ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ಗಳಿಗೆ ಕೊಹ್ಲಿ ಸ್ಥಾನ ತುಂಬಬಲ್ಲ ಮೂವರು ಸಮರ್ಥ ಆಟಗಾರರು ಇವರು
India vs England Test: ಇಂಗ್ಲೆಂಡ್ ವಿರುದ್ಧ ಭಾರತದಲ್ಲಿ ನಡೆಯಲಿರುವ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಭಾರತ ಕ್ರಿಕೆಟ್ ತಂಡದಲ್ಲಿ ವಿರಾಟ್ ಕೊಹ್ಲಿ ಸ್ಥಾನವನ್ನು ತುಂಬಲು ಮೂವರು ಅನ್‌ಕ್ಯಾಪ್ ಆಟಗಾರರು ಮುಂಚೂಣಿಯಲ್ಲಿದ್ದಾರೆ. ಅವರ ವಿವರ ಇಲ್ಲಿದೆ.
ಮುಂಬರುವ ಇಂಗ್ಲೆಂಡ್ ವಿರುದ್ಧದ (India vs England) 5 ಪಂದ್ಯಗಳ ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಹಿಂದೆ ಸರಿದಿದ್ದಾರೆ. ವೈಯಕ್ತಿಕ ಕಾರಣಗಳಿಂದ ಎರಡು ಪಂದ್ಯಗಳಿಂದ ಹೊರಗುಳಿದಿರುವ ಕೊಹ್ಲಿ, ಉಳಿದ ಮೂರು ಪಂದ್ಯಗಳಿಗೆ ಮರಳುವ ಸಾಧ್ಯತೆ ಇದೆ. ಆಟಗಾರನ ಗೌಪ್ಯತೆಯನ್ನು ಗೌರವಿಸುವಂತೆ ಮನವಿ ಮಾಡಿದ ಬಿಸಿಸಿಐ, ಕೊಹ್ಲಿಗೆ ಬದಲಿ ಆಟಗಾರರನ್ನು ಶೀಘ್ರದಲ್ಲೇ ಪ್ರಕಟಿಸಲಿದೆ.
ಕೊಹ್ಲಿ ಅಲಭ್ಯರಾದ ಕುರಿತು ಅಧಿಕೃತವಾಗಿ ಘೋಷಿಸಿದ ಬಿಸಿಸಿಐ, ಶೀಘ್ರದಲ್ಲೇ ಬದಲಿ ಆಟಗಾರನನ್ನು ಘೋಷಿಸುವುದಾಗಿ ಹೇಳಿದೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ತಂಡವು ಅನುಭವಿ ಆಟಗಾರರನಿಂದ ವಂಚಿತವಾಗಿದೆ. ಅಜಿಂಕ್ಯ ರಹಾನೆ ಅಥವಾ ಚೇತೇಶ್ವರ ಪೂಜಾರರನ್ನು ಮರಳಿ ಕರೆಸಿಕೊಳ್ಳುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ. ಆದರೆ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಇವರ ಆಯ್ಕೆಗೆ ಒಪ್ಪುವುದು ಕಷ್ಟ.
ರಹಾನೆ-ಪೂಜಾರ ಅವರನ್ನು ಆಯ್ಕೆ ಮಾಡಬೇಕೆಂದಿದ್ದರೆ ಪ್ರಮುಖ ತಂಡಕ್ಕೆ ಆಯ್ಕೆ ಮಾಡಲಾಗುತ್ತಿತ್ತು. ಆದರೆ ಆ ನಿರ್ಧಾರಕ್ಕೆ ಸೆಲೆಕ್ಟರ್ಸ್ ಮುಂದಾಗಿಲ್ಲ. ಹೀಗಾಗಿ, ಮತ್ತೆ ಅವಕಾಶ ನೀಡುವ ಸಾಧ್ಯತೆ ತೀರಾ ಕಡಿಮೆ ಇದೆ. ಇಂಗ್ಲೆಂಡ್ ವಿರುದ್ಧದ ಮೊದಲ 2 ಟೆಸ್ಟ್ ಪಂದ್ಯಗಳಿಗೆ ಭಾರತ ಟೆಸ್ಟ್ ತಂಡದಲ್ಲಿ ಕೊಹ್ಲಿ ಸ್ಥಾನವನ್ನು ತುಂಬಲು ಮೂವರು ಅನ್‌ಕ್ಯಾಪ್ ಆಟಗಾರರು ಮುಂಚೂಣಿಯಲ್ಲಿದ್ದಾರೆ.
