Vaishnavi Sharma: ಅಂಡರ್-19 ಮಹಿಳೆಯರ ವಿಶ್ವಕಪ್ ಫೈನಲ್; ಭಾರತದ ಲೇಡಿ ಜಡೇಜಾ ಮೇಲೆ ಎಲ್ಲರ ಕಣ್ಣು!
ಅಂಡರ್-19 ಮಹಿಳೆಯರ ವಿಶ್ವಕಪ್ ಫೈನಲ್ ಪಂದ್ಯ ಫೆಬ್ರವರಿ 2ರಂದು ಭಾರತ ಮತ್ತು ಸೌತ್ ಆಫ್ರಿಕಾ ನಡುವೆ ನಡೆಯಲಿದೆ. ಆದರೆ ಪಂದ್ಯದಲ್ಲಿ ಭಾರತದ ಲೇಡಿ ಜಡೇಜಾ ವೈಷ್ಣವಿ ಶರ್ಮಾ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದ್ದು, ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಸನ್ನದ್ಧವಾಗಿದೆ. ಇದೇ ಮೊದಲ ಬಾರಿಗೆ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿರುವ ಸೌತ್ ಆಫ್ರಿಕಾ ವನಿತೆಯರನ್ನು ಭಾರತ ತಂಡ, ಫೆಬ್ರವರಿ 2ರಂದು ಎದುರಿಸಲಿದೆ. ಟೂರ್ನಿ ಆರಂಭದಿಂದ ಇಲ್ಲಿಯ ತನಕ ಅಸಾಮಾನ್ಯ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿರುವ ಭಾರತದ ಎಡಗೈ ಸ್ಪಿನ್ನರ್ ವೈಷ್ಣವಿ ಶರ್ಮಾ ಅವರು ತನ್ನ ಸ್ಪಿನ್ ಮ್ಯಾಜಿಕ್ ಮೂಲಕವೇ ಭವಿಷ್ಯದ ತಾರೆಯಾಗಿ ಹೊರಹೊಮ್ಮಿದ್ದಾರೆ. ಎದುರಾಳಿ ತಂಡಗಳನ್ನು ಬೆಚ್ಚಿ ಬೀಳಿಸಿರುವ ವೈಷ್ಣವಿ ಇದೀಗ ಫೈನಲ್ನಲ್ಲೂ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ.
ಚೊಚ್ಚಲ ಪಂದ್ಯದಲ್ಲೇ ಇತಿಹಾಸ ಸೃಷ್ಟಿಸಿದ ವೈಷ್ಣವಿ
ವೈಷ್ಣವಿ ಶರ್ಮಾ ತನ್ನ ಅಂಡರ್-19 ಟಿ20 ವಿಶ್ವಕಪ್ ಚೊಚ್ಚಲ ಪಂದ್ಯದಲ್ಲೇ ಇತಿಹಾಸ ನಿರ್ಮಿಸಿದ್ದರು. ಮಲೇಷ್ಯಾ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿದ ಅವರು, ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಭಾರತೀಯ ಸ್ಪಿನ್ನರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಬೌಲಿಂಗ್ ಮೂಲಕ ಎದುರಾಳಿ ತಂಡಗಳನ್ನು ಸಿಕ್ಕಾಪಟ್ಟೆ ಕಾಡಿರುವ ವೈಷ್ಣವಿ ಅವರ ಪ್ರದರ್ಶನಕ್ಕೆ ದಿಗ್ಗಜ ಕ್ರಿಕೆಟಿಗರೇ ಫಿದಾ ಆಗಿದ್ದಾರೆ. ವೈಷ್ಣವಿ ತನ್ನ ಅಸಾಧಾರಣ ಪ್ರದರ್ಶನ ತೋರಿದ್ದು ಇದೇ ಮೊದಲಲ್ಲ. 2022ರಲ್ಲಿ ನಡೆದ ಮಹಿಳೆಯರ ಅಂಡರ್-19 ಟಿ20 ಟ್ರೋಫಿಯ ಫೈನಲ್‌ನಲ್ಲಿ ಕರ್ನಾಟಕ ತಂಡವನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಆ ಪಂದ್ಯದಲ್ಲಿ 2 ವಿಕೆಟ್ ಪಡೆದು ಶೇ 50ರಷ್ಟು ಡಾಟ್ ಬಾಲ್ ಹಾಕಿದ್ದರು.
