England vs Afghanistan: ಐಸಿಸಿ ವಿಶ್ವಕಪ್‌ನಲ್ಲಿಂದು ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ ಸೆಣಸಾಟ; ತಂಡಗಳ ಬಲಾಬಲ ಹೀಗಿದೆ
ಕನ್ನಡ ಸುದ್ದಿ  /  ಕ್ರಿಕೆಟ್  /  England Vs Afghanistan: ಐಸಿಸಿ ವಿಶ್ವಕಪ್‌ನಲ್ಲಿಂದು ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ ಸೆಣಸಾಟ; ತಂಡಗಳ ಬಲಾಬಲ ಹೀಗಿದೆ

England vs Afghanistan: ಐಸಿಸಿ ವಿಶ್ವಕಪ್‌ನಲ್ಲಿಂದು ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ ಸೆಣಸಾಟ; ತಂಡಗಳ ಬಲಾಬಲ ಹೀಗಿದೆ

ಅಫ್ಘಾನಿಸ್ತಾನ ಐಸಿಸಿ ವಿಶ್ವಕಪ್‌ನಲ್ಲಿ ಸತತ 14 ಸೋಲುಗಳನ್ನು ಕಂಡಿದೆ. ಇಂದಿನ (ಅಕ್ಟೋಬರ್ 15, ಭಾನುವಾರ) ಪಂದ್ಯದಲ್ಲಿ ಇಂಗ್ಲೆಂಡ್ ತನ್ನ ನೆಟ್‌ ರನ್‌ರೇಟ್‌ ಅನ್ನು ಹೆಚ್ಚಿಸಿಕೊಳ್ಳುವತ್ತ ಚಿತ್ತ ಹರಿಸಿದೆ.

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ಪಂದ್ಯ.
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ಪಂದ್ಯ.

ದೆಹಲಿ: ಐಸಿಸಿ ಪುರುಷರ ಏಕದಿನ ವಿಶ್ವಕಪ್‌ (ICC ODI World Cup 2023) 13ನೇ ಪಂದ್ಯದಲ್ಲಿ ಇಂದು (ಅಕ್ಟೋಬರ್ 15, ಭಾನುವಾರ) ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ (England vs Afghanistan) ತಂಡಗಳು ಹಣಾಹಣಿ ನಡೆಸಲಿವೆ.

ಆಫ್ಘಾನ್ ತಂಡ ಈ ಮಹಾ ಟೂರ್ನಿಯಲ್ಲಿ ಈಗಾಗಲೇ ಎರಡು ಸೋಲುಗಳನ್ನು ಕಂಡಿದ್ದು, ಒಟ್ಟಾರೆಯಾಗಿ ವಿಶ್ವಕಪ್‌ನಲ್ಲಿ ಸತತ 14 ಸೋಲುಗಳನ್ನು ಅನುಭವಿಸಿದೆ. ಇಂದಾದರೂ ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ ವಿಶ್ವಕಪ್ ಸೋಲಿನ ಸರಪಳಿಯನ್ನು ಕಳಚುತ್ತಾ ಅನ್ನೋದು ಆ ತಂಡದ ಅಭಿಮಾನಿಗಳ ಪ್ರಶ್ನೆಯಾಗಿದೆ. ಇತ್ತ ಬಲಿಷ್ಠ ಇಂಗ್ಲೆಂಡ್ ತಂಡ ಅಫ್ಘಾನ್ ವಿರುದ್ಧ ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದ್ದು, ನೆಟ್ ರನ್ ರೇಟ್‌ನತ್ತ ಚಿತ್ತ ಹರಿಸಿದೆ.

ನ್ಯೂಜಿಲೆಂಡ್ ವಿರುದ್ಧ ಸೋಲಿನ ಬಳಿಕ ಬಾಂಗ್ಲಾ ವಿರುದ್ಧ ದೊಡ್ಡ ಗೆಲುವು

ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿದ್ದ ಜೋಸ್ ಬಟ್ಲರ್ ಪಡೆ, ಬಾಂಗ್ಲಾದೇಶದ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಡೇವಿಡ್ ಮಲಾನ್ 107 ಎಸೆತಗಳಲ್ಲಿ 140 ರನ್‌ಗಳ ಭರ್ಜರಿ ಶತಕ ಸಿಡಿಸಿದ್ದರು. ಇದೀಗ ಕ್ರಿಕೆಟ್ ಕೂಸು ಆಫ್ಘಾನ್ ವಿರುದ್ಧವೂ ರನ್ ಮಳೆಗೆ ಇಂಗ್ಲೆಂಡ್ ಕಾಯುತ್ತಿದೆ.

