ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಗೀತೆ ಮೊಳಗುವ ವೇಳೆ ಗಮನ ಸೆಳೆದ ಶಾರುಖ್ ವರ್ತನೆ; ಕಿಂಗ್ ಖಾನ್ ನಡೆಗೆ ಭಾರಿ ಮೆಚ್ಚುಗೆ
Shah Rukh Khan: ಮಾರ್ಚ್ 22 ರಂದು ನಡೆದ ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಗೀತೆ ಮೊಳಗುವ ವೇಳೆ ಬಾಲಿವುಡ್ ನಟ, ಕೊಲ್ಕತ್ತಾ ನೈಟ್ ರೈಡರ್ಸ್ ಮಾಲಿಕ ಶಾರುಖ್ ಖಾನ್ ನಡೆದುಕೊಂಡು ರೀತಿ ಈಗ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

Shah Rukh Khans on ILP 2025 Opening Ceremony: ಕಿಂಗ್ ಖಾನ್ ಎಂದೇ ಕರೆಸಿಕೊಳ್ಳುವ ಬಾಲಿವುಡ್ ನಟ ಶಾರುಖ್ ಖಾನ್ ಪ್ರಪಂಚದಾದ್ಯಂತ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೀಗ ಐಪಿಎಲ್ 2025ರ ಉದ್ಘಾಟನಾ ಸಮಾರಂಭದಲ್ಲಿ ಶಾರುಖ್ ನಡೆಯು ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಮಾರ್ಚ್ 22 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಉದ್ಘಾಟನಾ ಸಮಾರಂಭವಿತ್ತು. ಈ ಕಾರ್ಯಕ್ರಮಕ್ಕೆ ಶಾರುಖ್ ಖಾನ್ ಬಂದಿದ್ದು ಮಾತ್ರವಲ್ಲ, ಕಾರ್ಯಕ್ರಮದ ನಿರೂಪಣೆ ಕೂಡ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ಕಾರ್ಯಕ್ರಮ ಶ್ರೇಯಾಘೋಷಾಲ್, ದಿಶಾ ಪಟಾನಿ ಸೇರಿ ಸಿನಿತಾರೆಯರ ಬಳಗವು ಸಾಕಷ್ಟು ಮನರಂಜನೆ ನೀಡಿತ್ತು. ಆದರೆ ನಿನ್ನೆಯ ಕಾರ್ಯಕ್ರಮದಲ್ಲಿ ಈ ಎಲ್ಲದಕ್ಕಿಂತಲೂ ಗಮನ ಸೆಳೆದಿದ್ದು, ರಾಷ್ಟ್ರಗೀತೆಯ ಸಮಯದಲ್ಲಿನ ಶಾರುಖ್ ನಡೆ.
ರಾಷ್ಟ್ರಗೀತೆಗೆ ಶಾರುಖ್ ತೋರಿರುವ ಗೌರವ ಹಾಗೂ ಅವರಿಗಿರುವ ರಾಷ್ಟ್ರಪ್ರೇಮದ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಾಷ್ಟ್ರಗೀತೆ ಮೊಳಗುವ ವೇಳೆ ಶಾರುಖ್ ನಡೆದುಕೊಂಡ ಕ್ಷಣದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಮನ ಗೆದ್ದ ಶಾರುಖ್ ಖಾನ್ ದೇಶಪ್ರೇಮದ ಕ್ಷಣ
ಕ್ರೀಡಾಂಗಣದಲ್ಲಿ ರಾಷ್ಟ್ರಗೀತೆ ಮೊಳಗುತ್ತಿದ್ದಂತೆ ಶಾರುಖ್ ಖಾನ್ ತಮ್ಮ ಸನ್‌ಗ್ಲಾಸ್ ತೆಗೆದು, ಕಣ್ಣುಮುಚ್ಚಿಕೊಂಡು ರಾಷ್ಟ್ರಗೀತೆ ಹಾಡಲು ಶುರುಮಾಡಿದ್ದಾರೆ. ಶಾರುಖ್‌ರ ದೇಶಾಭಿಮಾನ, ರಾಷ್ಟ್ರಗೀತೆಯ ಮೇಲೆ ಅವರಿಗೆ ಇರುವ ಪ್ರೀತಿ, ಅಭಿಮಾನವು ಕಿಂಗ್ ಖಾನ್ ಅಭಿಮಾನಗಳ ಕಣ್ಣಿಗೆ ಬೀಳದೇ ಇರಲು ಸಾಧ್ಯವಿರಲಿಲ್ಲ ಬಿಡಿ. ಈ ಅಪರೂಪದ ಕ್ಷಣದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕೆಲವೇ ಕ್ಷಣಗಳಲ್ಲಿ ಅಭಿಮಾನಿಗಳು ಶಾರುಖ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ, ಹಲವರು ಈ ವಿಡಿಯೊವನ್ನು ರೀಪೋಸ್ಟ್ ಮಾಡುತ್ತಿದ್ದಾರೆ.
ರಾಷ್ಟ್ರಗೀತೆ ಪ್ರಾರಂಭವಾದಾಗ, ಶಾರುಖ್ ಸಂಪೂರ್ಣ ಕಾರ್ಯಕ್ರಮದ್ದುದ್ದಕ್ಕೂ ಧರಿಸಿದ್ದ ತಮ್ಮ ಕನ್ನಡಕವನ್ನು ತೆಗೆಯುವ ಮೂಲಕ ಗಮನ ಸೆಳೆದರು. ನಂತರ ಅವರು ಕಣ್ಣುಮುಚ್ಚಿ ರಾಷ್ಟ್ರಗೀತೆ ಹಾಡಲು ಆರಂಭಿಸಿದ್ದಾರೆ. ಈ ಕ್ಷಣವನ್ನು ಸೆರೆಹಿಡಿದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿದ್ದು, ವ್ಯಾಪಕ ಗಮನ ಮತ್ತು ಮೆಚ್ಚುಗೆಯನ್ನು ಗಳಿಸಿದೆ.
ನಟನ ದೇಶಭಕ್ತಿಗೆ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಮೆಂಟ್‌ಗಳ ಮೂಲಕ ಪ್ರಶಂಸೆಯ ಮಳೆ ಸುರಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್‌ಗಳ ಭರಪೂರ
‘ಈ ಚಿತ್ರವೊಂದು ನಿಧಿ ಇದ್ದಂತೆ. ರಾಷ್ಟ್ರಗೀತೆ ಹಾಡುವ ಸಮಯದಲ್ಲಿ ಶಾರುಖ್ ಖಾನ್ ತಮ್ಮ ಕನ್ನಡಕವನ್ನು ತೆಗೆದು ರಾಷ್ಟ್ರಗೀತೆಗೆ ಗೌರವ ಸೂಚಿಸುವ ಸಲುವಾಗಿ ಕಣ್ಣು ಮುಚ್ಚಿ ಪಠಿಸಲು ಪ್ರಾರಂಭಿಸಿದರು‘ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
‘ಹೌದು, ಅವರು ಕನ್ನಡಕಗಳನ್ನು ತೆಗೆದಿರುವುದನ್ನು ನಾನು ಗಮನಿಸಿದೆ ಮತ್ತು ಕ್ಯಾಮೆರಾ ಅವರ ಮೇಲೆ ಪೋಕಸ್ ಆದಾಗ ಅವರು ಕೆಳಗೆ ನೋಡಲಾರಂಭಿಸಿದರು, ಇಂತಹ ವಿಚಾರಗಳು ಗಮನಕ್ಕೆ ಬರಬಾರದು ಎಂದಾಗಿರಬಹುದು‘ ಎಂದು ಇನ್ನೊಬ್ಬ ಅಭಿಮಾನಿ ಕಾಮೆಂಟ್ ಮಾಡಿದ್ದಾರೆ. ‘ಸುಂದರ ವ್ಯಕ್ತಿತ್ವ‘ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮೂಲಕ ತಿಳಿಸಿದ್ದಾರೆ. ‘ನಟ ಎಂಬ ಕಾರಣಕ್ಕೆ ನಾವು ಎಸ್‌ಆರ್‌ಕೆ ಅವರನ್ನು ಪ್ರೀತಿಸುತ್ತೇವೆ ಎಂದು ನೀವು ತಿಳಿದುಕೊಂಡರೆ ಅದು ನಿಮ್ಮ ತಪ್ಪು. ಅವರದ್ದು ತುಂಬಾ ಶ್ರೇಷ್ಠ ಮತ್ತು ಗೌರವಾನಿತ್ವ ವ್ಯಕ್ತಿತ್ವ‘ ಎಂದು ಇನ್ನೊಬ್ಬ ಅಭಿಮಾನಿ ಕಾಮೆಂಟ್ ಮಾಡಿದ್ದಾರೆ. ‘ಶಾರುಖ್ ಖಾನ್ ಅವರ ಈ ಭಾವನಾತ್ಮಕ ವರ್ತನೆ ನಿಜಕ್ಕೂ ಅದ್ಭುತ! ಅವರ ಗೌರವ ಮತ್ತು ದೇಶಭಕ್ತಿ ನಿಜಕ್ಕೂ ರಾರಾಜಿಸುತ್ತಿದೆ‘ ಎಂದು ಕೂಡ ಕಾಮೆಂಟ್ ಬಂದಿದೆ. ಹಲವರು ನಾವು ಎಸ್‌ಆರ್‌ಕೆ ಅಭಿಮಾನಿಯಾಗಿರುವುದೇ ನಮ್ಮ ಅದೃಷ್ಟ ಎಂದು ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಸಂಸ್ಕೃತಿ ಹಾಗೂ ದೇಶಕ್ಕೆ ಗೌರವ ನೀಡುವ ವ್ಯಕ್ತಿ ಶಾರುಖ್ ಖಾನ್ ಎಂದು ಅಭಿಮಾನಿಯೊಬ್ಬರು ಶಾರುಖ್ ಬಗ್ಗೆ ಹೆಮ್ಮೆಯಿಂದ ಕಾಮೆಂಟ್ ಮಾಡಿದ್ದಾರೆ.
