ಇರಲಾರದೆ ಇರುವೆ ಬಿಟ್ಟುಕೊಂಡ ವಿರಾಟ್ ಕೊಹ್ಲಿಗೆ ಬಿತ್ತು ದಂಡ, ಮತ್ತೆ ತಪ್ಪು ಮಾಡಿದ್ರೆ ಏನು ಶಿಕ್ಷೆ? ಇದೆಲ್ಲಾ ಬೇಕಿತ್ತಾ ಎಂದ ಫ್ಯಾನ್ಸ್
Virat Kohli: ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಟಗಾರ ಸ್ಯಾಮ್ ಕಾನ್ಸ್ಟಾಸ್ ಅವರನ್ನು ಕೆಣಕಿದ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಐಸಿಸಿ ದಂಡದ ಶಿಕ್ಷೆ ನೀಡಿದೆ.
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ (Border Gavaskar Trophy) ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಅಥವಾ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನದಂದೇ ಇರಲಾರದೆ ಇರುವೆ ಬಿಟ್ಟುಕೊಂಡ ಟೀಮ್ ಇಂಡಿಯಾ ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ (Virat Kohli) ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ದಂಡದ ಶಿಕ್ಷೆ ವಿಧಿಸಿದೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (MCG) ನಡೆಯುತ್ತಿರುವ ಪಂದ್ಯದ ಮೊದಲ ದಿನದಲ್ಲಿ ಆಸೀಸ್ ಆರಂಭಿಕ ಆಟಗಾರ ಸ್ಯಾಮ್ ಕಾನ್ಸ್ಟಾಸ್ (Sam Konstas) ಅವರನ್ನು ಕೊಹ್ಲಿ ಕೆಣಕುವ ಮೂಲಕ ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ಅನ್ನು ಉಲ್ಲಂಘಿಸಿದರು. ಹೀಗಾಗಿ ಭಾರತದ ಆಟಗಾರನಿಗೆ ತಮ್ಮ ಪಂದ್ಯದ ಶುಲ್ಕದ ಶೇ 20 ರಷ್ಟು ದಂಡ ವಿಧಿಸಲಾಗಿದೆ. ಜೊತೆಗೆ ಡಿಮೆರಿಟ್ ಅಂಕ ಸಹ ನೀಡಿದೆ.
ಎಂಸಿಜಿಯಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪರ ಪದಾರ್ಪಣೆ ಮಾಡಿದ 19 ವರ್ಷದ ಯುವ ಆಟಗಾರ ಸ್ಯಾಮ್ ಕಾನ್ಸ್ಟಾಸ್ ಅವರೊಂದಿಗೆ ಕೊಹ್ಲಿ ಸ್ಲೆಡ್ಜಿಂಗ್ ಮಾಡಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. 10ನೇ ಓವರ್ನ ವೇಳೆ ಕಾನ್ಸ್ಟಾಸ್ ಅವರ ಭುಜಕ್ಕೆ ಉದ್ದೇಶಪೂರ್ವಕವಾಗಿಯೇ ಗುದ್ದಿದ ವಿರಾಟ್ ಕೊಹ್ಲಿ, ತಾನೇ ಜಗಳಕ್ಕಿದು ವಾಗ್ವಾದ ನಡೆಸಿದ್ದಾರೆ. ಇದು ಇಬ್ಬರ ಮಧ್ಯೆ ಮಾತಿನ ಚಕಮಕಿಗೆ ಕಾರಣವಾಯಿತು. ಬಳಿಕ ಸಹ ಆಟಗಾರರು ಮತ್ತು ಅಂಪೈರ್ ಮಧ್ಯ ಪ್ರವೇಶ ಹಿನ್ನೆಲೆ ಪರಿಸ್ಥಿತಿ ತಣ್ಣಗಾಯಿತು. ಕಾನ್ಸ್ಟಾಸ್ ಜೊತೆಗೆ ಕೊಹ್ಲಿ ನಡೆದುಕೊಂಡ ಪರಿ ಮತ್ತು ವಾಗ್ವಾದ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದರ ಬೆನ್ನಲ್ಲೇ ನೆಟ್ಟಿಗರು ಕೊಹ್ಲಿ ನಡೆಗೆ ಬೇಸರ ವ್ಯಕ್ತಪಡಿಸಿದ್ದರೆ, ಮಾಜಿ ಕ್ರಿಕೆಟಿಗರು ಸಹ ವಿರಾಟ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಸ್ಯಾಮ್ 65 ಎಸೆತಗಳಲ್ಲಿ 60 ರನ್ ಸಿಡಿಸಿ ಔಟಾದರು.