ಅರುಣ್ ಜೇಟ್ಲಿ ಸ್ಟೇಡಿಯಂ ಬ್ಯಾಟಿಂಗ್ ಸ್ನೇಹಿ?

ಅರುಣ್ ಜೇಟ್ಲಿ ಸ್ಟೇಡಿಯಂ ಬ್ಯಾಟಿಂಗ್‌ಗೆ ನೆರವಾಗುತ್ತಿದ್ದು ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವಿನ ಪಂದ್ಯದಲ್ಲಿ 754 ರನ್‌ಗಳು ಬಂದಿದ್ದವು. ಭಾರತ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ 272 ರನ್ ಗಳಿಸಿತ್ತು. ಆದರೆ ಟೀಂ ಇಂಡಿಯಾ ಈ ಗುರಿಯನ್ನು 35 ಓವರ್‌ಗಳಲ್ಲಿ ಮುಟ್ಟಿತ್ತು. ಹೀಗಾಗಿ ದೆಹಲಿ ಪಿಚ್‌ನಲ್ಲಿ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಇಂಗ್ಲೆಂಡ್ ಇಲ್ಲಿ ತನ್ನ ನೆಟ್ ರನ್ ರೇಟ್ ಹೆಚ್ಚಿಸಿಕೊಳ್ಳಲು ಎದುರು ನೋಡುತ್ತಿದೆ.

ಆಫ್ಘಾನ್‌ಗೆ ರಶೀದ್ ಖಾನ್ ಸೇರಿ ಮೂವರ ಸ್ಪಿನ್ ಬಲ

ಅಫ್ಘಾನಿಸ್ತಾನ ತಂಡ ಬ್ಯಾಟಿಂಗ್‌ಗಿಂತ ಸ್ಪಿನ್ನರ್‌ಗಳನ್ನು ಹೆಚ್ಚು ನೆಚ್ಚಿಕೊಂಡಿದೆ. ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್ ಮತ್ತು ಮೊಹಮ್ಮದ್ ನಬಿ ಅವರನ್ನೊಳಗೊಂಡ ಸ್ಪಿನ್ ವಿಭಾಗವು ಆಂಗ್ಲರನ್ನ ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವ ಲೆಕ್ಕಾಚಾರಗಳನ್ನು ಹಶ್ಮತ್ ಉಲ್ಲಾ ಶಾಹಿದಿ ಹಾಕಿಕೊಂಡಿದ್ದಾರೆ. ಇದುವರೆಗೆ ಆಡಿರುವ ಎರಡೂ ಪಂದ್ಯಗಳನ್ನು ಸೋತಿರುವ ತಂಡದಲ್ಲಿ ಬ್ಯಾಟರ್ ಅಥವಾ ಬೌಲಿಂಗ್ ವಿಭಾಗದಲ್ಲಿ ಯಾರೂ ಕೂಡ ಮಿಂಚಲು ಸಾಧ್ಯವಾಗಿಲ್ಲ.

ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ನಾಯಕ), ಮೊಯಿನ್ ಅಲಿ, ಗಸ್ ಅಟ್ಕಿನ್ಸನ್, ಜಾನಿ ಬೈರ್​ಸ್ಟೋ, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲಾನ್, ಆದಿಲ್ ರಶೀದ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ಮಾರ್ಕ್ ವುಡ್, ಕ್ರಿಸ್ ವೋಕ್ಸ್.

ಅಫ್ಘಾನಿಸ್ತಾನ ತಂಡ: ಹಶ್ಮತ್ ಉಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಝದ್ರಾನ್, ರಿಯಾಜ್ ಹಸನ್, ರಹಮತ್ ಶಾ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ಅಜ್ಮತುಲ್ಲಾ ಒಮರ್ಝೈ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನೂರ್ ಅಹ್ಮದ್, ಫಝಲ್ಹಕ್ ಫಾರೂಖಿ, ಅಬ್ದುಲ್ ರಹಮಾನ್, ನವೀನ್ ಉಲ್ ಹಕ್.

ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ಪಂದ್ಯದ ಸಂಪೂರ್ಣ ಮಾಹಿತಿ

ಪಂದ್ಯ: ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ, ಐಸಿಸಿ ಪುರುಷರ ವಿಶ್ವಕಪ್ 2023 13ನೇ ಪಂದ್ಯ

ದಿನಾಂಕ: ಅಕ್ಟೋಬರ್ 15, 2023 ಭಾನುವಾರ

ಸಮಯ: ಮಧ್ಯಾಹ್ನ 2 ಗಂಟೆ (ಭಾರತೀಯ ಕಾಲಮಾನ)

ಸ್ಥಳ: ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂ, ದೆಹಲಿ

Whats_app_banner