ICC World Cup 2023: ಐಸಿಸಿ ವಿಶ್ವಕಪ್ ಸೆಮಿ ಫೈನಲ್‌ಗೆ ತಲುಪಬೇಕಾದರೆ ಕನಿಷ್ಠ ಎಷ್ಟು ಪಂದ್ಯಗಳನ್ನು ಗೆಲ್ಲಬೇಕು? ಯಾರಿಗೆಲ್ಲಾ ಇದೆ ಅವಕಾಶ?
ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಈ ಬಾರಿ 10 ತಂಡಗಳು ಸ್ಪರ್ಧೆಗೆ ಇಳಿಯುತ್ತಿವೆ. ಇದರಲ್ಲಿ 8 ತಂಡಗಳು ನೇರವಾಗಿ ವಿಶ್ವಕಪ್‌ಗೆ ಅರ್ಹತೆ ಪಡೆದಿವೆ. ವಿಶ್ವಕಪ್‌ನಲ್ಲಿ ಸೆಮಿ ಫೈನಲ್ ತಲುಪಲು ಎಷ್ಟು ಪಂದ್ಯಗಳನ್ನು ಗೆಲ್ಲಬೇಕು? ಯಾರಿಗೆಲ್ಲಾ ಇದೆ ಅವಕಾಶ ಇಲ್ಲಿದೆ ವಿಶ್ಲೇಷಣೆ.
ಐಸಿಸಿ ಪುರುಷರ ಏಕದಿನ ವಿಶ್ವಕಪ್‌ಗೆ (ICC ODI World Cup 2023) ಇನ್ನೂ ಎರಡನೇ ದಿನ ಬಾಕಿ ಇರೋದು. ಈ ಬಾರಿಯ ವಿಶ್ವಕಪ್‌ನಲ್ಲಿ 10 ತಂಡಗಳು 33 ಕೋಟಿ ರೂಪಾಯಿಗಳ ಪ್ರಶಸ್ತಿಗಾಗಿ ಪೈಪೋಟಿ ನಡೆಸುತ್ತಿವೆ. ಈ ಪೈಕಿ 8 ತಂಡಗಳು ಮಹಾ ಟೂರ್ನಿಗೆ ನೇರವಾಗಿ ಅರ್ಹತೆ ಪಡೆದಿವೆ. ಶ್ರೀಲಂಕಾ ಮತ್ತು ನೆದರ್ಲ್ಯಾಂಡ್ಸ್ ಅರ್ಹತಾ ಸುತ್ತಿನ ಪಂದ್ಯಗಳ ಮೂಲಕ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಪಡೆದುಕೊಂಡಿವೆ.
ಲೀಗ್ ಹಂತ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸೆಮಿ ಫೈನಲ್ ತಲುಪಲು ಲೀಗ್ ಹಂತದಲ್ಲಿ ತಂಡ ಎಷ್ಟು ಪಂದ್ಯಗಳನ್ನು ಗೆಲ್ಲಬೇಕು? 2019ರ ವಿಶ್ವಕಪ್‌ನಲ್ಲಿ ಈ ನಿಯಮಗಳು ಹೇಗಿದ್ದವು ಎಂಬತಹ ಆಸಕ್ತಿದಾಯಕ ಮಾಹಿತಿಯನ್ನು ಇಲ್ಲಿ ತಿಳಿಯೋಣ.
2023ರ ವಿಶ್ವಕಪ್ ಕೂಡ 2019ರ ವಿಶ್ವಕಪ್‌ನ ಮಾದರಿಯಲ್ಲೇ ನಡೆಯಲಿದೆ. ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿರುವ ಲೀಗ್ ಹಂತದಲ್ಲಿ ಒಟ್ಟು 10 ತಂಡಗಳು ಸೆಣಸಲಿವೆ. ಪ್ರತಿ ತಂಡವು ಇತರ 9 ತಂಡಗಳ ವಿರುದ್ಧ ತಲಾ ಒಂದು ಪಂದ್ಯವನ್ನು ಆಡಲಿವೆ. ಅಂದರೀ ಲೀಗ್ ಹಂತದಲ್ಲಿ ಒಟ್ಟು 45 ಪಂದ್ಯಗಳು ನಡೆಯಲಿವೆ.
ಗುಂಪು ಹಂತದಲ್ಲಿ ಅಗ್ರ 4 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ವಿಶ್ವಕಪ್‌ನ ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆಯುವ ತಂಡ ನಾಲ್ಕನೇ ಸ್ಥಾನ ಪಡೆಯುವ ತಂಡದೊಂದಿಗೆ ಸೆಮಿ ಫೈನಲ್ ಆಡಲಿದೆ. ಎರಡು ಮತ್ತು ಮೂರನೇ ಸ್ಥಾನ ಪಡೆದ ತಂಡಗಳು ಇತರೆ ಸೆಮಿಫೈನಲ್‌ಗಳನ್ನು ಆಡಲಿವೆ. ಎರಡು ಸೆಮಿಫೈನಲ್‌ಗಳಲ್ಲಿ ಗೆದ್ದ ತಂಡಗಳು ನವೆಂಬರ್ 19 ರಂದು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.
