ಕನ್ನಡ ಸುದ್ದಿ  /  Cricket  /  Icc T20 Ranking Shubman Gill Reaches Career Best Ranking And Yashasvi Jaiswal Huge Jump Cricket News In Kannada Rmy

ICC T20 Ranking: ಐಸಿಸಿ ಟಿ20 ಶ್ರೇಯಾಂಕದಲ್ಲಿ ವೃತ್ತಿ ಜೀವನದ ಶ್ರೇಷ್ಠ ಸಾಧನೆ ಮಾಡಿದ ಗಿಲ್; ಜೈಸ್ವಾಲ್ ರ‍್ಯಾಂಕಿಂಗ್‌ನಲ್ಲಿ ಭಾರಿ ಜಿಗಿತ

ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕುನೇ ಟಿ20 ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದ ಶುಭ್ಮನ್ ಗಿಲ್ ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ ವೃತ್ತಿಜೀವನದ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಯಶಸ್ವಿ ಜೈಸ್ವಾಲ್ ರಾಕೆಟ್ ರೀತಿ ಜಿಗಿತ ಕಂಡಿದ್ದಾರೆ.

ಟೀಂ ಇಂಡಿಯಾದ ಆರಂಭಿಕ ಬ್ಯಾಟರ್‌ಗಳಾದ ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ (AFP)
ಟೀಂ ಇಂಡಿಯಾದ ಆರಂಭಿಕ ಬ್ಯಾಟರ್‌ಗಳಾದ ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ (AFP)

ಮುಂಬೈ: ಟೀಂ ಇಂಡಿಯಾದ (Team India) ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ (Shubman Gill) ಐಸಿಸಿ ಟಿ20 ಕ್ರಿಕೆಟ್ ರ‍್ಯಾಂಕಿಂಗ್‌ನಲ್ಲಿ (ICC T20 Ranking) ವೃತ್ತಿ ಜೀವನದ ಶ್ರೇಷ್ಠ ಸಾಧನೆ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಗಿಲ್ ವಿಫಲವಾಗಿದ್ದಾರೆ. ಆದರೆ ಫ್ಲೋರಿಡಾದಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಬಾರಿಸಿದ 77 ರನ್‌ಗಳ ಅರ್ಧ ಶತಕದ ನೆರವಿನಿಂದ ಟಿ20 ಶ್ರೇಯಾಂಕದಲ್ಲಿ ಅತ್ಯುತ್ತಮ 25ನೇ ಸ್ಥಾನಕ್ಕೇರಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ಇದು ಅವರ ವೃತ್ತಿಜೀವನದ ಶ್ರೇಷ್ಠ ಸಾಧನೆಯಾಗಿದೆ.

ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ 3-2 ಅಂತರದಿಂದ ಟಿ20 ಸರಣಿಯನ್ನು ಸೋತಿತ್ತು. ನಾಲ್ಕನೇ ಪಂದ್ಯದಲ್ಲಿ ಗಿಲ್ 47 ಎಸೆತಗಳಿಂದ 3 ಬೌಂಡರಿ ಹಾಗೂ 5 ಅಮೋಘ ಸಿಕ್ಸರ್‌ ಸೇರಿ 77 ರನ್‌ಗಳಿಸಿ ಔಟಾಗಿದ್ದರು. ಮಾತ್ರವಲ್ಲದೆ, ಯಶಸ್ವಿ ಜೈಸ್ವಾಲ್ (Jaiswal) ಅವರೊಂದಿಗೆ 165 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಈ ವಾರದ ಐಸಿಸಿ ಟಿ20 ಶ್ರೇಯಾಂಕದಲ್ಲಿ ಗಿಲ್ 43 ಸ್ಥಾನ ಮೇಲಕ್ಕೆ ಬಂದಿದ್ದಾರೆ. ಅಹಮದಾಬಾದ್‌ನಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅಜೇಯ 126 ರನ್‌ಗಳಿಸಿದ್ದರು.

ವಿಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಆಡುವ ಮೂಲಕ ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ರಾಕೆಟ್ ರೀತಿಯಲ್ಲಿ ಐಸಿಸಿ ಟಿ20 ಶ್ರೇಯಾಂಗದಲ್ಲಿ ಪ್ರಗತಿ ಕಂಡಿದ್ದಾರೆ.

ಕೆರಿಬಿಯನ್ನರ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ಜೈಸ್ವಾಲ್, 51 ಎಸೆತಗಳಲ್ಲಿ ಔಟಾಗದೆ 84 ರನ್ ಗಳಿಸಿದ್ದರು. ಇದರಲ್ಲಿ 11 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ಗಳು ಸೇರಿದ್ದವು. ಇವರ ಸ್ಫೋಟಕ ಅರ್ಧ ಶತಕದ ನೆರವಿನಿಂದ ಭಾರತ ತಂಡ ಆ ಪಂದ್ಯವನ್ನು 9 ವಿಕೆಟ್‌ಗಳಿಂದ ಗೆಲ್ಲಲು ನೆರವಾಗಿತ್ತು. ಹೀಗಾಗಿ ಜೈಸ್ವಾಲ್ ಅವರು ಕೂಡ ಸಾವಿರಕ್ಕೂ ಹೆಚ್ಚು ಸ್ಥಾನಗಳ ಪ್ರಗತಿ ಸಾಧಿಸಿದ್ದು, 88ನೇ ರ‍್ಯಾಂಕಿಂಗ್‌ ಪಡೆದಿದ್ದಾರೆ.

ವೆಸ್ಟ್ ಇಂಡೀಸ್ ಆರಂಭಿಕ ಬ್ಯಾಟರ್ ಬ್ರಾಂಡನ್ ಕಿಂಗ್ ಐದು ಸ್ಥಾನ ಮೇಲಕ್ಕೇರಿ ವೃತ್ತಿಜೀವನದ ಅತ್ಯುತ್ತಮ 13ನೇ ಸ್ಥಾನಕ್ಕೆ ತಲುಪಿದ್ದಾರೆ. ಕೈಲ್ ಮೇಯರ್ಸ್ 2 ಸ್ಥಾನ ಏರಿಕೆಯೊಂದಿಗೆ 45ನೇ ಸ್ಥಾನಕ್ಕೆ ಬಂದಿದ್ದರೆ, ಶಿಮ್ರಾನ್ ಹೆಟ್ಮೆಯರ್ 16 ಸ್ಥಾನ ಮೇಲೇರಿ 85ನೇ ಶ್ರೇಯಾಂಕ ಪಡೆದಿದ್ದಾರೆ.

ಬೌಲಿಂಗ್ ವಿಭಾಗದ ಶ್ರೇಯಾಂಕದಲ್ಲಿ ವೆಸ್ಟ್ ಇಂಡೀಸ್‌ನ ಎಡಗೈ ಸ್ಪಿನ್ನರ್ ಅಕೇಲ್ ಹೊಸೈನ್ ಮೂರು ಸ್ಥಾನ ಮೇಲೇರಿ 11ನೇ ಸ್ಥಾನಕ್ಕೆ ಬಂದಿದ್ದಾರೆ. ವಿಂಡೀಸ್‌ನ ಮಾಜಿ ನಾಯಕ ಜೇಸಲ್ ಹೋಲ್ಡರ್ ಎರಡು ಮೇಲಕ್ಕೆದ್ದು 25ನೇ ಸ್ಥಾನದಲ್ಲಿದ್ದಾರೆ. ರೊಮಾರಿಯೊ ಶೆಫರ್ಡ್ 20 ಸ್ಥಾನಗಳ ಜಿಗಿತದೊಂದಿಗೆ 63ನೇ ಸ್ಥಾನವನ್ನು ತಲುಪಿದ್ದಾರೆ.

ಟೀಂ ಇಂಡಿಯಾದ ಎಡಗೈ ಸ್ಪಿನ್ನರ್ ಕುಲ್ದೀಪ್ ಯಾದವ್ ವಿಂಡೀಸ್ ವಿರುದ್ಧ ನಾಲ್ಕನೇ ಪಂದ್ಯದಲ್ಲಿ ಎರಡು ವಿಕೆಟ್ ಕಬಳಿಸುವ ಮೂಲಕ ಶ್ರೇಯಾಂಕದಲ್ಲಿ 23 ಸ್ಥಾನಗಳ ಪ್ರಗತಿ ಕಂಡಿದ್ದು, 28ನೇ ಸ್ಥಾನಕ್ಕೆ ತಲುಪಿದ್ದಾರೆ.

ಕೆರಿಬಿಯನ್ನರ ನಾಡಿನಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿಗಳನ್ನು ಗೆದ್ದುಕೊಂಡಿದ್ದ ಟೀಂ ಇಂಡಿಯಾ 5 ಪಂದ್ಯಗಳ ಟಿ20 ಸರಣಿಯಲ್ಲಿ 3-2 ಅಂತರದೊಂದಿಗೆ ಸೋಲು ಅನುಭವಿಸಿತ್ತು. ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮಾ, ರವೀಂದ್ರ ಜಡೇಡಾ ಅವರಿಗೆ ಈ ಟಿ20 ಸರಣಿಯಿಂದ ವಿಶ್ರಾಂತಿ ನೀಡಲಾಗಿತ್ತು. ಆದರೆ ಅವಕಾಶ ಪಡೆದಿದ್ದ ಕೇರಳದ ಬ್ಯಾಟರ್ ಕಂ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.

ಸಂಬಂಧಿತ ಲೇಖನ

ಸಂಬಂಧಿತ ಲೇಖನ

ಕ್ರಿಕೆಟ್ ಪ್ರೇಮಿಗಳೇ Cricket News, Live Score ಮತ್ತು Kannada News ಮತ್ತು ಸಂಬಂಧಿಸಿದ ಬರಹಗಳನ್ನು ಓದಿ.