World Cup 2023: ಒಂದು ದಿನ ಮುಂಚಿತವಾಗಿ ಐಸಿಸಿ ಏಕದಿನ ವಿಶ್ವಕಪ್ ಉದ್ಘಾಟನಾ ಸಮಾರಂಭ
ಐಸಿಸಿ ಪುರುಷರ ಏಕದಿನ ವಿಶ್ವಕಪ್ ಉದ್ಘಾಟನಾ ಕಾರ್ಯಕ್ರಮ ಒಂದು ದಿನ ಮುಂಚಿತವಾಗಿ ನಡೆಯಲಿದೆ ಎಂದು ವರದಿಯಾಗಿದೆ. ಯಾಕೆ ಅನ್ನೋದರ ವಿವಿರ ಇಲ್ಲಿದೆ.
ಭಾರತದಲ್ಲಿ ಈ ಬಾರಿ ನಡೆಯಲಿರುವ ಐಸಿಸಿ ಪುರುಷರ ಏಕದಿನ ವಿಶ್ವಕಪ್‌ಗೆ (ICC World Cup 2023) ದಿನಗಣನೆ ಶುರುವಾಗಿದೆ. ಐಸಿಸಿ (ICC) ಈಗಾಗಲೇ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಸಿದೆ. ಜಗತ್ತಿನ ಅತಿ ದೊಡ್ಡ ಕ್ರೀಡಾ ಕೂಟ ಅಕ್ಟೋಬರ್ 5 ರಿಂದ ನವೆಂಬರ್ 19ರವರೆಗೆ ನಡಯಲಿದೆ.
ದೇಶದ ಕ್ರೀಡಾಂಗಣಗಳು ಕೂಡ ಈ ಬಹು ನಿರೀಕ್ಷಿತ ಕ್ರಿಕೆಟ್ (Cricket) ಕದನಕ್ಕೆ ಸಿದ್ಧವಾಗುತ್ತಿವೆ. ಆದರೆ ಏಕದಿನ ವಿಶ್ವಕಪ್ ಉದ್ಘಾಟನಾ ಸಮಾರಂಭದ (World Cup 2023 Opening Ceremony) ಬಗ್ಗೆ ಅಪ್ಡೇಟ್ ಬಂದಿದೆ. ಅಕ್ಟೋಬರ್ 5 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದೊಂದಿಗೆ 2023ರ ಏಕದಿನ ವಿಶ್ವಕಪ್ ಆರಂಭವಾಗಲಿದೆ. ಆದರೆ, ಮೊದಲ ಪಂದ್ಯ ನಡೆಯುವ ಒಂದು ದಿನ ಮೊದಲೇ ಟೂರ್ನಿಯ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ತಿಳಿದು ಬಂದಿದೆ.
ಅಕ್ಟೋಬರ್ 4 ರಂದು ಐಸಿಸಿ ವಿಶ್ವಕಪ್ ಉದ್ಘಾಟನಾ ಸಮಾರಂಭ ಗುಜರಾತ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ.
ಸೆಲೆಬ್ರಿಟಿಗಳಿಂದ ವಿಶೇಷ ಕಾರ್ಯಕ್ರಮ
ಈ ಮಹತ್ವದ ಟೂರ್ನಿಯಲ್ಲಿ ಒಟ್ಟು ಹತ್ತು ತಂಡಗಳು ಭಾಗವಹಿಸುತ್ತಿವೆ. ತಂಡಗಳ ನಾಯಕರು, ಐಸಿಸಿ, ಬಿಸಿಸಿಐ ಪ್ರತಿನಿಧಿಗಳು ವಿಶ್ವಕಪ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸೆಲೆಬ್ರಿಟಿಗಳೊಂದಿಗೆ ಕೆಲವು ವಿಶೇಷ ಪಾತ್ರಗಳ ಮನರಂಜನಾ ಕಾರ್ಯಕ್ರಮಗಳು ನಡೆಯುವ ಸಾಧ್ಯತೆ ಇದೆ.