2022ರ ಅಂಡರ್-19 ಟೂರ್ನಿಯಲ್ಲಿ 23 ವಿಕೆಟ್‌ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿ ಎಂಬ ದಾಖಲೆ ಬರೆದಿದ್ದರು. ಮಿಜೋರಾಂ ವಿರುದ್ಧದ ಪಂದ್ಯದಲ್ಲೂ ಆಕೆ 22 ಡಾಟ್ ಬಾಲ್ ಎಸೆದು ಕೇವಲ 2 ರನ್ ನೀಡಿ 2 ವಿಕೆಟ್ ಪಡೆದಿದ್ದರು.
ಬಿಸಿಸಿಐನಿಂದ 'ಜಗನ್ಮೋಹನ್ ದಾಲ್ಮಿಯಾ ಟ್ರೋಫಿ - ಅತ್ಯುತ್ತಮ ಮಹಿಳಾ ಆಟಗಾರ್ತಿ (ಜೂನಿಯರ್ ದೇಶೀಯ)' ಪ್ರಶಸ್ತಿ ನೀಡಿ ಆಕೆಯನ್ನು ಗೌರವಿಸಿದೆ.
2023ರಲ್ಲಿ ಅಂಡರ್-19 ಟಿ20 ಟ್ರೋಫಿಯಲ್ಲಿ ಕರ್ನಾಟಕ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವೈಷ್ಣವಿ ಮತ್ತೊಮ್ಮೆ ಮಿಂಚಿದ್ದರು. ಅವರು 4 ಓವರ್‌ಗಳಲ್ಲಿ ಮೇಡನ್ ಸಹಿತ ಕರ್ನಾಟಕದ ನಾಯಕಿ ನಿಕಿ ಪ್ರಸಾದ್ ವಿಕೆಟ್ ಪಡೆದಿದ್ದರು.
ಇದೀಗ 2025ರ ಅಂಡರ್-19 ಟಿ20 ವಿಶ್ವಕಪ್‌ನಲ್ಲೂ ವೈಷ್ಣವಿ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಈವರೆಗೆ ಆಡಿರುವ 5 ಪಂದ್ಯಗಳಲ್ಲಿ 15 ವಿಕೆಟ್ ಪಡೆದು ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿ ಎನಿಸಿಕೊಂಡಿದ್ದಾರೆ.
ಮಲೇಷ್ಯಾ ವಿರುದ್ಧ 5 ವಿಕೆಟ್ ಪಡೆದ ನಂತರ ಸೂಪರ್ ಸಿಕ್ಸ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ 3 ವಿಕೆಟ್ ಗಳಿಸಿದ್ದರು. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ 3-ವಿಕೆಟ್ ಕಿತ್ತಿದರು. ಇದು ಭಾರತ ತಂಡವನ್ನು ಸುಲಭವಾಗಿ ಗೆಲ್ಲಲು ನೆರವಾಯಿತು.
ಗ್ವಾಲಿಯರ್ ಮೂಲದ ವೈಷ್ಣವಿ ಬಾಲ್ಯದಿಂದಲೂ ಕ್ರಿಕೆಟ್‌ನಲ್ಲಿ ಆಸಕ್ತಿ ತೋರಿಸಿದ್ದರು. ತಾನ್ಸೇನ್ ಕ್ರಿಕೆಟ್ ಅಕಾಡೆಮಿಯಲ್ಲಿ 5ನೇ ವಯಸ್ಸಿನಲ್ಲಿ ತರಬೇತಿ ಪಡೆದಿದ್ದ ವೈಷ್ಣವಿಗೆ ರವೀಂದ್ರ ಜಡೇಜಾ ನೆಚ್ಚಿನ ಕ್ರಿಕೆಟಿಗ. ಜಡ್ಡು ಬೌಲಿಂಗ್ ಟೆಕ್ನಿಕ್ ಹೆಚ್ಚು ವೀಕ್ಷಿಸುತ್ತಾರಂತೆ.
ಇದೀಗ ಭಾರತ ತಂಡ 2025ರ ಅಂಡರ್-19 ಟಿ20 ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಪ್ರಶಸ್ತಿ ಗೆಲ್ಲುವಲ್ಲಿ ವೈಷ್ಣವಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ.
ವೈಷ್ಣವಿ ತಮ್ಮ ಅಸಾಧಾರಣ ಪ್ರತಿಭೆಯಿಂದ ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಲು ಸಜ್ಜಾಗಿದ್ದಾರೆ. ಈ ಯುವ ಸ್ಪಿನ್ನರ್ ಭಾರತೀಯ ಕ್ರಿಕೆಟ್ ಅನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುವುದರಲ್ಲಿ ಯಾವುದೇ ಸಂದೇಹವಿಲ್ಲ.
