೇಕ ವರ್ಷಗಳಿಂದ ಟ್ರೋಫಿ ಗೆಲ್ಲುವುದು ನಮ್ಮ ಏಕೈಕ ಗುರಿ ಇದು. ಭಾರತೀಯ ಕ್ರಿಕೆಟ್ ಅನ್ನು ಹೆಮ್ಮೆಪಡುವಂತೆ ಮಾಡುವುದೇ ನಮ್ಮ ಏಕೈಕ ಗುರಿಯಾಗಿತ್ತು ಎಂದರು. ಇದೇ ವೇಳೆ 2011ರ ವಿಶ್ವಕಪ್ ಗೆದ್ದಾಗ ಇದೇ ಮೈದಾನದಲ್ಲಿ (ವಾಂಖೆಡೆ) ಆಡಿದ್ದನ್ನು ವಿರಾಟ್ ನೆನಪಿಸಿಕೊಂಡರು. ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ವೀರೇಂದ್ರ ಸೆಹ್ವಾಗ್ ಸೇರಿದಂತೆ ಹಿರಿಯ ಆಟಗಾರರು ಕಣ್ಣೀರು ಹಾಕಿದ್ದರು. ಹಿರಿಯರ ಭಾವನೆಗಳು ಹೇಗಿತ್ತು ಎಂಬುದು ಈಗ ನನಗೆ ಅರಿವಾಗುತ್ತಿದೆ ಎಂದು ಕೊಹ್ಲಿ ಹೇಳಿದ್ದಾರೆ.
ನಾನು [2011ರಲ್ಲಿ] ವಿಶ್ವಕಪ್ ಗೆದ್ದಾಗ ಪ್ರಾಮಾಣಿಕವಾಗಿ ಹೇಳುವುದಾದರೆ, ಆ ಸಮಯದಲ್ಲಿ ಹಿರಿಯ ಆಟಗಾರರ ಭಾವನೆಗಳೊಂದಿಗೆ ಸಂಪರ್ಕ ಸಾಧಿಸಲು ನನಗೆ ಸಾಧ್ಯವಾಗಲಿಲ್ಲ. ಅವರು ಏಕೆ ಅಳುತ್ತಿದ್ದಾರೆಂದು ನನಗೆ ಅರ್ಥವಾಗಲಿಲ್ಲ. ನನಗೆ 'ಹೌದು, ನಾವು ವಿಶ್ವಕಪ್ ಗೆದ್ದಿದ್ದೇವೆ' ಎಂದು ಅನಿಸಿತು. ಅದು ಅಷ್ಟು ಸುಲಭ. ಆಗ ನನಗೆ 22-23 ಆಗಿತ್ತು. ಈಗದರ ಭಾವನೆಗಳು ಅರ್ಥವಾಗುತ್ತಿವೆ ಎಂದು ಹೇಳಿದ್ದಾರೆ.
ರೋಹಿತ್ ಕೂಡ ಇಷ್ಟು ದಿನ ಆಡಿದ್ದಾರೆ. ದೇಶಕ್ಕಾಗಿ ಟ್ರೋಫಿ ಗೆಲ್ಲುವುದು ನಮ್ಮಿಬ್ಬರ ಬಹಳ ದಿನದ ಕನಸಾಗಿತ್ತು. ಸಾಕಷ್ಟು ಪ್ರಯತ್ನಿಸಿದ್ದೆವು. ನಾನು ನಾಯಕನಾಗಿದ್ದಾಗ ಮತ್ತು ರೋಹಿತ್ ತಂಡದ ಹಿರಿಯ ಆಟಗಾರನಾಗಿದ್ದಾಗ ಕಠಿಣ ಪ್ರಯತ್ನ ಮಾಡಿದ್ದೆವು. ಈಗ ಆತ ನಾಯಕನಾಗಿದ್ದಾಗ ಮತ್ತು ನಾನು ಹಿರಿಯ ಆಟಗಾರನಾಗಿದ್ದೇನೆ. ಆದರೆ ಇಬ್ಬರಿಗೂ ಒಂದೇ ಗುರಿ ಕಪ್ ಗೆಲ್ಲುವುದು. ಆ ಹೊರೆಯನ್ನು ಹೊತ್ತುಕೊಂಡಿದ್ದೆವು. ಇದೀಗ ದೇಶವು ಬಯಸಿದ ಫಲಿತಾಂಶವನ್ನು ನೀಡಿದ್ದೇವೆ ಎಂದು ನಾನು ಭಾವಿಸುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.
