ಭಾರತ ವಿರುದ್ಧದ ಟಿ20 ಸರಣಿಗೆ ಅಫ್ಘಾನಿಸ್ತಾನ ತಂಡ ಪ್ರಕಟ; ರಶೀದ್ ಆಡುವುದು ಅನುಮಾನ
IND vs AFG T20 Series: ಟೀಮ್ ಇಂಡಿಯಾ ವಿರುದ್ಧದದ ಮೂರು ಪಂದ್ಯಗಳ ಟಿ20 ಸರಣಿಗೆ ಅಫ್ಘಾನಿಸ್ತಾನ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಪ್ರಮುಖರೇ ತಂಡವನ್ನು ಕೂಡಿಕೊಂಡಿದ್ದಾರೆ.
ಜನವರಿ 11ರಿಂದ ಶುರುವಾಗುವ ಟೀಮ್ ಇಂಡಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಅಫ್ಘಾನಿಸ್ತಾನ ಬಲಿಷ್ಠ ತಂಡವನ್ನು (Afghanistan vs India T20I Series) ಪ್ರಕಟಿಸಿದೆ. ಇಬ್ರಾಹಿಂ ಜದ್ರಾನ್ ತಂಡವನ್ನು (Ibrahim Zadran) ಮುನ್ನಡೆಸಲಿದ್ದಾರೆ. ಕಳೆದ ಯುಎಇ ತಂಡದ ವಿರುದ್ಧದ ಸರಣಿಗೆ ವಿಶ್ರಾಂತಿ ಪಡೆದಿದ್ದ ಸ್ಟಾರ್ ಹಾಗೂ ಲೆಗ್ ಸ್ಪಿನ್ನರ್ ರಶೀದ್ ಖಾನ್ (Rashid Khan) ತಂಡಕ್ಕೆ ಮರಳಿದ್ದಾರೆ. ಆದರೆ ಆಡುವುದು ಅನುಮಾನ. ಅದಕ್ಕೆ ಕಾರಣವೂ ಇದೆ.
ಈ ಕಾರಣಕ್ಕೆ ಆಡುವುದು ಅನುಮಾನ..
ರಶೀದ್ ಖಾನ್ ಇತ್ತೀಚೆಗೆ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕಾರಣ ಇನ್ನೂ ಚೇತರಿಸಿಕೊಳ್ಳುವ ಹಂತದಲ್ಲಿದ್ದಾರೆ. ಹಾಗಾಗಿ ತಂಡಕ್ಕೆ ಆಯ್ಕೆಯಾದರೂ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ. ಮತ್ತು ಯುಎಇ ಸರಣಿಗೆ ವಿಶ್ರಾಂತಿ ಪಡೆದಿದ್ದ ಮುಜೀಬ್ ಉರ್ ರೆಹಮಾನ್ ಮತ್ತು ಇದೇ ಸರಣಿಯಲ್ಲಿ ಮೀಸಲು ಆಟಗಾರನಾಗಿದ್ದ ಇಕ್ರಮ್ ಇಲಿಕಲ್ ಕೂಡ ಪ್ರಮುಖ ತಂಡ ಭಾಗವಾಗಿದ್ದಾರೆ.
ಅಫ್ಘನ್ ಸವಾಲಿನ ತಂಡ
ಅಫ್ಘಾನಿಸ್ತಾನ ಕಳೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮಹೋನ್ನತ ಸಾಧನೆ ಮಾಡಿತ್ತು. ಬಲಿಷ್ಠ ತಂಡಗಳನ್ನೇ ಬಗ್ಗುಬಡಿದು ಐತಿಹಾಸಿಕ ದಾಖಲೆ ಬರೆದಿದೆ. ಪಾಕಿಸ್ತಾನ, ಇಂಗ್ಲೆಂಡ್, ನೆದರ್ಲೆಂಡ್ಸ್ ಮತ್ತು ಶ್ರೀಲಂಕಾ ತಂಡಗಳನ್ನೇ ಸೋಲಿಸಿದೆ. ಇತ್ತೀಚೆಗೆ ಯುಎಇ ತಂಡದ ವಿರುದ್ಧ ಎರಡನೇ ಸ್ಟ್ರಿಂಗ್ ಟೀಮ್ ನೊಂದಿಗೆ 2-1ರಲ್ಲಿ ಸರಣಿ ಗೆದ್ದಿತ್ತು. ಹಾಗಾಗಿ ಅತ್ಯಂತ ಎಚ್ಚರಿಕೆಯಿಂದ ಎದುರಿಸುವುದು ಭಾರತದ ಮುಂದಿರುವ ಸವಾಲಾಗಿದೆ.