ಸೆಮಿ ಫೈನಲ್ ತಲುಪಬೇಕಾದರೆ ಎಷ್ಟು ಪಂದ್ಯ ಗೆಲ್ಲಬೇಕು?
ಲೀಗ್ ಹಂತದಲ್ಲಿ ಪ್ರತಿ ತಂಡವು 9 ಪಂದ್ಯಗಳನ್ನು ಆಡುತ್ತದೆ. 2019ರ ವಿಶ್ವಕಪ್ ನಡೆದ ರೀತಿಯನ್ನು ಒಮ್ಮೆ ನೋಡಿದರೆ 9 ಪಂದ್ಯಗಳಲ್ಲಿ ಕನಿಷ್ಠ 7ರಲ್ಲಿ ಗೆಲುವು ಸಾಧಿಸಿದರೆ ಸೆಮಿ ಫೈನಲ್ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತವೆ. 2019ರ ವಿಶ್ವಕಪ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಆಡಿದ 9 ಪಂದ್ಯಗಳಲ್ಲಿ ಎರಡರಲ್ಲಿ ಸೋತು, 7 ರಲ್ಲಿ ಗೆದ್ದು ಸೆಮಿ ಫೈನಲ್ ರೇಸ್‌ನಲ್ಲಿರುತ್ತವೆ.
ಲೀಗ್ ಹಂತದಲ್ಲಿ ಸೆಮಿ ಫೈನಲ್‌ಗೆ ಅರ್ಹತೆ ಪಡೆಯಲು ತಂಡಗಳ ಅಂಕಗಳು ಸಮಾನವಾಗಿದ್ದರೆ, ಅವರ ಸಾಧನೆಗಳನ್ನು ಮೊದಲು ಪರಿಗಣಿಸಲಾಗುತ್ತದೆ. ಇದರಲ್ಲೂ ಸಮಾನವಾಗಿದ್ದರೆ ನೆಟ್ ರನ್ ರೇಟ್ ಪರಿಗಣಿಸಲಾಗುತ್ತದೆ. 2019ರ ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಹಿಂದಕ್ಕೆ ತಳ್ಳಿದ ನಂತರ ನ್ಯೂಜಿಲೆಂಡ್ ನಾಲ್ಕೇನೇ ಸ್ಥಾನದೊಂದಿಗೆ ಸೆಮಿ ಫೈನಲ್‌ಗೆ ಅರ್ಹತೆ ಪಡೆದಿತ್ತು. ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳು ತಲಾ 11 ಅಂಕಗಳೊಂದಿಗೆ ಸಮಬಲ ಸಾಧಿಸಿದ್ದವು. ಐದು ಗೆಲುವಿನೊಂದಿಗೆ ನ್ಯೂಜಿಲೆಂಡ್ ನೆಟ್ ರನ್ ರೇಟ್ ಆಧರಿಸಿ ಮುನ್ನಡೆ ಸಾಧಿಸಿತ್ತು.
ಸೆಮಿ ಫೈನಲ್‌ನಲ್ಲಿ ಯಾರಿಗೆ ಅವಕಾಶ?
ಈ ಬಾರಿ ಸೆಮಿ ಫೈನಲ್ ಸ್ಥಾನಕ್ಕಾಗಿ ಒಟ್ಟು 10 ತಂಡಗಳು ಲೀಗ್ ಹಂತದಲ್ಲಿ ಪೈಪೋಟಿ ನಡೆಸಲಿವೆ. ಆದರೆ ಆತಿಥೇಯ ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಅಥವಾ ಪಾಕಿಸ್ಥಾನದೊಂದಿಗೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ಸೆಮಿ ಫೈನಲ್ ತಲುಪುವ ಸಾಧ್ಯತೆ ಇದೆ ಎಂದು ಕ್ರಿಕೆಟ್ ಪಂಡಿತರು ಭವಿಷ್ಯ ನುಡಿದಿದ್ದಾರೆ. ಆದರೆ ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಬಾಂಗ್ಲಾದೇಶದಂತಹ ತಂಡಗಳನ್ನು ಅಷ್ಟು ಸುಲಭವಾಗಿ ಪರಿಗಣಿಸುವಂತಿಲ್ಲ. ಯಾವ ಸಮಯದಲ್ಲಾದರೂ ಬಲಿಷ್ಠ ತಂಡಗಳನ್ನು ಸೋಲುಣಿಸುವ ಸಾಮರ್ಥ್ಯವನ್ನು ಈ ತಂಡಗಳು ಹೊಂದಿವೆ.
ಅಕ್ಟೋಬರ್ 5 ರಂದು ಅಹಮದಾಬಾದ್‌ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್ ಅಪ್ ನ್ಯೂಜಿಲೆಂಡ್ ನಡುವಿನ ಉದ್ಘಾಟನಾ ಪಂದ್ಯದ ಮೂಲಕ 2023ರ 13ನೇ ಆವೃತ್ತಿ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಆರಂಭವಾಗಲಿದೆ.