2012ರಲ್ಲಿ ಭಾರತದ ಏಷ್ಯಾಕಪ್ ಪಂದ್ಯವೊಂದರಲ್ಲಿ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ಕಾಮೆಂಟರಿ ಮಾಡುತ್ತಿದ್ದ ವೇಳೆ ಒಂದು ಮಾತನ್ನು ಹೇಳಿದ್ದರು. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬ್ಯಾಟಿಂಗ್ ವೇಳೆ ಸಂಭ್ರಮಿಸುತ್ತಿರುವ ದೃಶ್ಯವನ್ನು ಕಂಡು 'ನಾನು ಭವಿಷ್ಯವನ್ನು ನೋಡುತ್ತಿದ್ದೇನೆ ಎಂದು ಭಾವಿಸುತ್ತೇನೆ. ಭಾರತೀಯ ಬ್ಯಾಟಿಂಗ್ ಭವಿಷ್ಯ ಎಂದು ಭವಿಷ್ಯ ನುಡಿದಿದ್ದರು. ಅಂದು ಗವಾಸ್ಕರ್ ಹೇಳಿದಂತೆಯೇ ಇಬ್ಬರೂ ಭಾರತೀಯ ಕ್ರಿಕೆಟ್ಗೆ ಮಹೋನ್ನತ ಕೊಡುಗೆ ನೀಡಿದ್ದಾರೆ.
ಟಿ20 ವಿಶ್ವಕಪ್ ಗೆದ್ದ ನಂತರ ಇಬ್ಬರೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ರೋಹಿತ್ ನಾಯಕತ್ವದಲ್ಲಿ ಭಾರತ ತಂಡವು ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್ಗಳಿಂದ ಸೋಲಿಸಿ ಬಾರ್ಬಡೋಸ್ನಲ್ಲಿ ಟ್ರೋಫಿಗೆ ಮುತ್ತಿಕ್ಕಿತು. ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತ್ತು. ವಿರಾಟ್ 76 ರನ್ ಬಾರಿಸಿದ್ದರು. ಈ ಗುರಿ ಬೆನ್ನಟ್ಟಿದ ಸೌತ್ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಲಷ್ಟೇ ಶಕ್ತವಾಯಿತು.
ರೋಹಿತ್ 2007ರ ಟಿ20 ವಿಶ್ವಕಪ್ ಗೆದ್ದರೆ, ಕೊಹ್ಲಿ 2011ರ ವಿಶ್ವಕಪ್ ವಿಜೇತ ಭಾರತ ತಂಡದ ಭಾಗವಾಗಿದ್ದರು. ಆದರೆ ಒಂದೂವರೆ ದಶಕಗಳ ಕಾಲ ಒಟ್ಟಿಗೆ ಆಡಿದರೂ ಒಟ್ಟಿಗೆ ವಿಶ್ವಕಪ್ ಗೆಲ್ಲುವುದು ಅವರ ಶ್ರೇಷ್ಠ ವೃತ್ತಿಜೀವನದಲ್ಲಿ ಮರಿಚೀಕೆಯಾಗಿತ್ತು. ಈ ಕನಸು ಕಳೆದ ಜೂನ್ 29ರ ಶನಿವಾರ ಈಡೇರಿತು. 2015, 2016, 2019, 2022 ಮತ್ತು 2023ರ ಹೃದಯ ವಿದ್ರಾವಕತೆ ವಿಶ್ವಕಪ್ ಸೋಲುಗಳನ್ನು ಸಹಿಸಿಕೊಂಡ ನಂತರ 2024ರ ವಿಶ್ವಕಪ್ ಗೆದ್ದು ಟಿ20ಐ ವೃತ್ತಿಜೀವನಕ್ಕೆ ಅಂತ್ಯ ಹಾಡಿದರು. ಮಕ್ಕಳಂತೆ ಅತ್ತರು.