ಸಂತಸ ವ್ಯಕ್ತಪಡಿಸಿದ ಅಧ್ಯಕ್ಷ
ಮೂರು ಪಂದ್ಯಗಳ ಟಿ20 ಸರಣಿಗಾಗಿ ಭಾರತದ ಪ್ರವಾಸ ಕೈಗೊಳ್ಳುತ್ತಿರುವುದು ಅತೀವ ಖುಷಿ ನೀಡುತ್ತಿದೆ. ಭಾರತ ತಂಡದ ವಿಶ್ವದ ಅಗ್ರಮಾನ್ಯ ತಂಡ. ಅಂತಹ ತಂಡದ ವಿರುದ್ಧ ಸ್ಫರ್ಧಿಸುವುದು ಕಷ್ಟದ ವಿಷಯ. ಅಪ್ಘನ್ ತಂಡವೂ ಇತ್ತೀಚೆಗೆ ಉತ್ತಮ ಸಾಧನೆ ಮಾಡಿದ್ದೇವೆ ಎಂದು ನಾನು ನಂಬುತ್ತೇನೆ. ಭಾರತದ ವಿರುದ್ಧ ಹೆಚ್ಚು ಸ್ಪರ್ಧಾತ್ಮಕ ಸರಣಿಯನ್ನು ನೋಡುತ್ತಿದ್ದೇವೆ ಎಂದು ಅಫ್ಘನ್ ಕ್ರಿಕೆಟ್ ಅಧ್ಯಕ್ಷ ಮಿರ್ಮೈಸ್ ಅಶ್ರಫ್ ಹೇಳಿದ್ದಾರೆ.
ಸರಣಿ ಪ್ರಾರಂಭ ಯಾವಾಗ?
ಜನವರಿ 11ರಂದು ಮೊಹಾಲಿಯಲ್ಲಿ ಸರಣಿ ಪ್ರಾರಂಭಗೊಳ್ಳಲಿದೆ. 15 ರಂದು ಇಂದೋರ್‌ನ ಹೋಲ್ಕರ್ ಮೈದಾನದಲ್ಲಿ 2ನೇ ಪಂದ್ಯ ನಡೆಯಲಿದೆ. ಅಂತಿಮ ಟಿ20 ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಟಿ20 ವಿಶ್ವಕಪ್ ಟೂರ್ನಿಗೆ ಮುನ್ನ ಇದು ಭಾರತ ತಂಡಕ್ಕೆ ಕೊನೆಯ ಚುಟುಕು ಅಂತಾರಾಷ್ಟ್ರೀಯ ಸರಣಿಯಾಗಿರಲಿದೆ. ಹಾಗಾಗಿ ಹೆಚ್ಷಿನ ಮಹತ್ವ ಪಡೆದುಕೊಂಡಿದೆ.
ಭಾರತದ ಟಿ20 ಸರಣಿಗೆ ಪ್ರಕಟಗೊಂಡ ಅಫ್ಘಾನಿಸ್ತಾನ ತಂಡ ಹೀಗಿದೆ
ಇಬ್ರಾಹಿಂ ಜದ್ರಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಕ್ರಮ್ ಇಲಿಕಲ್ (ವಿಕೆಟ್ ಕೀಪರ್), ಹಜರುತುಲ್ಲಾ ಜಜೈ, ರಹಮತ್ ಶಾ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಕರೀಮ್ ಜನ್ನತ್, ಅಜ್ಮತುಲ್ಲಾ ಒಮರ್ಜಾಯ್, ಶರಫುದೀನ್ ಆಶ್ರಫ್, ಮುಜೀಬ್ ಉರ್ ರೆಹಮಾನ್, ಫಜಲ್ಹುಕ್ ಫಾರೂಕಿ, ಫರೀದ್ ಅಹ್ಮದ್, ನವೀನ್ ಉಲ್ ಹಕ್, ನೂರ್ ಅಹ್ಮದ್, ಮೊಹಮ್ಮದ್ ಸಲೀಮ್, ಖೈಸ್ ಅಹ್ಮದ್, ಗುಲ್ಬದೀನ್ ನೈಬ್, ರಶೀದ್ ಖಾನ್.
ರೋಹಿತ್-ಕೊಹ್ಲಿ ಮರಳುವ ಸಾಧ್ಯತೆ?
ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕಾರಣ ಈ ಸರಣಿ ರೋಹತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮರಳುವ ಸಾಧ್ಯತೆ ಇದೆ. ಪ್ರಮುಖರನ್ನೇ ಕಣಕ್ಕಿಳಿಸುವ ಯೋಜನೆಯಲ್ಲಿ ಬಿಸಿಸಿಐ ಸೆಲೆಕ್ಷನ್ ಕಮಿಟಿ ಇದೆ. 2022ರ ಟಿ20 ವಿಶ್ವಕಪ್ ಬಳಿಕ ಈವರೆಗೂ ಅವರಿಬ್ಬರು ರೋಹಿತ್-ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ ಕಾಣಿಸಿಕೊಂಡಿಲ್ಲ. ಅಭಿಮಾನಿಗಳು ಸಹ ಈ ಅನುಭವಿ ಆಟಗಾರರು ಮರಳುವುದಕ್ಕೆ ಕಾಯುತ್ತಿದ್ದಾರೆ.