ಚೊಚ್ಚಲ ಟೆಸ್ಟ್ ಶತಕ ಸಿಡಿಸಿ ದಾಖಲೆ ಬರೆದ ನಿತೀಶ್ ಕುಮಾರ್ ರೆಡ್ಡಿ; ಸಚಿನ್, ಪಂತ್ ನಂತರ ಈ ಸಾಧನೆಗೈದ 3ನೇ ಭಾರತೀಯ
Nitish Kumar Reddy: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ನಿತೀಶ್ ಕುಮಾರ್ ರೆಡ್ಡಿ ಅವರು ಚೊಚ್ಚಲ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
![ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ನಿತೀಶ್ ಕುಮಾರ್ ರೆಡ್ಡಿ ಕೆಚ್ಚೆದೆಯ ಹೋರಾಟ; ಚೊಚ್ಚಲ ಟೆಸ್ಟ್ ಶತಕ ಸಿಡಿಸಿ ದಾಖಲೆ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ನಿತೀಶ್ ಕುಮಾರ್ ರೆಡ್ಡಿ ಕೆಚ್ಚೆದೆಯ ಹೋರಾಟ; ಚೊಚ್ಚಲ ಟೆಸ್ಟ್ ಶತಕ ಸಿಡಿಸಿ ದಾಖಲೆ](https://images.hindustantimes.com/kannada/img/2024/12/28/550x309/CRICKET-AUS-IND-162_1735367891251_1735367906166.jpg)
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಭಾರತ ತಂಡಕ್ಕೆ ಆಸರೆಯಾದ ಯುವ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ ಚೊಚ್ಚಲ ಶತಕವನ್ನು ಪೂರೈಸಿದ್ದಾರೆ. ಇದರೊಂದಿಗೆ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಪ್ರಮುಖ ಬ್ಯಾಟರ್ಗಳೇ ವೈಫಲ್ಯ ಅನುಭವಿಸಿದರೂ ಆಸೀಸ್ ಬೌಲರ್ಗಳ ಎದುರು ಕೆಚ್ಚೆದೆಯ ಹೋರಾಟ ನಡೆಸಿದ ರೆಡ್ಡಿ, 171 ಎಸೆತಗಳಲ್ಲಿ ಟೆಸ್ಟ್ ಶತಕವನ್ನು ಪೂರ್ಣಗೊಳಿಸಿದರು. 115ನೇ ಓವರ್ನ 3ನೇ ಎಸೆತದಲ್ಲಿ ಸ್ಕಾಟ್ ಬೋಲ್ಯಾಂಡ್ರ ಬೌಲಿಂಗ್ನಲ್ಲಿ ಬೌಂಡರಿ ಸಿಡಿಸಿ ನೂರರ ಗಡಿ ದಾಟಿದ ನಿತೀಶ್ ಇನ್ನಿಂಗ್ಸ್ನಲ್ಲಿ 10 ಬೌಂಡರಿ, 1 ಸಿಕ್ಸರ್ ಇತ್ತು.
ಸಚಿನ್ ಪಟ್ಟಿಗೆ ಸೇರ್ಪಡೆಯಾದ ನಿತೀಶ್
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ ನಿತೀಶ್ ರೆಡ್ಡಿ, ಆಸ್ಟ್ರೇಲಿಯಾ ನೆಲದಲ್ಲಿ ಭಾರತದ ಪರ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರೊಂದಿಗೆ ದಿಗ್ಗಜ ಸಚಿನ್ ತೆಂಡೂಲ್ಕರ್ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. 21 ವರ್ಷ 216ನೇ ದಿನದಲ್ಲಿ ನಿತೀಶ್ ಶತಕ ಸಿಡಿಸಿದ್ದು, ಆಸೀಸ್ನಲ್ಲಿ ಮೊದಲ ಟೆಸ್ಟ್ ಶತಕ ಬಾರಿಸಿದ ಮೂರನೇ ಕಿರಿಯ ಆಟಗಾರ. ಆಸೀಸ್ ನೆಲದಲ್ಲಿ ಭಾರತ ಪರ ಚೊಚ್ಚಲ ಟೆಸ್ಟ್ ಸೆಂಚುರಿ ಬಾರಿಸಿದ ಕಿರಿಯ ಆಟಗಾರ ಪಟ್ಟಿ ಇಲ್ಲಿದೆ.
