ಮೊದಲು ಘರ್ಜಿಸಿ ನಂತರ ಮಂಕಾದ ಭಾರತ ಎಡವಿದ್ದೆಲ್ಲಿ; ರೋಹಿತ್ ಪಡೆ ಸೋಲಿಗೆ ಪ್ರಮುಖ ಕಾರಣಗಳು ಇವು
ಕನ್ನಡ ಸುದ್ದಿ  /  ಕ್ರಿಕೆಟ್  /  ಮೊದಲು ಘರ್ಜಿಸಿ ನಂತರ ಮಂಕಾದ ಭಾರತ ಎಡವಿದ್ದೆಲ್ಲಿ; ರೋಹಿತ್ ಪಡೆ ಸೋಲಿಗೆ ಪ್ರಮುಖ ಕಾರಣಗಳು ಇವು

ಮೊದಲು ಘರ್ಜಿಸಿ ನಂತರ ಮಂಕಾದ ಭಾರತ ಎಡವಿದ್ದೆಲ್ಲಿ; ರೋಹಿತ್ ಪಡೆ ಸೋಲಿಗೆ ಪ್ರಮುಖ ಕಾರಣಗಳು ಇವು

India vs England 1st Test: ಇಂಗ್ಲೆಂಡ್ ಎದುರಿನ ಪ್ರಥಮ ಟೆಸ್ಟ್ ಕ್ರಿಕೆಟ್​​ ಪಂದ್ಯದಲ್ಲಿ ಸೋತ ಭಾರತ ತಂಡ ಭಾರಿ ಮುಖಭಂಗಕ್ಕೆ ಒಳಗಾಗಿದೆ. ಬ್ಯಾಟಿಂಗ್​-ಬೌಲಿಂಗ್​ನಲ್ಲಿ ನೀರಸ ಪ್ರದರ್ಶನ ನೀಡಿ ಸರಣಿಯಲ್ಲಿ ಹಿನ್ನಡೆ ಅನುಭವಿಸಿದೆ. ಹಾಗಾದರೆ ಪಂದ್ಯದ ಸೋಲಿಗೆ ಪ್ರಮುಖ ಕಾರಣಗಳು ಯಾವುವು? ಇಲ್ಲಿವೆ ನೋಡಿ.

ಭಾರತ ತಂಡದ ಸೋಲಿಗೆ ಪ್ರಮುಖ ಕಾರಣಗಳು.
ಭಾರತ ತಂಡದ ಸೋಲಿಗೆ ಪ್ರಮುಖ ಕಾರಣಗಳು.

ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್​​ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್​​ ಪಂದ್ಯದಲ್ಲಿ ಆತಿಥೇಯ ಭಾರತ ತಂಡವನ್ನು 28 ರನ್​ಗಳಿಂದ ಸೋಲಿಸಿದ ಇಂಗ್ಲೆಂಡ್ ತಂಡ (India vs England) ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 0-1ರಲ್ಲಿ ಮುನ್ನಡೆ ಸಾಧಿಸಿದೆ. ತವರಿನಲ್ಲಿ ಗೆಲ್ಲು ಫೇವರಿಟ್ ತಂಡವಾಗಿದ್ದ ಮತ್ತು​ ಗೆಲ್ಲುವ ವಿಶ್ವಾಸದಲ್ಲಿದ್ದ ಭಾರತಕ್ಕೆ ಸೋಲಿನ ಆಘಾತ ಎದುರಾಗಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ್ದ ಭಾರತ ತಂಡದ ಬ್ಯಾಟಿಂಗ್‌ ವಿಭಾಗ ಎರಡನೇ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್​​ ಸ್ಪಿನ್​ ದಾಳಿ ಎದುರು ಕಳೆಗುಂದಿತು. ಬ್ಯಾಟಿಂಗ್​-ಬೌಲಿಂಗ್​ ಎರಡರಲ್ಲೂ ನೀರಸ ಪ್ರದರ್ಶನ ನೀಡಿತು. ಹಾಗಾದರೆ ಮೊದಲ ಟೆಸ್ಟ್​ ಪಂದ್ಯದಲ್ಲಿ ರೋಹಿತ್ ಪಡೆ ಎಡವಿದ್ದೆಲ್ಲಿ? ಭಾರತದ ಸೋಲಿಗೆ ಪ್ರಮುಖ ಕಾರಣಗಳೇನು? ವಿವರ ಇಲ್ಲಿದೆ.

