Dasun Shanaka: ಸತತ 2 ಸೋಲುಗಳ ನಡುವೆ ಶ್ರೀಲಂಕಾ ತಂಡಕ್ಕೆ ಮತ್ತೊಂದು ಹೊಡೆತ; ನಾಯಕ ದಸುನ್ ಶನಕ ಐಸಿಸಿ ವಿಶ್ವಕಪ್‌ನಿಂದ ಔಟ್
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 6 ವಿಕೆಟ್‌ಗಳ ಸೋಲು ಕಂಡಿದ್ದ ಶ್ರೀಲಂಕಾ ತಂಡಕ್ಕೆ ಭಾರಿ ಹಿನ್ನಡೆಯಾಗಿದ್ದು, ನಾಯಕ ದಸುನ್ ಶನಕ ವಿಶ್ವಕಪ್‌ನಿಂದ ಔಟ್ ಆಗಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ತಂಡದ (Sri Lanka Cricket Team) ನಾಯಕ ದಸುನ್ ಶನಕ (Dasun Shanaka) ತೊಡೆಯ ಗಾಯದಿಂದ ಬಳಲುತ್ತಿದ್ದು, ವಿಶ್ವಕಪ್‌ನ (ICC ODI World Cup 2023) ಉಳಿದ ಪಂದ್ಯಗಳಿಂದ ಸಂಪೂರ್ಣವಾಗಿ ಔಟ್ ಆಗಿದ್ದಾರೆ. ಶಕನ ಗಾಯದಿಂದ ಚೇತರಿಸಿಕೊಳ್ಳಲು ಇನ್ನೂ 3 ವಾರಗಳು ಬೇಕಿರುವುದರಿಂದ ಅವು ಐಸಿಸಿ ವಿಶ್ವಕಪ್‌ನಿಂದ ಹೊರಗುಳಿಯುತ್ತಿದ್ದಾರೆ.
ಶನಕ ಬದಲಿಗೆ ಚಾಮಿಕಾ ಕರುಣಾರತ್ನೆ (Chamika Karunaratne) ಅವರನ್ನು ಶ್ರೀಲಂಕಾ ತಂಡದಲ್ಲಿ ಬದಲಿ ಆಟಗಾರನಾಗಿ ಸೇರಿಸಿಕೊಂಡಿರುವ ಮನವಿಯನ್ನು ಅಂಗೀಕರಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ-ಐಸಿಸಿ ಶನಿವಾರ (ಅಕ್ಟೋಬರ್ 14) ಸ್ಪಷ್ಟಪಡಿಸಿದೆ.
ಅಕ್ಟೋಬರ್ 10 (ಮಂಗಳವಾರ) ಪಾಕಿಸ್ತಾನ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಶ್ರೀಲಂಕಾ 6 ವಿಕೆಟ್‌ಗಳ ಸೋಲು ಕಂಡಿತ್ತು. ಇದೇ ಪಂದ್ಯದ ವೇಳೆ ನಾಯಕ 32 ವರ್ಷದ ದಸುನ್ ಶನಕ ತೊಡೆಯ ಸ್ನಾಯುವಿನ ಗಾಯಕ್ಕೆ ಒಳಗಾಗಿದ್ದರು. ಐಸಿಸಿ ಪುರುಷರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ತಾಂತ್ರಿಕ ಸಮಿತಿಯು ಶ್ರೀಲಂಕಾ ತಂಡದಲ್ಲಿ ದಸುನ್ ಶನಕ ಅವರ ಬದಲಿಗೆ ಚಾಮಿಕಾ ಕರುಣಾರತ್ನೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ.
ಸತತ 2 ಸೋಲು, ಅಂಕಪಟ್ಟಿಯಲ್ಲಿ 7ನೇ ಸ್ಥಾನ
ಭಾರತದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್‌ನಲ್ಲಿ ಶ್ರೀಲಂಕಾ ತಾನಾಡಿರುವ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದೆ. ಅಕ್ಟೋಬರ್ 7 ರಂದು ನಡೆದಿದ್ದ ದಕ್ಷಿಣ ಅಫ್ರಿಕಾ ವಿರುದ್ಧ 102 ರನ್‌ಗಳ ಪರಾಭವ, ಪಾಕಿಸ್ತಾನ ವಿರುದ್ಧ 6 ವಿಕೆಟ್‌ಗಳ ಸೋಲು ಕಂಡ ಬಳಿಕ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿದೆ. ಸೋಮವಾರ (ಅಕ್ಟೋಬರ್ 16) ಲಕ್ನೋದಲ್ಲಿ ಆಸ್ಟ್ರೇಲಿಯಾ ವಿರುದ್ಧ ತನ್ನ ಮೂರನೇ ಪಂದ್ಯವನ್ನು ಆಡಲಿದೆ.
ಶ್ರೀಲಂಕಾ ತಂಡ
ಕುಸಾಲ್ ಮೆಂಡಿಸ್ (ಉಪ ನಾಯಕ), ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ (ವಿಕೆಟ್ ಕೀಪರ್), ದಿಮುತ್ ಕುರುಣಾರತ್ನೆ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ಸದೀರ ಸಮರವಿಕ್ರಮ (ವಿಕೆಟ್ ಕೀಪರ್), ದುಶನ್ ಹೇಮಂತ, ಮಹೀಶ್ ತೀಕ್ಷಣ, ದುನಿತ್ ವೆಲ್ಲಲಾಗೆ, ಕಸುನ್ ರಜಿತ, ದಿಲ್ಶನ್ ಮಧುಶಂಕ, ಮತೀಶ ಪತಿರಣ, ಲಹಿರು ಕುಮಾರ. (ದಸುನ್ ಶನಕ ಔಟ್, ಚಾಮಿಕಾ ಕರುಣಾರತ್ನ ಇನ್)