ಇದನ್ನೂ ಓದಿ | ಭಾರತ ತಂಡಕ್ಕೆ ದೊಡ್ಡ ಹೊಡೆತ; ಇಂಗ್ಲೆಂಡ್ ವಿರುದ್ಧದ ಮೊದಲ 2 ಟೆಸ್ಟ್ಗಳಿಂದ ವಿರಾಟ್ ಕೊಹ್ಲಿ ಔಟ್
- ರಜತ್ ಪಾಟೀದಾರ್
ರಜತ್ ಪಾಟೀದಾರ್ ಅವರು ಇತ್ತೀಚಿನ ವರ್ಷಗಳಲ್ಲಿ ಪ್ರಥಮ ದರ್ಜೆ ಸರ್ಕ್ಯೂಟ್‌ನಲ್ಲಿ ಪ್ರಭಾವಶಾಲಿ ಪ್ರದರ್ಶನ ನೀಡುತ್ತಿದ್ದಾರೆ. ಹಾಗಾಗಿ ಭಾರತ ಟೆಸ್ಟ್ ತಂಡಕ್ಕೆ ಚೊಚ್ಚಲ ಕರೆ ಪಡೆಯಲು ಮುಂಚೂಣಿಯಲ್ಲಿದ್ದಾರೆ. ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದ ರಜತ್ ಪಾಟೀದಾರ್, ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಭಾರತ-ಎ ತಂಡದ ಪರ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಅಲ್ಲಿ ಅವರು ಶತಕ ಸಿಡಿಸುವುದರೊಂದಿಗೆ ಅಜೇಯ 151 ರನ್ ಗಳಿಸಿದ್ದರು. ಸೆಲೆಕ್ಟರ್ಗಳು ಸಹ ರಜತ್ ಮೇಲೆ ಹೆಚ್ಚಿನ ಒಲವು ಹೊಂದಿದ್ದಾರೆ.
- ಸರ್ಫರಾಜ್ ಖಾನ್
ಕೊಹ್ಲಿ ಅನುಪಸ್ಥಿತಿಯಿಂದಾಗಿ ಸರ್ಫರಾಜ್ ಖಾನ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದರೂ ಅಚ್ಚರಿ ಇಲ್ಲ. ಮುಂಬೈ ಬ್ಯಾಟರ್ ಇತ್ತೀಚಿನ ವರ್ಷಗಳಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಡಾನ್ ಬ್ರಾಡ್ಮನ್ ಅವರನ್ನೇ ಹಿಂದಿಕ್ಕಿದ್ದಾರೆ. 26ರ ಹರೆಯದ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 68.20 ಸರಾಸರಿ ಹೊಂದಿದ್ದಾರೆ. 2022ರ ಆರಂಭದಿಂದ ಸರಾಸರಿ 88ರ ಸಮೀಪದಲ್ಲಿದ್ದಾರೆ. ಇಂಗ್ಲೆಂಡ್ ಲಯನ್ಸ್ ವಿರುದ್ಧದ ಭಾರತ-ಎ ಪರ ಅಭ್ಯಾಸ ಪಂದ್ಯದಲ್ಲಿ 96 ರನ್ ಗಳಿಸಿದ್ದ ಸರ್ಫರಾಜ್, ಮತ್ತೊಂದು ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಸಿಡಿಸಿದ್ದರು. ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಲು ಕಾತರದಿಂದ ಕಾಯುತ್ತಿರುವ ಯುವ ಆಟಗಾರ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ | ಇಂಗ್ಲೆಂಡ್ಗೆ ದೊಡ್ಡ ಆಘಾತ; ಭಾರತ ವಿರುದ್ಧದ ಟೆಸ್ಟ್ ಸರಣಿಯಿಂದ ಹಿಂದೆ ಸರಿದ ಸ್ಟಾರ್ ಆಟಗಾರ
- ರಿಂಕು ಸಿಂಗ್
ಟಿ20 ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ರಿಂಕು ಸಿಂಗ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ವೈಟ್ಬಾಲ್ ಕ್ರಿಕೆಟ್‌ನಲ್ಲಿ ಫಿನಿಶರ್ ಆಗಿ ಹೀರೋ ಆಗಿರುವ ರಿಂಕು, ಪ್ರಥಮ ದರ್ಜೆ ಕ್ರಿಕೆಟ್ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಉತ್ತರ ಪ್ರದೇಶ ಪರ 43 ಪಂದ್ಯಗಳನ್ನು ಆಡಿದ್ದು, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 58.47 ಸರಾಸರಿ ಹೊಂದಿದ್ದಾರೆ. 2ನೇ ಮತ್ತು ಮೂರನೇ ಅನಧಿಕೃತ ಟೆಸ್ಟ್‌ಗಳಲ್ಲಿ ಇಂಗ್ಲೆಂಡ್ ಲಯನ್ಸ್ ಎದುರು ಭಾರತ-ಎ ತಂಡದಲ್ಲಿ ರಿಂಕು ಸ್ಥಾನ ಪಡೆದಿದ್ದಾರೆ. ಟೆಸ್ಟ್ ತಂಡದಲ್ಲಿ ಹೊಸ ಬದಲಾವಣೆ ಮುಂದಾದರೆ ರಿಂಕು ಸಿಂಗ್ ಬೆಸ್ಟ್ ಆಯ್ಕೆ ಅಂದರೂ ತಪ್ಪಾಗಲ್ಲ.