ಸಚಿನ್ ಅವರ 100 ಶತಕಗಳ ದಾಖಲೆಯನ್ನೂ ವಿರಾಟ್ ಕೊಹ್ಲಿ ಬ್ರೇಕ್ ಮಾಡ್ತಾರೆ; ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ
ವಿರಾಟ್ ಕೊಹ್ಲಿ ಸಚಿನ್ ಅವರ 100 ಶತಕಗಳ ದಾಖಲೆಯನ್ನೂ ಬ್ರೇಕ್ ಮಾಡ್ತಾರೆ ಎಂದು ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಭವಿಷ್ಯ ನುಡಿದಿದ್ದಾರೆ.
ಮುಂಬೈ (ಮಹಾರಾಷ್ಟ್ರ): ನ್ಯೂಜಿಲೆಂಡ್ (New Zealand) ವಿರುದ್ಧದ ಐಸಿಸಿ ಏಕದಿನ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ (ICC ODI World Cup Semi Final) ಟೀಂ ಇಂಡಿಯಾದ (Team India) ರನ್ ಮೆಷಿನ್ ವಿರಾಟ್ ಕೊಹ್ಲಿ (Virat Kohli) ಆಕರ್ಷಕ ಶತಕ ಸಿಡಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 50ನೇ ಶತಕವನ್ನು ಪೂರೈಸಿದ್ದರು. ಈ ಮಹತ್ವದ ಮೈಲಿಗಲ್ಲು ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ 49 ಶತಕಗಳ ದಾಖಲೆಯನ್ನು ಬ್ರೇಕ್ ಮಾಡಿದ್ದರು.
ಇದೇ ವಿಚಾರವಾಗಿ ಮಾತನಾಡಿರುವ ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ (Ravi Shastri), ವಿರಾಟ್ ಕೊಹ್ಲಿ 291 ಏಕದಿನ ಪಂದ್ಯಗಳಲ್ಲಿ 50 ಶತಕಗಳ ಗಡಿ ತಲುಪಿದ್ದಾರೆ. ವಿರಾಟ್ ಮೂರು ಮಾದರಿಯ ಕ್ರಿಕೆಟ್ ಆಡುತ್ತಿದ್ದು, ಇನ್ನೂ ಮೂರ್ನಾಲ್ಕು ವರ್ಷಗಳ ಕಾಲ ಆಟದಲ್ಲಿ ಮುಂದುವರಿಯುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಕ್ರಿಕೆಟ್‌ನಲ್ಲಿ ಯಾವುದೂ ಅಸಾಧ್ಯವಲ್ಲ-ರವಿಶಾಸ್ತ್ರಿ
ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿ ಫೈನಲ್ ಪಂದ್ಯದ ಬಳಿಕ ಐಸಿಸಿಯೊಂದಿಗೆ ಮಾತನಾಡಿದ ಶಾಸ್ತ್ರಿ, ಸಚಿನ್ 100 ಶತಕಗಳನ್ನು ಬಾರಿಸಿದಾಗ ಅದರ ಹತ್ತಿರ ಯಾರೂ ಕೂಡ ಬರುವುದಿಲ್ಲ ಎಂದು ಎಲ್ಲರೂ ಭಾವಿಸಿದ್ದರು. ಆದರೆ ವಿರಾಟ್ ಕೊಹ್ಲಿ ಈಗಾಗಲೇ 80 ಶತಕಗಳ ಸಾಧನೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 80 ಶತಕಗಳ ಪೈಕಿ 50 ಶತಕಗಳು ಏಕದಿನ ಕ್ರಿಕೆಟ್‌ನಲ್ಲೇ ಬಂದಿವೆ. ಇದು ಅದ್ಭುತವಾದ ಸಾಧನೆಯಾಗಿದ್ದು, ಯಾವುದೂ ಅಸಾಧ್ಯವಲ್ಲ ಎಂದಿದ್ದಾರೆ.
ವಿರಾಟ್ ಕೊಹ್ಲಿ ಇನ್ನೂ ಎಷ್ಟು ವರ್ಷ ಕ್ರಿಕೆಟ್ ಆಡಬಹುದು?