ಕೊಹ್ಲಿಗೆ ದಂಡ, ಮತ್ತೆ ತಪ್ಪು ಮಾಡಿದ್ರೆ ಏನು ಶಿಕ್ಷೆ?
ಐಸಿಸಿ ನೀತಿ ಸಂಹಿತೆ ಆರ್ಟಿಕಲ್ 2.12 ಅನ್ನು ಉಲ್ಲಂಘಿಸಿರುವುದು ಸಾಬೀತಾಗಿರುವ ಹಿನ್ನೆಲೆ ಕೊಹ್ಲಿ ಅವರಿಗೆ ಪಂದ್ಯದ ಶುಲ್ಕದ ಶೇ 20 ರಷ್ಟು ಮತ್ತು ಅನುಚಿತವಾಗಿ ವರ್ತಿಸಿದ ಕಾರಣ ಒಂದು ಡಿಮೆರಿಟ್ ಅಂಕವನ್ನೂ ನೀಡಲಾಗಿದೆ. ಈ ನಿಯಮದ ಪ್ರಕಾರ ಆಟಗಾರನು ಎದುರಾಳಿ ಆಟಗಾರ, ಸಿಬ್ಬಂದಿ, ಅಂಪೈರ್, ಮ್ಯಾಚ್ ರೆಫರಿ ಅಥವಾ ಇತರ ಯಾವುದೇ ವ್ಯಕ್ತಿಯೊಂದಿಗೆ (ಪ್ರೇಕ್ಷಕನನ್ನೂ ಸೇರಿ) ಅನುಚಿತ ದೈಹಿಕ ಸಂಪರ್ಕ ಮಾಡಿದರೆ ಅವರು ಈ ಶಿಕ್ಷೆಗೆ ಗುರಿಯಾಗುತ್ತಾರೆ. 24 ತಿಂಗಳಲ್ಲಿ 4 ಡಿಮೆರಿಟ್ ಅಂಕ ಪಡೆದರೆ ಅಂತಹ ಆಟಗಾರ ಒಂದು ಟೆಸ್ಟ್ ಅಥವಾ 2 ಏಕದಿನ ಅಥವಾ 2 ಟಿ20ಐ ಪಂದ್ಯಗಳಿಂದ ಬ್ಯಾನ್ ಆಗುತ್ತಾರೆ. ಆದರೆ ಕೊಹ್ಲಿ ಅವರ ಮೊದಲ ಅಪರಾಧ ಇದಾಗಿದೆ.
ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಪ್ರಸ್ತಾಪಿಸಿದ ಅಪರಾಧವನ್ನು ವಿರಾಟ್ ಕೊಹ್ಲಿ ಅವರು ಒಪ್ಪಿಕೊಂಡ ಹಿನ್ನೆಲೆ ದಂಡದ ಶಿಕ್ಷೆಗೆ ವಿಧಿಸಲಾಗಿದೆ. ತಪ್ಪು ಒಪ್ಪಿಕೊಂಡ ಕಾರಣ ಔಪಚಾರಿಕ ವಿಚಾರಣೆ ಅಗತ್ಯ ಇರುವುದಿಲ್ಲ. ಆನ್-ಫೀಲ್ಡ್ ಅಂಪೈರ್‌ಗಳಾದ ಜೋಯಲ್ ವಿಲ್ಸನ್, ಮೈಕೆಲ್ ಗಾಫ್ ಮತ್ತು ಮೂರನೇ ಅಂಪೈರ್ ಶರ್ಫುದ್ದೌಲಾ ಇಬ್ನೆ ಶಾಹಿದ್ ಮತ್ತು 4ನೇ ಅಂಪೈರ್ ಶಾನ್ ಕ್ರೇಗ್ ಅವರು ಮ್ಯಾಚ್ ರೆಫ್ರಿಗೆ ದೂರು ನೀಡಿದ್ದರು. ಹಾಗಾಗಿ ಕೊಹ್ಲಿ ಅವರು ತಮ್ಮ ಮುಂದಿನ ಪಂದ್ಯಗಳಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ. ವಿಶ್ವ ಶ್ರೇಷ್ಠ ಸ್ಥಾನವನ್ನು ಗಳಿಸಿರುವ ವಿರಾಟ್, ಅನಗತ್ಯ ಸ್ಲೆಡ್ಜಿಂಗ್ ಮಾಡಿದ್ದಕ್ಕೆ ತನ್ನ ಫ್ಯಾನ್ಸ್ ಸೇರಿದಂತೆ ಬಹುತೇಕರು ಕಿಡಿಕಾರಿದ್ದಾರೆ.
ಕ್ರಮಕ್ಕೆ ಆಗ್ರಹಿಸಿದ್ದ ಮಾಜಿ ಕ್ರಿಕೆಟಿಗರು, ಫ್ಯಾನ್ಸ್
ವಿರಾಟ್ ಕೊಹ್ಲಿ ದುರ್ನಡತೆಯ ವಿರುದ್ಧ ಮಾಜಿ ಕ್ರಿಕೆಟಿಗರು ಕ್ರಮಕ್ಕೆ ಆಗ್ರಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ರಿಕಿ ಪಾಂಟಿಂಗ್ ಅವರು ಕೊಹ್ಲಿ ಉದ್ದೇಶಪೂರ್ವಕವಾಗಿಯೇ ಕಾನ್ಸ್ಟಾಸ್ ಭುಜಕ್ಕೆ ಗುದ್ದಿದ್ದಾರೆ. ಹಾಗಾಗಿ ಅವರ ವಿರುದ್ಧ ಐಸಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ಭಾರತೀಯ ಮಾಜಿ ಕ್ರಿಕೆಟಿಗರು ಸಹ ಕೊಹ್ಲಿ ವರ್ತನೆಗೆ ಬೇಸರ ಹೊರಹಾಕಿದ್ದರು. ಮತ್ತೊಂದೆಡೆ ತನ್ನ ಅಭಿಮಾನಿಗಳೇ ಕೊಹ್ಲಿ ವಿರುದ್ಧ ಕಿಡಿಕಾರಿದ್ದಾರೆ. ಹುಡುಗನೊಂದಿಗೆ ಸ್ಲೆಡ್ಜಿಂಗ್ ಮಾಡೋದು ಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ಮೊದಲು ಬ್ಯಾಟ್ನಲ್ಲಿ ರನ್ ಗಳಿಸೋದು ಕಲಿ ಎಂದು ಬುದ್ದಿಮಾತು ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧವೇ ಅಡಿಲೇಡ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅವರು ಟ್ರಾವಿಸ್ ಹೆಡ್ ಅವರೊಂದಿಗೆ ಅನುಚಿತವಾಗಿ ವರ್ತಿಸಿ ಪಂದ್ಯದ ಶುಲ್ಕ ಶೇ 20ರಷ್ಟು ದಂಡದ ಶಿಕ್ಷೆಗೆ ಗುರಿಯಾಗಿದ್ದರು.