18 ವರ್ಷ 256 ದಿನ: ಸಚಿನ್ ತೆಂಡೂಲ್ಕರ್, ಸಿಡ್ನಿ 1992
21 ವರ್ಷ 92 ದಿನ: ರಿಷಭ್ ಪಂತ್, ಸಿಡ್ನಿ 2019
21 ವರ್ಷ 216 ದಿನ: ನಿತೀಶ್ ರೆಡ್ಡಿ, ಮೆಲ್ಬೋರ್ನ್ 2024
22 ವರ್ಷ 46 ದಿನ: ದತ್ತು ಫಡ್ಕರ್, ಅಡಿಲೇಡ್ 1948
8ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ದಾಖಲೆ
ಪಂದ್ಯದಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಭರ್ಜರಿ ಶತಕ ಬಾರಿಸಿದ ನಿತೀಶ್, ಮತ್ತೊಂದು ದಾಖಲೆಯನ್ನೂ ಬರೆದಿದ್ದಾರೆ. 8 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಆಟಗಾರರ ಪೈಕಿ ಶತಕ ಗಳಿಸಿದ ವಿಶ್ವದ ಮೂರನೇ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನಿತೀಶ್ ರೆಡ್ಡಿಗಿಂತಲೂ ಮೊದಲು ಬಾಂಗ್ಲಾದೇಶದ ಅಬುಲ್ ಹಸನ್ (20 ವರ್ಷ, 108 ದಿನ) ಮತ್ತು ಭಾರತದ ಅಜಯ್ ರಾತ್ರಾ (20 ವರ್ಷ 150 ದಿನ) ಅವರು ಈ ಸಾಧನೆ ಮಾಡಿದ್ದರು. 2015ರಲ್ಲಿ ಕೆಎಲ್ ರಾಹುಲ್ 22 ವರ್ಷ 265 ದಿನವಿದ್ದಾಗ ಸಿಡ್ನಿಯಲ್ಲಿ ಶತಕ ಸಿಡಿಸಿದ್ದರು.
ಸುಂದರ್ ಜೊತೆಗೆ ಶತಕದ ಜೊತೆಯಾಟ, ಭಾರತಕ್ಕೆ ಆಸರೆ
ಭಾರತ ತಂಡ 2ನೇ ದಿನದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿತ್ತು. ಇನ್ನೂ 310 ರನ್ಗಳ ಹಿನ್ನಡೆಯಲ್ಲಿತ್ತು. ಮೂರನೇ ದಿನದಾಟದಂದು ರವೀಂದ್ರ ಜಡೇಜಾ ಮತ್ತು ರಿಷಭ್ ಪಂತ್ ಮೇಲೆ ನಿರೀಕ್ಷೆ ಇಡಲಾಗಿತ್ತು. ಆದರೆ ಇಬ್ಬರು ಸಹ ನಿರಾಸೆ ಮೂಡಿಸಿದರು. 7 ವಿಕೆಟ್ ನಷ್ಟಕ್ಕೆ ಭಾರೀ ಸಂಕಷ್ಟದಲ್ಲಿತ್ತು. ಈ ಹಂತದಲ್ಲಿ ಒಂದಾದ ವಾಷಿಂಗ್ಟನ್ ಸುಂದರ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಆಸೀಸ್ ಬೌಲರ್ಗಳ ವಿರುದ್ಧ ಮಾಸ್ಟರ್ ಕ್ಲಾಸ್ ಇನ್ನಿಂಗ್ಸ್ ಆಡಿದರು. 8ನೇ ವಿಕೆಟ್ಗೆ 128 ರನ್ಗಳ ಪಾಲುದಾರಿಕೆ ನೀಡಿದರು. ಇದು ಭಾರತ ತಂಡವನ್ನು ಸಂಕಷ್ಟದಿಂದ ಪಾರು ಮಾಡಿತು. ಅಲ್ಲದೆ, ಬೃಹತ್ ಹಿನ್ನಡೆಯನ್ನು ಕುಗ್ಗಿಸಿದರು. ವಾಷಿಂಗ್ಟನ್ 50 ರನ್ ಸಿಡಿಸಿ ಔಟಾದರೆ, ನಿತೀಶ್ ಅಜೇಯರಾಗಿ 105 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ.
![Whats_app_banner Whats_app_banner](https://kannada.hindustantimes.com/static-content/1y/wBanner.png)