ಟಿ20 ವಿಶ್ವಕಪ್ 2024: ನ್ಯೂಜಿಲ್ಯಾಂಡ್ vs ಅಫ್ಘಾನಿಸ್ತಾನ ಪಂದ್ಯದ ಪಿಚ್, ಹವಾಮಾನ ವರದಿ ಹಾಗೂ ಸಂಭಾವ್ಯ ತಂಡ
New Zealand vs Afghanistan: ಗಯಾನಾದಲ್ಲಿ ಜೂನ್ 8ರ ಶನಿವಾರ ನಡೆಯಲಿರುವ ನ್ಯೂಜಿಲ್ಯಾಂಡ್ vs ಅಫ್ಘಾನಿಸ್ತಾನ ಪಂದ್ಯದ ಪಿಚ್, ಹವಾಮಾನ ವರದಿ ಹಾಗೂ ಲೈವ್ ಸ್ಟ್ರೀಮಿಂಗ್ ವಿವರ ಇಲ್ಲಿದೆ.
ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಜೂನ್ 8ರ ಶನಿವಾರ ಅಫ್ಘಾನಿಸ್ತಾನ ಹಾಗೂ ನ್ಯೂಜಿಲ್ಯಾಂಡ್ (New Zealand vs Afghanistan) ತಂಡಗಳು ಮುಖಾಮುಖಿಯಾಗುತ್ತಿವೆ. ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದ ಮೂಲಕ ಕಿವೀಸ್ ತಂಡವು ಟೂರ್ನಿಯಲ್ಲಿ ಅಭಿಯಾನ ಆರಂಭಿಸಲು ಸಜ್ಜಾಗಿದೆ. ಅತ್ತ ಆರಂಭಿಕ ಪಂದ್ಯದಲ್ಲಿ ಉಗಾಂಡಾ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಅಫ್ಘಾನಿಸ್ತಾನ ತಂಡವು, ಸತತ ಎರಡನೇ ಗೆಲುವು ಸಾಧಿಸಿ ಸಿ ಗುಂಪಿನಲ್ಲಿ ಅಗ್ರಸ್ಥಾನ ಉಳಿಸಿಕೊಳ್ಳಲು ಸಜ್ಜಾಗಿದೆ.
ಕಿವೀಸ್ ತಂಡಕ್ಕೆ ಅನುಭವಿ ಆಟಗಾರ ಕೇನ್ ವಿಲಿಯಮ್ಸನ್ ನಾಯಕನಾಗಿ ಮರಳಿದ್ದಾರೆ. ಇದೇ ವೇಳೆ ಐಪಿಎಲ್ ಪಂದ್ಯಾವಳಿಗೆ ಅಲಭ್ಯರಾಗಿದ್ದ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಕೂಡಾ ಲೈನ್-ಅಪ್‌ಗೆ ಮರಳಿದ್ದಾರೆ. ಅತ್ತ ಕೊನೆಯ ಪಂದ್ಯದಲ್ಲಿ ಉಗಾಂಡ ವಿರುದ್ಧ ಆತ್ಮವಿಶ್ವಾಸದಿಂದ ಆಡಿದ್ದ ಅಫ್ಘನ್, ಅದೇ ತಂತ್ರವನ್ನು ಮುಂದುವರೆಸಲಿದೆ.
ಗಯಾನಾ ಹವಾಮಾನ ಮುನ್ಸೂಚನೆ
ಗಯಾನಾದಲ್ಲಿ ಪಂದ್ಯದ ಸಮಯದಲ್ಲಿ 31 ಪ್ರತಿಶತ ಮಳೆಯಾಗುವ ಸಾಧ್ಯತೆ ಇದೆ. ಪಂದ್ಯದುದ್ದಕ್ಕೂ ಮೋಡ ಕವಿದ ವಾತಾವರಣ ನಿರೀಕ್ಷಿಸಲಾಗಿದೆ. ತಾಪಮಾನವು ಸುಮಾರು 27 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಮುನ್ಸೂಚನೆ ತಿಳಿಸಿದೆ.
ಗಯಾನಾ ಪಿಚ್ ವರದಿ
ಇದೇ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು 183 ರನ್ ಗಳಿಸಿತ್ತು. ಆದರೆ, ಇದೇ ಕ್ರೀಡಾಂಗಣದಲ್ಲಿ ನಡೆದ ಉಗಾಂಡಾ ಮತ್ತು ಪಪುವಾ ನ್ಯೂಗಿನಿಯಾ ನಡುವಿನ ಪಂದ್ಯದಲ್ಲಿ ಒಟಾರೆ 4.13ರ ದರದಲ್ಲಿ ರನ್ ಒಟ್ಟಾಯ್ತು. ಇದು ಪುರುಷರ ಟಿ20 ವಿಶ್ವಕಪ್ ಪಂದ್ಯದಲ್ಲಿ ಇದುವರೆಗಿನ ಅತ್ಯಂತ ಕಡಿಮೆ ಮೊತ್ತವಾಗಿದೆ. ವಿಂಡೀಸ್‌ನ ಬಹುತೇಕ ಎಲ್ಲಾ ಪಿಚ್‌ಗಳು ನಿಧಾನಗತಿಯದ್ದಾಗಿದ್ದು, ಉಭಯ ತಂಡಗಳಿಗೂ ಸವಾಲಾಗಲಿದೆ.
ಮುಖಾಮುಖಿ ದಾಖಲೆ
ಉಭಯ ತಂಡಗಳು ಈವರೆಗೆ ಪರಸ್ಪರ ಒಂದು ಬಾರಿ ಮಾತ್ರ ಮುಖಾಮುಖಿಯಾಗಿವೆ. ಅದರಲ್ಲಿ ಗೆದ್ದ ನ್ಯೂಜಿಲೆಂಡ್ 1-0 ದಾಖಲೆ ಹೊಂದಿದೆ. ಮೂರು ವರ್ಷಗಳ ಹಿಂದೆ ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಗೆದ್ದಿತ್ತು.
ನೇರಪ್ರಸಾರ ವೀಕ್ಷಿಸುವುದು ಹೇಗೆ?
ನ್ಯೂಜಿಲ್ಯಾಂಡ್ ಮತ್ತು ಅಫ್ಘಾನಿಸ್ತಾನ ನಡುವಿನ ವಿಶ್ವಕಪ್ ಪಂದ್ಯವನ್ನು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಇದೇ ವೇಳೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಪಂದ್ಯವನ್ನು ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಮೊಬೈಲ್ ಮೂಲಕ ಪಂದ್ಯವನ್ನು ಉಚಿತವಾಗಿ ನೋಡಬಹುದಾಗಿದೆ. ಆದರೆ ಲ್ಯಾಪ್‌ಟಾಪ್ ಮೂಲಕ ವೀಕ್ಷಿಸಲು ಚಂದಾದಾರಿಕೆ ಪಡೆದುಕೊಳ್ಳಬೇಕು.
ನ್ಯೂಜಿಲ್ಯಾಂಡ್ ಸಂಭಾವ್ಯ ತಂಡ
ಫಿನ್ ಅಲೆನ್, ಡೆವೊನ್ ಕಾನ್ವೇ (ವಿಕೆಟ ಕೀಪರ್), ಕೇನ್ ವಿಲಿಯಮ್ಸನ್ (ನಾಯಕ), ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಟ್ರೆಂಟ್ ಬೌಲ್ಟ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಇಶ್ ಸೋಧಿ / ಜೇಮ್ಸ್ ನೀಶಮ್
ಅಫ್ಘಾನಿಸ್ತಾನ ಸಂಭಾವ್ಯ ತಂಡ
ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್, ನಜಿಬುಲ್ಲಾ ಜದ್ರಾನ್, ಅಜ್ಮತುಲ್ಲಾ ಒಮರ್ಜಾಯ್, ಗುಲ್ಬದಿನ್ ನೈಬ್, ಮೊಹಮ್ಮದ್ ನಬಿ, ರಶೀದ್ ಖಾನ್, ಕರೀಂ ಜನತ್, ಮುಜೀಬ್-ಉರ್-ರಹಮಾನ್, ನವೀನ್-ಉಲ್-ಹಕ್, ಫಜಲ್ಹಕ್ ಫರೂಖಿ.
ಕ್ರಿಕೆಟ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಇದು ಅತಿ ದೊಡ್ಡ ಅವಮಾನ; ನಿಜಕ್ಕೂ ನಿರಾಶೆಯಾಗಿದೆ; ಯುಎಸ್ ವಿರುದ್ಧ ಪಾಕಿಸ್ತಾನ ಸೋಲಿಗೆ ಮಾಜಿ ಕ್ರಿಕೆಟಿಗರ ಬೇಸರ