ರವಿಶಾಸ್ತ್ರಿ ಕಾಮೆಂಟರಿಯನ್ನ ಮಿಮಿಕ್ರಿ ಮಾಡಿದ ಇಯಾನ್ ಸ್ಮಿತ್; ಕಾಮೆಂಟರಿ ಬಾಕ್ಸ್‌ನಲ್ಲಿ ಹಾಸ್ಯ ಚಟಾಕಿ; ವಿಡಿಯೊ
ಕನ್ನಡ ಸುದ್ದಿ  /  ಕ್ರಿಕೆಟ್  /  ರವಿಶಾಸ್ತ್ರಿ ಕಾಮೆಂಟರಿಯನ್ನ ಮಿಮಿಕ್ರಿ ಮಾಡಿದ ಇಯಾನ್ ಸ್ಮಿತ್; ಕಾಮೆಂಟರಿ ಬಾಕ್ಸ್‌ನಲ್ಲಿ ಹಾಸ್ಯ ಚಟಾಕಿ; ವಿಡಿಯೊ

ರವಿಶಾಸ್ತ್ರಿ ಕಾಮೆಂಟರಿಯನ್ನ ಮಿಮಿಕ್ರಿ ಮಾಡಿದ ಇಯಾನ್ ಸ್ಮಿತ್; ಕಾಮೆಂಟರಿ ಬಾಕ್ಸ್‌ನಲ್ಲಿ ಹಾಸ್ಯ ಚಟಾಕಿ; ವಿಡಿಯೊ

ರವಿಶಾಸ್ತ್ರಿ ಅವರ ಕಾಮೆಂಟರಿಯನ್ನು ಇಯಾನ್ ಸ್ಮಿತ್ ಮಿಮಿಕ್ರಿ ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರವಿಶಾಸ್ತ್ರಿ ಅವರ ಕಾಮೆಂಟ್ರಿಯನ್ನು ಮಿಮಿಕ್ರಿ ಮಾಡುತ್ತಿರುವ ಇಯಾನ್ ಸ್ಮಿತ್
ರವಿಶಾಸ್ತ್ರಿ ಅವರ ಕಾಮೆಂಟ್ರಿಯನ್ನು ಮಿಮಿಕ್ರಿ ಮಾಡುತ್ತಿರುವ ಇಯಾನ್ ಸ್ಮಿತ್

ಬೆಂಗಳೂರಿನಲ್ಲಿ ನಡೆದಿದ್ದ ನೆದರ್ಲೆಂಡ್ಸ್ (Netherlands) ವಿರುದ್ಧದ ವಿಶ್ವಕಪ್ (ICC ODI World Cup 2023) ಪಂದ್ಯದಲ್ಲಿ 160 ರನ್‌ಗಳ ದೊಡ್ಡ ಗೆಲುವು ಪಡೆದಿರುವ ಟೀಂ ಇಂಡಿಯಾ (Team India) ಹಲವು ದಾಖಲೆಗಳನ್ನು ಬರೆದಿದೆ. ಬೌಂಡರಿ ಮತ್ತು ಸಿಕ್ಸರ್‌ಗಳ ಸುರಿಮಳೆಗೈದಿದ್ದ ಭಾರತ ಅಭಿಮಾನಿಗಳಿಗೆ ಭರಪೂರ ಮನರಂಜನೆಯನ್ನು ನೀಡಿತ್ತು.

ಒಂದು ಕಡೆ ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡುತ್ತಿದ್ದರೆ ಮತ್ತೊಂದೆಡೆ ಕಾಮೆಂಟರಿ ಬಾಕ್ಸ್‌ನಲ್ಲಿ ಕಾಮೆಂಟೇಟರ್‌ಗಳು ಹಾಸ್ಯ ಚಟಾಕಿ ಹಾರಿಸಿದ್ದಾರೆ. ನ್ಯೂಜಿಲೆಂಡ್‌ನ ಮಾಜಿ ವಿಕೆಟ್ ಕೀಪರ್ ಇಯಾನ್ ಸ್ಮಿತ್‌ ಅವರು ತಮ್ಮ ಕಾಮೆಂಟರಿ ಸಮಯದಲ್ಲಿ ರವಿಶಾಸ್ತ್ರಿಯವರು ಕಾಮೆಂಟರಿ ಶೈಲಿಯನ್ನು ಮಿಮಿಕ್ರಿ ಮಾಡಿ ಮೂಲಕ ಕಾಮೆಂಟರಿ ಬಾಕ್ಸ್‌ನಲ್ಲಿದ್ದವರು ನಗೆಗಡಲಿನಲ್ಲಿ ತೇಲುವಂತೆ ಮಾಡಿದ್ದಾರೆ.

