ಏಕದಿನ ರ‍್ಯಾಂಕಿಂಗ್​: ಶತಕವೀರ ಶುಭ್ಮನ್​ ಗಿಲ್​ಗೆ ಐಸಿಸಿಯಿಂದ ಸಿಕ್ತು ಭರ್ಜರಿ ಬಡ್ತಿ; ಅಗ್ರಸ್ಥಾನಕ್ಕೆ ಒಂದೇ ಹೆಜ್ಜೆ!
ಕನ್ನಡ ಸುದ್ದಿ  /  ಕ್ರಿಕೆಟ್  /  ಏಕದಿನ ರ‍್ಯಾಂಕಿಂಗ್​: ಶತಕವೀರ ಶುಭ್ಮನ್​ ಗಿಲ್​ಗೆ ಐಸಿಸಿಯಿಂದ ಸಿಕ್ತು ಭರ್ಜರಿ ಬಡ್ತಿ; ಅಗ್ರಸ್ಥಾನಕ್ಕೆ ಒಂದೇ ಹೆಜ್ಜೆ!

ಏಕದಿನ ರ‍್ಯಾಂಕಿಂಗ್​: ಶತಕವೀರ ಶುಭ್ಮನ್​ ಗಿಲ್​ಗೆ ಐಸಿಸಿಯಿಂದ ಸಿಕ್ತು ಭರ್ಜರಿ ಬಡ್ತಿ; ಅಗ್ರಸ್ಥಾನಕ್ಕೆ ಒಂದೇ ಹೆಜ್ಜೆ!

ICC ODI Rankings: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ನೂತನ ಏಕದಿನ ಕ್ರಿಕೆಟ್​ ಬ್ಯಾಟಿಂಗ್-ಬೌಲಿಂಗ್ ಶ್ರೇಯಾಂಕ ಪ್ರಕಟಿಸಿದ್ದು, ಶುಭ್ಮನ್ ಗಿಲ್ ಅಗ್ರಸ್ಥಾನದತ್ತ ದಾಪುಗಾಲಿಟ್ಟಿದ್ದಾರೆ.

ಏಕದಿನ ರ‍್ಯಾಂಕಿಂಗ್​: ಶತಕವೀರ ಶುಭ್ಮನ್​ ಗಿಲ್​ಗೆ ಐಸಿಸಿಯಿಂದ ಸಿಕ್ತು ಸಖತ್ ಗಿಫ್ಟ್; ಅಗ್ರಸ್ಥಾನಕ್ಕೆ ಒಂದೇ ಹೆಜ್ಜೆ!
ಏಕದಿನ ರ‍್ಯಾಂಕಿಂಗ್​: ಶತಕವೀರ ಶುಭ್ಮನ್​ ಗಿಲ್​ಗೆ ಐಸಿಸಿಯಿಂದ ಸಿಕ್ತು ಸಖತ್ ಗಿಫ್ಟ್; ಅಗ್ರಸ್ಥಾನಕ್ಕೆ ಒಂದೇ ಹೆಜ್ಜೆ! (Surjeet Yadav)

ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಶುಭ್ಮನ್ ಗಿಲ್ ದಾಖಲೆಯ 7ನೇ ಶತಕ ಸೆಂಚುರಿ ಬಾರಿಸಿದ್ದಾರೆ. ಶತಕದ ಖುಷಿಯಲ್ಲಿರುವ ಗಿಲ್​ಗೆ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿಯ ಶುಭ ಸುದ್ದಿಯೊಂದನ್ನು ನೀಡಿದೆ. ಐಸಿಸಿ ಬುಧವಾರ (ಫೆ 12) ಏಕದಿನ ರ‍್ಯಾಂಕಿಂಗ್​ ಪ್ರಕಟಿಸಿದ್ದು, ಅಗ್ರಸ್ಥಾನದತ್ತ ಹೆಜ್ಜೆ ಇಟ್ಟಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿ ಸರಣಿ ಮುನ್ನಡೆಗೆ ಕಾರಣವಾಗಿದ್ದ ಗಿಲ್ ಶ್ರೇಯಾಂಕದಲ್ಲಿ ಒಂದು ಸ್ಥಾನ ಜಿಗಿದು ಎರಡನೇ ಸ್ಥಾನ ಪಡೆದಿದ್ದಾರೆ.

ಅಗ್ರಸ್ಥಾನದಲ್ಲಿರುವ ಬಾಬರ್ ಅಜಮ್ ಅವರಿಂದ ಸಿಂಹಾಸನವನ್ನು ಕಸಿದುಕೊಳ್ಳುವತ್ತ ಹೆಜ್ಜೆ ಇಟ್ಟಿರುವ ಯುವ ಓಪನರ್ ಶುಭ್ಮನ್ ಗಿಲ್, 781 ರೇಟಿಂಗ್​ನೊಂದಿಗೆ ಎರಡನೇ ಸ್ಥಾನಕ್ಕೇರಿದ್ದಾರೆ. ಅಗ್ರಸ್ಥಾನದಲ್ಲಿರುವ ಬಾಬರ್ ಪಡೆದಿರುವ ರೇಟಿಂಗ್ 786. ಮೂರನೇ ಏಕದಿನ ಪಂದ್ಯದಲ್ಲಿ ಸಿಡಿಸಿರುವ ಗಿಲ್ ಶತಕವನ್ನು ಮುಂದಿನ ಬುಧವಾರಕ್ಕೆ ಪರಿಗಣನೆ ಮಾಡುವ ಕಾರಣ ಅಗ್ರಸ್ಥಾನ ಪಡೆಯುವುದು ಖಚಿತ ಎಂದು ಹೇಳಬಹುದು. ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದ ಗಿಲ್, ನಾಗ್ಪುರದಲ್ಲಿ 87 ಮತ್ತು ಕಟಕ್​ನಲ್ಲಿ 60 ರನ್ ಗಳಿಸಿದ್ದರು. ಇದರ ಪರಿಣಾಮ ಶ್ರೇಯಾಂಕದಲ್ಲಿ ಮೇಲೇರಿದ್ದಾರೆ. ಕಳೆದ ಪಂದ್ಯದಲ್ಲಿ ಶತಕ ಗಳಿಸಿದರೂ ರೋಹಿತ್​ ಶರ್ಮಾ (773 ಅಂಕ) ಒಂದು ಸ್ಥಾನವನ್ನು ಕಳೆದುಕೊಂಡು 3ನೇ ಸ್ಥಾನದಲ್ಲಿದ್ದಾರೆ.

