Sunil Chhetri: ವಿರಾಟ್ ಕೊಹ್ಲಿಯವರ ಆಟವನ್ನು ನೋಡಿ ನಾನು ಸಾಕಷ್ಟು ಕಲಿಯುತ್ತೇನೆ: ಸುನಿಲ್ ಛೆಟ್ರಿ
ವಿರಾಟ್ ಕೊಹ್ಲಿ ಆಡುವಾಗ ಅವರಿಂದ ನಾನು ಸಾಕಷ್ಟು ಕಲಿಯುತ್ತೇನೆ ಎಂದು ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಹೇಳಿದ್ದಾರೆ.
ಬೆಂಗಳೂರು: ವಿಶ್ವಕಪ್‌ನಲ್ಲಿ (ICC OID World Cup 2023) ಟೀಂ ಇಂಡಿಯಾದ (Team India) ಪ್ರದರ್ಶನ ಬಗ್ಗೆ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ (Sunil Chhetri) ಮಾತನಾಡಿದ್ದಾರೆ. ಅದರಲ್ಲೂ ವಿಕೆಟ್ ಕೊಹ್ಲಿ (Virat Kohli) ಅವರ ಬ್ಯಾಟಿಂಗ್ ಕುರಿತು ಮನದ ಮಾತುಗಳನ್ನು ಹೇಳಿದ್ದಾರೆ.
ಕರ್ಲಿ ಟೆಲ್ಸ್ ಸಂಸ್ಥೆಯೊಂದಿಗೆ ಮಾತನಾಡಿರುವ ಛೆಟ್ರಿ, ನಾನು ಕೂಡ ವಿಶ್ವಕಪ್ ಪಂದ್ಯಗಳನ್ನು ನೋಡುತ್ತಿದ್ದೇನೆ. ಆದರೆ ಪೂರ್ಣ ಪ್ರಮಾಣದಲ್ಲಿ ಪಂದ್ಯವನ್ನು ನೋಡಲು ಸಾಧ್ಯವಾಗುತ್ತಿಲ್ಲ. ಆದರೆ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ನೋಡುವ ಅವಕಾಶ ಸಿಕ್ಕಿತ್ತು. ಸಾಮಾನ್ಯವಾಗಿ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯವನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
‘ಇವತ್ತು ಏನೇ ಮಾಡಿದ್ರು ನಾಳೆ ಮತ್ತೊಂದು ಸಾಧನೆಯ ಹಸಿವಾಗುತ್ತೆ’
ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿರುವ ಸುನಿಲ್ ಛೆಟ್ರಿ, ವಿರಾಟ್ ಕೊಹ್ಲಿ ಆಡುವಾಗ, ಟೀ ಇಂಡಿಯಾ ಆಡುವಾಗ ನಾನು ಏನಾದರೂ ಕಲಿಯುತ್ತೇನೆ. ವಿರಾಟ್ ಕೊಹ್ಲಿ ಅವರಿಂದ ಒಂದು ವಿಷಯವನ್ನು ಕಲಿತಿದ್ದೇನೆ. ಇಂದು ಅವರು ಏನೇ ಸಾಧನೆ ಮಾಡಿದ್ರು ನಾಳೆ ಅವರಿಗೆ ಮತ್ತೆ ಸಾಧನೆಯ ಹಸಿವಾಗುತ್ತೆ ಎಂದು ಹೇಳಿದ್ದಾರೆ.
ಇದೇ ವೇಳೆ ತಮ್ಮ ಬಾಲ್ಯದ ದಿನಗಳನ್ನು ಮೆಲುಕಿಹಾಕಿರುವ ಛೆಟ್ರಿ, ಫುಟ್ಬಾಲ್ ಹೊರತುಪಡಿಸಿ ನಾನು ಯಾವುದರಲ್ಲೂ ಉತ್ತಮವಾಗಿರಲಿಲ್ಲ. ಶಾಲೆಯಲ್ಲಿ ವಾಲಿಬಾಲ್ ಆಟಗಳಲ್ಲಿ ಹಣವನ್ನು ಬಾಜಿ ಕಟ್ಟುತ್ತಿದ್ದೆ. ಆಗ ನಾನು ಬಹಳಷ್ಟು ಹಣವನ್ನು ಗಳಿಸಿದ್ದೆ ಎಂದಿದ್ದಾರೆ. ಯುವಕರಿಗೆ ಸಂದೇಶವನ್ನು ನೀಡಿದ್ದು, ಮೊದಲು ಕ್ರೀಡೆಯಿಂದ ಹಣ ಸಂಪಾದಿಸುವ ಬಗ್ಗೆ ಯೋಚಿಸಬೇಡಿ.