ಶುಭ್ಮನ್ ಗಿಲ್, ಅಯ್ಯರ್ ವೈಫಲ್ಯ

ತಂಡದ ಸೋಲಿಗೆ ಪ್ರಮುಖ ಕಾರಣ ಅಂದರೆ ಶುಭ್ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ವೈಫಲ್ಯ. ಚೇತೇಶ್ವರ್ ಪೂಜಾರ ಜಾಗದಲ್ಲಿ ಗಿಲ್ ಬ್ಯಾಟಿಂಗ್ ನಡೆಸಿದರೆ, ಅಜಿಂಕ್ಯ ರಹಾನೆ ಜಾಗದಲ್ಲಿ ಅಯ್ಯರ್​ ಕಣಕ್ಕೆ ಇಳಿದರು. ಆದರೆ, ಇಬ್ಬರು ಯುವ ಆಟಗಾರರು, ಹಿರಿಯ ಆಟಗಾರರ ಸ್ಥಾನ ತುಂಬುವಲ್ಲಿ ವಿಫಲರಾದರು. ಎರಡೂ ಇನ್ನಿಂಗ್ಸ್ ಸೇರಿ ಶುಭ್ಮನ್ 23 ರನ್ ಸಿಡಿಸಿದರೆ, ಅಯ್ಯರ್ 48 ರನ್ ಗಳಿಸಿದರು. ಎರಡನೇ ಇನ್ನಿಂಗ್ಸ್​ನಲ್ಲಿ ಒಬ್ಬರಾದರೂ ಕ್ರೀಸ್​ ಕಚ್ಚಿ ನಿಂತಿದ್ದರೆ ಭಾರತದ ಗೆಲುವಿಗೆ ಪ್ರಮುಖ ಕಾರಣರಾಗುತ್ತಿದ್ದರು.

ಹೀರೋ ಆಗುವ ಅವಕಾಶ ಕೈಚೆಲ್ಲಿದ ಭರತ್

ನಿಜ ಹೇಳಬೇಕೆಂದರೆ ಹೀರೋ ಆಗುವ ಅವಕಾಶ ಸಿಕ್ಕಿತ್ತು. ಅದು ಕೂಡ ಹೈದರಾಬಾದ್ ಪಿಚ್​ ತನ್ನ ತವರಿನ ಮೈದಾನ ಎಂಬುದು ವಿಶೇಷ. ಆದರೂ ಸಹ ಸಿಕ್ಕ ಅವಕಾಶ ಕೈಚೆಲ್ಲಿದರು. 119 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕಣಕ್ಕಿಳಿದ ಭರತ್, ಇಂಗ್ಲೆಂಡ್​​ ಬೌಲರ್​​ಗಳನ್ನು ದಿಟ್ಟವಾಗಿ ಎದುರಿಸಿ ಹೋರಾಟ ನೀಡಲು ಯತ್ನಿಸಿದರು. ಆದರೆ 28 ರನ್​ಗಳಿಗೆ ಸುಸ್ತಾದರು. ತನ್ನ ತವರಿನ ಪಿಚ್​​ನಲ್ಲಿ ಸ್ಪಿನ್​​ ಬೌಲಿಂಗ್​​​ ಟರ್ನ್​ ಆಗುತ್ತದೆ ಎಂಬುದು ತಿಳಿದಿದ್ದರೂ ಅದರ ಮರ್ಮ ಅರಿಯುವಲ್ಲಿ ವಿಫಲರಾಗಿ ಕ್ಲೀನ್​ ಬೋಲ್ಡ್ ಆದರು. ಮೊದಲ ಇನ್ನಿಂಗ್ಸ್​ನಲ್ಲಿ 41 ರನ್ ಗಳಿಸಿದ್ದರು.

