Pakistan Cricket Team: 7 ವರ್ಷಗಳ ಬಳಿಕ ಭಾರತಕ್ಕೆ ಬಂದಿಳಿದ ಪಾಕಿಸ್ತಾನ ಕ್ರಿಕೆಟ್ ತಂಡ; ವಿಶ್ವಕಪ್‌ಗಾಗಿ ಹೈದರಾಬಾದ್‌ನಲ್ಲಿ ಲ್ಯಾಂಡಿಂಗ್
ಕನ್ನಡ ಸುದ್ದಿ  /  ಕ್ರಿಕೆಟ್  /  Pakistan Cricket Team: 7 ವರ್ಷಗಳ ಬಳಿಕ ಭಾರತಕ್ಕೆ ಬಂದಿಳಿದ ಪಾಕಿಸ್ತಾನ ಕ್ರಿಕೆಟ್ ತಂಡ; ವಿಶ್ವಕಪ್‌ಗಾಗಿ ಹೈದರಾಬಾದ್‌ನಲ್ಲಿ ಲ್ಯಾಂಡಿಂಗ್

Pakistan Cricket Team: 7 ವರ್ಷಗಳ ಬಳಿಕ ಭಾರತಕ್ಕೆ ಬಂದಿಳಿದ ಪಾಕಿಸ್ತಾನ ಕ್ರಿಕೆಟ್ ತಂಡ; ವಿಶ್ವಕಪ್‌ಗಾಗಿ ಹೈದರಾಬಾದ್‌ನಲ್ಲಿ ಲ್ಯಾಂಡಿಂಗ್

ಅಕ್ಟೋಬರ್ 5 ರಿಂದ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್‌ಗಾಗಿ ಪಾಕಿಸ್ತಾನ ಕ್ರಿಕೆಟ್ ತಂಡ ಹೈದರಾಬಾದ್‌ಗೆ ಆಗಮಿಸಿದೆ. 7 ವರ್ಷಗಳ ಬಳಿಕ ಪಾಕ್ ತಂಡ ಇದೇ ಮೊದಲ ಬಾರಿಗೆ ಭಾರತಕ್ಕೆ ಬಂದಿದೆ.

ಐಸಿಸಿ ವಿಶ್ವಕಪ್‌ಗಾಗಿ ಪಾಕಿಸ್ತಾನ ಕ್ರಿಕೆಟ್ ತಂಡ ಹೈದರಾಬಾದ್‌ಗೆ ಬಂದಿಳಿದಿದೆ. ನ್ಯೂಜಿಲೆಂಡ್ ವಿರುದ್ಧ ಬಾಬರ್ ಪಡೆ ತನ್ನ ಮೊದಲ ಅಭ್ಯಾಸ ಪಂದ್ಯ ಆಡಲಿದೆ.
ಐಸಿಸಿ ವಿಶ್ವಕಪ್‌ಗಾಗಿ ಪಾಕಿಸ್ತಾನ ಕ್ರಿಕೆಟ್ ತಂಡ ಹೈದರಾಬಾದ್‌ಗೆ ಬಂದಿಳಿದಿದೆ. ನ್ಯೂಜಿಲೆಂಡ್ ವಿರುದ್ಧ ಬಾಬರ್ ಪಡೆ ತನ್ನ ಮೊದಲ ಅಭ್ಯಾಸ ಪಂದ್ಯ ಆಡಲಿದೆ. (PTI)

ಹೈದರಾಬಾದ್ (ತೆಲಂಗಾಣ): ವೀಸಾ ಗೊಂದಲ ಮುಗಿಯುತ್ತಿದ್ದಂತೆ ಪಾಕಿಸ್ತಾನ ಕ್ರಿಕೆಟ್ ತಂಡ (Pakistan Cricket Team) ನಿನ್ನೆ (ಸೆಪ್ಟೆಂಬರ್ 27, ಬುಧವಾರ) ಹೈದರಾಬಾದ್‌ಗೆ (Hyderabad) ಆಗಮಿಸಿದೆ. 2023ರ ವಿಶ್ವಕಪ್‌ನಲ್ಲಿ (ICC ODI World Cup 2023) ಪಾಕ್ ತಂಡ ಎರಡು ಅಭ್ಯಾಸ ಪಂದ್ಯಗಳನ್ನು ಹೈದರಾಬಾದ್‌ನಲ್ಲಿ ಆಡಲಿದೆ. ಹೀಗಾಗಿ ನೇರವಾಗಿ ಹೈದರಾಬಾದ್‌ಗೆ ಬಂದಿಳಿದಿದೆ.

