ಟೀಂ ಇಂಡಿಯಾ ವಿಶ್ವಕಪ್ ಸೆಮಿ ಫೈನಲ್ ಗೆಲುವಿನ ಹೀರೋ ಮೊಹಮ್ಮದ್ ಶಮಿ; ಫೈನಲ್ ಪ್ರವೇಶಕ್ಕೆ ವೇಗಿಯ ಕೊಡುಗೆ ಹೀಗಿತ್ತು
ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಟೀಂ ಇಂಡಿಯಾ ಪರ ಮೊಹಮ್ಮದ್ ಶಮಿ 7 ವಿಕೆಟ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಮುಂಬೈ (ಮಹಾರಾಷ್ಟ್ರ): ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ (ICC ODI World Cup 2023) ಟೀಂ ಇಂಡಿಯಾ (Team India) ಗ್ರೂಪ್ ಹಂತದಲ್ಲಿ ಭರ್ಜರಿ ಜಯ ಸಾಧಿಸಲು ಬ್ಯಾಟರ್‌ಗಳಷ್ಟೇ ಬೌಲರ್‌ಗಳು ಪ್ರಮುಖ ಪಾತ್ರವಹಿಸಿದ್ದರು. ಬ್ಯಾಟರ್‌ಗಳು ರನ್ ಬಾರಿಸಿದರೆ, ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಅವರು ಆರಂಭದಲ್ಲೇ ವಿಕೆಟ್‌ಗಳನ್ನು ಪಡೆದು ಎದುರಾಳಿ ಪಡೆಗೆ ಭಾರಿ ಪೆಟ್ಟು ನೀಡುತ್ತಿದ್ದರು. ಕಳೆದ ನಾಲ್ಕೈದು ಪಂದ್ಯಗಳಲ್ಲಿ ಮೊಹಮ್ಮದ್ ಶಮಿ ಅವರು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಕಳಿಸುವ ಕೆಲಸ ಮಾಡುತ್ತಿದ್ದರು.
ಆದರೆ ಬುಧವಾರ (ನವೆಂಬರ್ 15) ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಆರಂಭಿಕ ಇಬ್ಬರು ಪ್ರಮುಖ ವೇಗದ ಬೌಲರ್‌ಗಳು ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ಆದರೆ ಮೊಹಮ್ಮದ್ ಶಮಿ ಮಾತ್ರ ನಾಯಕ ರೋಹಿತ್ ಶರ್ಮಾ ಅವರ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ್ದಾರೆ.
ಟೀಂ ಇಂಡಿಯಾಗೆ ಆರಂಭಿಕ ಮುನ್ನಡೆ ತಂದುಕೊಟ್ಟ ಮೊಹಮ್ಮದ್ ಶಮಿ
ಇನ್ನಿಂಗ್ಸ್‌ನ 6ನೇ ಓವರ್‌ನಲ್ಲಿ ಬೌಲಿಂಗ್ ಮಾಡಲು ಬಂದ ಶಮಿ ಕಿವೀಸ್‌ನ ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೆ ಅವರ ವಿಕೆಟ್ ಪಡೆದು ತಂಡಕ್ಕೆ ಆರಂಭಿಕ ಮುನ್ನಡೆ ತಂದು ಕೊಟ್ಟರು. ಇದಾಗ ಬಳಿಕ ಅಂದರೆ 8ನೇ ಓವರ್‌ನಲ್ಲೇ ಸ್ಫೋಟಕ ಬ್ಯಾಟರ್ ರಚಿನ್ ರವೀಂದ್ರ ಅವರನ್ನು ಔಟ್ ಮಾಡಿದ್ರು. ಇದಾದ ಬಳಿಕ 30 ಓವರ್‌ಗಳು ಮುಗಿಯುವವರೆಗೆ ಟೀಂ ಇಂಡಿಯಾದ ಬೌಲರ್‌ಗಳು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಅತ್ತ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮತ್ತು ಡೇರಿಲ್ ಮಿಚೆಲ್ ಮಾತ್ರ ಅಬ್ಬರದ ಬ್ಯಾಟಿಂಗ್ ಮುಂದುವರಿಸಿದರು.