ಒಲ್ಲಿ ಪೋಪ್​ನ ಎರಡು ಕ್ಯಾಚ್​ ಡ್ರಾಪ್

ತಂಡ ಸೋಲಿಗೆ ಪ್ರಮುಖ ಕಾರಣ ಇದು. ಭಾರತದ ನೆಲದಲ್ಲಿ ಭಾರತೀಯ ಬೌಲರ್​​ಗಳಿಗೆ ಬೆಂಡೆತ್ತಿದ ಇಂಗ್ಲೆಂಡ್​ನ ಒಲ್ಲಿ ಪೋಪ್​ಗೆ ಎರಡು ಜೀವದಾನಗಳನ್ನು ನೀಡಲಾಯಿತು. ಶತಕ ಸಿಡಿಸಿದ ಅಂದರೆ 110 ರನ್ ಗಳಿಸಿದ ಅವಧಿಯಲ್ಲಿ ಅಕ್ಷರ್ ಪಟೇಲ್ ಕ್ಯಾಚ್ ಬಿಟ್ಟರು. ಒಂದು ವೇಳೆ ಈ ಕ್ಯಾಚ್ ಹಿಡಿದಿದ್ದರೆ, 231 ರನ್​ಗಳ ಗುರಿ ನಮಗೆ ಸಿಗುತ್ತಿರಲಿಲ್ಲ. ನಂತರ 186 ರನ್​ ಗಳಿಸಿದ್ದ ಅವಧಿಯಲ್ಲಿ ಕೆಎಲ್ ರಾಹುಲ್ ಕ್ಯಾಚ್​ ಕೈಚೆಲ್ಲಿದರು. ಆಗಲೂ ಪೋಪ್ ಔಟಾಗಿದ್ದರೆ, ನಮಗೆ 10 ರನ್​ಗಳು ಉಳಿತಾಯ ಆಗುತ್ತಿತ್ತು. ಇದು ಬ್ಯಾಟಿಂಗ್ ನಡೆಸುವಾಗ ಒತ್ತಡ ಕೂಡ ಕಡಿಯಾಗುತ್ತಿತ್ತು. ಎರಡು ಸುಲಭ ಕ್ಯಾಚ್​​ಗಳು.

ತವರಿನ ಮೈದಾನದಲ್ಲಿ ಸಿರಾಜ್ 0 ವಿಕೆಟ್

ಮೊಹಮ್ಮದ್ ಸಿರಾಜ್ ಟೆಸ್ಟ್​ ಕ್ರಿಕೆಟ್​ನಲ್ಲಿ ಪವರ್​ಪ್ಯಾಕ್ ಬೌಲರ್ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಮೊದಲ ಟೆಸ್ಟ್​ನಲ್ಲಿ ಅವರು ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಸ್ಪಿನ್​ ಟ್ರ್ಯಾಕ್​ನಲ್ಲಿ ಬುಮ್ರಾ ಎರಡೂ ಇನ್ನಿಂಗ್ಸ್​ ಸೇರಿ 6 ವಿಕೆಟ್ ಪಡೆದರೆ, ಸಿರಾಜ್​ ಮಾತ್ರ ಶೂನ್ಯ ವಿಕೆಟ್ ಪಡೆದರು. ಮತ್ತೊಂದು ಅಚ್ಚರಿ ಏನೆಂದರೆ ಸಿರಾಜ್ ಆಡಿದ ಬೆಳೆದಿದ್ದೆಲ್ಲಾ ಇದೇ ಪಿಚ್​​ನಲ್ಲಿ. ಆದರೆ ಅವರೇ ಒಂದೂ ವಿಕೆಟ್​ ಪಡೆಯದಿರುವುದು ಸೋಲಿಗೆ ಪ್ರಮುಖ ಕಾರಣ ಎಂದರೂ ತಪ್ಪಲ್ಲ.

ಪೋಪ್ ಬೆಂಕಿ ಆಟ, ಹಾರ್ಟ್ಲೆ ಅದ್ಭುತ ಬೌಲಿಂಗ್

ಇಂಗ್ಲೆಂಡ್​​ ಗೆಲುವಿನಲ್ಲಿ ಮತ್ತು ಭಾರತದ ಸೋಲಿಗೆ ಪ್ರಮುಖ ಪಾತ್ರರು ಎಂದರೆ ಒಲ್ಲಿ ಪೋಪ್ ಮತ್ತು ಟಾಮ್ ಹಾರ್ಟ್ಲೆ. ಮೊದಲ ಇನ್ನಿಂಗ್ಸ್​​ನಲ್ಲಿ ವಿಫಲರಾದ ಪೋಪ್, ಎರಡನೇ ಇನ್ನಿಂಗ್ಸ್​ನಲ್ಲಿ ವಿಧ್ವಂಸ ಸೃಷ್ಟಿಸಿದರು. 196 ರನ್​​ಗಳ ಏಕಾಂಗಿ ಹೋರಾಟದ ಇನ್ನಿಂಗ್ಸ್​ ಕಟ್ಟಿ ಭಾರತಕ್ಕೆ ಮುಳುವಾದರು. ಇನ್ನು ಎರಡನೇ ಇನ್ನಿಂಗ್ಸ್​​​ನಲ್ಲಿ ಭಾರತದ ಬ್ಯಾಟರ್​​ಗಳನ್ನು ಅತಿಯಾಗಿ ಕಾಡಿದ್ದು ಟಾಮ್ ಹಾರ್ಟ್ಲೆ. ಈ ಸ್ಪಿನ್ನರ್​​​ಗೆ ಭಾರತದವರು ಪೆವಿಲಿಯನ್ ಪರೇಡ್ ನಡೆಸಿದರು. ತಾನು ಬೌಲಿಂಗ್ ಮಾಡಿದ ಮೊದಲ ಇನ್ನಿಂಗ್ಸ್​ನಲ್ಲಿ 2 ವಿಕೆಟ್ ಪಡೆದಿದ್ದ ಹಾರ್ಟ್ಲೆ, ಎರಡನೇ ಇನ್ನಿಂಗ್ಸ್​ನಲ್ಲಿ ಜಾದೂ ನಡೆಸಿ 7 ವಿಕೆಟ್ ಉರುಳಿಸಿದರು.

