Hasan Raza: ಐಸಿಸಿ ಮತ್ತು ಬಿಸಿಸಿಐ ಭಾರತದ ಬೌಲರ್ಸ್ಗೆ ಬೇರೆ ಬಾಲ್ ಕೊಡ್ತಿದೆ; ಪಾಕ್ ಮಾಜಿ ಕ್ರಿಕೆಟಿಗ ಆರೋಪ
ICC ODI World Cup 2023: ಐಸಿಸಿ ಮತ್ತು ಬಿಸಿಸಿಐ ಭಾರತದ ಬೌಲರ್ಗಳಿಗೆ ವಿಶೇಷ ಬಾಲ್ಗಳನ್ನು ನೀಡುತ್ತಿದೆ. ಇದೇ ಕಾರಣಕ್ಕಾಗಿ ಅವರು ಅದ್ಭುತ ಪ್ರದರ್ಶನ ನೀಡಲು ಸಾಧ್ಯವಾಗುತ್ತಿದೆ ಎಂದು ಪಾಕ್ ಮಾಜಿ ಕ್ರಿಕೆಟಿಗ ಹಸನ್ ರಾಝಾ ಆರೋಪಿಸಿದ್ದಾರೆ.
ಹಾಲಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ (ICC ODI World Cup 2023) ಟೀಮ್ ಇಂಡಿಯಾ (Team India) ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಶ್ರೀಲಂಕಾ ವಿರುದ್ಧ 302 ರನ್ಗಳ ಭರ್ಜರಿ ಗೆಲುವು ದಾಖಲಿಸಿದ ಭಾರತ (India vs Sri Lanka), ಸತತ 7 ಗೆಲುವುಗಳಿಂದ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಈ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.
ಅರ್ಥ ಹೀನ ಹೇಳಿಕೆ
ಐಸಿಸಿ ಮತ್ತು ಬಿಸಿಸಿಐ ಭಾರತದ ಬೌಲರ್ಗಳಿಗೆ ವಿಶೇಷ ಬಾಲ್ಗಳನ್ನು ನೀಡುತ್ತಿದೆ. ಇದೇ ಕಾರಣಕ್ಕಾಗಿ ಅವರು ಅದ್ಭುತ ಪ್ರದರ್ಶನ ನೀಡಲು ಸಾಧ್ಯವಾಗುತ್ತಿದೆ ಎಂದು ಪಾಕ್ ಮಾಜಿ ಕ್ರಿಕೆಟಿಗ ಹಸನ್ ರಾಝಾ ಆರೋಪಿಸಿದ್ದಾರೆ. ಇದು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಅಲ್ಲದೆ, ಭಾರಿ ಟೀಕೆಗೂ ಗುರಿಯಾಗಿದ್ದಾರೆ.
ಪ್ರಸಕ್ತ ಆವೃತ್ತಿಯಲ್ಲಿ ಪಾಕಿಸ್ತಾನ ತಂಡ ನೀಡುತ್ತಿರುವ ಕಳಪೆ ಪ್ರದರ್ಶನ ಕುರಿತ ಚರ್ಚೆಗಳಲ್ಲಿ ಪಾಕ್ ದಿಗ್ಗಜರು ಭಾಗವಹಿಸುತ್ತಿದ್ದಾರೆ. ವಾಸಿಂ ಅಕ್ರಮ್ ಮತ್ತು ಮಿಸ್ಬಾ ಉಲ್ ಹಕ್ರಂಥ ಆಟಗಾರರು ಪಾಕ್ ಕಳಪೆ ಪ್ರದರ್ಶನವನ್ನು ಟೀಕಿಸುತ್ತಿದ್ದಾರೆ. ಆದರೆ ಹಸನ್ ಆಧಾರರಹಿತ, ಅರ್ಥಹೀನ ಹೇಳಿಕೆ ನೀಡಿ ದೊಡ್ಡ ಆರೋಪ ಮಾಡಿದ್ದಾರೆ.
ಪಾಕಿಸ್ತಾನದ ಸುದ್ದಿ ವಾಹಿನಿ ಎಬಿಎನ್ನಲ್ಲಿ ರಾಝಾ, ವಿಶ್ಲೇಷಕರಾಗಿ ಭಾಗವಹಿಸಿದ್ದರು. ನವೆಂಬರ್ 2ರಂದು ಶ್ರೀಲಂಕಾವನ್ನು 55 ರನ್ಗಳಿಗೆ ಧ್ವಂಸಗೊಳಿಸಿ ಗೆಲುವು ದಾಖಲಿಸಿದ ನಂತರ ಆ್ಯಂಕರ್, ಭಾರತದ ಬೌಲರ್ಗಳಿಗೆ ಸ್ಪೆಷಲ್ ಬಾಲ್ಗಳನ್ನು ನೀಡುತ್ತಿದ್ದಾರಾ? ಇದರಿಂದ ಭಾರತದ ಬೌಲರ್ಸ್ ಸಕ್ಸಸ್ ಆಗುತ್ತಿದ್ದಾರಾ ಎಂದು ಪ್ರಶ್ನಿಸಿದರು.
