ಮೂರನೇ ಏಕದಿನದಲ್ಲಿ 142 ರನ್ನಿಂದ ಸೋತ ಕ್ರಿಕೆಟ್ ಜನಕರು; ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಸಾಧನೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಮೂರನೇ ಏಕದಿನದಲ್ಲಿ 142 ರನ್ನಿಂದ ಸೋತ ಕ್ರಿಕೆಟ್ ಜನಕರು; ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಸಾಧನೆ

ಮೂರನೇ ಏಕದಿನದಲ್ಲಿ 142 ರನ್ನಿಂದ ಸೋತ ಕ್ರಿಕೆಟ್ ಜನಕರು; ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಸಾಧನೆ

India vs England 3rd ODI: ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​​​ ಮೈದಾನದಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ 142 ರನ್​ಗಳಿಂದ ಗೆದ್ದು ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿತು.

ಮೂರನೇ ಏಕದಿನದಲ್ಲಿ 142 ರನ್ನಿಂದ ಸೋತ ಕ್ರಿಕೆಟ್ ಜನಕರು; ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಸಾಧನೆ
ಮೂರನೇ ಏಕದಿನದಲ್ಲಿ 142 ರನ್ನಿಂದ ಸೋತ ಕ್ರಿಕೆಟ್ ಜನಕರು; ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಸಾಧನೆ (REUTERS)

ಆರಂಭಿಕ ಆಟಗಾರ ಶುಭ್ಮನ್ ಗಿಲ್ ಅವರ ಮನಮೋಹಕ ಶತಕ (112) ಮತ್ತು ಬೌಲರ್​​ಗಳ ಮಾರಕ ಬೌಲಿಂಗ್ ಬಲದಿಂದ ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲೂ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಐತಿಹಾಸಿಕ ಜಯದೊಂದಿಗೆ ಸರಣಿಯನ್ನೂ 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದ ಭಾರತ ತಂಡ, ನೀಡಿದ್ದ 356 ರನ್ ಬೃಹತ್ ಮೊತ್ತ ಬೆನ್ನಟ್ಟಲು ವಿಫಲವಾದ ಇಂಗ್ಲೆಂಡ್ 142 ರನ್​ಗಳಿಂದ ಸೋಲೊಪ್ಪಿಕೊಂಡು ಮುಖಭಂಗಕ್ಕೆ ಒಳಗಾಯಿತು. ಇಂಗ್ಲೆಂಡ್ ವಿರುದ್ಧ ಭಾರತಕ್ಕಿದು ಎರಡನೇ ಅತಿ ದೊಡ್ಡ ಏಕದಿನ ಗೆಲುವು.

ಕ್ರಿಕೆಟ್ ಜನಕರು ಭಾರತದ ನೆಲದಲ್ಲಿ ಟಿ20 ಸರಣಿಯ ಜೊತೆಗೆ ಏಕದಿನ ಸಿರೀಸನ್ನೂ ಕಳೆದುಕೊಂಡು ನಿರಾಸೆಯೊಂದಿಗೆ ಚಾಂಪಿಯನ್ಸ್ ಟ್ರೋಫಿಗೆ ಹೋಗುತ್ತಿದ್ದಾರೆ. ಆದರೆ ಆಟಗಾರರ ಸಂಘಟಿತ ಹೋರಾಟ ಮತ್ತು ಈ ಗೆಲುವು ಭಾರತಕ್ಕೆ ಆತ್ಮವಿಶ್ವಾಸವನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ 50 ಓವರ್​​​ಗಳಲ್ಲಿ 356 ರನ್​ಗೆ ಆಲೌಟ್ ಆಯಿತು. ಇಂಗ್ಲೆಂಡ್, 34.2 ಓವರ್​​ಗಳಲ್ಲಿ 214 ರನ್ ಗಳಿಸಿ ಸರ್ವಪತನಗೊಂಡಿತು. ಇದರೊಂದಿಗೆ 142 ರನ್​ಗಳಿಂದ ಶರಣಾಯಿತು.

ಶುಭ್ಮನ್ ಗಿಲ್ ಶತಕ, ಉಳಿದವರೂ ಅಬ್ಬರ

ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಲಯಕ್ಕೆ ಮರಳಿದ ರೋಹಿತ್​ ಶರ್ಮಾ (1) ನಿರಾಸೆ ಮೂಡಿಸಿದರೆ ಶುಭ್ಮನ್ ಗಿಲ್ (112 ರನ್, 102 ಎಸೆತ, 14 ಬೌಂಡರಿ, 3 ಸಿಕ್ಸರ್) ಮತ್ತೊಂದು ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ತನ್ನ 50ನೇ ಪಂದ್ಯದಲ್ಲಿ ದಾಖಲೆಯ 7ನೇ ಶತಕ ಸಿಡಿಸಿ ಪವರ್​ಫುಲ್ ಶೋ ನೀಡಿದರು. ಜೊತೆಗೆ ಕಳಪೆ ಫಾರ್ಮ್​ನಿಂದ ಕಂಗೆಟ್ಟಿದ್ದ ವಿರಾಟ್ ಕೊಹ್ಲಿ (52 ರನ್, 55 ಎಸೆತ, 7 ಬೌಂಡರಿ, 1 ಸಿಕ್ಸರ್) ಅರ್ಧಶತಕ ಸಿಡಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭರವಸೆ ಮೂಡಿಸಿದರು. ಶ್ರೇಯಸ್ ಅಯ್ಯರ್ (78 ರನ್, 64 ಎಸೆತ, 8 ಬೌಂಡರಿ, 2 ಸಿಕ್ಸರ್) ಮತ್ತೆ ಅರ್ಧಶತಕ ಸಿಡಿಸಿದರು. ಅತ್ತ ತನ್ನ 5ನೇ ಸ್ಥಾನಕ್ಕೆ ಮರಳಿದ ಕೆಎಲ್ ರಾಹುಲ್ ಉಪಯುಕ್ತ 40 ರನ್​​ಗಳ ಕಾಣಿಕೆ ಒದಗಿಸಿದರು.

ಬೌಲರ್​​ಗಳ ಸಂಘಟಿತ ಹೋರಾಟ

ಮೊದಲ ಎರಡು ಪಂದ್ಯಗಳಲ್ಲೂ ನಾಲ್ಕು ವಿಕೆಟ್​ಗಳಿಂದಲೇ ಸೋತಿದ್ದ ಇಂಗ್ಲೆಂಡ್, ಕೊನೆಯ ಪಂದ್ಯ ಗೆದ್ದು ಕ್ಲೀನ್ ಸ್ವೀಪ್ ಮುಖಭಂಗದಿಂದ ಪಾರಾಗುವ ಲೆಕ್ಕಾಚಾರ ಹಾಕಿಕೊಂಡಿತ್ತು. ಆದರೆ ಆಗಿದ್ದೇ ಬೇರೆ. ಭಾರತೀಯ ಬೌಲರ್​​ಗಳ ಅಬ್ಬರಕ್ಕೆ ನಲುಗಿದ ಆಂಗ್ಲರು 142 ರನ್​ಗಳಿಂದ ಶರಣಾದರು. ಟಾಮ್ ಬ್ಯಾಂಟನ್ ಮತ್ತು ಗಸ್ ಆಟ್ಕಿನ್ಸನ್ ತಲಾ 38 ರನ್​ ಗಳಿಸಿದ್ದೇ ತಂಡದ ಪರ ಗರಿಷ್ಠ ಸ್ಕೋರ್. ಫಿಲ್ ಸಾಲ್ಟ್ (23), ಬೆನ್ ಡಕೆಟ್ (34), ಜೋ ರೂಟ್ (24), ಹ್ಯಾರಿ ಬ್ರೂಕ್ (19), ಜೋಸ್ ಬಟ್ಲರ್​ (6), ಲಿಯಾಮ್ ಲಿವಿಂಗ್​ಸ್ಟನ್ (9) ಕಳಾಹೀನ ಪ್ರದರ್ಶನ ನೀಡಿ ಸೋಲಿಗೆ ಕಾರಣರಾದರು. ಮತ್ತೊಂದೆಡೆ ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಉರುಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಪಂದ್ಯಶ್ರೇಷ್ಠ, ಸರಣಿ ಶ್ರೇಷ್ಠ ಯಾರಿಗೆ?

ಅಂತಿಮ ಏಕದಿನದಲ್ಲಿ ಶತಕ ಸಿಡಿಸಿದ ಹಾಗೂ ಸರಣಿಯಲ್ಲಿ ಎರಡು ಅರ್ಧಶತಕ, 1 ಶತಕ ಸಿಡಿಸಿದ್ದ ಶುಭ್ಮನ್ ಗಿಲ್​ಗೆ ಪಂದ್ಯಶ್ರೇಷ್ಠ ಮತ್ತು ಸರಣಿ ಪ್ರಶಸ್ತಿ ಲಭಿಸಿದೆ. ಅವರು ಮೂರು ಪಂದ್ಯಗಳಲ್ಲಿ 86.33ರ ಬ್ಯಾಟಿಂಗ್ ಸರಾಸರಿಯಲ್ಲಿ 259 ರನ್ ಗಳಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಅತಿ ದೊಡ್ಡ ಏಕದಿನ ಗೆಲುವುಗಳು (ರನ್‌ಗಳಿಂದ)

158 ರನ್‌ - ರಾಜ್‌ಕೋಟ್ 2008

142 ರನ್‌ - ಅಹಮದಾಬಾದ್ 2025 *

133 ರನ್‌ - ಕಾರ್ಡಿಫ್ 2014

127 ರನ್‌ - ಕೊಚ್ಚಿ 2013

126 ರನ್‌ - ಹೈದರಾಬಾದ್ 2011

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner