ಹೊಸ ರೂಪ ಪಡೆಯಲಿದೆ ನ್ಯೂಯಾರ್ಕ್ ಪಿಚ್; ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದಲ್ಲಿ ರನ್‌ ಮಳೆ ನಿರೀಕ್ಷೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಹೊಸ ರೂಪ ಪಡೆಯಲಿದೆ ನ್ಯೂಯಾರ್ಕ್ ಪಿಚ್; ಭಾರತ Vs ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದಲ್ಲಿ ರನ್‌ ಮಳೆ ನಿರೀಕ್ಷೆ

ಹೊಸ ರೂಪ ಪಡೆಯಲಿದೆ ನ್ಯೂಯಾರ್ಕ್ ಪಿಚ್; ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದಲ್ಲಿ ರನ್‌ ಮಳೆ ನಿರೀಕ್ಷೆ

India vs Pakistan: ಭಾರತ ಮತ್ತು ಐರ್ಲೆಂಡ್ ನಡುವಿನ ಪಂದ್ಯದ ನಂತರ ನ್ಯೂಯಾರ್ಕ್‌ ಪಿಚ್ ಕುರಿತು ವ್ಯಾಪಕ ಟೀಕೆಗಳು ಕೇಳಿ ಬಂದಿವೆ. ಹೀಗಾಗಿ ಪಿಚ್‌ ಪರಿಸ್ಥಿತಿ ಸುಧಾರಿಸುತ್ತಿರುವುದಾಗಿ ಐಸಿಸಿ ಹೇಳಿಕೆ ನೀಡಿದೆ. ಇದೇ ಮೈದಾನಲ್ಲಿ ಜೂನ್‌ 9ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಪಂದ್ಯ ನಡೆಯುತ್ತಿದೆ.

ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದಲ್ಲಿ ರನ್‌ ಮಳೆ ನಿರೀಕ್ಷೆ
ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದಲ್ಲಿ ರನ್‌ ಮಳೆ ನಿರೀಕ್ಷೆ (AFP)

ಈ ಬಾರಿಯ ಟಿ20 ವಿಶ್ವಕಪ್‌ ಪಂದ್ಯಾವಳಿ ನೀರಸವಾಗಿದೆ ಎಂಬುದು ಅಭಿಮಾನಿಗಳ ದೂರು. ಪಂದ್ಯಗಳಲ್ಲಿ ರನ್‌ ಮಳೆ ಹರಿದು ಬರುತ್ತಿಲ್ಲ ಅನ್ನೋದೆ ಇದಕ್ಕೆ ಪ್ರಮುಖ ಕಾರಣ. ಅಮರಿಕ ಹಾಗೂ ವೆಸ್ಟ್‌ ಇಂಡೀಸ್‌ನ ನಿಧಾನಗತಿಯ ಪಿಚ್‌ಗಳಲ್ಲಿ ಬ್ಯಾಟರ್‌ಗಳು ರನ್‌ ಗಳಿಸಲು ಪರದಾಡುತ್ತಿದ್ದಾರೆ. ಇದರಲ್ಲೂ ಮುಖ್ಯವಾಗಿ ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ಪಂದ್ಯಗಳು ಮತ್ತಷ್ಟು ನೀರಸವಾಗಿವೆ. ತಾತ್ಕಾಲಿಕ ಮೈದಾನದಲ್ಲಿ ಅಳವಡಿಸಲಾಗಿರುವ ಡ್ರಾಪ್-ಇನ್ ಪಿಚ್‌ ಕುರಿತು ಆಟಗಾರರು ಸೇರಿದಂತೆ ವಿವಿಧ ಕಡೆಗಳಿಂದ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ. ತಜ್ಞರ ಟೀಕೆಗಳು ನಿರಂತರವಾಗಿ ಕೇಳಿ ಬಂದ ನಂತರ, ಸಮಸ್ಯೆ ಪರಿಹರಿಸಲು ಐಸಿಸಿ ಮುಂದಾಗಿದೆ.

ನ್ಯೂಯಾರ್ಕ್‌ ಪಿಚ್‌, ವಿಶ್ವಕಪ್‌ ಪಂದ್ಯಗಳನ್ನು ನಡೆಸಲು ಯೋಗ್ಯವಾಗಿಲ್ಲ ಎಂದು ಈಗಾಗಲೇ ಹಲವರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಪಿಚ್‌ ಸರಿಪಡಿಸಲಾಗುವುದು ಎಂಬುದಾಗಿ ಐಸಿಸಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಭಾರತ ಮತ್ತು ಐರ್ಲೆಂಡ್ ನಡುವಿನ ಪಂದ್ಯದಲ್ಲಿ, ಐರ್ಲೆಂಡ್‌ ತಂಡವು ಕೇವಲ 96 ರನ್‌ಗಳಿಗೆ ಆಲೌಟ್ ಆಗಿತ್ತು. ಅದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ತಂಡವು 77 ರನ್‌ಗಳಿಗೆ ಆಲೌಟ್‌ ಆಗಿತ್ತು. ಹೀಗಾಗಿ ಪಿಚ್‌ ಮೇಲೆ ಉಭಯ ತಂಡಗಳ ಆಟಗಾರರು ಕೂಡಾ ದೂರಿದ್ದರು. ಪಂದ್ಯದುದ್ದಕ್ಕೂ ಚೆಂಡು ಬೌನ್ಸ್‌ ಆಗುತ್ತಿದ್ದುದು ಬ್ಯಾಟರ್‌ಗಳನ್ನು ತೊಂದರೆಗೊಳಿಸಿತ್ತು.

ಮುಂದೆ, ಜೂನ್ 9ರಂದು ಇದೇ ನಸ್ಸೌ ಕೌಂಟಿ ಮೈದಾನದಲ್ಲಿ ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ತಂಡಗಳ ನಡುವಿನ ರೋಚಕ ಪಂದ್ಯ ನಡೆಯಲಿದೆ. ಈ ಮಹತ್ವದ ಪಂದ್ಯಕ್ಕೂ ಮುಂಚಿತವಾಗಿ ಐಸಿಸಿ ತನ್ನ ಹೇಳಿಕೆಯಲ್ಲಿ ಪಿಚ್‌ ಸುಧಾರಣೆಯ ಅಗತ್ಯವನ್ನು ಒಪ್ಪಿಕೊಂಡಿದೆ. ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಉಳಿದ ಆರು ಪಂದ್ಯಗಳಿಗೆ ಆಟದ ಪರಿಸ್ಥಿತಿಗಳನ್ನು ಹೆಚ್ಚಿಸಲು ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಕೂಡಾ ಕಡಿಮೆ ಸ್ಕೋರ್ ಪಂದ್ಯವಾಗಿ ಬದಲಾಗಬಹುದು ಎಂಬ ಆತಂಕಗಳು ಎದ್ದಿದ್ದವು. ಅಲ್ಲದೆ ಟಾಸ್ ಗೆದ್ದು ಚೇಸಿಂಗ್‌ ನಡೆಸುವ ತಂಡವೇ ಪಂದ್ಯದ ಲಾಭ ಪಡೆಯುತ್ತದೆ ಎಂಬ ಚರ್ಚೆ ಕೂಡಾ ನಡೆದಿದೆ.

“ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಇದುವರೆಗೆ ಬಳಸಲಾದ ಪಿಚ್‌ಗಳು, ನಾವು ಬಯಸಿದಷ್ಟು ಸ್ಥಿರವಾಗಿ ಆಡಿಲ್ಲ ಎಂಬುದನ್ನು ಐಸಿಸಿ ಗುರುತಿಸಿದೆ. ಪರಿಸ್ಥಿತಿಯನ್ನು ಸರಿಪಡಿಸಲು ಮತ್ತು ಉಳಿದ ಪಂದ್ಯಗಳಿಗಿಂತ ಮುಂಚೆ ಸಾಧ್ಯವಾದಷ್ಟು ಉತ್ತಮ ಪಿಚ್‌ ನೀಡಲು ಮೈದಾನದ ಸಿಬ್ಬಂದಿ ತಂಡವು ಕೊನೆಯ ಪಂದ್ಯದ ಮುಕ್ತಾಯದಿಂದ ನಿರಂತರವಾಗಿ ಶ್ರಮಿಸುತ್ತಿದೆ” ಎಂದು ಐಸಿಸಿ ಹೇಳಿದೆ.

ರೋಹಿತ್‌ಗೆ ಗಾಯ

ಇದೇ ಪಿಚ್‌ನಲ್ಲಿ ನಡೆದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಬ್ಯಾಟಿಂಗ್ ಮಾಡುವಾಗ ಭಾರತ ತಂಡದ ನಾಯಕ ರೋಹಿತ್ ಶರ್ಮಾಗೆ ಗಾಯವಾಗಿತ್ತು. ಬ್ಯಾಟಿಂಗ್‌ ವೇಳೆ ತೋಳಿಗೆ ಪೆಟ್ಟಾಗಿ ಅವರು ಮೈದಾನದಿಂದ ಹೊರನಡೆದರು. ಪಿಚ್‌ ಕುರಿತು ದಿಗ್ಭ್ರಮೆಗೊಂಡ ರೋಹಿತ್, ಪಾಕಿಸ್ತಾನ ವಿರುದ್ಧ ಏನನ್ನು ನಿರೀಕ್ಷಿಸಬಹುದು ಎಂಬುದು ತನಗೆ ತಿಳಿದಿಲ್ಲ ಎಂದು ಒಪ್ಪಿಕೊಂಡರು.

ಭಾರತ ತಂಡದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಕೂಡಾ ಪಿಚ್‌ ಕುರಿತು ಭವಿಷ್ಯ ನುಡಿಯಲು ಸಾಧ್ಯವಾಗಲಿಲ್ಲ. “ಬ್ಯಾಟಿಂಗ್ಗೆ ಸಂಬಂಧಿಸಿದಂತೆ ಇದು ಸವಾಲಿನ ವಿಕೆಟ್. ನಾವು ಅದನ್ನು ಎದುರಿಸಲು ಮಾರ್ಗಗಳನ್ನು ಕಂಡುಹಿಡಿಯಬೇಕಾಗಿದೆ,” ಎಂದು ರಾಥೋರ್ ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Whats_app_banner