ಅಗ್ರ 10ರೊಳಗೆ ಎಂಟ್ರಿಕೊಟ್ಟ ಶ್ರೇಯಸ್

ಹಿಟ್​ಮ್ಯಾನ್ ರೋಹಿತ್ ಶರ್ಮಾ ಕಟಕ್​ನಲ್ಲಿ 90 ಎಸೆತಗಳಲ್ಲಿ 119 ರನ್ ಗಳಿಸಿದ್ದರು. ಇದರೊಂದಿಗೆ ಕಳಪೆ ಫಾರ್ಮ್​ಗೆ ಸಿಲುಕಿ ಒದ್ದಾಡುತ್ತಿದ್ದ ರೋಹಿತ್​ ಕೊನೆಗೂ ಲಯಕ್ಕೆ ಮರಳಿದ್ದಾರೆ. ಮತ್ತೊಬ್ಬ ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ 2 ಸ್ಥಾನ ಕುಸಿದಿದ್ದು, ಪ್ರಸ್ತುತ 6ನೇ ಸ್ಥಾನದಲ್ಲಿದ್ದಾರೆ. 2ನೇ ಏಕದಿನದಲ್ಲಿ ಕೊಹ್ಲಿ ಕೇವಲ 5 ರನ್ ಗಳಿಸಿದ್ದ ಹಿನ್ನೆಲೆ ಕುಸಿತಕ್ಕೆ ಕಾರಣರಾದರು. ಶ್ರೇಯಸ್ ಅಯ್ಯರ್ ಒಂದು ಸ್ಥಾನ ಮೇಲೇರಿ ಟಾಪ್​-10ಗೆ ಎಂಟ್ರಿಕೊಟ್ಟಿದ್ದಾರೆ. ಐರ್ಲೆಂಡ್​​ನ ಹ್ಯಾರಿ ಟೆಕ್ಟರ್ ನಾಲ್ಕನೇ ಸ್ಥಾನ, ಸೌತ್ ಆಫ್ರಿಕಾದ ಹೆನ್ರಿಚ್ ಕ್ಲಾಸೆನ್ 5ನೇ ಸ್ಥಾನದಲ್ಲಿದ್ದಾರೆ. ಡೇರಿಲ್ ಮಿಚೆಲ್, ಶಾಯ್ ಹೋಪ್, ರೆಹಮಾನುಲ್ಲಾ ಗುರ್ಬಾಜ್ ಮತ್ತು ಶ್ರೇಯಸ್ ಅಯ್ಯರ್ ಟಾಪ್​ - 10ರಲ್ಲಿದ್ದಾರೆ.

ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನಿ ಯಾರು?

ಏಕದಿನ ಕ್ರಿಕೆಟ್ ಬೌಲಿಂಗ್ ಶ್ರೇಯಾಂಕದಲ್ಲಿ ಅಫ್ಘಾನಿಸ್ತಾನದ ರಶೀದ್ ಖಾನ್ ಅಗ್ರಸ್ಥಾನ ಪಡೆದಿದ್ದಾರೆ. ಅವರು 669 ರೇಟಿಂಗ್ ಪಡೆದಿದ್ದಾರೆ. ಶ್ರೀಲಂಕಾದ ಮಹೀಶಾ ತೀಕ್ಷಾಣ (663) ಮತ್ತು ನಮೀಬಿಯಾದ ಬರ್ನಾರ್ಡ್ ಸ್ಕೋಲ್ಟ್ಜ್ (655) ತಲಾ 2 ಸ್ಥಾನ ಮೇಲೇರಿ ಕ್ರಮವಾಗಿ 2 ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಶಾಹೀನ್ ಅಫ್ರಿದಿ (653) ನಾಲ್ಕನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ಸರಣಿಯಲ್ಲಿ ಅವಕಾಶ ವಂಚಿತರಾದ ಕುಲ್ದೀಪ್ ಯಾದವ್, 2 ಸ್ಥಾನ ಕುಸಿದು ನಾಲ್ಕನೇ ಸ್ಥಾನದಲ್ಲಿದ್ದಾರೆ. ಭಾರತದ ಮತ್ತೊಬ್ಬ ಬೌಲರ್ ಮೊಹಮ್ಮದ್ ಸಿರಾಜ್ (630) 4 ಸ್ಥಾನ ಇಳಿಕೆ ಕಂಡು 10ರಲ್ಲಿದ್ದಾರೆ. ಅನುಭವಿ ಸ್ಪಿನ್ ಆಲ್​​​ರೌಂಡರ್​ ರವೀಂದ್ರ ಜಡೇಜಾ 11 ನೇ ಸ್ಥಾನದಲ್ಲಿದ್ದರೆ, ವೇಗದ ಬೌಲರ್ ಮೊಹಮ್ಮದ್ ಶಮಿ 13 ನೇ ಸ್ಥಾನದಲ್ಲಿದ್ದಾರೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner