ಇಂಡೋ-ಕಿವೀಸ್, ಆಸೀಸ್-ಆಫ್ರಿಕಾ ಸೆಮೀಸ್ ಪಂದ್ಯಗಳು ಎಲ್ಲಿ ಯಾವಾಗ ಎಷ್ಟೊತ್ತಿಗೆ? ಇಲ್ಲಿದೆ ವಿವರ
ICC Cricket World Cup 2023: ಏಕದಿನ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ನಲ್ಲಿ ಭಾರತ-ನ್ಯೂಜಿಲೆಂಡ್, 2ನೇ ಸೆಮೀಸ್ನಲ್ಲಿ ಆಸ್ಟ್ರೇಲಿಯಾ-ಸೌತ್ ಆಫ್ರಿಕಾ ತಂಡಗಳು ಸೆಣಸಾಟ ನಡೆಸಲಿವೆ. ಹಾಗಾಗಿ ಸೆಮಿಫೈನಲ್ ಪಂದ್ಯಗಳು ಯಾವಾಗ, ಎಲ್ಲಿ ಎಷ್ಟೊತ್ತಿಗೆ ಎಂಬ ವಿವರವನ್ನು ಈ ಮುಂದೆ ನೋಡೋಣ.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಿಂದ (ICC ODI World Cup 2023) ಪಾಕಿಸ್ತಾನ ಕ್ರಿಕೆಟ್ ತಂಡವು (Pakistan Cricket Team) ಅಧಿಕೃತವಾಗಿ ಹೊರಬಿದ್ದಿದೆ. ಇಂಗ್ಲೆಂಡ್ ಎದುರಿನ ಪಂದ್ಯದ ನಡುವೆಯೇ ಬಾಬರ್ ಅಜಮ್ ಬಳಗ (England vs Pakistan) ಟೂರ್ನಿಯಿಂದ ಹೊರ ಬಿತ್ತು. ಹಾಗಾಗಿ ನ್ಯೂಜಿಲೆಂಡ್ 4ನೇ ತಂಡವಾಗಿ ವಿಶ್ವಕಪ್ ಸೆಮಿಫೈನಲ್ಗೆ ಅರ್ಹತೆ ಪಡೆಯಿತು. ಕಿವೀಸ್ ಸತತ 5ನೇ ಬಾರಿಗೆ ಸೆಮೀಸ್ ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಆದರೆ, ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ.
6.4 ಓವರ್ಗಳಲ್ಲಿ ಗುರಿ ಬೆನ್ನಟ್ಟಬೇಕಿತ್ತು!
ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಇಂಗ್ಲೆಂಡ್, ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 337 ರನ್ ಗಳಿಸಿತು. ಆದರೆ ನೆಟ್ ರನ್ ರೇಟ್ನಲ್ಲಿ ನ್ಯೂಜಿಲೆಂಡ್ ಹಿಂದಿಕ್ಕಲು 6.4 ಓವರ್ಗಳಲ್ಲಿ ಈ ಗುರಿ ಬೆನ್ನಟ್ಟಬೇಕಿತ್ತು. ಆದರೆ ಈ ಅಸಾಧ್ಯವಾದ ಗುರಿಯನ್ನು 40 ಎಸೆತಗಳಲ್ಲಿ ಬೆನ್ನಟ್ಟಲು ಬಾಬರ್ ಬಳಗಕ್ಕೆ ಸಾಧ್ಯವಾಗಿಲ್ಲ. ಹಾಗಾಗಿ ಪಾಕ್ ಸೆಮೀಸ್ ಕನಸು ಭಗ್ನಗೊಂಡರೆ, ಕಿವೀಸ್ ಅಧಿಕೃತವಾಗಿ ಸೆಮೀಸ್ಗೆ ಲಗ್ಗೆ ಇಟ್ಟಿತು.
ಭಾರತ-ನ್ಯೂಜಿಲೆಂಡ್ ನಡುವೆ ಸೆಮೀಸ್ ಫೈಟ್
ವಿಶ್ವಕಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಮತ್ತು 4ನೇ ಸ್ಥಾನ ಪಡೆದಿರುವ ತಂಡಗಳು ಮೊದಲ ಸೆಮಿಫೈನಲ್ನಲ್ಲಿ ಸೆಣಸಾಟ ನಡೆಸಲಿವೆ. ಅದರಂತೆ ಮೊದಲ ಸೆಮಿಫೈನಲ್ನಲ್ಲಿ ಭಾರತ - ನ್ಯೂಜಿಲೆಂಡ್ (India vs New Zealand) ಫೈನಲ್ ಟಿಕೆಟ್ಗಾಗಿ ಕಾದಾಟ ನಡೆಸಲಿವೆ. ನವೆಂಬರ್ 15ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಈ ಹೈವೋಲ್ಟೇಜ್ ಕದನ ಜರುಗಲಿದೆ.
