2024ರ ಟಿ20 ವಿಶ್ವಕಪ್‌ಗೆ ಯುಎಸ್‌ಎ ಸಹ-ಆತಿಥ್ಯ; ಅಮೆರಿಕದ ಮೂರು ನಗರಗಳಲ್ಲಿ ಪಂದ್ಯ ಆಯೋಜನೆ
ಕನ್ನಡ ಸುದ್ದಿ  /  ಕ್ರಿಕೆಟ್  /  2024ರ ಟಿ20 ವಿಶ್ವಕಪ್‌ಗೆ ಯುಎಸ್‌ಎ ಸಹ-ಆತಿಥ್ಯ; ಅಮೆರಿಕದ ಮೂರು ನಗರಗಳಲ್ಲಿ ಪಂದ್ಯ ಆಯೋಜನೆ

2024ರ ಟಿ20 ವಿಶ್ವಕಪ್‌ಗೆ ಯುಎಸ್‌ಎ ಸಹ-ಆತಿಥ್ಯ; ಅಮೆರಿಕದ ಮೂರು ನಗರಗಳಲ್ಲಿ ಪಂದ್ಯ ಆಯೋಜನೆ

2024 T20 World Cup: ಮುಂದಿನ ಟಿ20 ವಿಶ್ವಕಪ್‌ ಅನ್ನು ಸಪ್ತಸಾಗರದಾಚೆ ನಡೆಸಲು ಐಸಿಸಿ ಮುಂದಾಗಿದೆ. ಅಮೆರಿಕದ ಮೂರು ನಗರಗಳನ್ನು ಪಂದ್ಯಗಳ ಆಯೋಜನೆಗೆ ಆಯ್ಕೆ ಮಾಡಲಾಗಿದೆ.

ICC ಪುರುಷರ T20 ವಿಶ್ವಕಪ್ 2024 (ಸಾಂದರ್ಭಿಕ ಚಿತ್ರ)
ICC ಪುರುಷರ T20 ವಿಶ್ವಕಪ್ 2024 (ಸಾಂದರ್ಭಿಕ ಚಿತ್ರ) (Getty Images)

2024ರಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ (ICC Men’s T20 World Cup 2024) ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಸಹ ಆತಿಥ್ಯ ವಹಿಸಲಿದೆ. ಬುಧವಾರ ಈ ಕುರಿತಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಖಚಿತಪಡಿಸಿದೆ. ಯುಎಸ್ಎಯ ಮೂರು ಪ್ರಮುಖ ನಗರಗಳು ಪಂದ್ಯಾವಳಿಯ ಪಂದ್ಯಗಳಿಗೆ ವೇದಿಕೆಯಾಗಲಿದೆ ಎಂದು ಐಸಿಸಿ ಘೋಷಿಸಿದೆ.

ಅಮೆರಿಕದ ಪ್ರಮುಖ ನಗರಗಳಾದ ಡಲ್ಲಾಸ್, ಫ್ಲೋರಿಡಾ ಮತ್ತು ನ್ಯೂಯಾರ್ಕ್ ನಗರಗಳಲ್ಲಿ ಚುಟುಕು ಕ್ರಿಕೆಟ್‌ ಕಲರವ ಮೇಳೈಸಲಿದೆ. ಬ್ಲಾಕ್‌ಬಸ್ಟರ್ ಪಂದ್ಯಾವಳಿಗಾಗಿ ಅಮೆರಿಕದ ಕ್ರಿಕೆಟ್‌ ಅಭಿಮಾನಿಗಳು ಕಾಯುತ್ತಿದ್ದಾರೆ. ಡಲ್ಲಾಸ್‌ನ ಗ್ರ್ಯಾಂಡ್ ಪ್ರೈರೀ, ಫ್ಲೋರಿಡಾದ ಬ್ರೋವರ್ಡ್ ಕೌಂಟಿ ಮತ್ತು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಮೈದಾನಗಳು ಪಂದ್ಯಕ್ಕೆ ಆತಿಥ್ಯ ವಹಿಸಲಿವೆ.

“20 ತಂಡಗಳು ಸ್ಪರ್ಧಿಸುವ ಅತಿದೊಡ್ಡ ಐಸಿಸಿ ಪುರುಷರ ಟಿ20 ವಿಶ್ವಕಪ್‌ನ ಕೆಲವು ಪಂದ್ಯಗಳನ್ನು ಆಯೋಜಿಸುವ ಅಮೆರಿಕದ ಮೂರು ಸ್ಥಳಗಳನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಯುಎಸ್‌ಎ ಒಂದು ಆಯಕಟ್ಟಿನ ಪ್ರಮುಖ ಮಾರುಕಟ್ಟೆಯಾಗಿದೆ,” ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಜೆಫ್ ಅಲ್ಲಾರ್ಡಿಸ್ ಹೇಳಿದರು.

