ಅಡಿಲೇಡ್ ಟೆಸ್ಟ್ ವಿವಾದ; ಮೊಹಮ್ಮದ್ ಸಿರಾಜ್ ಮತ್ತು ಟ್ರಾವಿಸ್ ಹೆಡ್‌ಗೆ ದಂಡ ವಿಧಿಸಿದ ಐಸಿಸಿ
ಅಡಿಲೇಡ್ ಟೆಸ್ಟ್ ಪಂದ್ಯದ ವೇಳೆ ಮೊಹಮ್ಮದ್ ಸಿರಾಜ್ ಮತ್ತು ಟ್ರಾವಿಸ್ ಹೆಡ್ ನಡುವೆ ಕೈಸನ್ನೆ ಮತ್ತು ಮಾತಿನ ಚಕಮಕಿ ನಡೆದಿತ್ತು. ಹೀಗಾಗಿ ಉಭಯ ಆಟಗಾರರಿಗೆ ಐಸಿಸಿ ದಂಡ ವಿಧಿಸಿದೆ. ಅಲ್ಲದೆ ಒಂದು ಡಿಮೆರಿಟ್ ಪಾಯಿಂಟ್ ವಿಧಲಾಗಿದೆ. ಅಮಾನತು ಶಿಕ್ಷೆಯಿಂದ ಇಬ್ಬರೂ ಪಾರಾಗಿದ್ದಾರೆ.
ಅಡಿಲೇಡ್‌ನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಎರಡನೇ ಟೆಸ್ಟ್ ಪಂದ್ಯದ ವೇಳೆ, ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಮತ್ತು ಆಸ್ಟ್ರೇಲಿಯಾ ಬ್ಯಾಟರ್ ಟ್ರಾವಿಸ್ ಹೆಡ್ ನಡುವೆ ಮೈದಾನದಲ್ಲಿಯೇ ವಾಗ್ವಾದ ನಡೆದಿತ್ತು. ಈ ಘಟನೆಯ ವಿಡಿಯೋಗಳು ಕೂಡಾ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದೀಗ ಘಟನೆ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಉಭಯ ಆಟಗಾರರಿಗೆ ದಂಡ ವಿಧಿಸಿದೆ.
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.5 ಉಲ್ಲಂಘಿಸಿದ್ದಕ್ಕಾಗಿ ಸಿರಾಜ್‌ಗೆ ಪಂದ್ಯದ ಶುಲ್ಕದ ಶೇಕಡಾ 20 ರಷ್ಟು ದಂಡ ವಿಧಿಸಲಾಗಿದೆ. ಈ ಕ್ರಮವು, “ಬ್ಯಾಟರ್ ಆಕ್ರಮಣಕಾರಿ ಪ್ರತಿಕ್ರಿಯೆಯನ್ನು ಪ್ರಚೋದಿಸುವ ಭಾಷೆ, ಕ್ರಿಯೆಗಳು ಅಥವಾ ಸನ್ನೆಗಳನ್ನು ಬಳಸುವುದಕ್ಕೆ ಸಂಬಂಧಿಸಿದೆ.”
ಅತ್ತ, ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಯು ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.13 ಅನ್ನು ಉಲ್ಲಂಘಿಸಿದ್ದಕ್ಕಾಗಿ ಟ್ರಾವಿಸ್ ಹೆಡ್‌ಗೂ ದಂಡ ವಿಧಿಸಲಾಗಿದೆ. ಇದು “ಅಂತಾರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಆಟಗಾರ, ಆಟಗಾರರ ಬೆಂಬಲ ಸಿಬ್ಬಂದಿ, ಅಂಪೈರ್ ಅಥವಾ ಮ್ಯಾಚ್ ರೆಫರಿಯನ್ನು ನಿಂದಿಸುವುದಕ್ಕೆ ಸಂಬಂಧಿಸಿದೆ”.
ಕಳೆದ 24 ತಿಂಗಳ ಅವಧಿಯಲ್ಲಿ ಉಭಯ ಆಟಗಾರರ ಮೊದಲ ತಪ್ಪು ಇದಾಗಿರುವುದರಿಂದ, ಇಬ್ಬರೂ ಆಟಗಾರರಿಗೆ ತಲಾ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಹೀಗಾಗಿ ಅಮಾನತು ಶಿಕ್ಷೆಯಿಂದ ಇಬ್ಬರೂ ಪಾರಾಗಿದ್ದಾರೆ.
