ಚಾಂಪಿಯನ್ಸ್ ಟ್ರೋಫಿ: ಭಾರತದ ಪಂದ್ಯಗಳ ಟಿಕೆಟ್ ರಿಲೀಸ್ ತಡ; ಫೈನಲ್ ಪಂದ್ಯದ ಟಿಕೆಟ್ 4 ದಿನ ಮುಂಚಿತವಾಗಿ ಲಭ್ಯ
ಕನ್ನಡ ಸುದ್ದಿ  /  ಕ್ರಿಕೆಟ್  /  ಚಾಂಪಿಯನ್ಸ್ ಟ್ರೋಫಿ: ಭಾರತದ ಪಂದ್ಯಗಳ ಟಿಕೆಟ್ ರಿಲೀಸ್ ತಡ; ಫೈನಲ್ ಪಂದ್ಯದ ಟಿಕೆಟ್ 4 ದಿನ ಮುಂಚಿತವಾಗಿ ಲಭ್ಯ

ಚಾಂಪಿಯನ್ಸ್ ಟ್ರೋಫಿ: ಭಾರತದ ಪಂದ್ಯಗಳ ಟಿಕೆಟ್ ರಿಲೀಸ್ ತಡ; ಫೈನಲ್ ಪಂದ್ಯದ ಟಿಕೆಟ್ 4 ದಿನ ಮುಂಚಿತವಾಗಿ ಲಭ್ಯ

ICC Champions Trophy: ಪಾಕಿಸ್ತಾನದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳ ಟಿಕೆಟ್‌ಗಳನ್ನು ಜನವರಿ 28ರಂದು ಮಾರಾಟಕ್ಕೆ ಬಿಡಲಾಗಿದೆ. ಆದರೆ ದುಬೈನಲ್ಲಿ ನಡೆಯಲಿರುವ ಭಾರತದ ಪಂದ್ಯಗಳ ಟಿಕೆಟ್‌ ರಿಲೀಸ್‌ ತಡವಾಗಲಿದೆ.

ಚಾಂಪಿಯನ್ಸ್ ಟ್ರೋಫಿ: ಭಾರತದ ಪಂದ್ಯಗಳ ಟಿಕೆಟ್ ರಿಲೀಸ್ ತಡ (File)
ಚಾಂಪಿಯನ್ಸ್ ಟ್ರೋಫಿ: ಭಾರತದ ಪಂದ್ಯಗಳ ಟಿಕೆಟ್ ರಿಲೀಸ್ ತಡ (File) (AFP)

ಪಾಕಿಸ್ತಾನದ ಆತಿಥ್ಯಲ್ಲಿ ನಡೆಯಲಿರುವ 2025ರ ಚಾಂಪಿಯನ್ಸ್ ಟ್ರೋಫಿja ಪಂದ್ಯಗಳ ಟಿಕೆಟ್‌ಗಳು ಇಂದಿನಿಂದ (ಜನವರಿ 28 ಮಂಗಳವಾರ) ಮಾರಾಟವಾಗಲಿವೆ. ಆದರೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ನಡೆಯಲಿರುವ ಭಾರತದ ಪಂದ್ಯಗಳ ಟಿಕೆಟ್‌ಗಳನ್ನು ಐಸಿಸಿ ಇನ್ನೂ ಮಾರಾಟಕ್ಕೆ ಬಿಟ್ಟಿಲ್ಲ. ಅಭಿಮಾನಿಗಳು ಟೀಮ್‌ ಇಂಡಿಯಾ ಪಂದ್ಯಗಳ ಟೆಕೆಟ್‌ಗಳನ್ನು ಯಾವಾಗ ಖರೀದಿಸಬಹುದು ಎಂಬುದರ ಬಗ್ಗೆ ಕ್ರಿಕೆಟ್‌ ಮಂಡಳಿ ಮಾಹಿತಿ ನೀಡಿಲ್ಲ.

ಇದೇ ವೇಳೆ, ದುಬೈನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯ ಮುಗಿದ ನಂತರವೇ ಫೈನಲ್ ಪಂದ್ಯದ ಟಿಕೆಟ್‌ಗಳು ಲಭ್ಯವಾಗಲಿವೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಹೇಳಿದೆ.

“ಪಾಕಿಸ್ತಾನದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳ ಟಿಕೆಟ್‌ಗಳು ಜನವರಿ 28ರ ಮಂಗಳವಾರದಿಂದ ಮಾರಾಟಕ್ಕೆ ಲಭ್ಯವಾಗಲಿದೆ” ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಎರಡನೇ ಸೆಮಿಫೈನಲ್ ಸೇರಿದಂತೆ ಪಾಕಿಸ್ತಾನದ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ನಡೆಯಲಿರುವ 10 ಪಂದ್ಯಗಳ ಟಿಕೆಟ್ ಖರೀದಿಸಲು ಅಭಿಮಾನಿಗಳು ನೋಂದಾವಣೆ ಮಾಡಿಸಿಕೊಳ್ಳಬಹುದು ಎಂದು ಐಸಿಸಿ ಹೇಳಿದೆ.