ನಾಯಕರೊಂದಿಗೆ ‘ಕ್ಯಾಪ್ಟನ್ಸ್ ಡೇ’
ಭಾರತೀಯ ಸಂಸ್ಕೃತಿಯನ್ನು ಉತ್ತೇಜಿಸಲೆಂದೇ ಕೆಲವು ವಿಶೇಷ ಕಾರ್ಯಕ್ರಮಗಳು ನಡೆಯಲಿವೆ ಎಂದು ವರದಿಯಾಗಿದೆ. ನಾಯಕರೊಂದಿಗೆ ‘ಕ್ಯಾಪ್ಟನ್ಸ್ ಡೇ’ ಎಂಬ ಕಾರ್ಯಕ್ರಮವೂ ನಡೆಯಲಿದೆ. ವಿಶ್ವಕಪ್‌ಗೂ ಮುನ್ನ ಅಭ್ಯಾಸ ಪಂದ್ಯಗಳು ಅಕ್ಟೋಬರ್ 3 ರಂದು ಗೊಳ್ಳಲಿವೆ. ಆ ಬಳಿಕ ಉದ್ಘಾಟನಾ ಸಮಾರಂಭಕ್ಕಾಗಿ ಎಲ್ಲಾ ತಂಡಗಳ ನಾಯಕರು ಅಕ್ಟೋಬರ್ 4 ರಂದು ಬೆಳಗ್ಗೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂಗೆ ಆಗಮಿಸಲಿದ್ದಾರೆ ಎಂದು ವರದಿಯಾಗಿದೆ.
ರೌಂಡ್ ರಾಬಿನ್ ಮಾದರಿಯಲ್ಲಿ ಗಂಪು ಹಂತದ ಪಂದ್ಯಗಳು
ಏಕದಿನ ವಿಶ್ವಕಪ್‌ನಲ್ಲಿ ಗಂಪು ಹಂತವು ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಪ್ರತಿ ತಂಡವು ಉಳಿದ ಒಂಬತ್ತು ತಂಡಗಳ ವಿರುದ್ಧ ಒಂದು ಪಂದ್ಯವನ್ನು ಆಡುತ್ತದೆ. ಗುಂಪು ಹಂತದ ಅಂತ್ಯದಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ನಾಲ್ಕು ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಸೆಮಿಫೈನಲ್‌ನಲ್ಲಿ ಗೆದ್ದ ಎರಡು ತಂಡಗಳು ಫೈನಲ್‌ಗೆ ಬಂದು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.
ಟೀಂ ಇಂಡಿಯಾ ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಏಕದಿನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯ ಅಕ್ಟೋಬರ್ 14 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಗುಂಪು ಹಂತದ ಉಳಿದ 7 ತಂಡಗಳ ವಿರುದ್ಧ ತಲಾ ಒಂದು ಪಂದ್ಯವನ್ನು ಆಡಲಿದೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ತವರಿನಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಹಾಟ್ ಫೇವರಿಟ್ ಆಗಿದೆ.
ಐಸಿಸಿ ಪುರುಷರ ಏಕದಿನ ವಿಶ್ವಕಪ್ ಪಂದ್ಯಗಳ ವೀಕ್ಷಣೆಗೆ ಆಗಸ್ಟ್ 29ರ ಸಂಜೆಯಿಂದಲೇ ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳಬಹುದು. ಬುಕ್ ಮೈ ಶೋವನ್ನು ಬಿಸಿಸಿಐ ಮತ್ತು ಐಸಿಸಿ ಅಧಿಕೃತಗೊಳಿಸಿದ್ದು, ಈ ಪ್ಲಾಟ್‌ಫಾರಂನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳಬಹುದು. ಒಟ್ಟು 58 ಪಂದ್ಯಗಳು ನಡೆಯಲಿವೆ. ಇದಕ್ಕೂ ಮುನ್ನ 10 ಅಭ್ಯಾಸ ಪಂದ್ಯಗಳು ಜರುಗಲಿವೆ. ಭಾರತದ 12 ಸ್ಥಗಳು ಐಸಿಸಿ ವಿಶ್ವಕಪ್‌ಗಾಗಿ ಸಿದ್ಧಗೊಂಡಿವೆ.