2ನೇ ಸೆಮೀಸ್ನಲ್ಲಿ ಆಸೀಸ್-ಆಫ್ರಿಕಾ ಹಣಾಹಣಿ
ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ 2 ಮತ್ತು 3ನೇ ಸ್ಥಾನದಲ್ಲಿರುವ ತಂಡಗಳು ಕಾದಾಟ ನಡೆಸಲಿವೆ. ಅದರಂತೆ 2ನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ಮತ್ತು 3ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ತಂಡಗಳು (South Africa vs Australia) ಫೈನಲ್ ಪ್ರವೇಶಿಸಲು ಹೋರಾಟ ನಡೆಸಲಿವೆ. ಈ ಹೈವೋಲ್ಟೇಜ್ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಜರುಗಲಿದೆ. ಮಧ್ಯಾಹ್ನ 2 ಗಂಟೆಗೆ ನೇರ ಪ್ರಸಾರ ಇರಲಿದ್ದು, ಟಾಸ್ ಪ್ರಕ್ರಿಯೆ 1.30ಕ್ಕೆ ನಡೆಯಲಿದೆ.
2019ರ ವಿಶ್ವಕಪ್ ನಂತರ ಮತ್ತೆ ಮುಖಾಮುಖಿ
2019ರಲ್ಲಿ ಭಾರತದ ಫೈನಲ್ ಕನಸಿಗೆ ಅಡ್ಡಿಯಾಗಿದ್ದ ನ್ಯೂಜಿಲೆಂಡ್ ತಂಡವೇ ಈ ಬಾರಿಯೂ ಸೆಮಿಫೈನಲ್ನಲ್ಲಿ ಎದುರಾಗಿದೆ. ಅಂದು ಇಂಗ್ಲೆಂಡ್ನ ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಕಿವೀಸ್ 239 ರನ್ ಗಳಿಸಿತ್ತು. ಆದರೆ ಭಾರತ 221 ರನ್ ಗಳಿಸಿ 18 ರನ್ ಗಳಿಂದ ಶರಣಾಗಿತ್ತು. ಇದೀಗ ಭಾರತ ಅಂದಿನ ಸೇಡು ತೀರಿಸಿಕೊಳ್ಳಲು ಭರ್ಜರಿ ತಯಾರಿ ನಡೆಸಿದೆ.
ಯಾವ ತಂಡ ಎಷ್ಟು ಬಾರಿ ವಿಶ್ವಕಪ್ ಗೆದ್ದಿವೆ?
ಸದ್ಯ ಸೆಮಿಫೈನಲ್ ಪ್ರವೇಶಿಸಿರುವ ನಾಲ್ಕು ತಂಡಗಳ ಪೈಕಿ ಯಾವ ತಂಡ ಎಷ್ಟು ಬಾರಿ ವಿಶ್ವಕಪ್ ಗೆದ್ದಿವೆ ಎಂಬುದನ್ನು ನೋಡುವುದಾದರೆ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಒಂದು ಬಾರಿಯೂ ಏಕದಿನ ವಿಶ್ವಕಪ್ ಗೆದ್ದಿಲ್ಲ. 2019ರ ವಿಶ್ವಕಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ಚೊಚ್ಚಲ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ವಿಫಲವಾಗಿತ್ತು. ಮತ್ತೊಂದೆಡೆ ಸೌತ್ ಆಫ್ರಿಕಾ ಹಲವು ಸೆಮೀಸ್ ಪ್ರವೇಶಿಸಿದರೂ ಫೈನಲ್ಗೇರುತ್ತಿಲ್ಲ.
ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ ಟ್ರೋಫಿ ಗೆದ್ದ ತಂಡ ಹೆಗ್ಗಳಿಕೆಗೆ ಆಸ್ಟ್ರೇಲಿಯಾ ಪಾತ್ರವಾಗಿದೆ. 1987, 1999, 2003, 2007 ಮತ್ತು 2015ರಲ್ಲಿ ಆಸೀಸ್ ಪ್ರಶಸ್ತಿ ಗೆದ್ದಿದೆ. ಇನ್ನು ಟೀಮ್ ಇಂಡಿಯಾ ಎರಡು ಸಲ ಏಕದಿನ ವಿಶ್ವಕಪ್ ಕಿರೀಟಕ್ಕೆ ಮುತ್ತಿಕ್ಕಿದೆ. 1983ರಲ್ಲಿ 2011ರಲ್ಲಿ ಭಾರತ ಚಾಂಪಿಯನ್ ಆಗಿತ್ತು. ಇದೀಗ 3ನೇ ಟ್ರೋಫಿ ಎತ್ತಿ ಹಿಡಿಯಲು ರೋಹಿತ್ ಪಡೆ ಸಜ್ಜಾಗಿದೆ.