ಯಾಕೆಂದರೆ ಇಂತಹ ಆಟಗಾರರು ಶತಕಗಳನ್ನು ಗಳಿಸಲು ಪ್ರಾರಂಭಿಸಿದಾಗ ಅದರ ವೇಗವನ್ನು ಹೆಚ್ಚಿಸುತ್ತಾರೆ. ತಮ್ಮ ಮುಂದಿನ 10 ಇನ್ನಿಂಗ್ಸ್‌ಗಳಲ್ಲಿ ಇನ್ನೂ 5 ಬಾರಿ ಶತಕಗಳನ್ನು ಗಳಿಸಬಹುದು. ವಿರಾಟ್ ಎಲ್ಲಾ ಮೂರು ಸ್ವರೂಪಗಳಲ್ಲಿ ಪ್ರಸ್ತುತ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇನ್ನೂ ಮೂರು ವರ್ಷ ಆಡುವ ಸಾಧ್ಯತೆಯೂ ಇದೆ ಎಂದು ರವಿಶಾಸ್ತ್ರಿ ತಿಳಿಸಿದ್ದಾರೆ.
ದೊಡ್ಡ ಪಂದ್ಯಗಳ ಆರಂಭದಲ್ಲಿ ಕ್ರೀಸ್‌ನಲ್ಲಿ ಉಳಿಯುವ ಮೂಲಕ ಕೊಹ್ಲಿ ಒತ್ತಡವನ್ನು ತಡೆದುಕೊಳ್ಳಲು ಪ್ರಯತ್ನಿಸುತ್ತಾರೆ. ಕಳೆದ ವಿಶ್ವಕಪ್‌ನಲ್ಲಿ ಕೊಹ್ಲಿ ಆಟ ಸಂಪೂರ್ಣ ವಿಭಿನ್ನವಾಗಿತ್ತು. ಕ್ರೀಸ್‌ಗೆ ಬಂದ ತಕ್ಷಣ ಬ್ಯಾಟ್ ಬೀಸಲು ಪ್ರಯತ್ನಿಸುತ್ತಿದ್ದರು. ಆದರೆ ಈಗ ಆ ರೀತಿಯ ಆಟವನ್ನು ಆಡುತ್ತಿಲ್ಲ. ಕ್ರೀಸ್‌ಗೆ ಬಂದ ನಂತರ ರನ್ ಗಳಿಸಲು ಸಮಯವನ್ನು ತೆಗೆದುಕೊಳ್ಳುತ್ತಿದ್ದಾರೆ. ಒತ್ತಡವನ್ನು ನಿಭಾಯಿಸುವುದು, ಇನ್ನಿಂಗ್ಸ್‌ನ ಕೊನೆಯ ವರೆಗೆ ನಿಂತರ ಮಾಡುವ ಮೂಲಕ ತಮ್ಮ ಪಾತ್ರವನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ. ವಿರಾಟ್ ಕೊಹ್ಲಿ ಅದ್ಭುತವಾಗಿ ಆಡುತ್ತಿದ್ದಾರೆ ಎಂದು ರವಿಶಾಸ್ತ್ರಿ ಮೆಚ್ಚಗೆ ವ್ಯಕ್ತಪಡಿಸಿದ್ದಾರೆ.
ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ರನ್ ದಾಖಲೆ ಬರೆದ ವಿರಾಟ್ ಕೊಹ್ಲಿ
2023ರ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಈಗಾಗಲೇ ಮೂರು ಶತಕಗಳು ಹಾಗೂ ಐದು ಅರ್ಧ ಶತಕಗಳೊಂದಿಗೆ ಆಡಿರುವ 10 ಪಂದ್ಯಗಳಿಂದ 711 ರನ್ ಗಳಿಸಿದ್ದಾರೆ. ಈ ಮೂಲಕ ವಿಶ್ವಕಪ್ ಆವತ್ತಿಯೊಂದರಲ್ಲಿ ವೈಯಕ್ತಿಕ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಬರೆದಿದ್ದಾರೆ.
ಸಚಿನ್ ತೆಂಡೂಲ್ಕರ್ (Sachin Tendulkar) 673 ರನ್ ಈವರೆಗಿನ ದಾಖಲೆಯಾಗಿತ್ತು. ಆದರೆ ಈ ದಾಖಲೆಯನ್ನೂ ಕೊಹ್ಲಿ ಬ್ರೇಕ್ ಮಾಡಿದ್ದಾರೆ. ಇದೇ ಭಾನುವಾರ (ನವೆಂಬರ್ 19) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಲಿದ್ದಾರೆ.