‘ವಿಶೇಷ ಚೆಂಡು ನೀಡುವ ಅನುಮಾನ ಇದೆ’
ತಕ್ಷಣವೇ ಇದಕ್ಕೆ ಉತ್ತರಿಸಿದ ರಾಝಾ, ಭಾರತದ ಬೌಲರ್ಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಅವರ ಸ್ವಿಂಗ್ ಬೌಲಿಂಗ್ ಗಮನಿಸಿದರೆ, ಅವರಿಗೆ ವಿಶೇಷ ಚೆಂಡುಗಳನ್ನು ಒದಗಿಸುತ್ತಿರುವ ಸಾಧ್ಯತೆ ಇದೆ. ಈ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ ಎಂದು ಆರೋಪಿಸಿದರು. ಇದೊಂದು ಹಾಸ್ಯಾಸ್ಪದ ಹೇಳಿಕೆ ಎನ್ನುತ್ತಿದ್ದಾರೆ ಕ್ರಿಕೆಟ್ ತಜ್ಞರು.
ತನಿಖೆಯಾಗಬೇಕು ಎಂದ ರಾಝಾ
ಭಾರತದ ಪಂದ್ಯವಿದ್ದಾಗ ಚೆಂಡು ಬದಲಾಗುವು ಸಾಧ್ಯವಾಗುವ ಸಾಧ್ಯತೆ ಇದೆ. ಐಸಿಸಿ ಮತ್ತು ಬಿಸಿಸಿಐನಿಂದ ಭಾರತಕ್ಕೆ ವಿಭಿನ್ನ ಚೆಂಡು ಸಿಗುತ್ತಿರುವ ಸಾಧ್ಯತೆ ಇದೆ. ಅಂಪೈರ್ಗಳು ಕೂಡ ಟೀಮ್ ಇಂಡಿಯಾ ಪರವೇ ಇದ್ದಾರೆ. ಕೆಲವು ಡಿಆರ್ಎಸ್ಗಳು ಕೂಡ ಅತಿಥೇಯ ರಾಷ್ಟ್ರದ ಪರವೇ ಆಗುತ್ತಿವೆ.ಎಲ್ಲವೂ ಅವರಿಗೆ ಅನುಕೂಲ ಮಾಡಿಕೊಟ್ಟಿವೆ. ಇದು ತನಿಖೆಯಾಗಬೇಕಾದ ವಿಷಯ ಎಂದು ಕೇಳಿದ್ದಾರೆ.
‘ಪರಿಶೀಲನೆ ಮಾಡಬೇಕು’
ಪಾಕಿಸ್ತಾನ ಮತ್ತು ಭಾರತ ಪಂದ್ಯಗಳಲ್ಲಿ ಬಾಲ್ಗಳನ್ನು ಹೇಗೆ ಪರಿಶೀಲನೆ ಮಾಡಲಾಗುತ್ತದೆಯೋ ಹಾಗಯೇ ಎಲ್ಲಾ ಪಂದ್ಯಗಳಲ್ಲೂ ಪರಿಶೀಲಿಸಬೇಕು. ಐಸಿಸಿ ಮತ್ತು ಬಿಸಿಸಿಐ ಭಾರತದ ಪಂದ್ಯಗಳಿಗೆ ವಿಭಿನ್ನ ಚೆಂಡುಗಳನ್ನು ನೀಡಲಾಗುತ್ತದೆ. ಅಂಪೈರ್ಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಹಸನ್ ರಾಝಾ ಅವರು ಪಾಕ್ ಪರ 14 ವರ್ಷ 227 ದಿನಗಳಲ್ಲಿ ಪಾಕಿಸ್ತಾನ ಪರ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಡೆಬ್ಯೂ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂದು ಪಾಕಿಸ್ತಾನ ಹೇಳಿತ್ತು. ಆದರೆ ಇದು ಸುಳ್ಳು ಎಂದು ಬಹಿರಂಗವಾಯಿತು. ಅವರು ಪಾಕ್ ಪರ 7 ಟೆಸ್ಟ್, 16 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ.