ಶುಭ್ಮನ್ ಗಿಲ್ ಶತಕ, ಭಾರತ 255ಕ್ಕೆ ಆಲೌಟ್; ಇಂಗ್ಲೆಂಡ್ ತಂಡಕ್ಕೆ 399 ರನ್ಗಳ ಬೃಹತ್ ಗುರಿ
IND vs ENG 2nd Test : ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ ಭಾರತ ತಂಡ 399 ರನ್ಗಳ ಗುರಿ ನೀಡಿದೆ. ಮೊದಲ ಟೆಸ್ಟ್ ಸೋಲಿನ ಸೇಡು ತೀರಿಸಿಕೊಳ್ಳಲು ರೋಹಿತ್ ಪಡೆ ಸಜ್ಜಾಗಿದೆ.
ಮೊದಲ ಟೆಸ್ಟ್ ಸೋಲಿಗೆ ಸೇಡು ತಿರಿಸಿಕೊಳ್ಳಲು ಟೀಮ್ ಇಂಡಿಯಾ ಎರಡನೇ ಟೆಸ್ಟ್ನಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ ಬೃಹತ್ ಗುರಿ ನೀಡಿದೆ. ವಿಶಾಖಪಟ್ಟಂನ ಡಾ ವೈಎಸ್ ರಾಜಶೇಖರ್ ರೆಡ್ಡಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ನಲ್ಲಿ ಶುಭ್ಮನ್ ಗಿಲ್ ಅವರ ಭರ್ಜರಿ ಶತಕದ ನೆರವಿನಿಂದ ಭಾರತ, ಮೊದಲ ಟೆಸ್ಟ್ ಗೆಲುವಿನ ಆತ್ಮವಿಶ್ವಾಸದಲ್ಲಿರುವ ಇಂಗ್ಲೆಂಡ್ಗೆ 399 ರನ್ಗಳ ಗುರಿ ನೀಡಿದೆ.
ಮೊದಲ ಇನ್ನಿಂಗ್ಸ್ನಲ್ಲಿ 143 ರನ್ಗಳ ಮುನ್ನಡೆ ಪಡೆದಿದ್ದ ಭಾರತ, ಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿತ್ತು. ಈ ಸ್ಕೋರ್ನೊಂದಿಗೆ ಮೂರನೇ ದಿನದಾಟ ಆರಂಭಿಸಿದ ಟೀಮ್ ಇಂಡಿಯಾಗೆ, ಆರಂಭದಲ್ಲೇ ವಿಘ್ನ ಎದುರಾಯಿತು. ನಾಯಕ ರೋಹಿತ್ ಶರ್ಮಾ 13 ರನ್ ಗಳಿಸಿ ಮತ್ತೆ ನಿರಾಸೆ ಮೂಡಿಸಿದರು. ಮೊದಲ ಇನ್ನಿಂಗ್ಸ್ನ ದ್ವಿಶತಕ ವೀರ 17 ರನ್ ಗಳಿಸಿ ಔಟಾದರು.
ಶುಭ್ಮನ್ ಸೊಗಸಾದ ಆಟ
ಸತತ ವೈಫಲ್ಯ ಅನುಭವಿಸುತ್ತಿದ್ದ ಶುಭ್ಮನ್ ಗಿಲ್, ಕೊನೆಗೂ ಲಯಕ್ಕೆ ಮರಳಿದರು. ಎರಡನೇ ಟೆಸ್ಟ್ನ ದ್ವಿತೀಯ ಇನ್ನಿಂಗ್ಸ್ನಲ್ಲಿ ಸೊಗಸಾದ ಬ್ಯಾಟಿಂಗ್ ನಡೆಸಿದರು. ಶ್ರೇಯಸ್ ಅಯ್ಯರ್ ಜೊತೆಗೆ ಮೂರನೇ ವಿಕೆಟ್ಗೆ 81 ರನ್ ಕಲೆ ಹಾಕಿದ ಗಿಲ್, 6ನೇ ವಿಕೆಟ್ಗೆ ಅಕ್ಷರ್ ಜೊತೆಗೆ 89 ರನ್ಗಳ ಪಾಲುದಾರಿಕೆ ನೀಡಿದರು. ಅಯ್ಯರ್ 29, ಅಕ್ಷರ್ 45 ರನ್ಗಳ ಕಾಣಿಕೆ ನೀಡಿದರು. ರಜತ್ (9) ಪಾಟೀದಾರ್ ನಿರಾಸೆ ಮೂಡಿಸಿದರು.
332 ದಿನಗಳ ನಂತರ ಗಿಲ್ ಶತಕ
ಮೊದಲ ಇನ್ನಿಂಗ್ಸ್ನಲ್ಲಿ ಜೈಸ್ವಾಲ್ ಅವರ ದ್ವಿಶತಕದ ನೆರವಿನಿಂದ ಭಾರತ 396 ರನ್ ಕಲೆ ಹಾಕಿತ್ತು. ಆದರೆ ಎರಡನೇ ಇನ್ನಿಂಗ್ಸ್ನಲ್ಲಿ ಮತ್ತೆ ಬ್ಯಾಟ್ಸ್ಮನ್ಗಳು ಕೈಕೊಟ್ಟರು. ಈ ಹಂತದಲ್ಲಿ ಸೊಗಸಾದ ಬ್ಯಾಟಿಂಗ್ ನಡೆಸಿದ ಗಿಲ್ ಟೆಸ್ಟ್ನಲ್ಲಿ ತಮ್ಮ ಮೂರನೇ ಶತಕ ಸಿಡಿಸಿ ಸಂಭ್ರಮಿಸಿದರು. 147 ಎಸೆತಗಳನ್ನು ಎದುರಿಸಿದ ಗಿಲ್ 11 ಬೌಂಡರಿ, 2 ಸಿಕ್ಸರ್ ಸಹಿತ 104 ರನ್ ಗಳಿಸಿದರು. ಇದರೊಂದಿಗೆ ತಂಡ ಮುನ್ನಡೆ 350ರ ಗಡಿ ದಾಟಿಸಿದರು.
ಇನ್ನು ತವರಿನ ಮೈದಾನದಲ್ಲಿ ಶ್ರೀಕರ್ ಭರತ್ ಎರಡನೇ ಇನ್ನಿಂಗ್ಸ್ನಲ್ಲೂ ವಿಫಲರಾದರು. ಅಲ್ಲದೆ, ತಾನಾಡಿದ 12 ಟೆಸ್ಟ್ ಇನ್ನಿಂಗ್ಸ್ಗಳಲ್ಲಿ ಒಂದೇ ಒಂದು ಅರ್ಧಶತಕವನ್ನೂ ದಾಖಲಿಸಿಲ್ಲ. ರವಿಚಂದ್ರನ್ ಅಶ್ವಿನ್ 29 ರನ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಸೊನ್ನೆ ಸುತ್ತಿದರು. ಅಂತಿಮವಾಗಿ ಭಾರತ ಎರಡನೇ ಇನ್ನಿಂಗ್ಸ್ನಲ್ಲಿ ಭಾರತ 78.3 ಓವರ್ಗಳಲ್ಲಿ 255 ರನ್ಗಳಿಸಿ ಆಲೌಟ್ ಆಯಿತು.
ಇದರೊಂದಿಗೆ ಮೊದಲ ಇನ್ನಿಂಗ್ಸ್ನ 143 ರನ್ಗಳ ಮುನ್ನಡೆಯೂ ಸೇರಿ 398 ರನ್ ಆಗಿದ್ದು 399 ರನ್ಗಳ ಗುರಿ ನೀಡಿದೆ. ಮೊದಲ ಟೆಸ್ಟ್ನ ಗೆಲುವಿನ ರೂವಾರಿಯಾಗಿದ್ದ ಟಾಮ್ ಹಾರ್ಟ್ಲೆ 4 ವಿಕೆಟ್ ಪಡೆದರೆ, ರೆಹಾನ್ ಅಹ್ಮದ್ 3, ಜೇಮ್ಸ್ ಆಂಡರ್ಸನ್ 2, ಶೋಯೆಬ್ ಬಶೀರ್ 1 ವಿಕೆಟ್ ಪಡೆದರು. ಆಂಗ್ಲರು ದ್ವಿತೀಯ ಪಂದ್ಯದಲ್ಲೂ ಜಯದ ನಗೆ ಬೀರುವ ವಿಶ್ವಾಸದಲ್ಲಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ ಉಭಯ ತಂಡಗಳ ಪ್ರದರ್ಶನ
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ಯಶಸ್ವಿ ಜೈಸ್ವಾಲ್ ಸಿಡಿಸಿದ ದ್ವಿಶತಕದ (209) ನೆರವಿನಿಂದ ಮೊದಲ ಇನ್ನಿಂಗ್ಸ್ನಲ್ಲಿ 396 ರನ್ ಕಲೆ ಹಾಕಿತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ 253 ರನ್ಗಳಿಗೆ ಆಲೌಟ್ ಆಯಿತು. ಜಸ್ಪ್ರೀತ್ ಬುಮ್ರಾ ಬಿರುಗಾಳಿ ಬೌಲಿಂಗ್ ನಡೆಸಿ ಭಾರತ ತಂಡಕ್ಕೆ 143 ರನ್ಗಳ ಮುನ್ನಡೆ ತಂದುಕೊಟ್ಟರು.