ದಕ್ಷಿಣ ಆಫ್ರಿಕಾ ವಿರುದ್ಧ ಮಿತಿ ಮೀರಿದ ಅತಿರೇಕ; ಶಾಹೀನ್ ಅಫ್ರಿದಿ ಸೇರಿ ಪಾಕಿಸ್ತಾನದ ಮೂವರಿಗೆ ದಂಡ ಬರೆ ಎಳೆದ ಐಸಿಸಿ
Pakistan vs South Africa: ಪಾಕಿಸ್ತಾನದ ಶಾಹೀನ್ ಅಫ್ರಿದಿ, ಸೌದ್ ಶಕೀಲ್ ಮತ್ತು ಕಮ್ರಾನ್ ಗುಲಾಮ್ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಆಕ್ರಮಣಕಾರಿ ಮತ್ತು ಅತಿರೇಕದ ನಡವಳಿಕೆಯ ವಿರುದ್ಧ ಐಸಿಸಿ ಕ್ರಮ ಕೈಗೊಂಡಿದೆ.

ಫೆಬ್ರವರಿ 12ರಂದು ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಕದಿನ ತ್ರಿಕೋನ ಸರಣಿಯ ಕೊನೆ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ (South Africa) ವಿರುದ್ಧ ಅತಿರೇಕದಿಂದ ವರ್ತಿಸಿ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ ಪಾಕಿಸ್ತಾನದ ಆಟಗಾರರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ದಂಡ ಬರೆ ಎಳೆದಿದೆ. ಐಸಿಸಿ ನೀತಿ ಸಂಹಿತೆಯ ಹಂತ-1 ಉಲ್ಲಂಘಿಸಿದ ಶಾಹೀನ್ ಅಫ್ರಿದಿ, ಸೌದ್ ಶಕೀಲ್, ಕಮ್ರಾನ್ ಗುಲಾಮ್ ದಂಡಕ್ಕೆ ಗುರಿಯಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಸಾರ್ವಕಾಲಿಕ ದಾಖಲೆಯ ಗುರಿ ಬೆನ್ನಟ್ಟಿ ಫೈನಲ್ ಪ್ರವೇಶಿಸಿದ ಈ ಪಂದ್ಯದಲ್ಲಿ ಅತಿರೇಕದಿಂದ ಸಂಭ್ರಮಿಸಿದ್ದು ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ, ಅವರವರ ಅಪರಾಧಗಳಿಗೆ ಐಸಿಸಿ ಶಿಕ್ಷೆ ನೀಡಿದೆ.
ಅಂತಾರಾಷ್ಟ್ರೀಯ ಪಂದ್ಯದ ವೇಳೆ ಆಟಗಾರ, ಆಟಗಾರರ ಬೆಂಬಲ ಸಿಬ್ಬಂದಿ, ಅಂಪೈರ್, ಮ್ಯಾಚ್ ರೆಫರಿ ಅಥವಾ ಇತರ ಯಾವುದೇ ವ್ಯಕ್ತಿಯೊಂದಿಗೆ (ಪ್ರೇಕ್ಷಕ ಸೇರಿದಂತೆ) ಅನುಚಿತ ದೈಹಿಕ ಸಂಪರ್ಕಕ್ಕೆ ಸಂಬಂಧಿಸಿದ ನೀತಿ ಸಂಹಿತೆಯ ಆರ್ಟಿಕಲ್ 2.12 ಉಲ್ಲಂಘಿಸಿದ್ದ ಕಾರಣ ವೇಗಿ ಶಾಹೀನ್ ಶಾ ಅಫ್ರಿದಿ ಅವರಿಗೆ ಪಂದ್ಯದ ಶುಲ್ಕದ ಶೇಕಡಾ 25ರಷ್ಟು ದಂಡ ವಿಧಿಸಲಾಗಿದೆ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ನಡೆಸುತ್ತಿದ್ದ ಅವಧಿಯ 28ನೇ ಓವರ್ನಲ್ಲಿ ವೇಗಿ ಶಾಹೀನ್ ಶಾ ಅಫ್ರಿದಿ ಅವರು ಉದ್ದೇಶಪೂರ್ವಕವಾಗಿಯೇ ಬ್ಯಾಟರ್ ಮ್ಯಾಥ್ಯೂ ಬ್ರಿಟ್ಜ್ಕೆ ರನ್ ಕದಿಯಲು ಯತ್ನಿಸುವ ವೇಳೆ ಅಡ್ಡಿಪಡಿಸಿದ್ದರು. ಇದು ದೈಹಿಕ ಸಂಪರ್ಕ ಮತ್ತು ವಾಗ್ವಾದಕ್ಕೆ ಕಾರಣವಾಗಿತ್ತು. ಅಲ್ಲದೆ, ಶಾಹೀನ್ ನಡೆಗೆ ಎಲ್ಲೆಡೆ ಟೀಕೆಯೂ ವ್ಯಕ್ತವಾಗಿತ್ತು.
ಶಕೀಲ್, ಗುಲಾಮ್ಗೆ ಶೇ 10ರಷ್ಟು ದಂಡ
ಶಾಹೀನ್ ಘಟನೆ ಸಂಭವಿಸಿದ ಮರು ಓವರ್ನಲ್ಲೇ ಶಕೀಲ್ ಮತ್ತು ಗುಲಾಮ್ ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ ಅವರನ್ನು ಔಟ್ ಮಾಡಿ ವಿಚಿತ್ರವಾಗಿ ಸಂಭ್ರಮಿಸಿದ್ದರು. 96 ಎಸೆತಗಳಲ್ಲಿ 13 ಬೌಂಡರಿ ಸಹಿತ 86 ರನ್ ಸಿಡಿಸಿದ್ದ ಬವುಮಾ, 28.5ನೇ ಓವರ್ನಲ್ಲಿ ಅನಗತ್ಯ ರನ್ ಕದಿಯಲು ಯತ್ನಿಸಿ ರನೌಟ್ ಆದರು. ಈ ರನೌಟ್ ಮಾಡಿದ ಸೌದ್ ಶಕೀಲ್ ಜೊತೆಗೆ ಗುಲಾಮ್ ಅವರು ಬವುಮಾ ಮುಖದ ಬಳಿ ಅತಿಯಾಗಿ ವರ್ತಿಸಿದರು. ಆಕ್ರಮಣಕಾರಿಯಾಗಿ ಸಂಭ್ರಮಿಸಿ ಪ್ರಚೋದಿಸುವ ಕ್ರಿಯೆ ನಡೆಸಿದರು. ಆದರೂ ಬವುಮಾ ಮೌನವಾಗಿಯೇ ಮೈದಾನ ತೊರೆದರು. ಹೀಗಾಗಿ ಶಕೀಲ್ ಮತ್ತು ಗುಲಾಮ್ ಅವರಿಗೆ ಪಂದ್ಯದ ಶುಲ್ಕದ ಶೇಕಡಾ 10 ರಷ್ಟು ದಂಡ ವಿಧಿಸಲಾಯಿತು.
ಇಬ್ಬರೂ ಆಟಗಾರರು ಸಂಹಿತೆಯ ಆರ್ಟಿಕಲ್ 2.5 ಅನ್ನು ಉಲ್ಲಂಘಿಸಿದ್ದಾರೆ ಎಂದು ಕಂಡುಬಂದಿದೆ ಎಂದು ಐಸಿಸಿ ತಿಳಿಸಿದೆ. ದಂಡದ ಹೊರತಾಗಿ ಮೂವರು ಆಟಗಾರರಿಗೆ ಒಂದು ಡಿಮೆರಿಟ್ ಅಂಕವನ್ನೂ ನೀಡಲಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 352 ರನ್ಗಳ ಬೃಹತ್ ಮೊತ್ತ ಪೇರಿಸಿತು. ನಾಯಕ ಟೆಂಬಾ ಬವುಮಾ 82, ಮ್ಯಾಥ್ಯೂ ಬ್ರೀಟ್ಜ್ಕೆ 83, ಹೆನ್ರಿಚ್ ಕ್ಲಾಸೆನ್ 87 ರನ್ ಸಿಡಿಸಿದರು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ 49 ಓವರ್ಗಳಲ್ಲೇ 4 ವಿಕೆಟ್ ನಷ್ಟಕ್ಕೆ 355 ರನ್ ಗಳಿಸಿತು. ಮೊಹಮ್ಮದ್ ರಿಜ್ವಾನ್ ಅಜೇಯ 122 ರನ್, ಸಲ್ಮಾನ್ ಆಘಾ 134 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದು ಪಾಕಿಸ್ತಾನ ಚೇಸ್ ಮಾಡಿದ ಗರಿಷ್ಠ ಮೊತ್ತವಾಗಿದೆ.