ಮೊದಲು ಆಡಕ್ಕೆ ಹೆಚ್ಚಿನ ಗಮನಕೊಡಿ. ಯಾಕೆಂದರೆ ಆಟಕ್ಕೆ ಹೆಚ್ಚು ಒತ್ತು, ಕಠಿಣ ಪರಿಶ್ರಮ ಹಾಕಿದರೆ ಅದು ನಿಮ್ಮನ್ನು ಉತ್ತಮ ಮನುಷ್ಯನನ್ನಾಗಿ ಮಾಡುತ್ತದೆ. ಆರೋಗ್ಯಕರ ಮನುಷ್ಯನನ್ನಾಗಿ ಮಾಡುತ್ತದೆ. ಒಂದು ವೇಳೆ ನೀವು ಸೋತರೂ ಅದು ನಿಮಗೆ ಕಲಿಸುತ್ತದೆ. ಕ್ರೀಡೆ ನಿಮಗೆ ಮುಂದುವರಿಯುವುದನ್ನು ಕಲಿಸುತ್ತದೆ ಎಂದು ವಿವರಿಸಿದ್ದಾರೆ.
ತಮ್ಮ ನೆಚ್ಚಿನ ತಾಣದ ಬಗ್ಗೆಯೂ ಮಾತನಾಡಿದ್ದು, ನನಗೆ ಊಟಿ ನೆಟ್ಟಿನ ತಾಣ ಎಂದಿದ್ದಾರೆ. ಇದು ಪರ್ವತವಲ್ಲ, ಆದರೆ ಅದು ನಿಮಗೆ ಚಳಿಯ ಅನುಭವವನ್ನು ನೀಡುತ್ತದೆ. ಬಂಡೀಪುರ ಮತ್ತು ಕಬಿನಿ ಕಾಡು ಹತ್ತಿರದಲ್ಲೇ ಇದೆ. ಅದು ನಮ್ಮ ನೆಚ್ಚಿನ ಗೇಟ್‌ವೇ ಎಂದು ಬಹಿರಂಗಪಡಿಸಿದ್ದಾರೆ.
ನವೆಂಬರ್ 15ಕ್ಕೆ ಭಾರತ-ನ್ಯೂಜಿಲೆಂಡ್ ಸೆಮಿ ಫೈನಲ್ ಫೈಟ್
ಐಸಿಸಿ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿದ್ದು, ವಿಶ್ವಕಪ್ ಚಾಂಪಿಯನ್ ಆಗಲು ಇನ್ನೆರಡು ಮೆಟ್ಟಿಲು ಬಾಕಿ ಇದೆ. 2023ರ ವಿಶ್ವಕಪ್‌ನ ಗ್ರೂಪ್ ಹಂತದ ಆರಂಭದಿಂದಲೂ ಪ್ರಾಬಲ್ಯ ಮೆರೆದಿರುವ ರೋಹಿತ್ ಅಂಡ್ ಟೀಂ ಇಂಡಿಯಾ ಅಗ್ರಸ್ಥಾನಿಯಾಗಿ ಸೆಮಿ ಫೈನಲ್ ಪ್ರವೇಶಿಸಿದೆ. ಆಡಿರುವ 8 ಪಂದ್ಯಗಳ ಪೈಕಿ ಎಂಟರಲ್ಲೂ ಗೆಲುವು ಸಾಧಿಸಿದೆ.
ನೆದರ್ಲೆಂಡ್ಸ್ ವಿರುದ್ಧದ ಕೊನೆಯ ಪಂದ್ಯವನ್ನು ಬೆಂಗಳೂರಿನಲ್ಲಿ ಇಂದು (ನವೆಂಬರ್ 12, ಭಾನುವಾರ) ಆಡುತ್ತಿದೆ. ಈ ಪಂದ್ಯವನ್ನೂ ಗೆದ್ದು ಗ್ರೂಪ್ ಹಂತದಲ್ಲಿ 9ಕ್ಕೆ 9 ಪಂದ್ಯಗಳನ್ನೂ ಗೆದ್ದು, ಸೆಮಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪೈಪೋಟಿಗೆ ಪ್ಲಾನ್ ಮಾಡಿಕೊಂಡಿದೆ.