ಒಂದು ಹಂತದಲ್ಲಿ ಈ ಜೋಡಿ ವೇಗದ ಬ್ಯಾಟಿಂಗ್ ಮೂಲಕ 150ರ ಜೊತೆಯಾಟ ಪೂರೈಸಿ 200ರತ್ತ ಸಾಗುತ್ತಿತ್ತು. ಇದು ನಾಯಕ ರೋಹಿತ್ ಶರ್ಮಾ ಅವರ ಆತಂಕಕ್ಕೂ ಕಾರಣವಾಗಿತ್ತು. ಆದರೆ 33ನೇ ಓವರ್ ಬೌಲಿಂಗ್ ಮಾಡಲು ಬಂದ ಶಮಿ ಮತ್ತೆ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಅರ್ಧ ಶತಕ (69) ಗಳಿಸಿ ಆಡುತ್ತಿದ್ದ ಕೇನ್ ವಿಲಿಯಮ್ಸನ್ ಅವರನ್ನು ಔಟ್ ಮಾಡಿ ಪೆವಿಲಿಯನ್‌ಗೆ ಕಳಿಸಿದರು. ಅದೇ ಓವರ್‌ನಲ್ಲಿ ಅಂದರೆ 33 ಓವರ್‌ನ 4ನೇ ಎಸೆತದಲ್ಲೇ ಟಾಮ್ ಲಾಥಮ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿಸಿದರು.
ಮೊದಲ 5 ವಿಕೆಟ್‌ಗಳನ್ನು ಉರುಳಿಸಿದ ವೇಗಿ
ಭರ್ಜರಿ ಶತಕ (134) ಸಿಡಿಸಿ ತಂಡವನ್ನು ಗೆಲುನತ್ತ ಕೊಂಡೊಯ್ಯಲು ಪ್ರಯತ್ನಿಸಿದ್ದ ಡೇರಿಲ್ ಮಿಚೆಲ್ ಅವರನ್ನು ಶಮಿ ಇನ್ನಿಂಗ್ಸ್‌ನ 46ನೇ ಓವರ್‌ನಲ್ಲಿ ಔಟ್ ಮಾಡಿದರಲ್ಲದೆ, ಟೀಂ ಇಂಡಿಯಾದ ಗೆಲುವನ್ನು ಖಚಿತಪಡಿಸಿದರು. ನ್ಯೂಜಿಲೆಂಡ್ ತಂಡದ ಮೊದಲ 5 ವಿಕೆಟ್‌ಗಳನ್ನು ವೇಗಿ ಶಮಿಯವೇ ಪಡೆದರು. ಆ ಬಳಿಕವೂ ಅವರ ವಿಕೆಟ್ ಬೇಟೆ ಮುಂದುವರಿಯಿತು. ಟೀಂ ಸೌಥಿ ಹಾಗೂ ಲಾಕಿ ಫರ್ಗುಸನ್ ಅವರ ವಿಕೆಟ್‌ಗಳನ್ನು ಉರುಳಿಸಿದರು. ಅಂತಿಮವಾಗಿ ಶಮಿ 9.5 ಓವರ್‌ಗಳಲ್ಲಿ 57 ರನ್ ನೀಡಿ 7 ವಿಕೆಟ್‌ಗಳನ್ನು ಪಡೆದು ವಿಶ್ವ ದಾಖಲೆ ಬರೆದಿರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಈ ಪಂದ್ಯದಲ್ಲಿ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 397 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ನ್ಯೂಜಿಲೆಂಡ್ 48.5 ಓವರ್‌ಗಳಲ್ಲಿ 327 ರನ್ ಗಳಿಸಿ ಸರ್ವ ಪತನ ಕಂಡಿತು. ಭಾರತ 70 ರನ್‌ಗಳ ಜಯದೊಂದಿಗೆ ವಿಶ್ವಕಪ್ ಫೈನಲ್ ಪ್ರವೇಶಿಸಿತು. ಇದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 50ನೇ ಶತಕದ ಸಾಧನೆ ಮಾಡಿದರು. ಮೊಹಮ್ಮದ್ ಶಮಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಸೂಪರ್ ಹೀರೋ ಎನಿಸಿಕೊಂಡ ವೇಗಿ ಶಮಿ ಅವರು, ಕಡಿಮೆ ಬಾಲುಗಳಲ್ಲಿ ವೇಗವಾಗಿ 50 ವಿಕೆಟ್, ಅತಿ ವೇಗವಾಗಿ 50 ವಿಕೆಟ್, ಏಕದಿನ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಪರ ವೆಸ್ಟ್ ಬೌಲಿಂಗ್, ವಿಶ್ವಕಪ್‌ನಲ್ಲಿ 2 ಬಾರಿ 5 ವಿಕೆಟ್ ಸಾಧನೆ ಸೇರಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು.