ಅಂಡರ್ 19 ವನಿತೆಯರ ಟಿ20 ವಿಶ್ವಕಪ್; ಭಾರತ vs ಇಂಗ್ಲೆಂಡ್ ಸೆಮಿಫೈನಲ್ ಮುಖಾಮುಖಿ, ಭಾರತೀಯರೇ ಬಲಿಷ್ಠ
ಅಂಡರ್19 ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಜನವರಿ 31ರ ಶುಕ್ರವಾರ ಇಂಗ್ಲೆಂಡ್ ತಂಡವನ್ನು ಭಾರತ ಎದುರಿಸಲಿದೆ. ಪ್ರಚಂಡ ಫಾರ್ಮ್‌ನಲ್ಲಿರುವ ಭಾರತ ಕಿರಿಯರ ತಂಡ ಗೆಲ್ಲು ಫೇವರೆಟ್ ಎನಿಸಿದೆ.

19 ವರ್ಷದೊಳಗಿನವರ ಮಹಿಳಾ ಟಿ20 ವಿಶ್ವಕಪ್ (ICC Under 19 Womens T20 World Cup 2025) ಟೂರ್ನಿಯಲ್ಲಿ ಭಾರತ ವನಿತೆಯರ ತಂಡ ಸೆಮಿಫೈನಲ್ ಪ್ರವೇಶಿಸಿದೆ. ಹಾಲಿ ಚಾಂಪಿಯನ್ ತಂಡವು ಸೆಮಿಕದನದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಕಣಕ್ಕಿಳಿಯುತ್ತಿವೆ. ಭಾರತದ ಪಂದ್ಯವು ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿದೆ.
ಟೂರ್ನಿಯ ಆರಂಭಿಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 9 ವಿಕೆಟ್‌ಗಳಿಂದ ಗೆದ್ದಿದ್ದ ಭಾರತ ತಂಡವು, ಆ ನಂತರ ಆತಿಥೇಯ ಮಲೇಷ್ಯಾವನ್ನು 10 ವಿಕೆಟ್‌ಗಳಿಂದ ಸೋಲಿಸಿತ್ತು. ಮೊದಲ ಸೂಪರ್ ಸಿಕ್ಸ್ ಪಂದ್ಯದಲ್ಲಿ ಶ್ರೀಲಂಕಾವನ್ನು 60 ರನ್ ಗಳಿಂದ ಸೋಲಿಸಿದ ನಂತರ, ಬಾಂಗ್ಲಾದೇಶ ವಿರುದ್ಧವೂ ಎಂಟು ವಿಕೆಟ್‌ಗಳಿಂದ ಗೆದ್ದು ಬೀಗಿತು. ಕೊನೆಗೆ ಸ್ಕಾಟ್ಲೆಂಡ್ ವಿರುದ್ಧ 150 ರನ್ ಗಳ ಬೃಹತ್ ಜಯದೊಂದಿಗೆ ಅಜೇಯ ತಂಡವಾಗಿ ಸೆಮೀಸ್ ಪ್ರವೇಶಿಸಿದೆ.
ನಿಕಿ ಪ್ರಸಾದ್ ನೇತೃತ್ವದ ತಂಡವು ಎಲ್ಲಾ ವಿಭಾಗಗಳಲ್ಲಿ ರೆಡ್ ಹಾಟ್ ಫಾರ್ಮ್‌ನಲ್ಲಿದ್ದು, ಎದುರಾಳಿ ತಂಡಗಳಿಗೆ ತಾನು ಅಪಾಯಕಾರಿ ತಂಡ ಎಂಬ ಎಚ್ಚರಿಕೆ ನೀಡಿದೆ. ಅದರಲ್ಲೂ ಆರಂಭಿಕ ಆಟಗಾರ್ತಿ ಗೊಂಗಾಡಿ ತ್ರಿಶಾ ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ಕೊನೆಯ ಪಂದ್ಯದಲ್ಲಿ ಕೇವಲ 59 ಎಸೆತಗಳಲ್ಲಿ 13 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 110 ರನ್ ಗಳಿಸಿದ್ದರು. ಇದು ಅಂಡರ್ 19 ವಿಶ್ವಕಪ್‌ನಲ್ಲಿ ಚೊಚ್ಚಲ ಶತಕವಾಗಿದೆ.
ಹೆಚ್ಚು ರನ್, ಹೆಚ್ಚು ವಿಕೆಟ್ ಭಾರತೀಯರೇ
ಟೂರ್ನಿಯಲ್ಲಿ ತ್ರಿಶಾ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ. ಐದು ಪಂದ್ಯಗಳಲ್ಲಿ 76.66ರ ಸರಾಸರಿಯಲ್ಲಿ 230 ರನ್ ಗಳಿಸಿದ್ದಾರೆ. ಇದೇ ವೇಳೆ ಇಂಗ್ಲೆಂಡ್‌ನ ಅತ್ಯುತ್ತಮ ಬ್ಯಾಟರ್ ಡೇವಿನಾ ಪೆರಿನ್ ನಾಲ್ಕು ಪಂದ್ಯಗಳಿಂದ 32.75ರ ಸರಾಸರಿಯಲ್ಲಿ 131 ರನ್ ಗಳಿಸಿದ್ದಾರೆ.
ಇದೇ ವೇಳೆ ಬೌಲಿಂಗ್‌ನಲ್ಲೂ ಭಾರತೀಯರದ್ದೇ ಅಬ್ಬರವಿದೆ. ವೈಷ್ಣವಿ ಶರ್ಮಾ ಹಾಗೂ ಆಯುಷಿ ಶುಕ್ಲಾ ಅಗ್ರ ಎರಡು ವಿಕೆಟ್ ಟೇಕರ್‌ಗಳಾಗಿದ್ದಾರೆ. ವೈಷ್ಣವಿ ಮತ್ತು ಆಯುಷಿ ಕ್ರಮವಾಗಿ 12 ಮತ್ತು 10 ವಿಕೆಟ್‌ಗಳನ್ನು ಪಡೆದಿದ್ದಾರೆ.
ಕಳೆದ ಆವೃತ್ತಿಯ ಫೈನಲಿಸ್ಟ್ ತಂಡಗಳ ನಡುವೆ ಹಣಾಹಣಿ ನಡೆಯುತ್ತಿರುವುದು ಹೆಚ್ಚು ರೋಚಕತೆ ಸೃಷ್ಟಿಸಿದೆ. ಆದರೆ, ಹಾಲಿ ಚಾಂಪಿಯನ್ ಪಟ್ಟ ಹಾಗೂ ಪ್ರಸ್ತುತ ಫಾರ್ಮ್‌ನಿಂದಾಗಿ ಭಾರತವೇ ಫೇವರೆಟ್ ಎನಿಸಿದೆ.
ಭಾರತ ತಂಡ
ನಿಕಿ ಪ್ರಸಾದ್, ಸಾನಿಕಾ ಚಾಲ್ಕೆ, ಜಿ ತ್ರಿಶಾ, ಕಮಲಿನಿ ಜಿ, ಭಾವಿಕಾ ಅಹಿರ್, ಈಶ್ವರಿ ಅವಸಾರೆ, ಮಿಥಿಲಾ ವಿನೋದ್, ಜೋಶಿತಾ ವಿಜೆ, ಸೋನಮ್ ಯಾದವ್, ಪರುನಿಕಾ ಸಿಸೋಡಿಯಾ, ಕೇಸರಿ ದೃಷ್ಟಿ, ಆಯುಷಿ ಶುಕ್ಲಾ, ಆನಂದಿತಾ ಕಿಶೋರ್, ಎಂಡಿ ಶಬ್ನಮ್, ವೈಷ್ಣವಿ ಎಸ್.
ಇಂಗ್ಲೆಂಡ್ ತಂಡ
ಅಬಿ ನಾರ್ಗ್ರೋವ್, ಫೋಬೆ ಬ್ರೆಟ್, ಒಲಿವಿಯಾ ಬ್ರಿನ್ಸ್ಡೆನ್, ಟಿಲ್ಲಿ ಕಾರ್ಟಿನ್-ಕೋಲ್ಮನ್, ಟ್ರುಡಿ ಜಾನ್ಸನ್, ಕೇಟಿ ಜೋನ್ಸ್, ಚಾರ್ಲೊಟ್ ಲ್ಯಾಂಬರ್ಟ್, ಈವ್ ಒ'ನೀಲ್, ಡೇವಿನಾ ಪೆರಿನ್, ಜೆಮಿಮಾ ಸ್ಪೆನ್ಸ್, ಷಾರ್ಲೆಟ್ ಸ್ಟಬ್ಸ್, ಅಮುರುತಾ ಸುರೇನ್‌ಕುಮಾರ್, ಪ್ರಿಶಾ ಥಾನವಾಲಾ, ಎರಿನ್ ಥಾಮಸ್, ಗ್ರೇಸ್ ಥಾಂಪ್ಸನ್.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