ರವಿಶಾಸ್ತ್ರಿ ಅವರ ಧ್ವನಿಯನ್ನು ಇಯಾನ್ ಸ್ಮಿತ್ ಮಿಮಿಕ್ರಿ ಮಾಡಿದ್ದು ಹೀಗೆ

ರವಿಶಾಸ್ತ್ರಿಯವರು ಹೇಳುವಂತೆ ಬೆಂಗಳೂರಿಗೆ ಸ್ವಾಗತ.. ನಿಮ್ಮೆಲ್ಲರಿಗೂ ದೀಪಾವಳಿ ದಿನದ ಶುಭಾಶಯಗಳು. ನಾವು ಈಗ ನಾಣ್ಯದ ಟಾಸ್ ಹಾಕುತ್ತಿದ್ದೇವೆ. ರಿಚಿ ರಿಚರ್ಡ್ಸನ್‌ ಮಧ್ಯದಿಂದ ಹೊರಗಿದ್ದಾರೆ. ಈಗ ದಯವಿಟ್ಟು ನನ್ನ ಮಾತನ್ನು ಎಲ್ಲರೂ ಕೇಳಿ ಎಂದು ರವಿಶಾಸ್ತ್ರಿಯವರೇ ಶೈಲಿಯಲ್ಲೇ ಮಾತನಾಡಿದ್ದಾರೆ.

ಅಂದ ಹಾಗೆ ಇಯಾನ್ ಸ್ಮಿತ್ ಅವರು ರವಿಶಾಸ್ತ್ರಿ ವಾಯ್ಸ್‌ಅನ್ನು ಮಿಮಿಕ್ರಿ ಮಾಡುತ್ತಿದ್ದಾಗ ಶಾಸ್ತ್ರಿ ಹಾಗೂ ಭಾರತದ ಮಹಿಳಾ ತಂಡದ ಮಾಜಿ ನಾಯಕಿ ಅಂಜುಮ್ ಚೋಪ್ರಾ ಕೂಡ ಅಲ್ಲೇ ಇದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ಸಖತ್ ವೈರಲ್ ಆಗಿದೆ.

ಟೀಂ ಇಂಡಿಯಾದ ಮಾಜಿ ಕೋಚ್ ಆಗಿರುವ ರವಿಶಾಸ್ತ್ರಿಯವರು ಅಬ್ಬರದ ಧ್ವನಿಯ ಮೂಲಕ ಮಾಡುವ ಕಾಮೆಂಟರಿಗೆ ಹೆಸರುವಾಸಿಯಾಗಿದ್ದಾರೆ. ಟಾಸ್ ವೇಳೆ ಅವರ ಕಾಮೆಂಟರಿ ಶೈಲಿಗೆ ಅದೆಷ್ಟೋ ಮಂದಿ ಫಿದಾ ಆಗಿದ್ದಾರೆ.

ನೆದರ್ಲೆಂಡ್ಸ್ ವಿರುದ್ಧ ಟೀಂ ಇಂಡಿಯಾಗೆ ವಿಶ್ವದಾಖಲೆಯ ಗೆಲುವು

ಭಾನುವಾರ (ನವೆಂಬರ್ 12) ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿದ್ದ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅವರ ಭರ್ಜರಿ ಶತಕಗಳ ನೆರವಿನಿಂದ 410 ರನ್ ಬಾರಿಸಿತ್ತು. ಶ್ರೇಯಸ್ ಅಯ್ಯರ್ 94 ಎಸೆತಗಳಲ್ಲಿ 10 ಬೌಂಡರಿ ಹಾಗೂ 5 ಅಮೋಘ ಸಿಕ್ಸರ್‌ಗಳು ಸೇರಿ 128 ರನ್ ಬಾರಿಸಿ ಔಟಾಗದೆ ಉಳಿದರು.

ಕೆಎಲ್ ರಾಹುಲ್ ಕೇವಲ 64 ಎಸೆತಗಳಲ್ಲಿ 11 ಬೌಂಡರಿ ಹಾಗೂ 4 ಸಿಕ್ಸರ್‌ಗಳು ಸೇರಿ 102 ರನ್ ಬಾರಿಸಿದರು. ರೋಹಿತ್ ಶರ್ಮಾ, ಶುಭ್ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ತಲಾ ಅರ್ಧ ಶತಕ ಸಿಡಿಸಿದರು. 411 ರನ್‌ಗಳ ಬೃಹತ್ ಮೊತ್ತವನ್ನು ಚೇಸಿಂಗ್ ಮಾಡಲು ಇಳಿದ ಡಚ್ಚರು 47.5 ಓವರ್‌ಗಳಲ್ಲಿ 250 ರನ್ ಗಳಿಸಿ ಆಲೌಟ್ ಆಯಿತು. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರು. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ತಲಾ 1 ವಿಕೆಟ್ ಕಿತ್ತರು. ಟೀಂ ಇಂಡಿಯಾ ನವೆಂಬರ್ 15 (ಬುಧವಾರ) ರಂದು ನ್ಯೂಜಿಲೆಂಡ್ ವಿರುದ್ಧ ವಿಶ್ವಕಪ್ ಸೆಮಿ ಫೈನಲ್ ಆಡಲಿದೆ. ಇದಕ್ಕಾಗಿ ವಾಂಖೆಡೆ ಸ್ಟೇಡಿಯಂ ಸಿದ್ಧವಾಗಿದೆ.

Whats_app_banner