ಮೊಹಮ್ಮದ್ ಸಿರಾಜ್ ಮತ್ತು ಟ್ರಾವಿಸ್ ಹೆಡ್ ನಡುವೆ ಆಗಿದ್ದೇನು?
ಎರಡನೇ ಟೆಸ್ಟ್ ಪಂದ್ಯದ ವೇಳೆ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಮತ್ತು ಟ್ರಾವಿಸ್ ಹೆಡ್ ಅವರ ನಡುವೆ ಈ ವಿವಾದ ನಡೆದಿತ್ತು. ಪಂದ್ಯದ 2ನೇ ದಿನದಾಟದಂದು ಇಬ್ಬರ ನಡುವೆ ಜಟಾಪಟಿ ನಡೆದಿತ್ತು. ಆಸೀಸ್ ತಂಡದ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿ ಮಿಂಚುತ್ತಿದ್ದ ಟ್ರಾವಿಸ್ ಹೆಡ್ ಅವರನ್ನು ಯಾರ್ಕರ್ ಮೂಲಕ ಸಿರಾಜ್ ಕ್ಲೀನ್ ಬೋಲ್ಡ್ ಮಾಡಿದ್ದರು. ಅದುವರೆಗೂ ಅಬ್ಬರಿಸಿದ್ದ ಹೆಡ್ ಔಟಾಗುತ್ತಿದ್ದಂತೆಯೇ ಸಿರಾಜ್ ಕೂಡಾ ಪೆವಿಲಿಯನ್‌ಗೆ ನಡಿ ಎಂಬಂತೆ ಕೈ ಸನ್ನೆ ಮಾಡಿದ್ದರು. ಈ ವೇಳೆ ಹೆಡ್ ಕೂಡ ಗೊಣಗುತ್ತಾ ಹೊರನಡೆದಿದ್ದರು. ಘಟನೆ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಆ ಬಳಿಕ ಇಬ್ಬರೂ ಪರಸ್ಪರ ಕ್ಷಮೆ ಕೋರಿ ವಿವಾದಕ್ಕೆ ತೆರೆ ಎಳೆದಿದ್ದರು.
ಆಸೀಸ್‌ಗೆ ಸುಲಭ ಗೆಲುವು
ಪರ್ತ್‌ನಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್‌ನಲ್ಲಿ 295 ರನ್ಗಳ ಭರ್ಜರಿ ಗೆಲುವು ದಾಖಲಿಸಿದ್ದ ಭಾರತ, 2ನೇ ಟೆಸ್ಟ್‌ನಲ್ಲಿ ಹೀನಾಯ ಸೋಲು ಕಂಡಿತು. ಅಡಿಲೇಡ್ ಓವಲ್ ಮೈದಾನದಲ್ಲಿ ಪಿಂಕ್ ಟೆಸ್ಟ್ ಗೆಲುವು ಮುಂದುವರೆಸಿದ ಆಸ್ಟ್ರೇಲಿಯಾ ತಂಡ, 10 ವಿಕೆಟ್ಗಳ ಸುಲಭ ಗೆಲುವು ಸಾಧಿಸಿತು. ಆ ಮೂಲಕ ಸರಣಿ ಸಮಬಲಗೊಳಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ, ಮೊದಲ ಇನ್ನಿಂಗ್ಸ್‌ನಲ್ಲಿ 180 ರನ್ಗಳಿಗೆ ಸರ್ವಪತನ ಕಂಡಿತು. ಇದಕ್ಕೆ ಪ್ರತಿಯಾಗಿ ಬ್ಯಾಟ್ ಬೀಸಿದ ಆಸೀಸ್, ಪ್ರಥಮ ಇನ್ನಿಂಗ್ಸ್‌ನಲ್ಲಿ ಪರಿಣಾಮ 337 ರನ್ ಗಳಿಸಿತು. 157 ರನ್ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆಡಿದ ಭಾರತ, ಕೇವಲ 175 ರನ್ಗಳಿಗೆ ಕುಸಿಯಿತು. ಇದರೊಂದಿಗೆ ಆಸೀಸ್ ಕೇವಲ 19 ರನ್ಗಳ ಅಲ್ಪ ಗುರಿಯನ್ನು ವಿಕೆಟ್ ನಷ್ಟವಿಲ್ಲದೆ ತಲುಪಿತು.