ಬಹುನಿರೀಕ್ಷಿತ ಭಾರತದ ಪಂದ್ಯಗಳ ಟಿಕೆಟ್‌ಗಳು ಸದ್ಯ ಖರೀದಿಗೆ ಲಭ್ಯವಿಲ್ಲ. ಮುಂಬರುವ ದಿನಗಳಲ್ಲಿ ಭಾರತದ ಪಂದ್ಯಗಳ ಟಿಕೆಟ್‌ ಕುರಿತ ಮಾಹಿತಿ ಲಭ್ಯವಾಗಲಿದೆ. ಭಾರತದ ಎಲ್ಲಾ ಪಂದ್ಯಗಳು ಯುಎಇಯಲ್ಲಿ ನಡೆಯಲಿದೆ. ಒಂದು ವೇಳೆ ತಂಡ ಸೆಮಿಫೈನಲ್‌ ಪ್ರವೇಶಿಸಿದರೆ, ಆ ಪಂದ್ಯ ಕೂಡಾ ದುಬೈನಲ್ಲೇ ನಡೆಯಲಿದೆ.

ಒಂದು ಸೆಮಿಫೈನಲ್‌ ಪಂದ್ಯ ದುಬೈನಲ್ಲಿ

“ಭಾರತ ತಂಡ ಆಡುವ ಯುಎಇ ಪಂದ್ಯಗಳ ಟಿಕೆಟ್ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು” ಎಂದು ಐಸಿಸಿ ತಿಳಿಸಿದೆ. ಭಾರತ ತಂಡವು ನಾಕೌಟ್‌ ಹಂತಕ್ಕೆ ಪ್ರವೇಶಿಸುತ್ತೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ, ಎರಡು ಪಂದ್ಯಗಳಲ್ಲಿ ಒಂದು ಪಂದ್ಯ ದುಬೈನಲ್ಲಿ ನಡೆಯಲಿದೆ. ಸೆಮೀಸ್‌ನಲ್ಲಿ ಭಾರತ ಗೆದ್ದರೆ ಫೈನಲ್ ಪಂದ್ಯ ಯುಎಇಯಲ್ಲಿ ನಡೆಯಲಿದೆ. ಇಲ್ಲವಾದರೆ ಲಾಹೋರ್‌ ಮೈದಾನವು ನಿರ್ಣಾಯಕ ಮುಖಾಮುಖಿಗೆ ಆತಿಥ್ಯ ವಹಿಸಲಿದೆ.

ಇನ್ನಷ್ಟೇ ಸಿದ್ಧವಾಗಬೇಕಿದೆ ಸ್ಟೇಡಿಯಂ

ಫೆಬ್ರುವರಿ 19ರಿಂದ ಚಾಂಪಿಯನ್ಸ್‌ ಟ್ರೋಫಿ ನಡೆಯುತ್ತಿದ್ದು, ಕರಾಚಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಉದ್ಘಾಟನಾ ಪಂದ್ಯ ಆಡಲಿದೆ. ಅದಕ್ಕೂ ಮುನ್ನ ದೇಶದಲ್ಲಿನ ಕ್ರೀಡಾಂಗಣಗಳನ್ನು ಸಿದ್ಧಪಡಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೆಣಗಾಡುತ್ತಿದೆ. ರಾವಲ್ಪಿಂಡಿ ಮತ್ತು ಲಾಹೋರ್‌ ಕ್ರೀಡಾಂಗಣಗಳ ಜೊತೆಗೆ ಕರಾಚಿ ನಗರದ ಕ್ರೀಡಾಂಗಣದ ಪುನರಾಭಿವೃದ್ಧಿ ಕಾರ್ಯ ನಡೆಯುತ್ತಿದ್ದು ಇನ್ನೂ ಪೂರ್ಣಗೊಂಡಿಲ್ಲ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಲಾಹೋರ್ ಮತ್ತು ಕರಾಚಿಯಲ್ಲಿ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವೆ ತ್ರಿಕೋನ ಏಕದಿನ ಸರಣಿ ಕೂಡಾ ನಡೆಯಲಿದೆ. ಅದಕ್ಕೂ ಮುನ್ನ ಸ್ಟೇಡಿಯಂ ಸಿದ್ದಗೊಳ್ಳಬೇಕಿದೆ.

Whats_app_banner