ನಾಳೆ ನ್ಯೂಜಿಲೆಂಡ್ ವಿರುದ್ಧ ಮೊದಲ ಅಭ್ಯಾಸ ಪಂದ್ಯ

ಪಾಕಿಸ್ತಾನ ತಂಡ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ನಾಳೆ (ಸೆಪ್ಟೆಂಬರ್ 29, ಶುಕ್ರವಾರ) ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಈ ಪಂದ್ಯ ಹೈದರಾಬಾದ್‌ನ ಉಪ್ಪಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಕಳೆದ ಬಾರಿ 2016ರ ಟಿ20 ವಿಶ್ವಕಪ್‌ಗಾಗಿ ಪಾಕಿಸ್ತಾನ ತಂಡ ಭಾರತಕ್ಕೆ ಆಗಮಿಸಿತ್ತು. ಒಂದು ದಶಕದಿಂದ ಟೀಂ ಇಂಡಿಯಾ ಜೊತೆಗೆ ಯಾವುದೇ ದ್ವಿಪಕ್ಷೀಯ ಸರಣಿಗಳನ್ನು ಆಡದ ಕಾರಣ ಪಾಕ್ ತಂಡ ಭಾರತಕ್ಕೆ ಬರಲು ಸಾಧ್ಯವಾಗಲಿಲ್ಲ. ಏಕದಿನ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು 7 ವರ್ಷಗಳ ಬಳಿಕ ಆಗಮಿಸಿರುವುದು ವಿಶೇಷ.

ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ತಂಡ ದುಬೈನಿಂದ ಹೈದರಾಬಾದ್‌ಗೆ ಆಗಮಿಸಿದೆ. ಹಲವು ದಿನಗಳಿಂದ ಭಾರತೀಯ ವೀಸಾಗಾಗಿ ಕಾಯುತ್ತಿದ್ದ ಈ ತಂಡಕ್ಕೆ ಸೋಮವಾರ (ಸೆಪ್ಟೆಂಬರ್ 25) ರಾತ್ರಿ ವೀಸಾ ಕೈಸೇರಿತ್ತು. ಆ ಬಳಿಕ ಪಾಕಿಸ್ತಾನದಿಂದ ದುಬೈಗೆ ಹೋಗಿ ಅಲ್ಲಿಂದ 9 ಗಂಟೆ ಪ್ರಮಾಣಿಸಿ ಹೈದರಾಬಾದ್‌ಗೆ ಬಂದಿಳಿದಿದೆ.

ಅಕ್ಟೋಬರ್ 14 ರಂದು ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ

ಅಕ್ಟೋಬರ್ 5 ರಿಂದ ವಿಶ್ವಕಪ್ ಆರಂಭವಾಗಲಿದ್ದು, ಪಾಕಿಸ್ತಾನ ತನ್ನ ಮೊದಲ ಪಂದ್ಯವನ್ನು ನೆದರ್‌ಲ್ಯಾಂಡ್ಸ್ ವಿರುದ್ಧ ಅಕ್ಟೋಬರ್ 6 ರಂದು ಆಡಲಿದೆ. ಈ ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಅಕ್ಟೋಬರ್ 14 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ತಂಡಗಳು ಸೆಣಸಾಟ ನಡೆಸಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿದ್ದೇನೆ ಎಂದು ಪಾಕ್ ತಂಡದ ನಾಯಕ ಬಾಬರ್ ಅಜಮ್ ಹೇಳಿದ್ದಾರೆ.

ವಿಶ್ವಕಪ್‌ಗೆ ಪಾಕಿಸ್ತಾನ ಕ್ರಿಕೆಟ್ ತಂಡ

ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್, ಫಖರ್ ಜಮಾನ್, ಇಮಾಮ್ ಉಲ್ ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್, ಸಾದ್ ಶಕೀಲ್, ಇಫ್ತಿಕರ್ ಅಹ್ಮದ್, ಸಲ್ಮಾನ್ ಅಲಿ ಅಘಾ, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಹ್ಯಾರಿಸ್ ರೌಫ್, ಹಸನ್ ಅಲಿ, ಶಾಹೀನ್ ಶಾ ಅಫ್ರಿದಿ, ಮೊಹಮ್ಮದ್ ವಾಸೀಂ.

Whats_app_banner