ಅತಿಯಾದ ಆತ್ಮವಿಶ್ವಾಸ

ಮೊದಲ ಇನ್ನಿಂಗ್ಸ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದೇವೆ ಎಂಬ ಅತಿಯಾದ ಆತ್ಮವಿಶ್ವಾಸವು ಭಾರತಕ್ಕೆ ಮುಳುವಾಯಿತು. ಅಲ್ಲದೆ, ಕಳೆದ ದಶತಕದಿಂದ ತವರಿನಲ್ಲಿ ಅಜೇಯ ಗೆಲುವು ಸಾಧಿಸಿದ್ದೇವೆ ಎಂಬ ಆತ್ಮವಿಶ್ವಾಸವೂ ಸೋಲಿಗೆ ಕಾರಣವಾಯಿತು. ಮೊದಲ ಇನ್ನಿಂಗ್ಸ್​ನಲ್ಲಿ ಭಾರತೀಯ ಆಟಗಾರರು ನೀಡಿದ ಅದ್ಭುತ ಪ್ರದರ್ಶನದಿಂದ ನಿರೀಕ್ಷೆ ಹೆಚ್ಚಾಗಿತ್ತು. ಆದರೆ ಆ ನಿರೀಕ್ಷೆಯನ್ನು ಉಳಿಸಿಕೊಳ್ಳಲು ವಿಫಲರಾದರು. ಹಾಗಾಗಿ ಎರಡನೇ ಪಂದ್ಯದಲ್ಲಾದರೂ ಭಾರತ ತಂಡ ಈ ಎಲ್ಲಾ ತಪ್ಪುಗಳಿಂದ ಪಾಠ ಕಲಿಯಬೇಕಿದೆ.

ಡಿಆರ್​​ಎಸ್ ನಿರ್ಧಾರ ವೈಫಲ್ಯ, ಕಳಪೆ ಫೀಲ್ಡಿಂಗ್​

ಭಾರತ ತಂಡಕ್ಕಿದ್ದ ಡಿಆರ್​ಎಸ್ ಅವಕಾಶಗಳನ್ನು ಕೈಚೆಲ್ಲಿತು. ಎರಡನೇ ಇನ್ನಿಂಗ್ಸ್​​ನಲ್ಲಿ ಒಲ್ಲಿ ಪೋಪ್ ಔಟಾಗಿದ್ದ ಡಿಆರ್​ಎಸ್​ ಅನ್ನು ನಾಯಕ ರೋಹಿತ್​ ಶರ್ಮಾ ತೆಗೆದುಕೊಳ್ಳುವಲ್ಲಿ ವಿಫಲರಾದರು. ಆಗಷ್ಟೇ ಪೋಪ್​ ಕ್ರೀಸ್​​ಗೆ ಬಂದಿದ್ದರು. 10 ರನ್​ಗಳ ಆಸುಪಾಸಿನಲ್ಲಿದ್ದರು. ಇನ್ನು ಫೀಲ್ಡಿಂಗ್ ವಿಚಾರಕ್ಕೆ ಬರುವುದಾದರೆ ಭಾರತ ಹಲವು ತಪ್ಪುಗಳನ್ನು ಮಾಡಿತು. ಬೌಂಡರಿ ಗೆರೆಯತ್ತ ನಿಧಾನವಾಗಿ ಹೋಗುವ ಚೆಂಡನ್ನು ತಡೆಯುವ ಪ್ರಯತ್ನಕ್ಕೂ ಮುಂದಾಗಲಿಲ್ಲ. ಆದರೆ ಇಂಗ್ಲೆಂಡ್ ತಂಡ ಆಕ್ರಮಣಕಾರಿ ಫೀಲ್ಡಿಂಗ್ ನಡೆಸಿ ಸಾಕಷ್ಟು ರನ್ ರಕ್ಷಿಸಿತು. ಇದು ಕೂಡ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.

Whats_app_banner