ಮುಂಬರುವ ಕ್ರಿಕೆಟ್ ಸಂಭ್ರಮದ ಯಶಸ್ಸಿಗೆ ಅಗತ್ಯ ಸೌಲಭ್ಯಗಳನ್ನು ಹೆಚ್ಚಿಸಲು ಮಾಡ್ಯುಲರ್ ಸ್ಟೇಡಿಯಂ ತಂತ್ರಜ್ಞಾನವನ್ನು ಬಳಸಲಾಗುವುದು ಎಂದು ಅಲ್ಲಾರ್ಡಿಸ್ ತಿಳಿಸಿದ್ದಾರೆ. ಆಸನ ಮತ್ತು ಮಾಧ್ಯಮ ಮತ್ತು ಪ್ರೀಮಿಯಂ ಆತಿಥ್ಯ ಪ್ರದೇಶಗಳನ್ನು ವಿಸ್ತರಿಸಲು ಕ್ರೀಡಾಂಗಣಗಳ ಗಾತ್ರದಲ್ಲಿ ಹೆಚ್ಚಿಸಲಾಗುವುದು ಎಂದು ಅವರು ಹೇಳಿದ್ದಾರೆ.

“ಈ ಹಿಂದೆ ಐಸಿಸಿ ಜಾಗತಿಕ ಪಂದ್ಯಗಳನ್ನು ಆಯೋಜಿಸದಿರುವ ಸ್ಥಳದಲ್ಲಿ ವಿಶ್ವ ದರ್ಜೆಯ ಕ್ರಿಕೆಟ್ ಪ್ರಸ್ತುತಪಡಿಸಲು ಮಾಡ್ಯುಲರ್ ಸ್ಟೇಡಿಯಂ ತಂತ್ರಜ್ಞಾನ ಬಳಸುವ ಅವಕಾಶದ ಬಗ್ಗೆ ನಾವು ತುಂಬಾ ಉತ್ಸುಕರಾಗಿದ್ದೇವೆ. ಇದು ಯುಎಸ್‌ಎ ಕ್ರಿಕೆಟ್ ಅಭಿಮಾನಿಗಳಿಗೆ ತಮ್ಮ ಮನೆ ಬಾಗಿಲಿನಲ್ಲಿ ವಿಶ್ವದ ಅತ್ಯುತ್ತಮ ಕ್ರಿಕೆಟ್‌ ವೀಕ್ಷಿಸುವ ಅವಕಾಶ ನೀಡುತ್ತದೆ” ಎಂದು ಅಲ್ಲಾರ್ಡಿಸ್ ವಿವರಿಸಿದ್ದಾರೆ.

ಟಿ20 ವಿಶ್ವಕಪ್‌ ಪಂದ್ಯಾವಳಿಯ ಈ ಹಿಂದಿನ ಆವೃತ್ತಿಯನ್ನು ಆಸ್ಟ್ರೇಲಿಯಾ ಆಯೋಜಿಸಿತ್ತು. 2022ರಲ್ಲಿ ನಡೆದ ಟೂರ್ನಿಯಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ಐದು ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ 49 ಎಸೆತಗಳಲ್ಲಿ 52 ರನ್ ಗಳಿಸಿ ತಂಡಕ್ಕೆ 138 ರನ್‌ಗಳ ಗುರಿ ತಲುಪಲು ನೆರವಾದರು. ಸ್ಯಾಮ್ ಕರಾನ್ ಪಂದ್ಯಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪುರುಷರ ಟಿ20 ವಿಶ್ವಕಪ್‌ನ ಇತಿಹಾಸದಲ್ಲಿ ಇಂಗ್ಲೆಂಡ್‌ಗೆ ಇದು ಎರಡನೇ ಪ್ರಶಸ್ತಿ. ಇದಕ್ಕೂ ಮೊದಲು 2010ರ ಆವೃತ್ತಿಯಲ್ಲಿ ಇಂಗ್ಲೆಂಡ್ ವಿಶ್ವಕಪ್‌ ಗೆದ್ದಿತ್ತು.

Whats_app_banner